Mark Zuckerberg: ಒಂದೇ ದಿನ ಮಾರ್ಕ್​ ಝುಕರ್​ಬರ್ಗ್​​ ಆಸ್ತಿ 2.15 ಲಕ್ಷ ಕೋಟಿ ರೂ. ಇಳಿಕೆ; ಅದಾನಿ, ಅಂಬಾನಿ ಝೂಮ್

ಮೆಟಾ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಭಾರೀ ಕುಸಿತ ಕಂಡ ನಂತರ ಮಾರ್ಕ್​ ಝುಕರ್​ಬರ್ಗ್ ಆಸ್ತಿ ಮೌಲ್ಯ ಒಂದೇ ದಿನದಲ್ಲಿ 2900 ಕೋಟಿ ಅಮೆರಿಕನ್ ಡಾಲರ್ ಇಳಿಕೆ ಕಂಡಿದೆ.

Mark Zuckerberg: ಒಂದೇ ದಿನ ಮಾರ್ಕ್​ ಝುಕರ್​ಬರ್ಗ್​​ ಆಸ್ತಿ 2.15 ಲಕ್ಷ ಕೋಟಿ ರೂ. ಇಳಿಕೆ; ಅದಾನಿ, ಅಂಬಾನಿ ಝೂಮ್
ಮಾರ್ಕ್ ಝುಕರ್​ಬರ್ಗ್ (ಸಂಗ್ರಹ ಚಿತ್ರ)
TV9kannada Web Team

| Edited By: Srinivas Mata

Feb 04, 2022 | 11:39 AM

ಭಾರತೀಯ ಉದ್ಯಮಿಗಳಾದ ಮುಕೇಶ್​ ಅಂಬಾನಿ (Mukesh Ambani) ಮತ್ತು ಗೌತಮ್ ಅದಾನಿ (Gautam Adani) ಈಗ ಜಾಗತಿಕ ಮಟ್ಟದಲ್ಲಿ ಹೆಡ್​ಲೈನ್​ಗಳಾಗುತ್ತಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತಾ? ಫೋರ್ಬ್ಸ್​ನ ರಿಯಲ್​ ಟೈಮ್ ಬಿಲಿಯನೇರ್​ಗಳ ಪಟ್ಟಿಯಲ್ಲಿ ಈ ಉದ್ಯಮಿಗಳು ಮಾರ್ಕ್​ ಝುಕರ್​ಬರ್ಗ್​ ಅನ್ನು ಹಿಂದಿಕ್ಕಿದ್ದಾರೆ. ಮೆಟಾ ಪ್ಲಾಟ್​ಫಾರ್ಮ್ ಇಂಕ್​ (ಈ ಹಿಂದೆ ಫೇಸ್​ಬುಕ್​ ಎಂದು ಕರೆಯಲಾಗುತ್ತಿತ್ತು. ಈಗ ಹೆಸರು ಬದಲಾಗಿದೆ) ಷೇರುಗಳ ಬೆಲೆಯು ಒಂದು ದಿನದಲ್ಲಿ ದಾಖಲೆಯ ಮಟ್ಟಕ್ಕೆ ಕುಸಿದಿದ್ದರಿಂದ ಇಂಥದ್ದೊಂದು ಬೆಳವಣಿಗೆ ಆಗಿದೆ. ಈ ಬಾರಿ ಕಂಪೆನಿಯ ಗಳಿಕೆ ನಿರಾಶಾದಾಯಕ ಆಗಿರುತ್ತದೆ ಎಂಬ ಅಂದಾಜಿನ ಹಿನ್ನೆಲೆಯಲ್ಲಿ ಷೇರಿನ ಬೆಲೆ ಭಾರೀ ಮಟ್ಟದಲ್ಲಿ ಕುಸಿತವಾಗಿದೆ. ಮೆಟಾ ಸ್ಟಾಕ್​ ಫೆಬ್ರವರಿ 3ನೇ ತಾರೀಕಿನಂದು ಒಂದೇ ದಿನ ಶೇ 26ರಷ್ಟು ನೆಲ ಕಚ್ಚಿದ್ದು, ಝುಕರ್​ಬರ್ಗ್ ಆಸ್ತಿ 2900 ಕೋಟಿ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 2,16,822.85 ಕೋಟಿ) ಕರಗಿಹೋಗಿದೆ. ಈ ಮೂಲಕವಾಗಿ ಕಂಪೆನಿಯ ಸ್ಥಾಪಕ ಮತ್ತು ಸಿಇಒ ಮಾರ್ಕ್ ಝುಕರ್​ಬರ್ಗ್ ನಿವ್ವಳ ಆಸ್ತಿ ಮೌಲ್ಯ 8500 ಕೋಟಿ ಅಮೆರಿಕನ್ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 6,35,515.25 ಕೋಟಿ)ಗೆ ಇಳಿದಿದೆ.

ಫೋರ್ಬ್ಸ್​ನ ರಿಯಲ್​-ಟೈಮ್ ಬಿಲಿಯನೇರ್​ ಪಟ್ಟಿಯ ಪ್ರಕಾರ, ಗೌತಮ್ ಅದಾನಿಯ ನಿವ್ವಳ ಮೌಲ್ಯ 90.1 ಬಿಲಿಯನ್​ ಡಾಲರ್ ಅಂದರೆ 9010 ಕೋಟಿ ಅಮೆರಿಕನ್ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 6,73,646.17 ಕೋಟಿ) ಇದ್ದರೆ, ಅಂಬಾನಿ ಆಸ್ತಿ 90 ಬಿಲಿಯನ್​ ಯುಎಸ್​ಡಿ (ಭಾರತದ ರೂಪಾಯಿ ಲೆಕ್ಕದಲ್ಲಿ 6,72,898.50 ಕೋಟಿ) ಇದೆ. ಅಮೆರಿಕ ಮೂಲದ ಕಂಪೆನಿಯಾದ ಮೆಟಾದ ಮಾರುಕಟ್ಟೆ ಮೌಲ್ಯ ಒಂದೇ ದಿನದಲ್ಲಿ 20 ಸಾವಿರ ಕೋಟಿ ಅಮೆರಿಕನ್ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 14,95,330 ಕೋಟಿ, ಕರ್ನಾಟಕ ಬಜೆಟ್​ನ 6 ಪಟ್ಟಿಗೂ ಹೆಚ್ಚು ಮೊತ್ತ) ಕೊಚ್ಚಿ ಹೋಗಿದೆ. ಝುಕರ್​ಬರ್ಗ್​ಗೆ ಕಂಪೆನಿಯಲ್ಲಿ ಶೇ 12.8ರಷ್ಟು ಪಾಲಿದೆ. ಅದರ ಪರಿಣಾಮವಾಗಿಯೇ ಅವರ ಆಸ್ತಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಇಳಿಕೆ ಆಗಿದೆ.

ಆದರೆ, ಇಂಥ ನಷ್ಟದಲ್ಲೂ ಝುಕರ್​ಬರ್ಗ್ ವಿಚಿತ್ರ ದಾಖಲೆ ಬರೆದಿದ್ದಾರೆ. ಕಳೆದ ನವೆಂಬರ್​ ತಿಂಗಳಲ್ಲಿ ಟೆಸ್ಲಾ ಕಂಪೆನಿಯ ಎಲಾನ್​ ಮಸ್ಕ್​ ಅವರಿಗೆ ಒಂದೇ ದಿನದಲ್ಲಿ 3500 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗಿತ್ತು. ಇದು ಕಾಗದದ ಮೇಲಿನ ಲೆಕ್ಕಾಚಾರ. ಏಕೆಂದರೆ, ಶ್ರೀಮಂತಿಕೆ ಎಂಬುದಕ್ಕೆ ಅಳತೆಗೋಲಾಗಿ ಅವರ ಬಳಿ ಇರುವ ಷೇರಿನ ಮೌಲ್ಯವನ್ನೇ ಮುಖ್ಯವಾಗಿ ಪರಿಗಣಿಸಲಾಗುತ್ತದೆ. ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾದ ಮಸ್ಕ್ ತಮ್ಮ ಶೇ 10ರಷ್ಟು ಟೆಸ್ಲಾ ಷೇರನ್ನು ಮಾರಾಟ ಮಾಡಬೇಕೇ ಎಂಬ ಬಗ್ಗೆ ಟ್ವಿಟರ್​ನಲ್ಲಿ ಅಭಿಪ್ರಾಯ ಸಂಗ್ರಹಿಸುವುದಕ್ಕಾಗಿ ಕೇಳಿದ್ದರು. ಇದಾದ ನಂತರ ಭಾರೀ ಪ್ರಮಾಣದಲ್ಲಿ ಬೆಲೆ ಇಳಿಕೆ ಆಯಿತು. ಅದಾದಾ ಮೇಲೆ ಮಾರಾಟದಿಂದ ಇನ್ನೂ ಟೆಸ್ಲಾ ಷೇರುಗಳು ಚೇತರಿಸಿಕೊಳ್ಳಬೇಕಿದೆ.

ನಿರೀಕ್ಷೆ ಮಾಡಿದ್ದಕ್ಕಿಂತ ದುರ್ಬಲ ಫಲಿತಾಂಶ ಪ್ರಕಟಿಸಿದ ಮೇಲೆ ಕನಿಷ್ಠ 21 ಬ್ರೋಕರೇಜಸ್​ ಮೆಟಾ ಷೇರಿನ ಬೆಲೆ ಗುರಿಯನ್ನು ಬುಧವಾರ ಕಡಿತ ಮಾಡಿವೆ. ಇದಕ್ಕೆ ಆಪಲ್​ ಕಂಪೆನಿಯ ಖಾಸಗಿತನ ನಿಯಮಾವಳಿಗಳಲ್ಲಿನ ಬದಲಾವಣೆ ಹಾಗೂ ಪ್ರತಿಸ್ಪರ್ಧಿಗಳಾದ ಟಿಕ್​ಟಾಕ್ ಮತ್ತು ಯೂಟ್ಯೂಬ್ ಒಡ್ಡುತ್ತಿರುವ ಸ್ಪರ್ಧೆ ಕಾರಣ ಎನ್ನಲಾಗಿದೆ. ಖಂಡಿತವಾಗಿಯೂ ಟೆಕ್ನಾಲಜಿ ಷೇರುಗಳಲ್ಲಿನ ವಹಿವಾಟು ಭಾರೀ ಏರಿಳಿತದಿಂದ ಕೂಡಿದೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿರೀಕ್ಷಿತ ಬಡ್ಡಿ ದರ ಏರಿಕೆಯ ಪ್ರಭಾವದ ಹಿನ್ನೆಲೆಯಲ್ಲಿ ಹೂಡಿಕೆದಾರರಿಗೆ ಷೇರು ದರ ನಿರ್ಧರಿಸಲು ಕಷ್ಟವಾಗುತ್ತಿದೆ. ಮೆಟಾ ಕಂಪೆನಿ ಷೇರು ಈಗಲ್ಲದಿದ್ದರೆ ಇನ್ನು ಕೆಲ ಸಮಯದಲ್ಲಿ ಚೇತರಿಸಿಕೊಳ್ಳಬಹುದು. ಝುಕರ್​ಬರ್ಗ್ ಆಸ್ತಿ ಮೌಲ್ಯದ ಮೇಲಿನ ಪರಿಣಾಮ ಈ ಹಿಂದೆಯೇ ತಿಳಿಸಿದಂತೆ ಕಾಗದದ ಮೇಲೆ ಮಾತ್ರ ಇರಲಿದೆ.

ಇದನ್ನೂ ಓದಿ: Facebook Outage: ಫೇಸ್​ಬುಕ್​ನ 6 ಗಂಟೆ ವ್ಯತ್ಯಯದಿಂದ ಝುಕರ್​ಬರ್ಗ್​ನ 44,713 ಕೋಟಿ ರೂಪಾಯಿ ಖಲ್ಲಾಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada