ನವದೆಹಲಿ, ಜೂನ್ 14: ದೇಶದ ಅತಿದೊಡ್ಡ ಜೀವ ವಿಮಾ ಸಂಸ್ಥೆ ಎನಿಸಿರುವ ಸರ್ಕಾರಿ ಸ್ವಾಮ್ಯದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ (LIC) ಇದೀಗ ಹೆಲ್ತ್ ಇನ್ಷೂರೆನ್ಸ್ ಕ್ಷೇತ್ರಕ್ಕೆ ಬರಲು ಹೊರಟಿದೆ. ಲೈವ್ ಮಿಂಟ್ ವರದಿ ಪ್ರಕಾರ ಖಾಸಗಿ ಇನ್ಷೂರೆನ್ಸ್ ಕಂಪನಿಯೊಂದನ್ನು ಎಲ್ಐಸಿ ಖರೀದಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಸರ್ಕಾರದ ವತಿಯಿಂದಲೂ ನಿಯಮ ಬದಲಾವಣೆ ಮಾಡಬೇಕಾದ ಅವಶ್ಯಕತೆ ಇದೆ ಎನ್ನಲಾಗುತ್ತಿದೆ.
ನಿಯಮ ಬದಲಾವಣೆ ಯಾಕೆಂದರೆ, ಈಗಿರುವ ಐಆರ್ಡಿಎಐ (IRDAI) ನಿಯಮಾವಳಿ ಪ್ರಕಾರ ಒಂದೇ ಇನ್ಷೂರೆನ್ಸ್ ಸಂಸ್ಥೆಯು ಲೈಫ್ ಇನ್ಷೂರೆನ್ಸ್, ಜನರಲ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಸೇವೆ ಒದಗಿಸುವ ಸಮಗ್ರ ಲೈಸೆನ್ಸ್ ಪಡೆಯಲು ಅವಕಾಶ ಇಲ್ಲ. ಹೆಲ್ತ್ ಇನ್ಷೂರೆನ್ಸ್ಗೆ ಪ್ರತ್ಯೇಕ ಲೈಸೆನ್ಸ್ ಬೇಕಾಗುತ್ತದೆ. ಹೀಗಾಗಿ, ಐಆರ್ಡಿಎಐನಲ್ಲಿರುವ ಈ ನಿಯಮದಲ್ಲಿ ಒಂದಿಷ್ಟು ಸಡಿಲಿಕೆ ಮಾಡುವ ನಿರೀಕ್ಷೆ ಇದೆ.
ಸಂಸದ ಜಯಂತ್ ಸಿನ್ಹಾ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯೊಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಇನ್ಷೂರೆನ್ಸ್ ವಲಯಕ್ಕೆ ಪುಷ್ಟಿ ಕೊಡಲು ಅವಶ್ಯಕ ಇರುವ ಕೆಲ ಸಲಹೆಗಳನ್ನು ನೀಡಿತ್ತು. ಅದರಲ್ಲಿ ಒಂದೇ ಸಂಸ್ಥೆ ಅಡಿಯಲ್ಲಿ ಲೈಫ್, ಜನರಲ್ ಅಥವಾ ಹೆಲ್ತ್ ಇನ್ಷೂರೆನ್ಸ್ ಸೇವೆ ಒದಗಿಸುವ ಸಮಗ್ರ ಲೈಸೆನ್ಸ್ ಕೊಡುವ ಕ್ರಮ ಜರುಗಿಸಬಹುದು.
ಎಲ್ಐಸಿ ಒಂದು ಜೀವ ವಿಮಾ ಸಂಸ್ಥೆ. ಬೆಂಕಿ, ಎಂಜಿನಿಯರಿಂಗ್ ಇತ್ಯಾದಿ ಜನರಲ್ ಇನ್ಷೂರೆನ್ಸ್ ಕ್ಷೇತ್ರಕ್ಕೆ ಬೇಕಾದ ನೈಪುಣ್ಯತೆ ಇಲ್ಲ. ಆದರೆ, ಹೆಲ್ತ್ ಇನ್ಷೂರೆನ್ಸ್ ಸೇವೆ ಒದಗಿಸಬಲ್ಲುದು ಎಂದು ಎಲ್ಐಸಿ ಛೇರ್ಮನ್ ಸಿದ್ಧಾರ್ಥ ಮೊಹಂತಿ ಕಳೆದ ತಿಂಗಳು ಹೇಳಿದ್ದರು. ಇದೀಗ ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಯುತ್ತಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಭಾರತೀಯ ಸೇನೆ ತಲುಪಿದ ನಾಗಾಸ್ತ್ರ; ನಾಗಪುರದ ಕಂಪನಿ ತಯಾರಿಸಿದ ಪ್ರಬಲ ಡ್ರೋನ್ ಅಸ್ತ್ರ ಇದು
ಭಾರತದಲ್ಲಿ 28 ಹೆಲ್ತ್ ಇನ್ಷೂರೆನ್ಸ್ ಕಂಪನಿಗಳಿವೆ. ಈ ಪೈಕಿ ಸ್ಟ್ಯಾಂಡ್ ಅಲೋನ್, ಅಂದರೆ ಪರಿಪೂರ್ಣ ಹೆಲ್ತ್ ಇನ್ಷೂರೆನ್ಸ್ ಕಂಪನಿಗಳು ಐದರಿಂದ ಏಳು ಇವೆ. ಸ್ಟಾರ್ ಹೆಲ್ತ್ ಇನ್ಷೂರೆನ್ಸ್, ಆದಿತ್ಯ ಬಿರ್ಲಾ ಹೆಲ್ತ್ ಇನ್ಷೂರೆನ್ಸ್, ಕೇರ್ ಹೆಲ್ತ್ ಇನ್ಷೂರೆನ್ಸ್, ಗೆಲಾಕ್ಸಿ ಹೆಲ್ತ್ ಅಂಡ್ ಆಲೀಡ್ ಇನ್ಷೂರೆನ್ಸ್, ನಾರಾಯಣ ಹೆಲ್ತ್ ಇನ್ಷೂರೆನ್ಸ್, ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಷೂರೆನ್ಸ್, ನಿವಾ ಬೂ ಹೆಲ್ತ್ ಇನ್ಷೂರೆನ್ಸ್ ಕಂಪನಿಗಳು ಸ್ಟ್ಯಾಂಡಲೋನ್ ಹೆಲ್ತ್ ಇನ್ಷೂರೆನ್ಸ್ ಸಂಸ್ಥೆಗಳಾಗಿವೆ. ಈ ಪೈಕಿ ಎಲ್ಐಸಿ ಒಂದು ಸಂಸ್ಥೆಯನ್ನು ಖರೀದಿಸಿ ಆ ಮೂಲಕ ಹೆಲ್ತ್ ಇನ್ಷೂರೆನ್ಸ್ ಸೆಗ್ಮೆಂಟ್ಗೆ ಪದಾರ್ಪಣೆ ಮಾಡಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Fri, 14 June 24