NPAs in Banks: 3 ಲಕ್ಷ ಕೋಟಿ ರೂ. ಎನ್ಪಿಎ ತಪ್ಪಿಸಿ ಬ್ಯಾಂಕ್ಗಳನ್ನು ರಕ್ಷಿಸಿದ್ದೇವೆ; ನಿತಿನ್ ಗಡ್ಕರಿ
ದೇಶದಲ್ಲಿ 2014ರಿಂದ ಬಾಕಿ ಇದ್ದ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮತಿ ನೀಡುವ ಮೂಲಕ 3 ಲಕ್ಷ ಕೋಟಿ ರೂ. ಅನುತ್ಪಾದಕ ಆಸ್ತಿಯಾಗುವುದನ್ನು ಸರ್ಕಾರ ತಪ್ಪಿಸಿದೆ. ಆ ಮೂಲಕ ಬ್ಯಾಂಕ್ಗಳನ್ನು ರಕ್ಷಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ನವದೆಹಲಿ: ದೇಶದಲ್ಲಿ 2014ರಿಂದ ಬಾಕಿ ಇದ್ದ ರಸ್ತೆ ನಿರ್ಮಾಣ ಯೋಜನೆಗಳಿಗೆ (Road Projects) ಅನುಮತಿ ನೀಡುವ ಮೂಲಕ 3 ಲಕ್ಷ ಕೋಟಿ ರೂ. ಅನುತ್ಪಾದಕ ಆಸ್ತಿಯಾಗುವುದನ್ನು (NPAs) ಸರ್ಕಾರ ತಪ್ಪಿಸಿದೆ. ಆ ಮೂಲಕ ಬ್ಯಾಂಕ್ಗಳನ್ನು ರಕ್ಷಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಬುಧವಾರ ತಿಳಿಸಿದ್ದಾರೆ. ಒಟ್ಟು 415 ರಸ್ತೆ ನಿರ್ಮಾಣ ಯೋಜನೆಗಳ ಪೈಕಿ ಶೇಕಡಾ 95ರ ಕಾಮಗಾರಿ ಮುಗಿದಿದೆ. ಆದರೆ ಇವುಗಳನ್ನು ವಿಳಂಬವಾಗಿರುವ ಯೋಜನೆಗಳ ಅಡಿಯಲ್ಲಿ ಪರಿಗಣಿಸಲಾಗಿದೆ ಎಂದು ಅವರು ರಾಜ್ಯಸಭೆಗೆ (Rajya Sabha) ತಿಳಿಸಿದ್ದಾರೆ.
ಶೀಘ್ರದಲ್ಲೇ ರಾಜ್ಯಮಟ್ಟದಲ್ಲಿ ಬಾಕಿ ಇರುವ ರಸ್ತೆ ನಿರ್ಮಾಣ ಯೋಜನೆಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ ಅಂಥ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಿ ಅದು ಅನುಷ್ಠಾನಗೊಳ್ಳಲು ನೆರವಾಗಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Banking Stocks: ಒಂದೇ ತಿಂಗಳಲ್ಲಿ ಶೇ 122ರವರೆಗೆ ಗಳಿಕೆ ದಾಖಲಿಸಿವೆ ಈ ಬ್ಯಾಂಕಿಂಗ್ ಷೇರುಗಳು
2014ರಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಾಗ 3.85 ಲಕ್ಷ ಕೋಟಿ ಮೊತ್ತದ ರಸ್ತೆ ನಿರ್ಮಾಣ ಯೋಜನೆಗಳು ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದವು. ಸರ್ಕಾರ ರಚನೆಯಾದ ಬೆನ್ನಲ್ಲೇ ಬ್ಯಾಂಕರ್ಗಳ ಜತೆ ಸಮಾಲೋಚನೆ ನಡೆಸಿ ಅನೇಕ ಅಡೆತಡೆಗಳನ್ನು ಪರಿಹರಿಸಲಾಯಿತು. ಭೂಸ್ವಾಧೀನದಂಥ ಅನೇಕ ಸಮಸ್ಯೆಗಳನ್ನು ಬಗೆಹರಿಸಲಾಯಿತು ಎಂದು ಗಡ್ಕರಿ ಹೇಳಿದ್ದಾರೆ. ವಿಳಂಬವಾಗಿರುವ ಅಥವಾ ಸ್ಥಗಿತಗೊಂಡಿರುವ ರಸ್ತೆ ನಿರ್ಮಾಣ ಯೋಜನೆಗಳನ್ನು ಪುನರಾರಂಭಿಸುವ ಯೋಜನೆ ಇದೆಯೇ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.
719 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನನೆಗುದಿಗೆ
ವಿವಿಧ ರಾಜ್ಯಗಳಲ್ಲಿ ಅನುಮೋದನೆ ದೊರೆತ ಸುಮಾರು 719 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಹಲವು ಯೋಜನೆಗಳು ಗುತ್ತಿಗೆದಾರರ ಸಮಸ್ಯೆಯಿಂದ, ಇನ್ನು ಕೆಲವು ಭೂಸ್ವಾಧೀನ ಮತ್ತಿತರ ಸಮಸ್ಯೆಗಳಿಂದ ಬಾಕಿ ಇವೆ. ಇವುಗಳ ತ್ವರಿತಗತಿಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಹೆದ್ದಾರಿ ಯೋಜನೆಗಳು ಯಾವುವೂ ಪೂರ್ಣವಾಗಿ ಸ್ಥಗಿತಗೊಂಡಿಲ್ಲ. ಮುಂಗಾರು ಮಳೆ, ಕೋವಿಡ್ ಸಾಂಕ್ರಾಮಿಕ, ಭುಸ್ವಾಧೀನ, ವಿವಿಧ ಇಲಾಖೆಗಳ ಅನುಮೋದನೆ ವಿಳಂಬ ಇತ್ಯಾದಿ ಕಾರಣಗಳಿಂದ ಮುಂದೂಡಿಕೆಯಾಗಿವೆಯಷ್ಟೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ