LPG Cylinder Price Hike: ಅಡುಗೆ ಸಿಲಿಂಡರ್ ಬೆಲೆ ಏರಿಕೆ, ನಿಮ್ಮ ಜೇಬಿಗೆ ಇನ್ನೊಂದು ಹೊರೆ
ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಸಿಲಿಂಡರ್ (Commercial Liquefied Petrolium Gas - LPG) ಬೆಲೆಯನ್ನು ₹ 102 ಹೆಚ್ಚಿಸಿದೆ.
ದೆಹಲಿ: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಸಿಲಿಂಡರ್ (Commercial Liquefied Petrolium Gas – LPG) ಬೆಲೆಯನ್ನು ₹ 102 ಹೆಚ್ಚಿಸಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಸದ್ಯ 2430.50 ರೂಪಾಯಿ ಮುಟ್ಟಿದೆ. ಗೃಹೋಪಯೋಗಿ ಸಿಲಿಂಡರ್ ಮೇಲೆ ಯಾವುದೇ ದರ ಏರಿಕೆ ಆಗಿಲ್ಲ. ಒಂದು ತಿಂಗಳ ಹಿಂದೆ ಕೇಂದ್ರ ಸರ್ಕಾರವು ವಾಣಿಜ್ಯ ಮತ್ತು ಗೃಹ ಬಳಕೆಯ LPG ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಿತ್ತು. ಏಪ್ರಿಲ್ 1ರಂದು ವಾಣಿಜ್ಯ ಬಳಕೆಯ ಎಲ್ಪಿಜಿ ಬೆಲೆಯು ₹ 250 ಹೆಚ್ಚಳ ಕಂಡು, ₹ 2,253 ಮುಟ್ಟಿತ್ತು. ಎಲ್ಪಿಜಿ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸುವ ಶಿಷ್ಟಾಚಾರವನ್ನು ಅನುಸರಿಸಲಾಗುತ್ತಿದೆ.
ಗೃಹ ಬಳಕೆ ಸಿಲಿಂಡರ್ ದರವನ್ನು ಮಾರ್ಚ್ 22ರಂದು ₹ 50 ರೂಪಾಯಿ ಹೆಚ್ಚಿಸಲಾಗಿತ್ತು. 14.2 ಕೆಜಿಯ LPG ಸಿಲಿಂಡರ್ ಬೆಲೆ ದೆಹಲಿಯಲ್ಲಿ 949.50 ರೂ. ಆಗಿತ್ತು. ಇಂಧನ ದರ ಏರಿಕೆ ಆಗುವ ಬಗ್ಗೆ ಮಾರ್ಚ್ 10 ರಿಂದಲೇ ನಿರೀಕ್ಷೆ ಇತ್ತು. ರಷ್ಯಾ, ಉಕ್ರೇನ್ ಯುದ್ಧದ ಬೆನ್ನಲ್ಲೇ ತೈಲ ದರ ಏರಿಕೆಯ ಬಗ್ಗೆ ಅಭಿಪ್ರಾಯಗಳು ಕೇಳಿಬಂದಿದ್ದವು. ಪಂಚರಾಜ್ಯಗಳ ಚುನಾವಣೆ ಬಳಿಕ ಬೆಲೆ ಏರಿಕೆ ಆಗಲಿದೆ ಎಂದು ಹೇಳಲಾಗಿತ್ತು. ಬೆಂಗಳೂರಿನಲ್ಲಿ ಗೃಹ ಬಳಕೆಯ ಎಲ್.ಪಿ.ಜಿ. ಸಿಲಿಂಡರ್ ಬೆಲೆ 952.50 ರೂಪಾಯಿಗೆ ಏರಿಕೆ ಆಗಿದೆ. 14.2 ಕೆಜಿ ಗೃಹ ಬಳಕೆಯ ಎಲ್.ಪಿ.ಜಿ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆ ಮಾಡಲಾಗಿದೆ.
ದೇಶದಲ್ಲಿ ಕಳೆದ 24 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ. ಕೆಲ ತಿಂಗಳ ಮೊದಲು ಇಳಿಕೆಯಾಗಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಮಾರ್ಚ್ 22ರಿಂದ ಏರಿಸಲಾಗುತ್ತಿತ್ತು. ಇದರಿಂದ ಒಂದು ತಿಂಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ (Petrol Price) ಪ್ರತಿ ಲೀಟರ್ಗೆ ಸರಾಸರಿ ₹ 10 ರಷ್ಟು ಹೆಚ್ಚಾಗಿತ್ತು. ಆದರೆ ಕಳೆದ 24 ದಿನಗಳಿಂದ ದರ ಸ್ಥಿರವಾಗಿದೆ. ಇಂದು (ಶನಿವಾರ, ಏಪ್ರಿಲ್ 30, 2022) ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಬೆಂಗಳೂರು, ದೆಹಲಿ ಸೇರಿದಂತೆ ವಿವಿಧ ನಗರಗಳ ಇಂಧನ ದರ ಎಷ್ಟಿದೆ? ಈ ಕುರಿತ ಮಾಹಿತಿ ಇಲ್ಲಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್ಗೆ ₹ 105.41 ಇದ್ದು, ಲೀಟರ್ ಡೀಸೆಲ್ ಬೆಲೆ ₹ 96.67 ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹ 120.51, ಡೀಸೆಲ್ ₹ 104.77ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 110.85 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 100.94 ರೂಪಾಯಿ ಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 115.12 ರೂ. ಡೀಸೆಲ್ ಬೆಲೆ ಲೀಟರ್ಗೆ 99.83 ರೂ. ಆಗಿದೆ.
ಬೆಂಗಳೂರಿನಲ್ಲಿ ಇಂಧನ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 111.09 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.79 ರೂಪಾಯಿ ದಾಖಲಾಗಿದೆ. ಕೇರಳದ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್ಗೆ 116.92 ರೂಪಾಯಿ ಇದ್ದು, ಲೀಟರ್ ಡೀಸೆಲ್ ಬೆಲೆ 103.69 ರೂಪಾಯಿ ನಿಗದಿಯಾಗಿದೆ. ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ದರ 119.49 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 105.49 ರೂಪಾಯಿ ನಿಗದಿಯಾಗಿದೆ.
ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ಎಲ್ಪಿಜಿ ಬೆಲೆ ಏರಿಕೆಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗೆ ಈ ಲಿಂಕ್ ಮಾಡಿ
ಇದನ್ನೂ ಓದಿ: Edible Oil: ಏಪ್ರಿಲ್ 28ರಿಂದ ಇಂಡೋನೇಷ್ಯಾ ನಿಲ್ಲಿಸಲಿದೆ ತಾಳೆ ಎಣ್ಣೆ ರಫ್ತು; ಭಾರತದಲ್ಲಿ ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ
ಇದನ್ನೂ ಓದಿ: Uber Price Hike: ಬೆಂಗಳೂರಿನಲ್ಲಿನ್ನು ಕ್ಯಾಬ್ ಪ್ರಯಾಣ ದುಬಾರಿ; ಉಬರ್ನಿಂದ ಶೇ. 10ರಷ್ಟು ಬೆಲೆ ಏರಿಕೆ
Published On - 7:47 am, Sun, 1 May 22