Nirav Modi: ದೇಶ ತೊರೆದ ನೀರವ್ ಮೋದಿಯ ಚಿನ್ನ, ವಜ್ರ, ಆಭರಣಗಳ ಹರಾಜು ಮುಂದಿನ ತಿಂಗಳು
e-Auction of Precious Items Belonging To Nirav Modi: ಭಾರತದ ಅತಿದೊಡ್ಡ ಬ್ಯಾಂಕಿಂಗ್ ವಂಚಕರಲ್ಲಿ ಒಬ್ಬರೆನಿಸಿರುವ ವಜ್ರೋದ್ಯಮಿ ನೀರವ್ ಮೋದಿಗೆ ಸೇರಿದ ಚಿನ್ನ, ವಜ್ರ, ಪ್ಲಾಟಿನಂ ಇತ್ಯಾದಿ ಅಮೂಲ್ಯ ವಸ್ತುಗಳನ್ನು ಮಾರ್ಚ್ 25ರಂದು ಇ-ಹರಾಜಿನಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ನವದೆಹಲಿ: ಬ್ಯಾಂಕುಗಳಿಂದ ಸಾಲ ಪಡೆದು ತೀರಸದೇ ದೇಶ ಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿಗೆ (Diamond Businessman Nirav Modi) ಸೇರಿದ ಕೆಲ ಆಸ್ತಿಗಳ ಹರಾಜು (e Auction) ಮಾಡಲು ಸಿದ್ಧತೆ ನಡೆದಿದೆ. ನೀರವ್ ಮೋದಿ ಮಾಲಿಕತ್ವದ ಫಯರ್ ಸ್ಟಾರ್ ಡೈಮಂಡ್ ಇಂಟರ್ನ್ಯಾಷನಲ್ ಸಂಸ್ಥೆಗೆ ಸೇರಿದ ಚಿನ್ನ, ವಜ್ರ, ಪ್ಲಾಟಿನಂ ಹಾಗು ಇತರೆ ಆಭರಣಗಳನ್ನು ಮುಂದಿನ ತಿಂಗಳು, ಅಂದರೆ 2023 ಮಾರ್ಚ್ 25ರಂದು ಹರಾಜಿ ಹಾಕಲಾಗುತ್ತಿದೆ. ಈ ಬಗ್ಗೆ ನೋಟೀಸ್ ಕೂಡ ಹೊರಡಿಸಲಾಗಿದೆ.
ವಜ್ರ, ಚಿನ್ನ ಮತ್ತು ಪ್ಲಾಟಿನಂ ಆಭರಣಗಳನ್ನು ಮಾರ್ಚ್ 25ರಂದು ಇ–ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಈ ವಸ್ತುಗಳ ಮೂಲ ಬೆಲೆಯನ್ನು (Reserve Price) ಹರಾಜಿನ ದಿನ ಪ್ರಕಟಿಸಲಾಗುತ್ತದೆ. ಕಲರ್ ಸ್ಟೋನ್, ಬೆಳ್ಳಿ ಇತ್ಯಾದಿ ಬೆಲೆಬಾಳುವ ಎಲ್ಲಾ ವಸ್ತುಗಳನ್ನೂ ಹರಾಜಿನಲ್ಲಿ ಮಾರಾಟಕ್ಕಿಡಲಾಗಿದೆ.
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT)ಯ ಮುಂಬೈ ವಿಭಾಗೀಯ ನ್ಯಾಯಪೀಠವು 2020 ಫೆಬ್ರುವರಿ ತಿಂಗಳಲ್ಲಿ ಸಾಂತನು ಟಿ ರೇ ಅವರನ್ನು ಫಯರ್ಸ್ಟಾರ್ ಡೈಮಂಡ್ ಇಂಟರ್ನ್ಯಾಷನಲ್ ಸಂಸ್ಥೆಯ ಲಿಕ್ವಿಡೇಟರ್ ಆಗಿ ನೇಮಕ ಮಾಡಿತ್ತು. ಶಾಂತನು ರೇ ಅವರ ಉಸ್ತುವಾರಿಯಲ್ಲೇ ಮುಂದಿನ ತಿಂಗಳು ಇ ಹರಾಜು ನಡೆಯಲಿದೆ. ನೀರವ್ ಮೋದಿ ಮಾಲಕತ್ವದ ಈ ಕಂಪನಿಯಲ್ಲಿರುವ ಚಿನ್ನ, ಬೆಳ್ಳಿ, ವಜ್ರ ಇತ್ಯಾದಿ ಅಮೂಲ್ಯ ವಸ್ತುಗಳ ಬೆಲೆ ಎಷ್ಟೆಂದು ತಿಳಿಯಲು ಜೆಮ್ಮಾಲಾಜಿಕಲ್ ಇನ್ಸ್ಟಿಟ್ಯೂಟ್ಗೆ ಜವಾಬ್ದಾರಿ ಕೊಡಲಾಗಿದೆ. ಈ ವಸ್ತುಗಳ ಈಗಿನ ಮೌಲ್ಯ ಎಷ್ಟೆಂದು ತೀರ್ಮಾನವಾದ ಬಳಿಕ ಮೂಲ ಬೆಲೆಯನ್ನು ನಿರ್ಧರಿಸುವ ಸಾಧ್ಯತೆ ಇದೆ.
14 ಸಾವಿರ ಕೋಟಿ ರೂ ವಂಚನೆ
ಭಾರತದ ಅತಿದೊಡ್ಡ ಬ್ಯಾಂಕ್ ಅಪರಾಧ ಪ್ರಕರಣಗಳಲ್ಲಿ ನೀರವ್ ಮೋದಿಯದ್ದೂ ಒಂದು. ವಜ್ರೋದ್ಯಮಿಯಾದ ನೀರವ್ ಮೋದಿ ಮತ್ತವರ ಸಂಬಂಧಿ ಮೆಹುಲ್ ಚೋಕ್ಸಿ ಇಬ್ಬರೂ ಸೇರಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ 14 ಸಾವಿರ ಕೋಟಿ ರೂ ಸಾಲ ಪಡೆದಿದ್ದರು. ಇದರಲ್ಲಿ ಬ್ಯಾಂಕ್ನ ಕೆಲ ಅಧಿಕಾರಿಗಳೂ ಶಾಮೀಲಾಗಿದ್ದರು.
ಈ ಪ್ರಕರಣ ಬೆಳಕಿಗೆ ಬರುತ್ತಲೇ ನೀರವ್ ಮೋದಿ 2018ರಲ್ಲಿ ಭಾರತವನ್ನು ತೊರೆದುಹೋಗಿದ್ದರು. ನಂತರ ಅವರ ವಿರುದ್ಧ ಪ್ರಕರಣ ದಾಖಲಾಯಿತು. ಭಾರತದಲ್ಲಿನ ನೀರವ್ ಮೋದಿ ಅವರಿಗೆ ಸೇರಿದ ಎಲ್ಲಾ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ನೀರವ್ ಮೋದಿ ಸದ್ಯ ಬ್ರಿಟನ್ ದೇಶದ ಜೈಲೊಂದರಲ್ಲಿ ಇದ್ದಾರೆ. ಇವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ನ್ಯಾಯಾಲಯಗಳು ಒಪ್ಪಿಕೊಂಡಿವೆ. ಆದರೂ ಕೆಲ ಕಾನೂನು ತೊಡಕಿನಿಂದ ಅವರನ್ನು ಇನ್ನೂ ಕೂಡ ಭಾರತಕ್ಕೆ ಕರೆತರಲು ಆಗಿಲ್ಲ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:38 am, Tue, 21 February 23