ಎಲ್​ಪಿಜಿ ಇಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; ಈ ಗ್ರಾಹಕರಿಗೆ ಮಾತ್ರ ಅನ್ವಯ, ಗಮನಿಸಿ

LPG Biometric Aadhaar Authentication only required for unauthenticated LPG customers: ಎಲ್​ಪಿಜಿ ಸಿಲಿಂಡರ್ ಪಡೆಯಲು ಗ್ರಾಹಕರು ಕಡ್ಡಾಯವಾಗಿ ಬಯೋಮೆಟ್ರಿಲ್ ಆಧಾರ್ ಅಥೆಂಟಿಕೇಶನ್ ಮಾಡಿಸಬೇಕು ಎನ್ನುವಂತಹ ಸುದ್ದಿ ಹರಿದಾಡುತ್ತಿದೆ. ಆದರೆ, ಇಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ. ಈಗಾಗಲೇ ಇಕೆವೈಸಿ ಮಾಡಿಸಿದವರು ಮತ್ತೊಮ್ಮೆ ಮಾಡಿಸುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ಹೇಳಿದೆ. ಉಜ್ವಲ್ ಸ್ಕೀಮ್​ನ ಎಲ್​ಪಿಜಿ ಬಳಕೆದಾರರು ಮಾತ್ರವೇ ವರ್ಷಕ್ಕೊಮ್ಮೆ ಇಕೆವೈಸಿ ಮಾಡಿಸಬೇಕಾಗುತ್ತದೆ ಎನ್ನಲಾಗಿದೆ.

ಎಲ್​ಪಿಜಿ ಇಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; ಈ ಗ್ರಾಹಕರಿಗೆ ಮಾತ್ರ ಅನ್ವಯ, ಗಮನಿಸಿ
ಇಕೆವೈಸಿ

Updated on: Mar 17, 2026 | 2:24 PM

ನವದೆಹಲಿ, ಮಾರ್ಚ್ 17: ಎಲ್​ಪಿಜಿ ಗ್ರಾಹಕರು ಇಕೆವೈಸಿ (Biometric Aadhaar Authentication) ಮಾಡುವುದು ಕಡ್ಡಾಯ ಎನ್ನುವಂತಹ ಸುದ್ದಿ ಎರಡು ದಿನಗಳಿಂದ ಕೇಳಿಬರುತ್ತಿದೆ. ಇದೇ ವೇಳೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಆಧಾರ್ ಬಯೋಮೆಟ್ರಿಲ್ ದೃಢೀಕರಣ ಅಥವಾ ಇಕೆವೈಸಿಯು ಎಲ್ಲಾ ಎಲ್​ಪಿಜಿ ಗ್ರಾಹಕರಿಗೂ ಕಡ್ಡಾಯವೇನಲ್ಲ. ಇಕೆವೈಸಿ ಮಾಡಿಸಿಲ್ಲದ ಎಲ್​ಪಿಜಿ ಗ್ರಾಹಕರು ಮಾತ್ರ ಈ ಗ್ಯಾಸ್ ಪಡೆಯಲು ಇಕೆವೈಸಿ ಮಾಡುವುದು ಕಡ್ಡಾಯ ಎಂದು ಸಚಿವಾಲಯವು ಹೇಳಿದೆ.

ಎಲ್​ಪಿಜಿ ಗ್ರಾಹಕರು ಆಧಾರ್ ದೃಢೀಕರಣ ಮಾಡುವ ವಿಚಾರದಲ್ಲಿ ಹೊಸದೇನೂ ನಿರ್ದೇಶನ ಹೊರಡಿಸಲಾಗಿಲ್ಲ. ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸುವಂತೆ ಎಲ್​ಪಿಜಿ ಗ್ರಾಹಕರನ್ನು ಪ್ರೋತ್ಸಾಹಿಸುವ ಕ್ರಮ ಜಾರಿಯಲ್ಲಿದೆ.

ಎಲ್​ಪಿಜಿ ಇಕೆವೈಸಿ ವಿಚಾರದಲ್ಲಿ ತಿಳಿಯಬೇಕಾದ ಸಂಗತಿಗಳಿವು…

  • ಎಲ್​ಪಿಜಿ ಗ್ರಾಹಕರು ಇದೂವರೆಗೆ ಇಕೆವೈಸಿ ಮಾಡಿಸಿಲ್ಲದೇ ಇದ್ದರೆ ಅವರು ಈಗ ಮಾಡಿಸುವುದು ಕಡ್ಡಾಯ.
  • ಪಿಎಂ ಉಜ್ವಲ್ ಯೋಜನೆಯ ಫಲಾನುಭವಿಗಳು ಪ್ರತೀ ಹಣಕಾಸು ವರ್ಷಕ್ಕೆ ಒಮ್ಮೆ ಇಕೆವೈಸಿ ಅಪ್​ಡೇಟ್ ಮಾಡಬೇಕು. ಅದೂ 7 ಸಿಲಿಂಡರ್ ಪೂರೈಕೆಗೆ ಸಬ್ಸಿಡಿ ಪಡೆದು, 8 ಮತ್ತು 9ನೇ ಸಿಲಿಂಡರ್ ಪಡೆಯುವಾಗ ಇಕೆವೈಸಿ ಅಪ್​ಡೇಟ್ ಮಾಡಬೇಕು.
  • ಪಿಎಂ ಉಜ್ವಲ್ ಯೋಜನೆಗೆ ಒಳಪಡದ ಇತರ ಎಲ್​ಪಿಜಿ ಗ್ರಾಹಕರು ಒಮ್ಮೆ ಇಕೆವೈಸಿ ಮಾಡಿಸಿದ್ದರೆ ಸಾಕು, ಮತ್ತೆ ಅಪ್​ಡೇಟ್ ಮಾಡುವ ಅಗತ್ಯ ಇಲ್ಲ.
  • ಮನೆಯಲ್ಲೇ ಕುಳಿತು, ಉಚಿತವಾಗಿ ಇಕೆವೈಸಿಯನ್ನು ಮಾಡಬಹುದು.

ಇದನ್ನೂ ಓದಿ: ಪಿಎನ್​ಜಿ ಗ್ಯಾಸ್​ಗೂ ಎಲ್​ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್​ಜಿ ಕನೆಕ್ಷನ್ ಪಡೆಯುವುದು ಹೇಗೆ?
ಸರ್ಕಾರದಿಂದ ಬಂದ ಸ್ಪಷ್ಟನೆ

ಎಲ್​ಪಿಜಿ ಗ್ರಾಹಕರು ಇಕೆವೈಸಿ ಅಪ್​ಡೇಟ್ ಮಾಡುವುದು ಹೇಗೆ?

ಎಲ್​ಪಿಜಿ ಗ್ರಾಹಕರು ತಮ್ಮ ವಿತರಕರ ಕಚೇರಿಗೆ ಹೋಗಿ ಅಲ್ಲಿ ಬಯೋಮೆಟ್ರಿಕ್ ಆಧಾರ್ ಅಥೆಂಟಿಕೇಶನ್ ಕೊಡಬಹುದು. ಇದು ಒಂದು ವಿಧಾನ.

ಮತ್ತೊಂದು ವಿಧಾನ ಆನ್​ಲೈನ್​ನದ್ದು. ಆಧಾರ್ ಫೇಸ್​ಆರ್​ಡಿ ಆ್ಯಪ್ ಅನ್ನು ಡೌನ್​ಲೋಡ್ ಮಾಡಬೇಕು. ನಿಮ್ಮ ಗ್ಯಾಸ್​ನ ಕಂಪನಿಯ ಆ್ಯಪ್ ಅನ್ನೂ ಡೌನ್​ಲೋಡ್ ಮಾಡಬೇಕು. ಉದಾಹರಣೆಗೆ, ಇಂಡೇನ್ ಗ್ರಾಹಕರು ಐಒಸಿಎಲ್​ನ ಆ್ಯಪ್ ಡೌನ್​ಲೋಡ್ ಮಾಡಬೇಕು. ಹಾಗೆಯೇ, ಬಿಪಿಸಿಲ್ ಅಥವಾ ಎಚ್​ಪಿಸಿಎಲ್ ಬಳಕೆದಾರರು ಆಯಾ ಕಂಪನಿಗಳ ಆ್ಯಪ್​ಗಳನ್ನು ಬಳಸಿ ಬಯೋಮೆಟ್ರಿಕ್ ಆಧಾರ್ ಅಥೆಂಟಿಕೇಶನ್ ಮಾಡಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us