
ನವದೆಹಲಿ, ಏಪ್ರಿಲ್ 23: ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ನಂತರ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು (Petrol and Diesel Prices) ಏರಿಕೆ ಆಗಲಿವೆ ಎನ್ನುವಂತಹ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಸರ್ಕಾರ ತತ್ಕ್ಷಣವೇ ಈ ವಿಚಾರದಲ್ಲಿ ಪ್ರತಿಕ್ರಿಯಿಸಿದೆ. ಪೆಟ್ರೋಲ್ ಬೆಲೆ ಏರಿಕೆಯ ಯಾವ ಸಾಧ್ಯತೆಯೂ ಇಲ್ಲ ಎಂದು ಹೇಳಿರುವ ಪೆಟ್ರೋಲಿಯಂ ಸಚಿವಾಲಯ, ಮಾಧ್ಯಮಗಳಲ್ಲಿ ಬಂದ ವರದಿಯನ್ನು ತಳ್ಳಿ ಹಾಕಿದೆ.
‘ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ಮಾಡಬಹುದು ಎಂದು ಕೆಲ ವರದಿಗಳು ಹೇಳಿವೆ. ಇಂಥ ಯಾವುದೇ ಪ್ರಸ್ತಾವವು ಸರ್ಕಾರದ ಪರಿಗಣನೆಯಲ್ಲಿ ಇಲ್ಲ. ಜನರಿಗೆ ಭಯ ಮತ್ತು ಆತಂಕ ಹುಟ್ಟಿಸಲು ಈ ವರದಿಗಳನ್ನು ಸೃಷ್ಟಿಸಲಾಗಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಟ್ವೀಟ್ ಮಾಡಿದೆ.
ಪೆಟ್ರೋಲಿಯಂ ಸಚಿವಾಲಯದ ಎಕ್ಸ್ ಪೋಸ್ಟ್
FAKE NEWS
There are some news reports suggesting a price hike of petrol and diesel. It is hereby clarified that there is no such proposal under consideration by the Government.
Such news items are designed to create fear and panic amongst the citizens and are mischievous and… pic.twitter.com/yTAfJdah2o— Ministry of Petroleum and Natural Gas #MoPNG (@PetroleumMin) April 23, 2026
ಇದನ್ನೂ ಓದಿ: ಮೇ 1ರಿಂದ ಹೊಸ ಗೇಮಿಂಗ್ ರೂಲ್ಸ್; ಆಟಗಾರರಿಗೆ ಬದಲಾವಣೆಗಳೇನು? ಇಲ್ಲಿದೆ ಡೀಟೇಲ್ಸ್
ಚುನಾವಣೆಗಳ ಬಳಿಕ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿ ಲೀಟರ್ಗೆ 25-28 ರೂನಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಕೋಟಕ್ ಇನ್ಸ್ಟಿಟ್ಯೂಶನಲ್ ಈಕ್ವಿಟೀಸ್ ಸಂಸ್ಥೆಯ ಅಭಿಪ್ರಾಯ ಉಲ್ಲೇಖಿಸಿ ಈ ವರದಿ ಬರೆಯಲಾಗಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿವೆ. ಆದರೆ, ದೇಶದಲ್ಲಿ ರೀಟೇಲ್ ಇಂಧನ ಬೆಲೆಯಲ್ಲಿ ಏರಿಕೆ ಆಗಿಲ್ಲ. ಇದರಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ತಿಂಗಳಿಗೆ 27,000 ಕೋಟಿ ರೂ ಹೆಚ್ಚುವರಿ ಹೊರೆ ಆಗುತ್ತಿದೆ ಎಂದು ಕೋಟಕ್ನ ಈ ವರದಿಯಲ್ಲಿ ವಿಶ್ಲೇಷಿಸಲಾಗಿತ್ತು.
ಸರ್ಕಾರ ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸಲ್ ಮೇಲೆ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವ ಕ್ರಮ ಉಲ್ಲೇಖಿಸಿದ ಕೋಟಕ್ ಇನ್ಸ್ಟಿಟ್ಯೂಶನಲ್ ಈಕ್ವಿಟೀಸ್ನ ವರದಿಯು, ಈ ಸುಂಕ ಕಡಿತದಿಂದ ತೈಲ ಕಂಪನಿಗಳಿಗೆ ಒಂದಷ್ಟು ರಿಲೀಫ್ ಕೊಟ್ಟಿವೆಯಾದರೂ, ದೀರ್ಘಕಾಲದ ಪರಿಹಾರ ಸಿಕ್ಕಿಲ್ಲ. ಹೀಗಾಗಿ, ಪೆಟ್ರೋಲ್, ಡೀಸಲ್ ಬೆಲೆ ಏರಿಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಜಾಗತಿಕ ಆಘಾತಗಳಿಗೆ ಭಾರತದ 3 ಆರ್ಥಿಕ ರಕ್ಷಾ ಕವಚಗಳು: ಫಿಚ್ ಬಿಎಂಐ ವಿಶ್ಲೇಷಣೆ
ಆದರೆ, ಇಂಧನ ಬೆಲೆ ಏರಿಕೆ ಸಾಧ್ಯತೆಯನ್ನು ಸರ್ಕಾರ ಬಲವಾಗಿ ತಳ್ಳಿಹಾಕಿದೆ. ‘ಕಳೆದ 5 ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಏರಿಸದೇ ಇರುವ ಏಕೈಕ ದೇಶ ಭಾರತ. ಅಂತಾರಾಷ್ಟ್ರೀಯ ದರಗಳು ಗಣನೀಯವಾಗಿ ಏರಿಕೆಯಾದರೂ ಭಾರತೀಯ ನಾಗರಿಕರಿಗೆ ಅದರ ಬಿಸಿ ತಾಗದಂತೆ ಭಾರತ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿವೆ’ ಎಂದು ಪೆಟ್ರೋಲಿಯಂ ಸಚಿವಾಲಯವು ತನ್ನ ಟ್ವೀಟ್ನಲ್ಲಿ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Thu, 23 April 26