Bank Of India Q3 Profit: ಬ್ಯಾಂಕ್ ಆಫ್ ಇಂಡಿಯಾ ಮೂರನೇ ತ್ರೈಮಾಸಿಕ ಲಾಭ ಶೇ 90ರಷ್ಟು ಹೆಚ್ಚಳ
2021-22ನೇ ಸಾಲಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್ ಆಫ್ ಇಂಡಿಯಾದ ಲಾಭವು ಶೇ 90ರಷ್ಟು ಹೆಚ್ಚಾಗಿದೆ. ಆ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.
2021-22ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕವಾದ ಅಕ್ಟೋಬರ್ನಿಂದ ಡಿಸೆಂಬರ್ ಅವಧಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾದ (Bank Of India) ಏಕೀಕೃತ ಲಾಭವು ಕಳೆದ ವರ್ಷದ ಇದೇ ಅವಧಿಗಿಂತ ಶೇ 90ರಷ್ಟು ಹೆಚ್ಚಾಗಿ, 1,027 ಕೋಟಿ ರೂಪಾಯಿ ಮುಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಲಾಭವು 541 ಕೋಟಿ ರೂಪಾಯಿ ಇತ್ತು. ಬ್ಯಾಂಕ್ ಆಫ್ ಇಂಡಿಯಾದ ಕಾರ್ಯಾಚರಣೆಯ ಲಾಭವು ಈ ಅವಧಿಯಲ್ಲಿ 2,096 ಕೋಟಿ ಆಗಿದೆ. 2020-21ರ ಮೂರನೇ ತ್ರೈಮಾಸಿಕದಲ್ಲಿ 2665 ಕೋಟಿ ರೂಪಾಯಿ ಇತ್ತು. ಬಡ್ಡಿಯಿಂದ ಗಳಿಸಿದ ಆದಾಯದಲ್ಲಿ ಬಡ್ಡಿಯ ಪಾವತಿಯನ್ನು ಕಳೆದ ಮೇಲೆ ಉಳಿದಂಥದ್ದಕ್ಕೆ ನಿವ್ವಳ ಬಡ್ಡಿ ಆದಾಯ ಎನ್ನಲಾಗುತ್ತದೆ. ಅದು ಕಳೆದ ವರ್ಷಕ್ಕಿಂತ ಶೇ 8ರಷ್ಟು ಕುಸಿದು 3,408 ಕೋಟಿ ಮುಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,739 ಕೋಟಿ ರೂಪಾಯಿಯನ್ನು ವರದಿ ಮಾಡಿತ್ತು.
ಈ ಮಧ್ಯೆ, ಬಡ್ಡಿಯೇತರ ಆದಾಯವಾಗಿ ಪ್ರಸಕ್ತ ತ್ರೈಮಾಸಿಕದಲ್ಲಿ 1835 ಕೋಟಿ ರೂಪಾಯಿ ಬಂದಿದೆ. ಶುಕ್ರವಾರದ ದಿನಾಂತ್ಯಕ್ಕೆ ಎನ್ಎಸ್ಇಯಲ್ಲಿ ಬ್ಯಾಂಕ್ ಆಫ್ ಇಂಡಿಯಾದ ಷೇರಿನ ಬೆಲೆ ಶೇ 3.34ರಷ್ಟು ಕುಸಿದು, 56.50 ರೂಪಾಯಿ ಇತ್ತು. ಬ್ಯಾಂಕ್ ಆಫ್ ಇಂಡಿಯಾದ ಮೂರನೇ ತ್ರೈಮಾಸಿಕ ಫಲಿತಾಂಶದ ಪ್ರಮುಖಾಂಶಗಳು ಇಲ್ಲಿವೆ.
– 2022-23ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಎನ್ಐಎಂ (ಜಾಗತಿಕ) ಶೇ 2.27 ಮತ್ತು ಎನ್ಐಎಂ (ದೇಶೀಯ) ಶೇ 2.51 ಇದೆ
– ರಿಟರ್ನ್ ಆನ್ ಅಸೆಟ್ಸ್ (RoA) ಶೇ 0.51ರಷ್ಟಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 0.28ರಷ್ಟು ಸುಧಾರಣೆ ಆಗಿದೆ.
– ಸಗಟು ಎನ್ಪಿಎ ಕಳೆದ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕಕ್ಕೆ ಶೇ 8.97ರಷ್ಟು ಕುಸಿದಿದ್ದು, 2021ರ ಸೆಪ್ಟೆಂಬರ್ನಲ್ಲಿ 50,270 ಕೋಟಿ ರೂಪಾಯಿ ಇದ್ದದ್ದು ಡಿಸೆಂಬರ್ ಕೊನೆಗೆ 45,760 ಕೋಟಿಗೆ ಇಳಿದಿದೆ.
– ನಿವ್ವಳ ಎನ್ಪಿಎ ಡಿಸೆಂಬರ್ನಲ್ಲಿ 10,708 ಕೋಟಿ ರೂಪಾಯಿ ಇದ್ದು, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 10,576 ಕೋಟಿ ರೂ. ಇತ್ತು.
– ನಿವ್ವಳ ಎನ್ಪಿಎ ಅನುಪಾತವು ಸೆಪ್ಟೆಂಬರ್ ಶೇ 2.79ರಷ್ಟು ಇದ್ದದ್ದು ಡಿಸೆಂಬರ್ಗೆ ಶೇ 2.66 ಆಗಿದೆ.
– ಸಗಟು ಎನ್ಪಿಎ ಅನುಪಾತವು ಡಿಸೆಂಬರ್ನಲ್ಲಿ ಶೇ 10.46 ತಲುಪಿದ್ದು, ಸೆಪ್ಟೆಂಬರ್ನಲ್ಲಿ ಶೇ 12ರಷ್ಟಿತ್ತು.
ಇದನ್ನೂ ಓದಿ: Note exchange: ಛಿದ್ರವಾದ, ವಿರೂಪಗೊಂಡ ನೋಟನ್ನು ಏನು ಮಾಡಬೇಕು? ಇಲ್ಲಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉತ್ತರ