ನ್ಯೂ ಇಂಡಿಯಾ ಸಹಕಾರಿ ಬ್ಯಾಂಕ್ನ ನಿರ್ದೇಶಕರ ಮಂಡಳಿ ಸೂಪರ್ಸೀಡ್ ಮಾಡಿದ ಆರ್ಬಿಐ
RBI supersedes board of New India Co-operative bank for 12 months: ಮುಂಬೈ ಮೂಲದ ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್ನ ನಿರ್ದೇಶಕರ ಮಂಡಳಿಯನ್ನು ಆರ್ಬಿಐ 12 ತಿಂಗಳ ಕಾಲ ಸೂಪರ್ಸೀಡ್ ಮಾಡಿದೆ. ಎಸ್ಬಿಐನ ಮಾಜಿ ಜನರಲ್ ಮ್ಯಾನೇಜರ್ ಶ್ರೀಕಾಂತ್ ಅವರನ್ನು ಈ ಸಹಕಾರಿ ಬ್ಯಾಂಕ್ನ ಆಡಳಿತ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದ ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್ ಹಣಕಾಸು ಸಂಕಷ್ಟದಲ್ಲಿರುವ ಕಾರಣದಿಂದ ಆರ್ಬಿಐ ಈ ಕ್ರಮ ತೆಗೆದುಕೊಂಡಿದೆ.

ಮುಂಬೈ, ಫೆಬ್ರುವರಿ 14: ಕಳಪೆ ಆಡಳಿತ ನಿರ್ವಹಣೆ ಕಾರಣದಿಂದ ಮುಂಬೈ ಮೂಲದ ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ನಿನ್ನೆ ನಿರ್ಬಂಧಗಳನ್ನು ಹೇರಿದ್ದ ಆರ್ಬಿಐ ಇವತ್ತು, ಆ ಸಹಕಾರಿ ಬ್ಯಾಂಕ್ನ ನಿರ್ದೇಶಕರ ಮಂಡಳಿಯನ್ನು ಸೂಪರ್ಸೀಡ್ ಮಾಡಿದೆ. ಆ ಮಂಡಳಿಯನ್ನು 12 ತಿಂಗಳ ಕಾಲ ವಜಾಗೊಳಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಜನರಲ್ ಮ್ಯಾನೇಜರ್ ಆದ ಶ್ರೀಕಾಂತ್ ಎಂಬುವರಿಗೆ ನ್ಯೂ ಇಂಡಿಯಾ ಸಹಕಾರಿ ಬ್ಯಾಂಕ್ನ ಆಡಳಿತ ಚುಕ್ಕಾಣಿ ನೀಡಿದೆ.
ಶ್ರೀಕಾಂತ ಅವರು ಮುಂಬೈ ಮೂಲದ ಈ ಸಹಕಾರಿ ಬ್ಯಾಂಕ್ನ ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲು ಮುಖ್ಯ ಆಡಳಿತಗಾರರಾಗಿರುತ್ತಾರೆ. ಎಸ್ಬಿಐನ ಮತ್ತೊಬ್ಬ ಮಾಜಿ ಜನರಲ್ ಮ್ಯಾನೇಜರ್ ರವೀಂದ್ರ ಸಪ್ರ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆದ ಅಭಿಜೀತ್ ದೇಶಮುಖ್ ಅವರುಗಳು ಶ್ರೀಕಾಂತ್ಗೆ ಈ ಆಡಳಿತ ನಿರ್ವಹಣೆಯಲ್ಲಿ ಸಹಾಯಕರಾಗಿರುತ್ತಾರೆ.
ಬ್ಯಾಂಕ್ನ ಪರಿಸ್ಥಿತಿ ಸ್ಥಿರ ಮಟ್ಟಕ್ಕೆ ಬರುವವರೆಗೂ ಈ ವ್ಯವಸ್ಥೆ ಮುಂದುವರಿಯುವ ನಿರೀಕ್ಷೆ ಇದೆ.
ಇದನ್ನೂ ಓದಿ: ಸತತ 8ನೇ ದಿನ ಸೆನ್ಸೆಕ್ಸ್, ನಿಫ್ಟಿಗೆ ಕೆಂಪು ಬಣ್ಣ; ಎರಡು ವರ್ಷದಲ್ಲಿ ಇದೇ ಅತಿದೊಡ್ಡ ಹಿನ್ನಡೆ
ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ ಯಾಕೆ?
ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್ ಇತ್ತೀಚಿನ ವರ್ಷಗಳಲ್ಲಿ ಹಣಕಾಸು ಸಂಕಷ್ಟಕ್ಕೆ ಸಿಲುಕಿದೆ. 2023-24ರ ಹಣಕಾಸು ವರ್ಷದಲ್ಲಿ 22.78 ಕೋಟಿ ರೂ ನಷ್ಟವಾಗಿದೆ ಎಂದು ಈ ಬ್ಯಾಂಕ್ನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲೂ 30.75 ಕೋಟಿ ರೂ ನಷ್ಟವಾಗಿದೆ ಎಂದು ಹೇಳಿತ್ತು.
ಯಾವುದೇ ಸಹಕಾರಿ ಬ್ಯಾಂಕು ಈ ರೀತಿ ಸಂಕಷ್ಟಕ್ಕೆ ಸಿಲುಕಿದಾಗ ಆರ್ಬಿಐ ಮಧ್ಯಪ್ರವೇಶಿಸಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತದೆ. ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್ ವಿಚಾರದಲ್ಲೂ ಆರ್ಬಿಐ ಮಧ್ಯಪ್ರವೇಶಿಸಿ ನಿನ್ನೆ ನಿರ್ಬಂಧಗಳನ್ನು ವಿಧಿಸಿತ್ತು.
ಯಾವುದೇ ಹೊಸ ಸಾಲಗಳನ್ನು ಮಾಡಬಾರದು. ಹೊಸ ಹೂಡಿಕೆಗಳನ್ನು ಮಾಡುವಂತಿಲ್ಲ. ಹೊಸ ಠೇವಣಿಗಳನ್ನು ಸಂಗ್ರಹಿಸುವಂತಿಲ್ಲ. ಯಾವುದೇ ಆಸ್ತಿಯನ್ನು ಆರ್ಬಿಐ ಅನುಮೋದನೆ ಇಲ್ಲದೇ ಮಾರುವಂತಿಲ್ಲ ಎಂಬಿತ್ಯಾದಿ ನಿರ್ಬಂಧಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿತು. ಬ್ಯಾಂಕ್ ಗ್ರಾಹಕರೂ ಕೂಡ ಹಣ ವಿತ್ಡ್ರಾ ಮಾಡದಂತೆ ನಿರ್ಬಂಧ ಹಾಕಲಾಯಿತು.
ಇದನ್ನೂ ಓದಿ: ಇನ್ಫೋಸಿಸ್ ಲೇಆಫ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕಕ್ಕೆ ಕೇಂದ್ರದಿಂದ ಮಹತ್ವದ ಸೂಚನೆ
ಇವತ್ತು ಬ್ಯಾಂಕ್ ಆಡಳಿತವನ್ನು ಸೂಪರ್ಸೀಡ್ ಮಾಡಿದೆ. 12 ತಿಂಗಳವರೆಗೆ ಇದೇ ಪರಿಸ್ಥಿತಿ ಇರಲಿದೆ. ಎಸ್ಬಿಐನ ಜನರಲ್ ಮ್ಯಾನೇಜರ್ ನೇತೃತ್ವದಲ್ಲಿ ಬ್ಯಾಂಕ್ನ ಎಲ್ಲಾ ಹಣಕಾಸು ವ್ಯವಹಾರಗಳ ಆಡಿಟ್ ನಡೆಯಲಿದ್ದು, ಬ್ಯಾಂಕ್ನ ಹಣಕಾಸು ಪರಿಸ್ಥಿತಿ ಸುಧಾರಣೆಗೆ ಪ್ರಯತ್ನಿಸಲಾಗುತ್ತದೆ. ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್ ಮುಂಬೈ, ನವಿ ಮುಂಬೈ, ಥಾಣೆ, ಪಾಲಗಡ್, ಪುಣೆ ಮತ್ತು ಗುಜರಾತ್ನ ಸೂರತ್ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಆದರೆ, ಮುಂಬೈನಲ್ಲಿ ಅತಿಹೆಚ್ಚು ಶಾಖೆಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




