Patanjali-LIC: ಎಲ್​ಐಸಿಗೆ ಭಾರೀ ನಷ್ಟ ತಂದಿತ್ತ ಟಾಟಾ, ಅಂಬಾನಿ; ಕೈಹಿಡಿದ ಪತಂಜಲಿ

LIC investment in Patanjali Foods shares gets huge gain: ವರದಿಯ ಪ್ರಕಾರ, ಪತಂಜಲಿ ಫುಡ್ಸ್ ಸಂಸ್ಥೆಯ ಷೇರು ಮೌಲ್ಯ ಜುಲೈ ತಿಂಗಳಲ್ಲಿ ಶೇ. 14ರಷ್ಟು ಹೆಚ್ಚಿದೆ. ಪತಂಜಲಿ ಫುಡ್ಸ್ ಷೇರುಗಳಲ್ಲಿ ಹೂಡಿಕೆ ಮಾಡಿದ್ದ ಎಲ್​ಐಸಿಗೆ ಇದರಿಂದ 768 ಕೋಟಿ ರೂ ಲಾಭ ಸಿಕ್ಕಂತಾಗಿದೆ. ಎಲ್​ಐಸಿಯ ಇನ್ವೆಸ್ಟ್​ಮೆಂಟ್ ಪೋರ್ಟ್​ಫೋಲಿಯೋದಲ್ಲಿ ಒಟ್ಟಾರೆ 66,000 ಕೋಟಿ ರೂ ನಷ್ಟವಾಗಿದ್ದರೂ, ಪತಂಜಲಿಯಂತಹ ಕೆಲ ಷೇರುಗಳು ಲಭ ತಂದಿವೆ.

Patanjali-LIC: ಎಲ್​ಐಸಿಗೆ ಭಾರೀ ನಷ್ಟ ತಂದಿತ್ತ ಟಾಟಾ, ಅಂಬಾನಿ; ಕೈಹಿಡಿದ ಪತಂಜಲಿ
ಷೇರು ಮಾರುಕಟ್ಟೆ

Updated on: Aug 06, 2025 | 4:27 PM

ನವದೆಹಲಿ, ಆಗಸ್ಟ್ 6: ದೇಶದ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರ ಎಲ್‌ಐಸಿ ತನ್ನ ಷೇರು ಹೂಡಿಕೆಗಳಿಂದ (stock market) ಜುಲೈ ತಿಂಗಳಲ್ಲಿ 66 ಸಾವಿರ ಕೋಟಿ ರೂ ನಷ್ಟ ಅನುಭವಿಸಿದೆ. ಈ ನಷ್ಟವನ್ನು ದೇಶದ ದೊಡ್ಡ ಬ್ಲೂ ಚಿಪ್ ಕಂಪನಿಗಳಿಂದ ಕಂಡಿದೆ. ಇವುಗಳಲ್ಲಿ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಗ್ರೂಪ್‌ನ ಅತಿದೊಡ್ಡ ಕಂಪನಿ ಟಿಸಿಎಸ್, ಎಕ್ಸಿಸ್ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಡಿಬಿಐ ಬ್ಯಾಂಕ್ ಇತ್ಯಾದಿ ಸೇರಿವೆ. ಮತ್ತೊಂದೆಡೆ, ದೇಶದ ಪ್ರಮುಖ ಎಫ್‌ಎಂಸಿಜಿ ಕಂಪನಿಗಳಲ್ಲಿ ಒಂದಾದ ಪತಂಜಲಿ ಫುಡ್ಸ್, ಎಲ್‌ಐಸಿಗೆ ಲಾಭ ತಂದುಕೊಟ್ಟಿದೆ. ದೇಶದ ಬ್ಲೂ ಚಿಪ್ ಕಂಪನಿಗಳು ಎಲ್‌ಐಸಿಗೆ ನಷ್ಟ ತಂದಿದ್ದರೆ, ಮತ್ತೊಂದೆಡೆ ಪತಂಜಲಿ (Patanjali Foods) ಎಲ್‌ಐಸಿಗೆ ಲಾಭದಾಯಕ ಎಂದು ಸಾಬೀತಾಗಿದೆ. ಎಲ್‌ಐಸಿಗೆ ಪತಂಜಲಿಯಿಂದ ಎಷ್ಟು ಲಾಭ ಆಗಿದೆ ಎನ್ನುವ ವಿವರ ಇಲ್ಲಿದೆ…

LICಗೆ ಪತಂಜಲಿಯಿಂದ ಸಿಕ್ಕಿದ್ದು ಎಷ್ಟು?

ದೇಶದ ಪ್ರಮುಖ FMCG ಕಂಪನಿಗಳಲ್ಲಿ ಒಂದಾದ ಪತಂಜಲಿ ಫುಡ್ಸ್, LIC ಗೆ ಅಂತಹ ದೊಡ್ಡ ಲಾಭ ನೀಡಿಲ್ಲದಿರಬಹುದು, ಆದರೆ LICಯ ಪೋರ್ಟ್​ಫೋಲಿಯೋದಲ್ಲಿ, ಜುಲೈ ತಿಂಗಳಲ್ಲಿ ಮಾರುಕಟ್ಟೆ ಕುಸಿತದ ವೇಳೆ LIC ಗೆ ಲಾಭವನ್ನು ನೀಡಿದ ಕಂಪನಿಗಳಲ್ಲಿ ಪತಂಜಲಿ ಖಂಡಿತವಾಗಿಯೂ ಸೇರಿದೆ. ಷೇರು ಮಾರುಕಟ್ಟೆಯ ಮಾಹಿತಿಯ ಪ್ರಕಾರ, ಜುಲೈ ತಿಂಗಳಲ್ಲಿ ಪತಂಜಲಿ ಫೂಡ್​ಸ್​ನ ಷೇರುಬೆಲೆ ಶೇ. 14ರಷ್ಟು ಹೆಚ್ಚಾಗಿದೆ. ಇದರಿಂದ ಎಲ್​ಐಸಿಯ ಹೂಡಿಕೆ ಮೌಲ್ಯ ಪತಂಜಲಿ ದೆಸೆಯಿಂದಲೇ 768 ಕೋಟಿ ರೂನಷ್ಟು ಹೆಚ್ಚಾಗಿದೆ. ಐಸಿಐಸಿಐ ಬ್ಯಾಂಕ್​ನಲ್ಲಿ ಮಾಡಿದ ಹೂಡಿಕೆಯಿಂದ ಎಲ್​ಐಸಿ 1,324 ಕೋಟಿ ರೂ ಲಾಭ ಮಾಡಿದೆ. ಐಸಿಐಸಿಐ ನಂತರ ಎಲ್​ಐಸಿಗೆ ಅತಿಹೆಚ್ಚು ಲಾಭ ತಂದಿರುವುದು ಪತಂಜಲಿಯೇ. ಎಚ್​ಡಿಎಫ್​ಸಿ ಬ್ಯಾಂಕ್, ಜೆಸ್​ಡಬ್ಲ್ಯು ಸ್ಟೀಲ್, ಮಾರುತಿ ಸುಜುಕಿ, ಅಂಬುಜಾ ಸಿಮೆಂಟ್ಸ್ ಇತ್ಯಾದಿ ಷೇರುಗಳು ಎಲ್​ಐಸಿಯ ಕೈ ಹಿಡಿದಿವೆ.

ಇದನ್ನೂ ಓದಿ: Patanjali: ರೈತರಿಗೆ ಬಲ ನೀಡುತ್ತಿರುವ ಪತಂಜಲಿ ‘ಕಿಸಾನ್ ಸಮೃದ್ಧಿ ಯೋಜನೆ’

ಜುಲೈನಲ್ಲಿ ಪತಂಜಲಿ ಲಾಭ ಗಳಿಸಿದ್ದು ಎಷ್ಟು?

ಪತಂಜಲಿ ಫುಡ್ಸ್ ಷೇರುಗಳು ಜುಲೈನಲ್ಲಿ ಉತ್ತಮ ಬೆಳವಣಿಗೆ ಕಂಡಿವೆ. ಜೂನ್ ತಿಂಗಳ ಕೊನೆಯ ವಹಿವಾಟಿನ ದಿನದಂದು, ಪತಂಜಲಿ ಫುಡ್ಸ್ ಷೇರುಗಳು 1,650.35 ರೂ.ಗಳಷ್ಟಿದ್ದವು. ಇದು ಜುಲೈ 31 ರಂದು ಇದರ ಬೆಲೆ 1,882.40 ರೂ.ಗಳಿಗೆ ತಲುಪಿದೆ. ಇದರರ್ಥ ಪತಂಜಲಿಯ ಷೇರುಬೆಲೆ ಒಂದು ತಿಂಗಳ ಅಂತರದಲ್ಲಿ 232.05 ರೂ.ಗಳ ಹೆಚ್ಚಳ ಕಂಡಿದೆ. ಇದರ ಪರಿಣಾಮವಾಗಿ ಕಂಪನಿಯ ಮಾರುಕಟ್ಟೆ ಬಂಡವಾಳ ಉತ್ತಮ ಏರಿಕೆ ಕಂಡಿದೆ. ಜೂನ್ 30 ರಂದು, ಕಂಪನಿಯ ಮಾರುಕಟ್ಟೆ ಬಂಡವಾಳವು 59,826.23 ಕೋಟಿ ರೂ.ಗಳಷ್ಟಿತ್ತು. ಜುಲೈ 31 ರಂದು ಇದು 68,238.19 ಕೋಟಿ ರೂ.ಗಳಿಗೆ ಏರಿದೆ. ಇದರರ್ಥ ಕಂಪನಿಯ ಮೌಲ್ಯ ಒಂದು ತಿಂಗಳಲ್ಲಿ 8,411.96 ಕೋಟಿ ರೂ.ಗಳ ಹೆಚ್ಚಳ ಕಂಡಿದೆ.

ಪತಂಜಲಿ ಷೇರುಗಳ ಪ್ರಸ್ತುತ ಸ್ಥಿತಿ ಏನು?

ಪತಂಜಲಿ ಫುಡ್ಸ್ ಸಂಸ್ಥೆಯ ಷೇರು ಮೌಲ್ಯ ಜುಲೈನಲ್ಲಿ ಗಣನೀಯವಾಗಿ ಹೆಚ್ಚಾಗಿದ್ದರೂ ಆಗಸ್ಟ್​ನಲ್ಲಿ ಇಡೀ ಮಾರುಕಟ್ಟೆ ಜೊತೆಯಲ್ಲಿ ಕುಸಿಯುತ್ತಿದೆ. ಜುಲೈ 31ರಂದು 1,882 ರೂ ಇದ್ದ ಇದರ ಬೆಲೆ ಇಂದು ಆಗಸ್ಟ್ 6, ಬುಧವಾರ ಟ್ರೇಡಿಂಗ್ ಅಂತ್ಯದಲ್ಲಿ 1,819 ರೂಗೆ ಇಳಿದಿದೆ. ಈ ಆರು ದಿನದಲ್ಲಿ ಅದರ ಷೇರು ಮೌಲ್ಯ ಶೇ. 3.34ರಷ್ಟು ಕಡಿಮೆ ಆಗಿದೆ. ಪತಂಜಲಿ ಮಾತ್ರವಲ್ಲ, ಹೆಚ್ಚಿನ ಕಂಪನಿಗಳ ಷೇರುಗಳು ಸೋಮವಾರದಿಂದೀಚೆ ಸತತವಾಗಿ ಕುಸಿಯುತ್ತಿವೆ. ಇದರಿಂದ ಪತಂಜಲಿ ಹೊರತಾಗಿಲ್ಲ. ಒಟ್ಟಾರೆ ಮಾರುಕಟ್ಟೆ ಚೇತರಿಸಿಕೊಳ್ಳತೊಡಗಿದಾಗ ಪತಂಜಲಿ ಫುಡ್ಸ್ ಕೂಡ ಕಂಬ್ಯಾಕ್ ಮಾಡುವ ಅವಕಾಶ ದಟ್ಟವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ