AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Israel-Iran Conflict: ಇಸ್ರೇಲ್‌-ಇರಾನ್‌ ಯುದ್ಧದಲ್ಲಿ 600ಕ್ಕೂ ಹೆಚ್ಚು ಜನ ಸಾವು, ಟೆಲ್ ಅವೀವ್ ಮೇಲೆ 400 ಕ್ಷಿಪಣಿಗಳ ದಾಳಿ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಈ ಎರಡೂ ದೇಶಗಳ ನಡುವಿನ ಯುದ್ಧದಲ್ಲಿ 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇರಾನ್​ನಲ್ಲಿ 585 ಜನ ಸಾವನ್ನಪ್ಪಿದ್ದು, ಇಸ್ರೇಲ್​ನಲ್ಲಿ 24 ಜನರು ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಟೆಲ್ ಅವೀವ್ ಮೇಲೆ 400 ಕ್ಷಿಪಣಿಗಳ ದಾಳಿ ನಡೆಸಲಾಗಿದೆ. ಈ ಎರಡೂ ರಾಷ್ಟ್ರಗಳ ನಡುವಿನ ಯುದ್ಧದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲಿದೆ.

Israel-Iran Conflict: ಇಸ್ರೇಲ್‌-ಇರಾನ್‌ ಯುದ್ಧದಲ್ಲಿ 600ಕ್ಕೂ ಹೆಚ್ಚು ಜನ ಸಾವು, ಟೆಲ್ ಅವೀವ್ ಮೇಲೆ 400 ಕ್ಷಿಪಣಿಗಳ ದಾಳಿ
Israel Iran Conflict
ಸುಷ್ಮಾ ಚಕ್ರೆ
|

Updated on:Jun 18, 2025 | 5:34 PM

Share

ಜೆರುಸಲೇಂ, ಜೂನ್ 18: ಇಸ್ರೇಲ್ ಮತ್ತು ಇರಾನ್ (Israel-Iran War) ನಡುವಿನ ಮಿಲಿಟರಿ ಸಂಘರ್ಷ ಇಂದು ಮತ್ತಷ್ಟು ತೀವ್ರಗೊಂಡಿದೆ. ಎರಡೂ ಕಡೆಯವರು ಪರಸ್ಪರ ಹೊಸ ಕ್ಷಿಪಣಿ ದಾಳಿಗಳನ್ನು ಮುಂದುವರೆಸಿದ್ದರಿಂದ ಯುದ್ಧದ ಸತತ ಆರನೇ ದಿನ ಕೂಡ ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್ ಮೇಲೆ ಫತ್ತಾಹ್-1 ಹೈಪರ್‌ಸಾನಿಕ್ ಕ್ಷಿಪಣಿಯನ್ನು ಉಡಾಯಿಸಿರುವುದಾಗಿ ಹೇಳಿಕೊಂಡಿದೆ. ಇದು ಎರಡೂ ದೇಶಗಳ ನಡುವಿನ ಸಂಘರ್ಷದಲ್ಲಿ (Israel-Iran War) ಈ ಕ್ಷಿಪಣಿಯ ಮೊದಲ ಬಳಕೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಇರಾನ್‌ನಿಂದ ಇಂದು ಬೆಳಗಿನ ಜಾವ ಕ್ಷಿಪಣಿ ದಾಳಿಗಳ ನಂತರ ಟೆಲ್ ಅವೀವ್ ಮೇಲೆ ಸ್ಫೋಟಗಳು ವರದಿಯಾಗಿವೆ. ಆದರೆ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವಾಯುದಾಳಿಗಳು ಟೆಹ್ರಾನ್ ಬಳಿ ಮುಂದುವರೆದಿವೆ.

ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಮಧ್ಯಪ್ರವೇಶಿಸಲು ಬಯಸುತ್ತಿದ್ದಾರೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ. ಟ್ರಂಪ್ ಅವರು G7 ಶೃಂಗಸಭೆಯಿಂದ ಹಠಾತ್ತನೆ ನಿರ್ಗಮಿಸಿದ ಕಾರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ಎಚ್ಚರಿಕೆಗಳ ಸರಣಿಯಿಂದಾಗಿ ಈ ಸಂಘರ್ಷದಲ್ಲಿ ಅಮೆರಿಕ ಇಸ್ರೇಲ್ ಜೊತೆ ಕೈಜೋಡಿಸುವ ವದಂತಿಗಳು ಹೆಚ್ಚಾಗುತ್ತಿವೆ.

ಇದನ್ನೂ ಓದಿ: Israel-Iran conflict: ಇಸ್ರೇಲ್​ನಲ್ಲಿ ಸಿಲುಕಿದ ಕನ್ನಡಿಗರು ಬಂಕರ್​ನಲ್ಲಿ ಸೇಫ್, ಕನ್ನಡ ಹಾಡು ಹಾಡುತ್ತ ಟೈಮ್ ಪಾಸ್

ಇದನ್ನೂ ಓದಿ
Image
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
Image
ಇರಾನ್ ಮೇಲೆ ದಾಳಿ; ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪಿಎಂ ನೆತನ್ಯಾಹು
Image
ಇಸ್ರೇಲ್ ಹಠಾತ್ ದಾಳಿಗೆ ಬೆಚ್ಚಿಬಿದ್ದ ಇರಾನ್: ಪರಮಾಣು ನೆಲೆಗಳೇ ಗುರಿ
Image
ರಾತ್ರೋರಾತ್ರಿ ಉಕ್ರೇನ್ ಮೇಲೆ 479 ಡ್ರೋನ್ ದಾಳಿ ನಡೆಸಿದ ರಷ್ಯಾ

ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಡೊನಾಲ್ಡ್ ಟ್ರಂಪ್ ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಹಾಗೇ, ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಅಮೇರಿಕನ್ ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗುತ್ತಿದೆ ಎಂದು ಯುಎಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.

ಇಸ್ರೇಲ್-ಇರಾನ್ ಸಂಘರ್ಷದ ಪ್ರಮುಖ ಬೆಳವಣಿಗೆಗಳು:

  1. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಂದು ಇಸ್ರೇಲ್ ಕಡೆಗೆ ಫತ್ತಾಹ್-1 ಕ್ಷಿಪಣಿಯನ್ನು ಉಡಾಯಿಸಿರುವುದಾಗಿ ಹೇಳಿಕೊಂಡಿದೆ. ಇದು ಪ್ರಸ್ತುತ ನಡೆಯುತ್ತಿರುವ ಸಂಘರ್ಷದಲ್ಲಿ ಕ್ಷಿಪಣಿಯ ಮೊದಲ ಬಳಕೆಯಾಗಿದೆ. ಆದರೂ ಇರಾನ್ ಅಕ್ಟೋಬರ್ 1, 2024ರಂದು ಇಸ್ರೇಲ್ ಮೇಲೆ ದಾಳಿ ಮಾಡುವಾಗ ಅನೇಕ ಫತ್ತಾಹ್-1ಗಳನ್ನು ಹಾರಿಸಿತ್ತು. 2023ರಲ್ಲಿ ಮೊದಲು ಬಹಿರಂಗಪಡಿಸಿದ ಈ ಕ್ಷಿಪಣಿಯನ್ನು ಇರಾನಿನ ಅಧಿಕಾರಿಗಳು “ಇಸ್ರೇಲ್-ಸ್ಟ್ರೈಕರ್” ಎಂದು ಉಲ್ಲೇಖಿಸಿದ್ದಾರೆ.
  2. ಇಂದು ಮುಂಜಾನೆ ಇರಾನ್ ಇಸ್ರೇಲ್ ಮೇಲೆ ಎರಡು ಅಲೆಗಳ ಕ್ಷಿಪಣಿ ದಾಳಿಯನ್ನು ನಡೆಸಿತು. ಇದು ಟೆಲ್ ಅವೀವ್‌ನಾದ್ಯಂತ ಸ್ಫೋಟಗಳನ್ನು ಉಂಟುಮಾಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲಿ ವಾಯುಪಡೆಯು ಇರಾನಿನ ರಾಜಧಾನಿಯ ಬಳಿ ವೈಮಾನಿಕ ದಾಳಿಗಳನ್ನು ನಡೆಸಿತು. ಟೆಹ್ರಾನ್ ಮತ್ತು ಕರಾಜ್ ಎರಡರಲ್ಲೂ ಸ್ಫೋಟಗಳನ್ನು ಇರಾನಿನ ಮಾಧ್ಯಮ ದೃಢಪಡಿಸಿದೆ.
  3. ಕಳೆದ ಶುಕ್ರವಾರದಿಂದ ಇರಾನ್‌ನಾದ್ಯಂತ ತೀವ್ರವಾದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ 585 ಜನರು ಸಾವನ್ನಪ್ಪಿದ್ದಾರೆ ಮತ್ತು 1,326 ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಇಂದು ಇರಾನ್‌ನ ಆರೋಗ್ಯ ಸಚಿವಾಲಯದ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ. ಹಾಗೇ ಇರಾನಿನ ದಾಳಿಗಳು ಇಸ್ರೇಲ್ ರಾಷ್ಟ್ರದಲ್ಲಿ ಇಲ್ಲಿಯವರೆಗೆ 24 ಸಾವುಗಳು ಮತ್ತು 1,300ಕ್ಕೂ ಹೆಚ್ಚು ಗಾಯಗಳಿಗೆ ಕಾರಣವಾಗಿವೆ ಎಂದು ಇಸ್ರೇಲ್ ತುರ್ತು ವಿಭಾಗ ವರದಿ ಮಾಡಿದೆ.
  4. ಕಳೆದ ಶುಕ್ರವಾರ ಇರಾನ್ ಮೇಲೆ ಇಸ್ರೇಲ್ ದಾಳಿಗಳನ್ನು ನಡೆಸಿದ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಕಡೆಗೆ ಇರಾನ್ 400ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳನ್ನು ಹಾರಿಸಿದೆ. ಇಸ್ರೇಲ್‌ನಾದ್ಯಂತ 40 ಸ್ಥಳಗಳ ಮೇಲೆ ದಾಳಿಗಳು ನಡೆದಿವೆ ಎಂದು ಕಚೇರಿ ತಿಳಿಸಿದೆ. ಇರಾನ್‌ನ ತೀವ್ರವಾದ ವಾಯುದಾಳಿಗಳಿಂದಾಗಿ 3,800ಕ್ಕೂ ಹೆಚ್ಚು ಜನರನ್ನು ತಮ್ಮ ಮನೆಗಳಿಂದ ಸ್ಥಳಾಂತರಿಸಲಾಗಿದೆ.
  5. ಇರಾನ್ ನಾಯಕತ್ವವನ್ನು ಎಚ್ಚರಿಸುತ್ತಾ ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ ಆಕ್ರಮಣಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ಅಯತೊಲ್ಲಾ ಅಲಿ ಖಮೇನಿ ಇರುವ ಸ್ಥಳ ಅಮೆರಿಕಕ್ಕೆ ತಿಳಿದಿದೆ ಎಂದು ಅವರು ಹೇಳಿಕೊಂಡಿದ್ದಾರೆ. “ಆದರೆ ನಾವು ಅವರನ್ನು ಕೊಲ್ಲುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ನಮ್ಮ ತಾಳ್ಮೆ ಕ್ಷೀಣಿಸುತ್ತಿದೆ” ಎಂದು ಕೂಡ ಟ್ರಂಪ್ ಎಚ್ಚರಿಸಿದ್ದಾರೆ. ಮತ್ತಷ್ಟು ಉಲ್ಬಣಗೊಳ್ಳುವ ಭೀತಿಯ ನಡುವೆ, ಯುನೈಟೆಡ್ ಸ್ಟೇಟ್ಸ್ ಮಧ್ಯಪ್ರಾಚ್ಯಕ್ಕೆ ಹೆಚ್ಚುವರಿ ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ಈಗಾಗಲೇ ನಡೆಯುತ್ತಿರುವ ಕೆಲವು ವಿಮಾನಗಳ ಕಾರ್ಯಾಚರಣೆಗಳನ್ನು ವಿಸ್ತರಿಸಲಾಗಿದೆ.
  6. ಟ್ರಂಪ್ ಅವರ ಎಚ್ಚರಿಕೆಯ ನಂತರ ಖಮೇನಿ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರತೀಕಾರದ ಪ್ರತಿಜ್ಞೆ ಮಾಡಿದ್ದಾರೆ. “ಯುದ್ಧ ಪ್ರಾರಂಭವಾಗುತ್ತದೆ. ಅಲಿ ಖೇಬರ್‌ಗೆ ಹಿಂತಿರುಗುತ್ತಾನೆ” ಎಂದು ಅವರು ಬರೆದಿದ್ದಾರೆ.
  7. ಟೆಹ್ರಾನ್‌ನ ಬ್ಯಾಲಿಸ್ಟಿಕ್ ಕಾರ್ಯಕ್ರಮಕ್ಕೆ ನಿರ್ಣಾಯಕವಾದ ಖೋಜಿರ್ ಕ್ಷಿಪಣಿ ಉತ್ಪಾದನಾ ತಾಣವನ್ನು ಇಸ್ರೇಲ್ ಗುರಿಯಾಗಿಸಿಕೊಂಡಿದೆ ಎಂದು ಇರಾನಿನ ಮಾಧ್ಯಮ ವರದಿ ಮಾಡಿದೆ. ಈ ತಾಣದ ಮೇಲೆ ಈ ಹಿಂದೆ 2024ರಲ್ಲಿ ದಾಳಿ ನಡೆಸಲಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:55 pm, Wed, 18 June 25