
ನವದೆಹಲಿ, ಏಪ್ರಿಲ್ 25: ಸ್ಯಾಮ್ ಪಿತ್ರೋಡಾ ಮೊನ್ನೆ ಹೇಳಿದ ಪಿತ್ರಾರ್ಜಿತ ಆಸ್ತಿ ತೆರಿಗೆ (inheritance tax) ವಿಚಾರ ಚರ್ಚೆಯಲ್ಲಿದೆ. ಈ ವೇಳೆ ಝೀರೋಧದ ಸಹ-ಸಂಸ್ಥಾಪಕರಾದ ನಿಖಿಲ್ ಕಾಮತ್ (Nikhil Kamath) ಅವರು ಈ ತೆರಿಗೆ ಬಗ್ಗೆ ಮಾತನಾಡಿರುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವರ್ಷದ ಹಿಂದೆ ಮಿಂಟ್ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ನಿಖಿಲ್ ಕಾಮತ್ ಅವರು ಪಿತ್ರಾರ್ಜಿತ ಆಸ್ತಿ ತೆರಿಗೆ ಬಗ್ಗೆ ಮಾತನಾಡಿರುವ ವಿಡಿಯೋ ಅದಾಗಿದೆ. ಈ ತೆರಿಗೆಗೆ ಅವರು ಬೆಂಬಲ ವ್ಯಕ್ತಪಡಿಸಿರುವುದು ತಿಳಿದುಬರುತ್ತದೆ. ಅವರ ಪ್ರಕಾರ ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿಗೆ ಬಂದರೆ ಹೆಚ್ಚು ಜನರು ತೆರಿಗೆ ವ್ಯಾಪ್ತಿಗೆ ಬರುತ್ತಾರೆ.
‘ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಆಸ್ತಿ ವರ್ಗಾವಣೆ ಆಗುವಾಗ ಅದರ ಒಂದು ಭಾಗವನ್ನು ಮರುಹಂಚಿಕೆ ಮಾಡುವ ಒಂದು ವ್ಯವಸ್ಥೆ ಆಗಬೇಕು,’ ಎಂದು ಆ ಸಂವಾದದಲ್ಲಿ ನಿಖಿಲ್ ಕಾಮತ್ ಹೇಳಿದ್ದಾರೆ.
‘ಸೌತ್ ಕೊರಿಯಾ, ಅಮೆರಿಕ ಮತ್ತು ಬ್ರಿಟನ್ ದೇಶಗಳಲ್ಲಿ ಎಸ್ಟೇಟ್ ಟ್ಯಾಕ್ಸ್ ಹೆಸರಿನಲ್ಲಿ ಇನ್ಹೆರಿಟೆನ್ಸ್ ಟ್ಯಾಕ್ಸ್ ವ್ಯವಸ್ಥೆ ಇದೆ. ಭಾರತದಲ್ಲಿ ಕೇವಲ ಶೇ. 3ರಷ್ಟು ಜನರು ಮಾತ್ರ ಆದಾಯ ತೆರಿಗೆ ಪಾವತಿಸುತ್ತಾರೆ. ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಜಾರಿಗೆ ತಂದರೆ ಹೆಚ್ಚು ಜನರನ್ನು ಟ್ಯಾಕ್ಸ್ ವ್ಯಾಪ್ತಿಗೆ ಬರಬಹುದು,’ ಎಂದು ಝೀರೋಧದ ಸಹ-ಸಂಸ್ಥಾಪಕರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಸಂಪತ್ತು ಮರುಹಂಚಿಕೆ ಚರ್ಚೆಗೆ ಹೊಸ ‘ಅಲ್ಪಸಂಖ್ಯಾತ’ ವರ್ಗ ಸೇರಿಸಿದ ಉದ್ಯಮಿ ಆಶ್ನೀರ್ ಗ್ರೋವರ್
ಬಹಳ ಸಿರಿವಂತ ಜನರಿಗೆ ಈ ರೀತಿ ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸಿದರೆ ಸರ್ಕಾರಕ್ಕೆ ಅಗತ್ಯ ಸುಧಾರಣೆ ಕೈಗೊಳ್ಳಲು ಬೇಕಾದ ಹಣಕಾಸು ಸಂಪನ್ಮೂಲ ಕೈಗೂಡಿ ಬರಬಹುದು ಎಂಬುದು ನಿಖಿಲ್ ಕಾಮತ್ ಅವರ ಅನಿಸಿಕೆ.
ಪಿತ್ರಾರ್ಜಿತ ಆಸ್ತಿ ತೆರಿಗೆ ಭಾರತಕ್ಕೆ ಹೊಸತೇನಲ್ಲ. 1953ರಲ್ಲಿ ಎಸ್ಟೇಟ್ ಡ್ಯೂಟಿ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಇದು ಪಿತ್ರಾರ್ಜಿತ ಆಸ್ತಿಯ ಒಂದು ರೂಪ. ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಇದನ್ನು ಜಾರಿ ಮಾಡಲಾಗಿತ್ತು. ಸುಮಾರು ಮೂರು ದಶಕಗಳ ಕಾಲ ಇದು ಅಸ್ತಿತ್ವದಲ್ಲಿತ್ತು. 1985ರಲ್ಲಿ ಇದನ್ನು ನಿಲ್ಲಿಸಲಾಯಿತು.
ಇದನ್ನೂ ಓದಿ: ವೈಯಕ್ತಿಕ ಆಸ್ತಿಯಲ್ಲಿ ಸರ್ಕಾರಕ್ಕೆ ಶೇ. 55 ಪಾಲು: ಅಮೆರಿಕದ ಟ್ಯಾಕ್ಸ್ ವ್ಯವಸ್ಥೆ ಪ್ರಸ್ತಾಪಿಸಿದ ಸ್ಯಾಮ್ ಪಿತ್ರೋಡಾ
ಸದ್ಯದ ಆದಾಯ ತೆರಿಗೆ ಕಾಯ್ದೆ ಪ್ರಕಾರ ಪಿತ್ರಾರ್ಜಿತವಾಗಿ ವರ್ಗಾವಣೆ ಆಗುವ ಆಸ್ತಿಗೆ ಯಾವ ತೆರಿಗೆ ಇರುವುದಿಲ್ಲ. ಆದರೆ, ನೀವು ಈ ಆಸ್ತಿ ಮಾರಿದಾಗ ಮಾತ್ರವೇ ತೆರಿಗೆ ಕಟ್ಟಬೇಕಾಗುತ್ತದೆ. ಐಟಿ ರಿಟರ್ನ್ ಸಲ್ಲಿಕೆಯಲ್ಲೂ ಕೂಡ ನಿಮ್ಮ ಪಿತ್ರಾರ್ಜಿತ ಆಸ್ತಿ ತೆರಿಗೆ ಘೋಷಿಸಬೇಕೆನ್ನುವ ನಿಯಮ ಮತ್ತು ಅವಕಾಶ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ