ಅಕ್ಟೋಬರ್ 2ರಂದು ‘ನೋ ಯುಪಿಐ ಡೇ’; ಅಂಗಡಿಗಳಿಂದ ಒಂದು ದಿನ ಯುಪಿಐ ಪೇಮೆಂಟ್ ಬಹಿಷ್ಕಾರ
ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ ವಿಧಿಸುವುದನ್ನು ವಿರೋಧಿಸಿ ಮೊಬೈಲ್ ರೀಟೇಲರ್ಸ್ ಸಂಸ್ಥೆ ಅ. 2ರಂದು ‘ನೋ ಯುಪಿಐ ಡೇ’ ಗೆ ಕರೆ ನೀಡಿದೆ. ಅಖಿಲ ಭಾರತ ಕನ್ಸೂಮರ್ ಪ್ರಾಡಕ್ಟ್ ಡಿಸ್ಟ್ರಿಬ್ಯೂಟರ್ಸ್ ಫೆಡರೇಶನ್ ಸಂಸ್ಥೆಯೂ ಈ ಪ್ರತಿಭಟನೆಗೆ ಬೆಂಬಲ ನೀಡಿದೆ. ದೇಶಾದ್ಯಂತ ಹಲವು ರೀಟೇಲ್ ಅಂಗಡಿಗಳು ಈ ಶುಕ್ರವಾರ ಯುಪಿಐ ಪೇಮೆಂಟ್ ಸ್ವೀಕರಿಸುವುದಿಲ್ಲ ಎಂದು ಹೇಳಲಾಗಿದೆ.

ನವದೆಹಲಿ, ಸೆಪ್ಟೆಂಬರ್ 30: ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ರೀಟೇಲ್ ಮಾರಾಟಗಾರರು ಯುಪಿಐ ಪೇಮೆಂಟ್ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಯುಪಿಐ ಪಾವತಿಗಳ ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರದ ವಿರುದ್ಧ ಮೊಬೈಲ್ ರೀಟೇಲ್ ಮಾರಾಟಗಾರರ ಸಂಸ್ಥೆ (AIMRA) ‘ನೋ ಯುಪಿಐ ಡೇ’ ಗೆ ಕರೆ ನೀಡಿದೆ. ಗ್ರಾಹಕ ಉತ್ಪನ್ನ ವಿತರಕರ ಒಕ್ಕೂಟ (AICPDF) ಸಂಘಟನೆಯು ಈ ಕರೆಯನ್ನು ಬೆಂಬಲಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ಅಂಗಡಿ ಮುಂಗಟ್ಟುಗಳು ಹಾಗೂ ಮೊಬೈಲ್ ಸ್ಟೋರ್ಗಳು ಅಕ್ಟೋಬರ್ 2ರಂದು ಯುಪಿಐ ಪೇಮೆಂಟ್ ಸ್ವೀಕರಿಸುವ ಸಾಧ್ಯತೆ ಕಡಿಮೆ. ಗ್ರಾಹಕರು ಕೈಯಲ್ಲಿ ಕ್ಯಾಷ್ ಅಥವಾ ಕಾರ್ಡ್ ಹಿಡಿದು ಹೋಗಬೇಕಾಗಬಹುದು.
ಅಖಿಲ ಭಾರತ ಗ್ರಾಹಕ ಉತ್ಪನ್ನ ವಿತರಕರ ಒಕ್ಕೂಟವು ಈ ಪ್ರತಿಭಟನೆಗೆ ಪೂರ್ಣ ಬೆಂಬಲ ನೀಡುವುದಾಗಿ ಹೇಳಿರುವುದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ತನ್ನ ಜಾಲದಲ್ಲಿ ದೇಶಾದ್ಯಂತ 4.5 ಲಕ್ಷ ಡಿಸ್ಟ್ರಿಬ್ಯೂಟರ್ಗಳು ಮತ್ತು 1.3 ಕೋಟಿ ರೀಟೇಲ್ ಮಾರಾಟಗಾರರು ಇದ್ದು, ಅವರೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಈ ಒಕ್ಕೂಟ ಹೇಳಿಕೊಂಡಿದೆ. ಅದು ಹೇಳಿಕೊಂಡಂತೆ ರೀಟೇಲರ್ಗಳು ಯುಪಿಐ ಪೇಮೆಂಟ್ ಸ್ವೀಕರಿಸಲು ನಿರಾಕರಿಸಿದರೆ ದೊಡ್ಡ ಸಂಗತಿ ಎನಿಸಲಿದೆ.
ಇದನ್ನೂ ಓದಿ: ಗಾಂಧಿ ಜಯಂತಿಯಂದು ‘ನೋ ಯುಪಿಐ ಡೇ’ ಕರೆ ನೀಡಿರುವ ಸುದ್ದಿ ಸುಳ್ಳು: ವರ್ತಕರ ಒಕ್ಕೂಟ ಸ್ಪಷ್ಟನೆ
0.4% ಎಂಡಿಆರ್ ಶುಲ್ಕದ ವಿರುದ್ಧ ಪ್ರತಿಭಟನೆ
ವರ್ತಕರಿಗೆ ಯುಪಿಐ ಮೂಲಕ ಮಾಡಲಾಗುವ 2,000 ರೂಗಿಂತ ಹೆಚ್ಚಿನ ಮೌಲ್ಯದ ಪೇಮೆಂಟ್ ಮೇಲೆ ಶೇ. 0.4 ರಷ್ಟು ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಶುಲ್ಕ ವಿಧಿಸಲು ಸರ್ಕಾರ ನಿರ್ಧರಿಸಿದೆ. ಇದು ಅಕ್ಟೋಬರ್ 15ರಿಂದ ಜಾರಿಗೆ ಬರುತ್ತದೆ. ಈ ಕ್ರಮದ ವಿರುದ್ಧ ಪ್ರತಿಭಟನೆಯಾಗಿ ‘ನೋ ಯುಪಿಐ ಡೇ’ ಗೆ ಕರೆ ನೀಡಲಾಗಿದೆ.
ಅಕ್ಟೋಬರ್ 2, ಶುಕ್ರವಾರದಂದು ಪ್ರತಿಭಟನೆಯ ಭಾಗವಾಗಿ ಅಂಗಡಿಗಳಲ್ಲಿರುವ ಯುಪಿಐ ಕ್ಯೂಆರ್ (QR) ಕೋಡ್‌ಗಳನ್ನು ಕಪ್ಪು ಬಟ್ಟೆಯಿಂದ ಮುಚ್ಚಲಾಗುತ್ತದೆ ಮತ್ತು ಯಾವುದೇ ಯುಪಿಐ ಆನ್‌ಲೈನ್ ಪಾವತಿಗಳನ್ನು ಗ್ರಾಹಕರಿಂದ ಸ್ವೀಕರಿಸುವುದಿಲ್ಲ.
ಮೊಬೈಲ್ ಮಾರಾಟಗಾರರ ಅಳಲು
ಮೊಬೈಲ್ ಮಾರಾಟದಲ್ಲಿ ಲಾಭದ ಪ್ರಮಾಣ (Margin) ಅತ್ಯಂತ ಕಡಿಮೆಯಿರುತ್ತದೆ. ಶೇ. 0.4 ರಷ್ಟು ಎಂಡಿಆರ್ ಶುಲ್ಕ ವಿಧಿಸುವುದರಿಂದ ತಿಂಗಳಿಗೆ 5 ಲಕ್ಷದಿಂದ 30 ಲಕ್ಷ ರೂ ವಹಿವಾಟು ನಡೆಸುವ ಸಣ್ಣ ಮೊಬೈಲ್ ವರ್ತಕರಿಗೆ ತಿಂಗಳಿಗೆ 2,000 ರೂನಿಂದ 12,000 ರೂವರೆಗೆ ಹೆಚ್ಚುವರಿ ನಷ್ಟವಾಗಲಿದೆ. ಇದು ಅವರ ನಿವ್ವಳ ಆದಾಯವನ್ನೇ ಕಸಿದುಕೊಳ್ಳುತ್ತದೆ ಎಂಬುದು ಎಐಎಂಆರ್‌ಎ ಮುಖ್ಯ ಕಾಳಜಿಯಾಗಿದೆ.
ಇದನ್ನೂ ಓದಿ: ಯುಪಿಐ ಪೇಮೆಂಟ್ಗೆ ಎಂಡಿಆರ್ ಶುಲ್ಕ; ತಡೆ ನೀಡಲು ಸುಪ್ರೀಂಕೋರ್ಟ್ ನಕಾರ; ವಿವರಣೆ ಕೋರಿ ಸರ್ಕಾರಕ್ಕೆ ನೋಟೀಸ್
ಎಂಡಿಆರ್ ಬೇಡ ಎನ್ನುತ್ತಿರುವ ವ್ಯಾಪಾರಿಗಳು
ಯುಪಿಐ ಮರ್ಚೆಂಟ್ ಪಾವತಿಗಳನ್ನು ಮೊದಲಿನಂತೆಯೇ ಸಂಪೂರ್ಣ ‘ಝೀರೋ ಎಂಡಿಆರ್’ (Zero MDR) ಶ್ರೇಣಿಯಲ್ಲೇ ಮುಂದುವರಿಸಬೇಕು. ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸಲು ಸಣ್ಣ ವ್ಯಾಪಾರಿಗಳ ಮೇಲೆ ಈ ರೀತಿಯ ಹೆಚ್ಚುವರಿ ಶುಲ್ಕದ ಹೊರೆ ಹೇರಬಾರದು ಎಂದು ಮೊಬೈಲ್ ರೀಟೇಲ್ ಮಾರಾಟಗಾರರ ಸಂಸ್ಥೆಯು ಹಣಕಾಸು ಸಚಿವರಿಗೆ ಮನವಿ ಮಾಡಿದೆ.
ಸಾರ್ವಜನಿಕರಿಗೆ ಯಾವುದೇ ಶುಲ್ಕವಿಲ್ಲ
ಸರ್ಕಾರ ಮತ್ತು ಆರ್‌ಬಿಐ ಸ್ಪಷ್ಟಪಡಿಸಿರುವಂತೆ, ಈ ಎಂಡಿಆರ್ ಶುಲ್ಕವು ಕೇವಲ ವ್ಯಾಪಾರಿಗಳಿಗೆ ಅನ್ವಯಿಸಲಿದೆ. ಸಾಮಾನ್ಯ ಗ್ರಾಹಕರ ವೈಯಕ್ತಿಕ (P2P) ಯುಪಿಐ ವರ್ಗಾವಣೆಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಗ್ರಾಹಕರಿಗೆ ನೇರವಾಗಿ ಯಾವುದೇ ವೆಚ್ಚ ಹೆಚ್ಚಾಗುವುದಿಲ್ಲ. ವರ್ಷಕ್ಕೆ 1 ಲಕ್ಷ ರೂಗಿಂತ ಮೇಲ್ಪಟ್ಟು ಯುಪಿಐ ಪಾವತಿ ಪಡೆಯುವ ವ್ಯಾಪಾರ ಸಂಸ್ಥೆಗಳಿಗೆ ಮಾತ್ರ ಯುಪಿಐ ಎಂಡಿಆರ್ ಶುಲ್ಕದ ಹೊರೆ ಬೀಳುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




