AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Emergency Credit Line Guarantee Scheme- ಏರ್​ಲೈನ್ಸ್, ಎಂಎಸ್​ಎಂಇಗಳಿಗೆ ಬೆಂಬಲಿಸುವ ಇಸಿಎಲ್​ಜಿಎಸ್ 5.0 ಸ್ಕೀಮ್​ಗೆ ಅನುಮೋದನೆ

ECLGS 5.0 Aid for MSMEs & Airlines Facing West Asia Challenges: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು, ಕೇಂದ್ರ ಸರ್ಕಾರ ECLGS 5.0 ಯೋಜನೆಗೆ ಅನುಮೋದನೆ ನೀಡಿದೆ. ಇದು ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳು (MSME) ಹಾಗೂ ವಿಮಾನಯಾನ ಸಂಸ್ಥೆಗಳಿಗೆ ನೆರವಾಗಲಿದೆ. ನಗದು ಕೊರತೆ ನಿವಾರಿಸಿ, ಉದ್ಯೋಗ ನಷ್ಟವನ್ನು ತಡೆದು, ಜಾಗತಿಕ ಪೂರೈಕೆ ಸರಪಳಿಯ ಏರುಪೇರಿನಿಂದ ಉಂಟಾದ ಹೊಡೆತದಿಂದ ಉದ್ಯಮಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶ.

Emergency Credit Line Guarantee Scheme- ಏರ್​ಲೈನ್ಸ್, ಎಂಎಸ್​ಎಂಇಗಳಿಗೆ ಬೆಂಬಲಿಸುವ ಇಸಿಎಲ್​ಜಿಎಸ್ 5.0 ಸ್ಕೀಮ್​ಗೆ ಅನುಮೋದನೆ
ಇಸಿಎಲ್​ಜಿಎಸ್ ಯೋಜನೆImage Credit source: AI/Mediaforge/TV9
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 06, 2026 | 2:54 PM

Share

ನವದೆಹಲಿ, ಮೇ 6: ಪಶ್ಚಿಮ ಏಷ್ಯಾ (West Asia) ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕವಾಗಿ ಉಂಟಾಗಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು ಮತ್ತು ದೇಶದ ಉದ್ಯಮಗಳಿಗೆ ಆಸರೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಕಷ್ಟದಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEಗಳು) ಹಾಗೂ ವಿಮಾನಯಾನ ಸಂಸ್ಥೆಗಳಿಗೆ (Airlines) ನೆರವಾಗಲು ‘ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್’ನ 5ನೇ ಹಂತಕ್ಕೆ (ECLGS 5.0) ಅನುಮೋದನೆ ನೀಡಿದೆ.

ಇಸಿಎಲ್​ಜಿಎಸ್ ಯೋಜನೆಯ ಪ್ರಮುಖ ಉದ್ದೇಶ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಪೂರೈಕೆ ಸರಪಳಿ (Supply Chain) ಏರುಪೇರಾಗಿದೆ ಮತ್ತು ವಿಮಾನ ಇಂಧನ ದರ ಹೆಚ್ಚಳ ಸೇರಿದಂತೆ ಉದ್ಯಮಗಳ ನಿರ್ವಹಣಾ ವೆಚ್ಚ ಅಧಿಕವಾಗಿದೆ. ಇದರಿಂದ ಉಂಟಾಗಿರುವ ಅಲ್ಪಾವಧಿಯ ನಗದು ಕೊರತೆ (Liquidity mismatch) ಮತ್ತು ಆರ್ಥಿಕ ಒತ್ತಡವನ್ನು ನಿವಾರಿಸಲು, ಉದ್ಯೋಗ ನಷ್ಟವನ್ನು ತಡೆಯಲು ಹಾಗೂ ವ್ಯಾಪಾರ ಮುಂದುವರಿಕೆಗೆ ನೆರವಾಗಲು ಸರ್ಕಾರ ಈ ಯೋಜನೆಯನ್ನು ತಂದಿದೆ. ಇದರ ಪ್ರಮುಖಾಂಶಗಳು ಇಂತಿವೆ:

  • ಒಟ್ಟು ಸಾಲದ ಗುರಿ: ಈ ಯೋಜನೆಯ ಮೂಲಕ ಮಾರುಕಟ್ಟೆಯಲ್ಲಿ ಒಟ್ಟು 2,55,000 ಕೋಟಿ ರೂ ಹೆಚ್ಚುವರಿ ಸಾಲದ ಹರಿವನ್ನು ಸುಗಮಗೊಳಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ವಿಶೇಷವಾಗಿ 5,000 ಕೋಟಿ ರೂ ಅನ್ನು ವಿಮಾನಯಾನ ಕ್ಷೇತ್ರಕ್ಕೆ ಮೀಸಲಿಡಲಾಗಿದೆ.
  • ಶೇ. 100 ರಷ್ಟು ಗ್ಯಾರಂಟಿ: ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿಮಿಟೆಡ್ (NCGTC) ಮೂಲಕ ಬ್ಯಾಂಕ್‌ಗಳು ನೀಡುವ ಹೆಚ್ಚುವರಿ ಸಾಲಕ್ಕೆ ಸರ್ಕಾರವೇ ಗ್ಯಾರಂಟಿ ನೀಡಲಿದೆ. MSME ಉದ್ಯಮಗಳಿಗೆ ಶೇ. 100 ರಷ್ಟು ಮತ್ತು ಎಂಎಸ್ಮೇ ಅಲ್ಲದ ಇತರ ದೊಡ್ಡ ಸಂಸ್ಥೆಗಳು ಹಾಗೂ ವಿಮಾನಯಾನ ಸಂಸ್ಥೆಗಳಿಗೆ ಶೇ. 90 ರಷ್ಟು ಕ್ರೆಡಿಟ್ ಗ್ಯಾರಂಟಿ ಕವರೇಜ್ ಸಿಗಲಿದೆ.
  • ಯಾರು ಅರ್ಹರು?: ಮಾರ್ಚ್ 31, 2026 ರ ವೇಳೆಗೆ ಬ್ಯಾಂಕ್‌ಗಳಲ್ಲಿ ಚಾಲ್ತಿಯಲ್ಲಿರುವ ವರ್ಕಿಂಗ್ ಕ್ಯಾಪಿಟಲ್ (ದುಡಿಯುವ ಬಂಡವಾಳ) ಮಿತಿ ಹೊಂದಿರುವ MSMEಗಳು ಮತ್ತು ಯಾವುದೇ ಸಾಲದ ಸುಸ್ತಿದಾರರಲ್ಲದ (Standard Accounts) ಪರಿಶಿಷ್ಟ ಪ್ರಯಾಣಿಕರ ವಿಮಾನಯಾನ ಸಂಸ್ಥೆಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.
  • ಸಾಲದ ಪ್ರಮಾಣ: ಸಾಮಾನ್ಯ ಉದ್ಯಮಗಳು 2025-26ರ ಕೊನೆಯ ತ್ರೈಮಾಸಿಕದಲ್ಲಿ ಬಳಸಿದ ಗರಿಷ್ಠ ವರ್ಕಿಂಗ್ ಕ್ಯಾಪಿಟಲ್‌ನ ಶೇ. 20 ರಷ್ಟು ಹೆಚ್ಚುವರಿ ಸಾಲವನ್ನು (ಗರಿಷ್ಠ 100 ಕೋಟಿ ರೂವರೆಗೆ) ಪಡೆಯಬಹುದು.

ಇದನ್ನೂ ಓದಿ: ಭಾರತೀಯರು ವಿಶ್ವದಲ್ಲೇ ಅತ್ಯುತ್ತಮ ಪ್ರತಿಭಾನ್ವಿತರು: ಬುರ್ಜ್ ಖಲೀಫಾ ನಿರ್ಮಾತೃವಿನ ಅಂತರಂಗದ ಅನಿಸಿಕೆ

ವಿಮಾನಯಾನ ಸಂಸ್ಥೆಗಳಿಗೆ ಕೆಲವು ಷರತ್ತುಗಳ ಅನ್ವಯದೊಂದಿಗೆ ಗರಿಷ್ಠ 1,500 ಕೋಟಿ ರೂವರೆಗೆ ಸಾಲದ ಮಿತಿಯನ್ನು ನಿಗದಿಪಡಿಸಲಾಗಿದೆ.

ಮರುಪಾವತಿ ಅವಧಿ (Tenor)

  • MSME ಮತ್ತು ಇತರ ಉದ್ಯಮಗಳಿಗೆ: 1 ವರ್ಷದ ಮೊರಟೋರಿಯಂ (ಅಸಲು ಪಾವತಿಗೆ ವಿನಾಯಿತಿ ಅವಧಿ) ಸೇರಿದಂತೆ ಒಟ್ಟು 5 ವರ್ಷಗಳ ಮರುಪಾವತಿ ಅವಧಿ ಇರುತ್ತದೆ.
  • ವಿಮಾನಯಾನ ಸಂಸ್ಥೆಗಳಿಗೆ: 2 ವರ್ಷಗಳ ಮೊರಟೋರಿಯಂ ಸೇರಿದಂತೆ ಒಟ್ಟು 7 ವರ್ಷಗಳ ದೀರ್ಘಾವಧಿ ಮರುಪಾವತಿ ಸೌಲಭ್ಯ ಸಿಗಲಿದೆ.

ಮಾರ್ಚ್ 31, 2027 ರವರೆಗೆ ಮಂಜೂರಾಗುವ ಎಲ್ಲಾ ಸಾಲಗಳಿಗೆ ಈ ಸೌಲಭ್ಯ ಅನ್ವಯವಾಗುತ್ತದೆ. ಇದಕ್ಕಾಗಿ ಗ್ರಾಹಕರಿಂದ ಯಾವುದೇ ಗ್ಯಾರಂಟಿ ಶುಲ್ಕವನ್ನು (Guarantee Fee) ವಸೂಲಿ ಮಾಡಲಾಗುವುದಿಲ್ಲ.

ಇದನ್ನೂ ಓದಿ: ಎಸ್​ಬಿಐ ನೌಕರರ ಎರಡು ದಿನ ಮುಷ್ಕರ; ಏನು ಕಾರಣ, ಅವರ 16 ಬೇಡಿಕೆಗಳೇನು? ಇಲ್ಲಿದೆ ಮಾಹಿತಿ

ಉದ್ಯಮಗಳ ಮೇಲಾಗುವ ಧನಾತ್ಮಕ ಪರಿಣಾಮ

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದಂತೆ, ಈ ತುರ್ತು ಸಾಲದ ಸೌಲಭ್ಯವು ಸಣ್ಣ ಕೈಗಾರಿಗಗಳಿಗೆ ಸಕಾಲದಲ್ಲಿ ಹಣಕಾಸಿನ ನೆರವು ನೀಡುವ ಮೂಲಕ ದೇಶೀಯ ಉತ್ಪಾದನೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ. ವಿಮಾನಯಾನ ಸಂಸ್ಥೆಗಳಿಗೆ ಕಾರ್ಯನಿರ್ವಹಣಾ ವೆಚ್ಚ ಸರಿದೂಗಿಸಲು ಮತ್ತು ನೌಕರರ ಸಂಬಳ, ಪಿಎಫ್ ಪಾವತಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಲು ಇದು ಅತ್ಯಂತ ಸಹಕಾರಿಯಾಗಲಿದ್ದು, ದೇಶದಲ್ಲಿ ದೊಡ್ಡ ಮಟ್ಟದ ಉದ್ಯೋಗ ನಷ್ಟವಾಗುವುದನ್ನು ತಪ್ಪಿಸಲಿದೆ.

(ಗಮನಿಸಿ: ಮೊದಲ ಬಾರಿಗೆ ECLGS ಯೋಜನೆಯನ್ನು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಉದ್ಯಮಗಳ ಉಳಿವಿಗಾಗಿ ಮೇ 2020 ರಲ್ಲಿ ಪ್ರಾರಂಭಿಸಲಾಗಿತ್ತು, ಈಗ ಅದರ 5ನೇ ಆವೃತ್ತಿಯನ್ನು ಜಾಗತಿಕ ಯುದ್ಧದ ಸನ್ನಿವೇಶದ ಹಿನ್ನೆಲೆಯಲ್ಲಿ ತರಲಾಗಿದೆ).

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us