
ಬೆಂಗಳೂರು, ಜೂನ್ 23: ಎಐನಿಂದ ಉದ್ಯೋಗ ಕುಸಿತ ಆಗುವುದಿಲ್ಲ. ಬದಲಿಗೆ ಉದ್ಯೋಗ ಸಾಮರ್ಥ್ಯ ಹೆಚ್ಚಲಿದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ (Nandan Nilekani) ಹೇಳಿದ್ದಾರೆ. ಇನ್ಫೋಸಿಸ್ (Infosys) ಸಂಸ್ಥೆಯ 45ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಮಾತನಾಡಿದ ಅವರು ಐಟಿ ಉದ್ಯಮದ ಭವಿಷ್ಯ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಕುರಿತು ಅತ್ಯಂತ ಸಕಾರಾತ್ಮಕ ಹಾಗೂ ಆತ್ಮವಿಶ್ವಾಸದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ಎಐ ತಂತ್ರಜ್ಞಾನವು ಇನ್ಫೋಸಿಸ್‌ನಂತಹ ಐಟಿ ಕಂಪನಿಗಳನ್ನು ಎಂದಿಗೂ ಕೊನೆಗಾಣಿಸುವುದಿಲ್ಲ, ಬದಲಿಗೆ ಅವುಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ” ಎಂದು ಅವರು ಷೇರುದಾರರಿಗೆ ಭರವಸೆ ನೀಡಿದ್ದಾರೆ.
ಜನರೇಟಿವ್ ಎಐ (GenAI) ಬಂದಿರುವುದರಿಂದ ಕೋಡಿಂಗ್ ಸಂಪೂರ್ಣವಾಗಿ ಸ್ವಯಂಚಾಲಿತವಾಗುತ್ತದೆ ಮತ್ತು ಐಟಿ ಕಂಪನಿಗಳ ಅಗತ್ಯವಿರುವುದಿಲ್ಲ ಎಂಬ ಆತಂಕ ಜಾಗತಿಕ ಮಟ್ಟದಲ್ಲಿದೆ. ಈ ಅಭಿಪ್ರಾಯವನ್ನು ನಿರಾಕರಿಸಿದ ನಿಲೇಕಣಿ, “ಎಐ ನಮ್ಮಂತಹ ಕಂಪನಿಗಳನ್ನು ಬದಲಿಸುವುದಿಲ್ಲ (Replace). ಬದಲಿಗೆ ಯಾರು ವೇಗವಾಗಿ ಮತ್ತು ಉದ್ದೇಶಪೂರ್ವಕವಾಗಿ ಬದಲಾವಣೆಗೆ ಹೊಂದಿಕೊಳ್ಳುತ್ತಾರೋ ಅವರ ಶಕ್ತಿಯನ್ನು ಇದು ದುಪ್ಪಟ್ಟು (Amplify) ಮಾಡಲಿದೆ” ಎಂದಿದ್ದಾರೆ.
2030ರ ವೇಳೆಗೆ ಜಾಗತಿಕವಾಗಿ ‘ಎಐ-ಫಸ್ಟ್’ ಸೇವೆಗಳ ಮಾರುಕಟ್ಟೆಯು ಸುಮಾರು 300 ರಿಂದ 400 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಈ ಬೃಹತ್ ಅವಕಾಶವನ್ನು ಬಳಸಿಕೊಳ್ಳಲು ಇನ್ಫೋಸಿಸ್ ಸಂಪೂರ್ಣವಾಗಿ ಸಿದ್ಧವಾಗಿದೆ. ಈಗಾಗಲೇ ಕಂಪನಿಯ ಎಐ ಸೇವೆಗಳ ವಾರ್ಷಿಕ ಆದಾಯವು 1 ಬಿಲಿಯನ್ ಡಾಲರ್ ಗಡಿಯನ್ನು ದಾಟಿದೆ ಎಂದು ಆಧಾರ್ ಪ್ರಾಜೆಕ್ಟ್ ರೂವಾರಿಯಾದ ಅವರು ಹೇಳಿದ್ದಾರೆ.
ಇದನ್ನೂ ಓದಿ: ಯುಎಇಯಲ್ಲಿ ಬರಲಿದೆ ಮೊದಲ ಪ್ಯಾಸೆಂಜರ್ ರೈಲು; ಮುಂದುವರಿದ ದೇಶಕ್ಕೆ ತಡವಾಗಿ ಬಂತಾ ರೈಲು? ಇಲ್ಲಿದೆ ವಾಸ್ತವ
ದೊಡ್ಡ ಕಾರ್ಪೊರೇಟ್ ಕಂಪನಿಗಳು ಎಐ ತಂತ್ರಜ್ಞಾನವನ್ನು ಹೊಂದಿದ್ದರೂ, ಅದನ್ನು ತಮ್ಮ ದೈನಂದಿನ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಳ್ಳಲು (Deployment) ಕಷ್ಟಪಡುತ್ತಿವೆ. ಈ ಕರಾರುವಕ್ಕಾದ ಗ್ಯಾಪ್ ಅನ್ನು ತುಂಬುವ ಕೆಲಸವನ್ನು ಇನ್ಫೋಸಿಸ್ ಮಾಡಲಿದ್ದು, ಪ್ರಸ್ತುತ ಕಂಪನಿಯು ತನ್ನ ಟಾಪ್ 200 ಗ್ರಾಹಕರಲ್ಲಿ ಶೇಕಡಾ 90 ರಷ್ಟು ಕಂಪನಿಗಳೊಂದಿಗೆ ಎಐ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಹಳೆಯ ಸಾಫ್ಟ್‌ವೇರ್ ಆಧುನೀಕರಣ: ಎಐ ಕ್ರಾಂತಿಯಿಂದಾಗಿ ಜಾಗತಿಕ ಕಂಪನಿಗಳು ತಮ್ಮ ದಶಕಗಳಷ್ಟು ಹಳೆಯದಾದ ಸಾಫ್ಟ್‌ವೇರ್ ವ್ಯವಸ್ಥೆಗಳನ್ನು ಬದಲಾಯಿಸಲು (Legacy Modernisation) ಮುಂದಾಗುತ್ತಿವೆ. ಇದು ಇನ್ಫೋಸಿಸ್‌ಗೆ ಹೊಸ ಮತ್ತು ದೊಡ್ಡ ಆರ್ಡರ್‌ಗಳನ್ನು ತಂದುಕೊಡುತ್ತಿದೆ. ಅಲ್ಲದೆ, ಕಂಪನಿಗಳು ಇನ್ಮುಂದೆ ಸಾಫ್ಟ್‌ವೇರ್ ಖರೀದಿಸುವ ಬದಲು ಸ್ವಂತವಾಗಿ ‘ಬಿಲ್ಡ್’ ಮಾಡಲು ಇಷ್ಟಪಡುತ್ತಿದ್ದು, ಇದಕ್ಕೆ ಐಟಿ ತಜ್ಞರ ಅಗತ್ಯವಿದೆ ಎಂದು ವಿವರಿಸಿದ್ದಾರೆ.
ಡೇಟಾ ಭದ್ರತೆ ಮತ್ತು ಗವರ್ನೆನ್ಸ್: ಎಐ ಮಾಡೆಲ್‌ಗಳನ್ನು ಕಂಪನಿಗಳು ಬಳಸುವಾಗ ಕಠಿಣ ಸೈಬರ್ ಸೆಕ್ಯುರಿಟಿ, ಕಟ್ಟುನಿಟ್ಟಾದ ಡೇಟಾ ಗವರ್ನೆನ್ಸ್ ಮತ್ತು ನಿರಂತರ ಟೆಸ್ಟಿಂಗ್ ಅಗತ್ಯವಿರುತ್ತದೆ. ಇವುಗಳನ್ನು ಕೇವಲ ಬಾಹ್ಯ ಪ್ಲಾಟ್‌ಫಾರ್ಮ್‌ಗಳಿಗೆ ಬಿಡಲು ಸಾಧ್ಯವಿಲ್ಲ, ಇನ್ಫೋಸಿಸ್‌ನಂತಹ ನಂಬಿಕಸ್ಥ ಐಟಿ ಸಂಸ್ಥೆಗಳೇ ಇದನ್ನು ನಿರ್ವಹಿಸಬೇಕು ಎಂದು ನಂದನ್ ನಿಲೇಕಣಿ ಸ್ಪಷ್ಟಪಡಿಸಿದ್ದಾರೆ.
ಜನರೇಟಿವ್ ಎಐ ತಂತ್ರಜ್ಞಾನ ಬಿಡುಗಡೆಯಾಗಿ ಮೂರು ವರ್ಷಗಳು ಕಳೆದಿದ್ದರೂ, ಇನ್ಫೋಸಿಸ್ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ ಮತ್ತು ಮುಂದಿನ ದಶಕದ ಬೆಳವಣಿಗೆಗೆ ಕಂಪನಿಯು ತನ್ನ ಉದ್ಯೋಗಿಗಳಿಗೆ ಹೊಸ ಮಾನಸಿಕ ಮಾದರಿಗಳು ಹಾಗೂ ನಿರಂತರ ತರಬೇತಿಯನ್ನು ನೀಡುವ ಮೂಲಕ ಸನ್ನದ್ಧಗೊಳಿಸುತ್ತಿದೆ ಎಂದು ನಂದನ್ ನಿಲೇಕಣಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ