ಕ್ಯಾಲಿಫೋರ್ನಿಯಾ, ಏಪ್ರಿಲ್ 28: ಅಮೆರಿಕದಲ್ಲಿ ಸಿಇಒ ಆಗಬೇಕಾದರೆ ಭಾರತೀಯ ಮೂಲದ ವ್ಯಕ್ತಿ ಆಗಿರಬೇಕು ಎನ್ನುವಂತಹ ಸ್ಥಿತಿ ಇದೆ ಎಂದು ಎರಿಕ್ ಗಾರ್ಕೆಟ್ಟಿ (Eric Garcetti) ಹೇಳಿದ್ದಾರೆ. ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಅವರು ಇಲ್ಲಿಯ ಸ್ಟಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ನಡೆದ ಭಾರತೀಯ ಸಮುದಾಯದವರ ಎಐ ಸಮಿಟ್ 2024 (Indiaspora AI Summit 2024) ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಆದರೆ ತಮಾಷೆಯಾಗಿ ಅವರು ಈ ಮಾತುಗಳನ್ನು ಹೇಳಿದ್ದಾರಾದರೂ ಅಮೆರಿಕದ ಬಹಳಷ್ಟು ಟೆಕ್ ಕಂಪನಿಗಳ ಅತ್ಯುನ್ನತ ಹುದ್ದೆಯನ್ನು ಭಾರತೀಯರೇ ಅಲಂಕರಿಸಿರುವುದು ವಾಸ್ತವ ಸಂಗತಿ.
ಅಮೆರಿಕದ ಪ್ರಮುಖ ಕಂಪನಿಗಳನ್ನು ಪರಿಗಣಿಸಿದಾದ ಶೇ. 10ರಷ್ಟು ಕಂಪನಿಗಳಿಗೆ ಭಾರತೀಯ ಮೂಲದವರೇ ಸಿಇಒ ಆಗಿದ್ದಾರೆ. ಗೂಗಲ್ನ ಸುಂದರ್ ಪಿಚೈ, ಮೈಕ್ರೋಸಾಫ್ಟ್ನ ಸತ್ಯ ನಾದೆಲ್ಲಾ, ಅಡೋಬ್ನ ಶಾಂತನು ನಾರಾಯಣನ್ ಮೊದಲಾದವರು ನಿದರ್ಶನವಾಗಿದ್ದಾರೆ. ಹೀಗಾಗಿ, ಅಮೆರಿಕ ರಾಯಭಾರಿ ಹೇಳಿದ್ದರಲ್ಲಿ ಅತಿಶಯೋಕ್ತಿಯಂತೂ ಇಲ್ಲ.
ಇದನ್ನೂ ಓದಿ: ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿದೆ ಆಟಿಕೆ ಉದ್ಯಮ; ಶೇ. 70ರಷ್ಟು ತಪ್ಪಿದೆ ಚೀನೀ ಬೊಂಬೆ ಆಮದು
‘ಫಾರ್ಚೂನ್ 500 ಕಂಪನಿಗಳಲ್ಲಿನ ಪ್ರತೀ 10 ಸಿಇಒಗಳಲ್ಲಿ ಒಬ್ಬರು ಅಮೆರಿಕದಲ್ಲಿ ಓದಿದ ಭಾರತೀಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನೀವು ಭಾರತೀಯರಾಗಿದ್ದರೆ ಅಮೆರಿಕದಲ್ಲಿ ಸಿಇಒ ಆಗುವುದಕ್ಕೆ ಆಗೊಲ್ಲ ಎಂದು ತಮಾಷೆ ಮಾಡುತ್ತಿದ್ದ ಕಾಲವೊಂದಿತ್ತು. ಈಗ ನೀವು ಭಾರತೀಯನಾಗದೇ ಹೋದರೆ ಅಮೆರಿಕದಲ್ಲಿ ಸಿಇಒ ಆಗಲು ಸಾಧ್ಯ ಇಲ್ಲ ಎಂದು ಹೇಳಲಾಗುತ್ತದೆ. ಗೂಗಲ್ ಆಗಲಿ, ಮೈಕ್ರೋಸಾಫ್ಟ್ ಆಗಲಿ, ಅಥವಾ ಸ್ಟಾರ್ಬಕ್ಸ್ ಆಗಲಿ ಭಾರತೀಯರು ಸಿಇಒ ಆಗಿ ಬಹಳ ದೊಡ್ಡ ಬದಲಾವಣೆ ಮಾಡಿದ್ದಾರೆ’ ಎಂದು ಎರಿಕ್ ಗಾರ್ಕೆಟ್ಟಿ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾರತ ಮೂಲದ ಉದ್ಯಮಿಗಳು ಭಾರತದಲ್ಲಿ ಆಗಿರುವ ಬದಲಾವಣೆಗಳನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿಗೆ ಅದರ ಶ್ರೇಯ ನೀಡಿದ್ದಾರೆ.
ಇದನ್ನೂ ಓದಿ: ಇಟಲಿ ಪ್ರಧಾನಿಗೆ ಕರೆ ಮಾಡಿ ವಿಮೋಚನಾ ದಿನಾಚರಣೆಯ ಶುಭಾಯಶಯ ತಿಳಿಸಿದ ಮೋದಿ
‘ಜಾಗತಿಕ ಉದ್ದಿಮೆ ವಲಯದಲ್ಲಿ ಭಾರತದ ಬಗೆಗಿನ ದೃಷ್ಟಿಕೋನ ಈಗ ಬದಲಾಗಿದೆ. ಈಗ ಭಾರತವು ಇನ್ನೋವೇಶನ್ನ ಸ್ಥಳವಾಗಿದೆ. ಮಾನವ ಸಂಪನ್ಮೂಲದ ಅಡ್ಡೆಯಾಗಿದೆ. ಪ್ರಗತಿ ಮತ್ತು ಇನೋವೇಶನ್ ಆಗುತ್ತಿರುವ ಪ್ರದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾವೀನ್ಯತೆಯಲ್ಲಿ ಭಾರತವನ್ನು ಜಾಗತಿಕ ನಕ್ಷೆಗೆ ಹಾಕಲು ಸಫಲರಾಗಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಿ ಬೆಳೆಯಲು ಪ್ರೋತ್ಸಾಹಿಸುತ್ತಿದ್ದಾರೆ,’ ಎಂದು ಇನ್ಫಾರ್ಮಾಟಿಕಾ ಸಿಇಒ ಅಮಿತ್ ವಾಲಿಯಾ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ