ಎಲ್​ಟಿಸಿಜಿ ತೆರಿಗೆ ಬೇಡ, ಎಸ್​ಟಿಸಿಜಿ ಅವಧಿ ಹೆಚ್ಚಿಸಿ; ಎಸ್​ಟಿಟಿ ಏರಿಸಿ: ಗುರ್ಮೀತ್ ಚಡ್ಡಾ ಸಲಹೆ

Gurmeet Chadha suggestion to remove LTCG tax: ಸರ್ಕಾರ ಈಕ್ವಿಟಿ ಮೇಲಿನ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಸೊನ್ನೆಗೆ ಇಳಿಸಲಿ. ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಅವಧಿಯನ್ನು ಎರಡು ವರ್ಷಕ್ಕೆ ವಿಸ್ತರಿಸಲಿ. ಈ ಕ್ರಮ ತೆಗೆದುಕೊಳ್ಳುವುದರಿಂದ ದೀರ್ಘಾವಧಿಯಲ್ಲಿ ದೇಶಕ್ಕೆ ದೊಡ್ಡ ಲಾಭ ಆಗುತ್ತದೆ ಎಂದು ಕಂಪ್ಲೀಟ್ ಸರ್ಕಲ್​ನ ಸಿಐಒ ಗುರ್ಮೀತ್ ಚಡ್ಡಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಎಲ್​ಟಿಸಿಜಿ ತೆರಿಗೆ ಬೇಡ, ಎಸ್​ಟಿಸಿಜಿ ಅವಧಿ ಹೆಚ್ಚಿಸಿ; ಎಸ್​ಟಿಟಿ ಏರಿಸಿ: ಗುರ್ಮೀತ್ ಚಡ್ಡಾ ಸಲಹೆ
ಕ್ಯಾಪಿಟಲ್ ಗೇನ್

Updated on: Mar 02, 2025 | 4:32 PM

ನವದೆಹಲಿ, ಮಾರ್ಚ್ 2: ಸರ್ಕಾರ ವಿಧಿಸುವ ವಿವಿಧ ರೀತಿಯ ಆದಾಯ ತೆರಿಗೆಗಳಲ್ಲಿ (Income taxes) ಎಸ್​ಟಿಸಿಜಿ (STCG tax) ಮತ್ತು ಎಲ್​ಟಿಸಿಜಿ (LTCG tax) ಇವೆ. ಈ ರೀತಿಯ ತೆರಿಗೆ ದರವನ್ನು ಕಡಿಮೆ ಮಾಡಬೇಕು ಎನ್ನುವ ಕೂಗು ಹಲವರಿಂದ ಆಗುತ್ತಿದೆ. ಇದೇ ವೇಳೆ, ಕಂಪ್ಲೀಟ್ ಸರ್ಕಲ್ ಸಂಸ್ಥೆಯ ಸಿಐಒ ಆದ ಗುರ್ಮೀತ್ ಚಡ್ಡಾ (Gurmeet Chadha) ಒಂದು ಕುತೂಹಲಕಾರಿ ಸಲಹೆ ನೀಡಿದ್ದಾರೆ. ಅವರು ಈಕ್ವಿಟಿಗಳ ಮೇಲಿನ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅಥವಾ ಎಲ್​ಟಿಸಿಜಿ ಟ್ಯಾಕ್ಸ್ ಅನ್ನು ಸೊನ್ನೆಗೆ ಇಳಿಸಬೇಕು ಎಂದು ಸಲಹೆ ನೀಡಿದ್ದು, ಇದರಿಂದ ಸರ್ಕಾರಕ್ಕೆ ದೀರ್ಘಾವಧಿಯಲ್ಲಿ ಉತ್ತಮ ಲಾಭ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಈಕ್ವಿಟಿಗಳಿಂದ ಬಂದ ಲಾಭವನ್ನು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಮತ್ತು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಎಂದು ವರ್ಗೀಕರಿಸಿ ತೆರಿಗೆ ವಿಧಿಸಲಾಗುತ್ತದೆ. ಈಗಿರುವ ನಿಯಮಗಳ ಪ್ರಕಾರ ಷೇರು ಖರೀದಿಸಿ ಒಂದು ವರ್ಷದೊಳಗೆ ಅದನ್ನು ಮಾರಿದಾಗ, ಬರುವ ಲಾಭಕ್ಕೆ ಎಸ್​ಟಿಸಿಜಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಅದೀಗ ಶೇ. 20ರಷ್ಟು ತೆರಿಗೆ ಇದೆ.

ಇದನ್ನೂ ಓದಿ: ಭಾರತದ ಈ ಡ್ರೋನ್ ಯೋಜನೆ ಮೆಚ್ಚಿದ ಎಂಐಟಿ ಪ್ರೊಫೆಸರ್; ಡ್ರೋನ್ ದೀದಿಯರೊಂದಿಗೆ ಜೆ ಫ್ಲೆಮಿಂಗ್ ಸಂವಾದ

ಹಾಗೆಯೇ, ಒಂದು ವರ್ಷದ ಬಳಿಕ ಮಾರಿದಾಗ ಸಿಗುವ ಲಾಭಕ್ಕೆ ಎಲ್​ಟಿಸಿಜಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಈಗ ಅದರ ದರ ಶೇ. 12.5ರಷ್ಟಿದೆ.

ಗುರ್ಮೀತ್ ಚಡ್ಡಾ ಅವರು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಅವಧಿಯನ್ನು ಎರಡು ವರ್ಷಕ್ಕೆ ವಿಸ್ತರಿಸಬೇಕು. ಶೇ. 20ರಷ್ಟಿರುವ ಅದರ ದರವನ್ನು ಅಷ್ಟರಲ್ಲೇ ಮುಂದುವರಿಸಲಿ. ಆದರೆ, ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ರದ್ದುಗೊಳಿಸಬೇಕು, ಅಥವಾ ಸೊನ್ನೆಗೆ ಇಳಿಸಬೇಕು ಎಂದಿದ್ದಾರೆ.

ಎಲ್​ಟಿಸಿಜಿ ತೆರಿಗೆ ರದ್ದತಿಯಿಂದ ಸರ್ಕಾರಕ್ಕೆ ಕೈತಪ್ಪುವ ಆದಾಯವನ್ನು ಎಸ್​ಟಿಟಿ ಟ್ಯಾಕ್ಸ್ (STT- Security Transactions Tax) ಹೆಚ್ಚಿಸಿ ಸರಿದೂಗಿಸಬಹುದು. ಈ ಕ್ರಮ ತೆಗೆದುಕೊಳ್ಳುವುದರಿಂದ ಭಾರತಕ್ಕೆ ದೀರ್ಘಾವಧಿಯಲ್ಲಿ ಉತ್ತಮ ಫಲ ಸಿಗುತ್ತದೆ ಎಂದು ಗುರ್ಮೀತ್ ಚಡ್ಡಾ ವಿವರಿಸಿದ್ದಾರೆ.

ಇದನ್ನೂ ಓದಿ: ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಸಿಕ್ಕಿದ ಒಟ್ಟು ಜಿಎಸ್​ಟಿ 1.84 ಲಕ್ಷ ಕೋಟಿ ರೂ; ಶೇ 9.1 ಹೆಚ್ಚು ಸಂಗ್ರಹ


ಈ ಮೇಲಿನ ಕ್ರಮ ತೆಗೆದುಕೊಳ್ಳುವುದರಿಂದ ದೀರ್ಘಾವಧಿಗೆ ಸಾಕಷ್ಟು ವಿದೇಶೀ ಬಂಡವಾಳ ಸಿಗುತ್ತದೆ. ಸರ್ಕಾರದ ಬಂಡವಾಳ ವೆಚ್ಚಕ್ಕೆ ಹೆಚ್ಚು ಫಂಡಿಂಗ್ ಸಿಗುತ್ತದೆ. ಸರ್ಕಾರಿ ಉದ್ಯಮ ಸಂಸ್ಥೆಗಳಿಗೆ ಮೌಲ್ಯ ಹೆಚ್ಚುತ್ತದೆ. ಪರಿಣಾಮವಾಗಿ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ ಎಂದು ಗುರ್ಮೀತ್ ಚಡ್ಡಾ ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ