AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್​ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ?

California's gasoline prices shoot up because of India's LPG shortage: ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಭಾರತಕ್ಕೆ ಮಧ್ಯಪ್ರಾಚ್ಯದಿಂದ ಬರುತ್ತಿದ್ದ ಎಲ್‌ಪಿಜಿ ಆಮದು ಕುಸಿದಿದೆ. ದೇಶೀಯ ಅಡುಗೆ ಅನಿಲದ ಕೊರತೆ ನೀಗಿಸಲು ಭಾರತೀಯ ಕಂಪನಿಗಳು ಇಂಧನ ಅಡಿಟಿವ್ ಆದ 'ಅಲ್ಕಿಲೇಟ್ಸ್' ರಫ್ತನ್ನು ಕಡಿತಗೊಳಿಸಿವೆ. ಇದು ಕ್ಯಾಲಿಫೋರ್ನಿಯಾದ ವಿಶೇಷ ಪೆಟ್ರೋಲ್ ಮಿಶ್ರಣದ ಸರಪಳಿಗೆ ಪೆಟ್ಟು ನೀಡಿದ್ದು, ಅಲ್ಲಿ ಇಂಧನ ದರ ಭಾರಿ ಏರಿಕೆಯಾಗಲು ಕಾರಣವಾಗಿದೆ.

ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್​ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ?
ಅಮೆರಿಕದಲ್ಲಿ ಪೆಟ್ರೋಲ್ (ಗ್ಯಾಸೊಲಿನ್)Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 18, 2026 | 6:29 PM

Share

ಕ್ಯಾಲಿಫೋರ್ನಿಯಾ, ಮೇ 18: ಜಾಗತಿಕ ಆರ್ಥಿಕತೆಯು ಒಂದಕ್ಕೊಂದು ಹೇಗೆ ಬೆಸೆದುಕೊಂಡಿದೆ ಎಂಬುದಕ್ಕೆ ಅತ್ಯಂತ ಆಶ್ಚರ್ಯಕರ ಉದಾಹರಣೆಯೊಂದು ಬೆಳಕಿಗೆ ಬಂದಿದೆ. ಭಾರತದಲ್ಲಿ ಸದ್ಯ ಎದುರಾಗಿರುವ ಅಡುಗೆ ಅನಿಲ (LPG) ಕೊರತೆಯು, ಅಮೆರಿಕದ ಪ್ರಮುಖ ರಾಜ್ಯವಾದ ಕ್ಯಾಲಿಫೋರ್ನಿಯಾದಲ್ಲಿ ಗ್ಯಾಸೋಲಿನ್ (ಪೆಟ್ರೋಲ್) ಬೆಲೆ ಗಗನಕ್ಕೇರಲು ನೇರ ಕಾರಣವಾಗಿದೆ. ಇರಾನ್ ಮತ್ತು ಯುಎಸ್-ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆ ಸರಪಳಿಯಲ್ಲಿ (fuel supply chain) ಉಂಟಾಗಿರುವ ವ್ಯತ್ಯಯವೇ ಇದಕ್ಕೆ ಮುಖ್ಯ ಕಾರಣ ಎಂದು ಅಂತಾರಾಷ್ಟ್ರೀಯ ವರದಿಗಳು ತಿಳಿಸಿವೆ.

ಈ ಸುದ್ದಿಯ ಮುಖ್ಯಾಂಶಗಳು

  • ಭಾರತದ ಎಲ್‌ಪಿಜಿ ಕೊರತೆ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಗ್ಯಾಲನ್‌ಗೆ $6 ದಾಟಿದ ಇಂಧನ ದರಕ್ಕೆ ಪಶ್ಚಿಮ ಏಷ್ಯಾದ ಯುದ್ಧವೇ ಪ್ರಮುಖ ಕಾರಣವಾಗಿದೆ.
  • ಅಡುಗೆ ಅನಿಲದ ಬಿಕ್ಕಟ್ಟು ನಿವಾರಿಸಲು ಭಾರತೀಯ ತೈಲ ಕಂಪನಿಗಳು ‘ಅಲ್ಕಿಲೇಟ್ಸ್’ (Alkylate) ಎಂಬ ಪೆಟ್ರೋಲ್ ರಾಸಾಯನಿಕದ ಉತ್ಪಾದನೆಯನ್ನು ಕಡಿತಗೊಳಿಸಿವೆ.
  • ಕ್ಯಾಲಿಫೋರ್ನಿಯಾದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬಳಸುವ ವಿಶೇಷ ಪೆಟ್ರೋಲ್ ತಯಾರಿಕೆಗೆ ಭಾರತದ ಈ ‘ಅಲ್ಕಿಲೇಟ್ಸ್’ ರಫ್ತು ಅತ್ಯಂತ ನಿರ್ಣಾಯಕವಾಗಿತ್ತು.

ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

ಭಾರತದಲ್ಲಿ ಎಲ್‌ಪಿಜಿ ಬಿಕ್ಕಟ್ಟು ಸೃಷ್ಟಿಯಾಗಿದ್ದು ಹೇಗೆ?

ಭಾರತವು ತನ್ನ ಅಡುಗೆ ಅನಿಲದ ಅಗತ್ಯಕ್ಕಾಗಿ ಶೇಕಡಾ 90 ಕ್ಕಿಂತ ಹೆಚ್ಚು ಮಧ್ಯಪ್ರಾಚ್ಯ ದೇಶಗಳನ್ನು ಅವಲಂಬಿಸಿದೆ. ಆದರೆ ಯುದ್ಧದ ಕಾರಣದಿಂದಾಗಿ ಇರಾನ್ ದೇಶವು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಸ್ಟ್ರೇಟ್ ಆಫ್ ಹಾರ್ಮುಜ್’ (Strait of Hormuz) ಅನ್ನು ಭಾಗಶಃ ಮುಚ್ಚಿರುವುದರಿಂದ ಭಾರತಕ್ಕೆ ಎಲ್‌ಪಿಜಿ ಆಮದು ಮಾಡಿಕೊಳ್ಳುವುದು ಕಷ್ಟವಾಗಿದೆ. ದೇಶೀಯವಾಗಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದರಿಂದ, ಭಾರತ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತರಾಗಲು ದೇಶದ ತೈಲ ಶುದ್ಧೀಕರಣ ಸಂಸ್ಥೆಗಳಿಗೆ (Refiners) ಸೂಚಿಸಿತು. ಪರಿಣಾಮವಾಗಿ, ಭಾರತೀಯ ಕಂಪನಿಗಳು ದೇಶೀಯ ಬಳಕೆಗಾಗಿ ಅಡುಗೆ ಅನಿಲ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿವೆ.

ಕ್ಯಾಲಿಫೋರ್ನಿಯಾದ ಮೇಲೆ ಇದರ ಪರಿಣಾಮವೇನು?

ಭಾರತೀಯ ತೈಲ ಸಂಸ್ಕರಣಾಗಾರಗಳು ಅಡುಗೆ ಅನಿಲ ಉತ್ಪಾದನೆಗೆ ಆದ್ಯತೆ ನೀಡಿದ್ದರಿಂದ, ಪೆಟ್ರೋಲ್ ತಯಾರಿಕೆಯಲ್ಲಿ ಬಳಸಲಾಗುವ ‘ಅಲ್ಕಿಲೇಟ್ಸ್’ ಎಂಬ ರಾಸಾಯನಿಕದ ಉತ್ಪಾದನೆ ಮತ್ತು ರಫ್ತನ್ನು ಗಣನೀಯವಾಗಿ ಕಡಿತಗೊಳಿಸಿವೆ. ಭಾರತ ಕಚ್ಛಾ ತೈಲವನ್ನು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಆದರೆ, ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಗಳು ಕಚ್ಚಾ ತೈಲವನ್ನು ಸಂಸ್ಕರಿಸಿ ವಿವಿಧ ಪೆಟ್ರೋಲಿಯಂ ಉತ್ಪನ್ನಗಳಾಗಿ ತಯಾರಿಸಿ ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಸರಬರಾಜು ಮಾಡುತ್ತವೆ. ಈ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಆಲ್ಕಿಲೇಟ್ಸ್ ಕೂಡ ಒಂದು.

ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ವಾಯು ಮಾಲಿನ್ಯವನ್ನು (Smog) ಕಡಿಮೆ ಮಾಡಲು ಅತ್ಯಂತ ಶುದ್ಧವಾದ ವಿಶೇಷ ಇಂಧನ ಮಿಶ್ರಣವನ್ನು ಬಳಸಲಾಗುತ್ತದೆ. ಈ ವಿಶೇಷ ಪೆಟ್ರೋಲ್ ತಯಾರಿಕೆಗೆ ಭಾರತದಿಂದ ರಫ್ತಾಗುತ್ತಿದ್ದ ‘ಅಲ್ಕಿಲೇಟ್ಸ್’ ಅತ್ಯಗತ್ಯವಾಗಿತ್ತು. ಈಗ ಭಾರತದಿಂದ ಇದರ ಪೂರೈಕೆ ಸ್ಥಗಿತಗೊಂಡಿರುವುದರಿಂದ, ಕ್ಯಾಲಿಫೋರ್ನಿಯಾದಲ್ಲಿ ಪೆಟ್ರೋಲ್ ಕೊರತೆ ಉಂಟಾಗಿ ದರವು 2022 ರ ನಂತರದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪ್ರತಿ ಗ್ಯಾಲನ್‌ಗೆ ಬೆಲೆ 6 ಡಾಲರ್ ಆಗಿದೆ. ಸುಮಾರು 577 ರೂ. ಒಂದು ಗ್ಯಾಲನ್ ಎಂದರೆ ಸುಮಾರು 3.785 ಲೀಟರ್ ಇರುತ್ತದೆ. ಒಂದು ಲೀಟರ್ ಪೆಟ್ರೋಲ್ ಅಥವಾ ಗ್ಯಾಸೊಲಿನ್ ಬೆಲೆ ಸುಮಾರು 150 ರುಪಾಯಿಗೆ ಏರಿದೆ. ಇದು ಅಮೆರಿಕದ ಮಟ್ಟಿಗೆ ಬಹಳ ದೊಡ್ಡ ದರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More