ಮೊದಲಿಗೆ ವರ್ಕ್ ಫ್ರಂ ಹೋಮ್, ನಂತರ ಬೆಳ್ಳಂಬೆಳಗ್ಗೆ ಇಮೇಲ್ ಶಾಕ್; ಮೆಟಾದಲ್ಲಿ 8,000 ಮಂದಿಗೆ ಕೆಲಸದಿಂದ ಕೊಕ್

Meta Layoffs: ಮೆಟಾ ಸಂಸ್ಥೆಯು ಸುಮಾರು 8,000 ಉದ್ಯೋಗಿಗಳನ್ನು ಲೇಆಫ್ ಮಾಡಿದೆ. ವರ್ಕ್ ಫ್ರಂ ಹೋಮ್ ಸಂದರ್ಭದಲ್ಲಿ ಇಮೇಲ್ ಮೂಲಕ ಪಿಂಕ್ ಸ್ಲಿಪ್ ನೀಡಲಾಗಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ಮೆಟಾ ಭಾರಿ ಹೂಡಿಕೆ ಮಾಡುತ್ತಿದ್ದು, ಇದರ ಪರಿಣಾಮವಾಗಿ ಉದ್ಯೋಗಗಳ ಸ್ವರೂಪ ಬದಲಾಗುತ್ತಿದೆ. AI ಆಧಾರಿತ ಕೌಶಲ್ಯ ಹೊಂದಿದವರಿಗೆ ಮಾತ್ರ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೊದಲಿಗೆ ವರ್ಕ್ ಫ್ರಂ ಹೋಮ್, ನಂತರ ಬೆಳ್ಳಂಬೆಳಗ್ಗೆ ಇಮೇಲ್ ಶಾಕ್; ಮೆಟಾದಲ್ಲಿ 8,000 ಮಂದಿಗೆ ಕೆಲಸದಿಂದ ಕೊಕ್
ಮೆಟಾ
Image Credit source: Getty Images

Updated on: May 20, 2026 | 11:31 AM

ನವದೆಹಲಿ, ಮೇ 20: ಫೇಸ್​ಬುಕ್, ವಾಟ್ಸಾಪ್, ಇನ್ಸ್​ಟಾಗ್ರಾಮ್ ಆ್ಯಪ್​ಗಳ ಮಾತೃಸಂಸ್ಥೆಯಾದ ಮೆಟಾದ (Meta) ಶೇ. 10ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ವರದಿ ಪ್ರಕಾರ ಸುಮಾರು 8,000 ಉದ್ಯೋಗಿಗಳನ್ನು ಮೆಟಾ ಲೇ ಆಫ್ ಮಾಡಿದೆ. ಎಚ್​ಆರ್ ಚೇಂಬರ್​ಗೆ ಕರೆದು ಒಬ್ಬೊಬ್ಬರಿಗೂ ಪಿಂಕ್ ಸ್ಲಿಪ್ ಕೊಡುವ ಬದಲು ಮೆಟಾ ಬೇರೆಯದೇ ತಂತ್ರ ಅನುಸರಿಸಿದೆ. ಎಲ್ಲಾ ಉದ್ಯೋಗಿಗಳಿಗೂ ವರ್ಕ್ ಫ್ರಂ ಹೋಮ್ ಕೊಟ್ಟು, ನಂತರ 8,000 ಮಂದಿಗೆ ಇಮೇಲ್ ಮೂಲಕವೇ ಲೇ ಆಫ್ ಮಾಡಿದೆ. ಬೆಳಗ್ಗೆ 4 ಗಂಟೆಗೆ ಲೇ ಆಫ್ ಇಮೇಲ್ ಕಂಡು ಉದ್ಯೋಗಿಗಳಿಗೆ ಆಗಿತ್ತು ಶಾಕ್.

ಈ ಸುದ್ದಿಯ ಮುಖ್ಯಾಂಶಗಳು

  • ಮೆಟಾ ಸಂಸ್ಥೆ ತನ್ನಲ್ಲಿ ಕೆಲಸ ಮಾಡುತ್ತಿರುವ 78,000 ಉದ್ಯೋಗಿಗಳ ಪೈಕಿ 8,000 ಮಂದಿಯನ್ನು ಲೇ ಆಫ್ ಮಾಡುತ್ತಿದೆ.
  • ಕಚೇರಿಯಲ್ಲಿ ಭಾವನಾತ್ಮಕ ವಾತಾವರಣ ತಪ್ಪಿಸಲು ಮೆಟಾ ಸಂಸ್ಥೆ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಕೊಟ್ಟು ನಂತರ ಇಮೇಲ್ ಮೂಲಕ ಲೇ ಆಫ್ ಮಾಡಿದೆ.
  • ಮೆಟಾ ಸಂಸ್ಥೆ ಎಐಗೆ ಭಾರೀ ಹೂಡಿಕೆ ಮಾಡುತ್ತಿದ್ದು, ಸಣ್ಣ ತಂಡಗಳನ್ನು ಇಟ್ಟುಕೊಂಡು ಕೆಲಸ ನಿರ್ವಹಿಸಲು ಆದ್ಯತೆ ಕೊಡುತ್ತಿದೆ.

ಇದನ್ನೂ ಓದಿ: ಚೀನಾದ ಡಾರ್ಕ್ ಫ್ಯಾಕ್ಟರಿಗಳು… ಮನುಷ್ಯರು, ಬೆಳಕು ಇಲ್ಲದ ಕಾರ್ಖಾನೆಗಳು, ರೋಬೋಗಳದ್ದೇ ಆಟ; ಭವಿಷ್ಯವೇ ಪ್ರತ್ಯಕ್ಷ

ಮೆಟಾ ಸಂಸ್ಥೆಯಲ್ಲಿ ಒಟ್ಟು 78,000 ಉದ್ಯೋಗಿಗಳ ಬಳಗ ಹೊಂದಿತ್ತು. ಈ ಪೈಕಿ 8,000 ಮಂದಿಗೆ ಕೆಲಸ ಹೋಗಿದೆ. ಮ್ಯಾನೇಜರ್ ಮಟ್ಟದ ಹುದ್ದೆಗಳಲ್ಲಿ ಹೆಚ್ಚಿನವನ್ನು ತೆಗೆದುಹಾಕಲಾಗಿದೆ. 6,000 ಓಪನ್ ರೋಲ್​ಗಳನ್ನು ಮುಚ್ಚಲಾಗಿದೆ. 7,000 ಉದ್ಯೋಗಿಗಳನ್ನು ಹೊಸ ಎಐ ಟೀಮ್​ಗಳಿಗೆ ಸೇರಿಸಿಕೊಳ್ಳಲಾಗುತ್ತಿದೆ.

ಮೆಟಾದಲ್ಲಿ ಲೇ ಆಫ್ ಆಗಿರುವ ಉದ್ಯೋಗಿಗಳಲ್ಲಿ ಎಂಜಿನಿಯರಿಂಗ್ ಮತ್ತು ಪ್ರಾಡಕ್ಟ್ ತಂಡಗಳಲ್ಲಿ ಕೆಲಸ ಮಾಡುತ್ತಿರುವವರೇ ಹೆಚ್ಚು. ಲೇ ಆಫ್ ಪ್ರಕ್ರಿಯೆ ಈಗ ಆರಂಭಗೊಂಡಿದೆ. ಎಲ್ಲಾ 8,000 ಮಂದಿಗೆ ಒಮ್ಮೆಲೇ ಇಮೇಲ್ ಬಂದಿಲ್ಲ. ಹಂತ ಹಂತವಾಗಿ ಈ ಕೆಲಸ ಮಾಡಲಾಗುತ್ತದೆ. ಆತಂಕದ ಸಂಗತಿ ಎಂದರೆ ಲೇ ಆಫ್ ಭೀತಿ 8,000 ಮಂದಿಗೆ ಸೀಮಿತವಾಗಿರುವುದಿಲ್ಲ. ಈ ವರ್ಷ ಇನ್ನಷ್ಟು ಜಾಬ್ ಕಟ್ ಮಾಡಲು ಮೆಟಾ ಸಿದ್ಧ ಇದೆ.

ಮೆಟಾ ಸಂಸ್ಥೆಯು ಎಐ ಅಳವಡಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ಕೃತಕ ಬುದ್ಧಿಮತ್ತೆಗಾಗಿ ಮೆಟಾ ಈ ವರ್ಷ 125ರಿಂದ 145 ಬಿಲಿಯನ್ ಡಾಲರ್​ನಷ್ಟು ವ್ಯಯಿಸಲು ಸಿದ್ಧ ಇದೆ. ಈ ಹಿನ್ನೆಲೆಯಲ್ಲಿ ಬಹಳ ಸಣ್ಣ ತಂಡಗಳನ್ನು ಇಟ್ಟುಕೊಂಡು ಎಐ ಪ್ರಾಧಾನ್ಯದ ಸಂಸ್ಥೆಯಾಗಿ ಮೆಟಾವನ್ನು ಪರಿವರ್ತಿಸಲು ಮಾರ್ಕ್ ಜುಕರ್ಬರ್ಗ್ ಅಣಿಗೊಂಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್​ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ?

ವರ್ಕ್ ಫ್ರಂ ಕೊಟ್ಟು ಬಲಿಹಾಕುವ ಟ್ರೆಂಡ್

8,000 ಮಂದಿಯನ್ನು ಲೇ ಆಫ್ ಮಾಡಲಿರುವ ಸುದ್ದಿ ತಿಂಗಳುಗಳ ಹಿಂದೆಯೇ ಚಾಲ್ತಿಯಲ್ಲಿತ್ತು. ಕಳೆದ ತಿಂಗಳು ಮೆಟಾ ಸಂಸ್ಥೆಯೇ ಇದನ್ನು ಖಚಿತಪಡಿಸಿತ್ತು. ಅದಾದ ಬಳಿಕ ಕಚೇರಿಯೊಳಗೆ ಉದ್ಯೋಗಿಗಳಲ್ಲಿ ಆತಂಕದ ವಾತಾವರಣ ಮಡುಗಟ್ಟಿತ್ತು. ನಿರುತ್ಸಾಹ ಎದ್ದುಕಾಣುತ್ತಿತ್ತು. ನಂತರ ಎಲ್ಲರಿಗೂ ವರ್ಕ್ ಫ್ರಂ ಹೋಮ್ ಆದೇಶ ಕೊಡಲಾಯಿತು. ಆಗಲೇ ಹಲವು ಉದ್ಯೋಗಿಗಳಿಗೆ ಲೇ ಆಫ್ ಪ್ಲಾನ್ ಇರಬಹುದು ಎನ್ನುವ ಸುಳಿವು ಸಿಕ್ಕಿತ್ತು.

ವರ್ಕ್ ಫ್ರಂ ಹೋಂ ಇದ್ದಾಗ ಲೇ ಆಫ್ ಮಾಡಿದರೆ ಕಚೇರಿಯೊಳಗೆ ಎಮೋಶನಲ್ ಪ್ರಸಂಗಗಳನ್ನು ತಪ್ಪಿಸಬಹುದು ಎಂಬುದು ಮೆಟಾ ಎಣಿಕೆ. ಮೆಟಾ ಮಾತ್ರವಲ್ಲ ವಿವಿಧ ಟೆಕ್ ಕಂಪನಿಗಳು ಕೂಡ ಒಂದು ಇಮೇಲ್ ಮೂಲಕ ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿವೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

ಭವಿಷ್ಯದಲ್ಲಿ ಉದ್ಯೋಗಗಳ ಕಥೆ?

ಪರಿಣಿತರ ಪ್ರಕಾರ ಕಾರ್ಪೊರೇಟ್ ಸೆಕ್ಟರ್​ನಲ್ಲಿ ಈಗ ಕೆಲಸದ ಪರಿಮಾಣ ಮತ್ತು ಗುಣ ಬದಲಾಗುತ್ತಿದೆ. ಕೆಲಸವನ್ನು ವೇಗವಾಗಿ ಪೂರ್ಣಗೊಳಿಸುವ ಸ್ಕಿಲ್ ಸಾಕಾಗುವುದಿಲ್ಲ. ಕೋಡ್ ಬ್ಲಾಕ್ ಬರೆಯುವ ಸಾಮರ್ಥ್ಯ ಸಾಕಾಗಲ್ಲ. ಬಹಳ ಸಂಕೀರ್ಣವಾದ ಮತ್ತು ಪ್ರಾಬಬಿಲಿಸ್ಟಿಕ್ ಸಿಸ್ಟಂಗಳನ್ನು ನಿರ್ವಹಿಸುವ ಸಾಮರ್ಥ್ಯ ಇರಬೇಕಾಗುತ್ತದೆ.

ಎಐ ಸಿಸ್ಟಂಗಳನ್ನು ಆಪರೇಟ್ ಮಾಡುವುದಷ್ಟೇ ಅಲ್ಲ, ಅದನ್ನು ಡಿಸೈನ್ ಮಾಡುವ ತಂತ್ರಜ್ಞರಿಗೆ ಭವಿಷ್ಯ ಇರುತ್ತದೆ ಎಂದೆನ್ನುತ್ತಾರೆ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us