ಶುಕ್ರವಾರ ಗರಿಗೆದರಿದ ಷೇರು ಬಜಾರು; ನಿನ್ನೆ ನೆಲಕಚ್ಚಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಂಡಿದ್ದು ಯಾಕೆ?

Know why stock market turned positive a day after big crash: ಜಾಗತಿಕ ಷೇರು ಮಾರುಕಟ್ಟೆಗಳು ಮಾರ್ಚ್ 20, ಶುಕ್ರವಾರ ಸಕಾರಾತ್ಮಕ ಭಾವನೆಯಲ್ಲಿವೆ. ಹೆಚ್ಚಿನ ದೇಶಗಳ ಮಾರುಕಟ್ಟೆ ಹಸಿರುಬಣ್ಣಕ್ಕೆ ತಿರುಗಿದೆ. ಭಾರತದ ಷೇರು ಮಾರುಕಟ್ಟೆಯ ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಮುಖ ಸೂಚ್ಯಂಕಗಳು ಬಹಳಷ್ಟು ಅಂಕಗಳನ್ನು ಗಳಿಸಿವೆ. ಜಾಗತಿಕ ರಾಜಕೀಯ ಅನಿಶ್ಚಿತತೆಯಲ್ಲೂ ಮಾರುಕಟ್ಟೆ ಪಾಸಿಟಿವ್ ಆಗಿರಲು ಏನು ಕಾರಣ?

ಶುಕ್ರವಾರ ಗರಿಗೆದರಿದ ಷೇರು ಬಜಾರು; ನಿನ್ನೆ ನೆಲಕಚ್ಚಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಂಡಿದ್ದು ಯಾಕೆ?
ಷೇರು ಮಾರುಕಟ್ಟೆ

Updated on: Mar 20, 2026 | 3:23 PM

ನವದೆಹಲಿ, ಮಾರ್ಚ್ 20: ನಿನ್ನೆ ಯುಗಾದಿ ಹಬ್ಬದ ದಿನದಂದು ಹೂಡಿಕೆದಾರರಿಗೆ 12 ಲಕ್ಷ ಕೋಟಿ ರೂ ನಷ್ಟ ತಂದಿತ್ತು ಷೇರು ಮಾರುಕಟ್ಟೆ (Stock Market) ಇವತ್ತು ಹಸಿರು ಬಣ್ಣಕ್ಕೆ ತಿರುಗಿದೆ. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಧಾನ ಸೂಚ್ಯಂಕಗಳು ಗಳಿಕೆ ಕಂಡಿವೆ. ಸೆನ್ಸೆಕ್ಸ್ 1,016 ಅಂಕ ಗಳಿಸಿದೆ. ನಿಫ್ಟಿ50 ಸೂಚ್ಯಂಕ 288 ಅಂಕಗಳಷ್ಟು ಚೇತರಿಕೆ ಕಂಡಿದೆ. ಈ ವರದಿ ಬರೆಯುವ ವೇಳೆ, ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಕಗಳ ಗಳಿಕೆಯೊಂದಿಗೆ 74,530 ಮಟ್ಟದಲ್ಲಿತ್ತು. ನಿಫ್ಟಿ ಗಳಿಸಿದ ಅಂಕಗಳು ನೂರಕ್ಕಿಂತ ತುಸು ಹೆಚ್ಚು.

ಕಡಿಮೆಗೊಂಡ ಯುದ್ಧದ ತೀವ್ರತೆ

ಇರಾನ್​ನ ತೈಲ ಘಟಕಗಳ ಮೇಲೆ ಇಸ್ರೇಲ್ ದಾಳಿ ಮಾಡಿದ ಪರಿಣಾಮ, ಇರಾನ್ ದೇಶವು ಸುತ್ತಮುತ್ತಲಿನ ಗಲ್ಫ್ ರಾಷ್ಟ್ರಗಳ ತೈಲ ಘಟಕಗಳನ್ನು ಗುರಿಯಾಗಿಸಿದ್ದು ಇಡೀ ಜಗತ್ತನ್ನು ಆತಂಕಕ್ಕೆ ದೂಡಿತ್ತು. ಇಸ್ರೇಲ್​ಗೆ ಅಮೆರಿಕ ಎಚ್ಚರಿಕೆ ಕೊಟ್ಟಿರುವುದು ಮತ್ತೆ ತೈಲ ಘಟಕಗಳ ಮೇಲೆ ದಾಳಿಯಾಗುವ ಸಾಧ್ಯತೆ ಕಡಿಮೆಗೊಂಡಿದೆ. ಹಾಗೆಯೇ, ಭೂಸೇನೆಗಳು ರಣರಂಗಕ್ಕೆ ಇಳಿಯುವುದಿಲ್ಲ ಎನ್ನುವ ಆಶ್ವಾಸನೆಯೂ ಸಿಕ್ಕಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದು ಮಾರುಕಟ್ಟೆಯನ್ನು ಶಾಂತಗೊಳಿಸಿದೆ.

ಇದನ್ನೂ ಓದಿ: ಇರಾನ್ ಹೊಸ ವರಸೆ; ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಕ್ಕೆ ಆಲೋಚನೆ

ಯುದ್ಧದ ತೀವ್ರತೆ ಮತ್ತು ಅಪಾಯವು ಕಡಿಮೆಗೊಂಡಿರುವ ಪರಿಣಾಮ ಅಮೆರಿಕದ ಮಾರುಕಟ್ಟೆಗೆ ಕಳೆ ಬಂದಿದೆ. ಇದು ಭಾರತವೂ ಸೇರಿ ವಿಶ್ವದ ವಿವಿಧ ಷೇರುಪೇಟೆಯ ಮೇಲೂ ಸಕಾರಾತ್ಮಕ ಭಾವನೆ ಮೂಡಿಸಿದೆ.

ತೈಲ ಬೆಲೆ ಇಳಿಕೆ

ಜಾಗತಿಕ ತೈಲ ಬೆಲೆಗಳು ಇಳಿದಿವೆ. ಬ್ರೆಂಟ್ ಕ್ರೂಡ್ ತೈಲದ ಬೆಲೆ 119.13 ಡಾಲರ್ ಇದ್ದದ್ದು 107 ಡಾಲರ್​ಗೆ ಇಳಿದಿದೆ. ಹೀಗಾಗಿ, ಜಾಗತಿಕ ಆರ್ಥಿಕತೆಯ ಮೇಲಿನ ಒತ್ತಡ ಕಡಿಮೆಗೊಂಡಿದೆ. ಇದು ಮಾರುಕಟ್ಟೆಯ ವಿಶ್ವಾಸ ಹೆಚ್ಚಿಸಿದೆ.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಒಳ್ಳೆಯ ಬೆಲೆಗೆ ಷೇರುಗಳನ್ನು ಖರೀದಿಸುವ ಯತ್ನ

ಗುರುವಾರ ಷೇರು ಬಜಾರು ಶೇ. 3ರಷ್ಟು ಕುಸಿತ ಕಂಡಿತ್ತು. ಅನೇಕ ಒಳ್ಳೆಯ ಷೇರುಗಳಿಗೆ ಮಾರ್ಕೆಟ್ ಕರೆಕ್ಷನ್ ಸಿಕ್ಕಿದೆ. ಹೀಗಾಗಿ, ಅನೇಕ ಒಳ್ಳೆಯ ಷೇರುಗಳು ಕಡಿಮೆ ಬೆಲೆಗೆ ಲಭ್ಯ ಇವೆ. ಹೂಡಿಕೆದಾರರು ಇದರ ಲಾಭ ಪಡೆಯಲು ಶುಕ್ರವಾರ ಮುಗಿಬಿದ್ದಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us