ನಿಮ್ಮ ಪ್ಯಾನ್ ನಂಬರ್ ಬಳಸಿ ಯಾರಾದರೂ ಸಾಲ ತೆಗೆದುಕೊಂಡಿದ್ದಾರಾ? ಪತ್ತೆ ಮಾಡುವುದು ಹೇಗೆ?
Ways to find misuse of your PAN: ಆಧಾರ್ ಮತ್ತು ಪ್ಯಾನ್ ಇವತ್ತು ಬಹಳ ಮುಖ್ಯವಾದ ದಾಖಲೆಗಳಾಗಿವೆ. ಇವುಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕು. ನಿಮ್ಮ ಪ್ಯಾನ್ ನಂಬರ್ನಲ್ಲಿ ವಂಚಕರು ಸಾಲ ಪಡೆಯುವ ಸಾಧ್ಯತೆ ಇಲ್ಲದಿಲ್ಲ. ಈ ರೀತಿ ದುರ್ಬಳಕೆ ಆಗಿದ್ದರೆ ಹೇಗೆ ಪತ್ತೆ ಮಾಡುವುದು? ಇದಕ್ಕೆ ಒಂದಷ್ಟು ಮಾರ್ಗೋಪಾಯಗಳಿವೆ. ಈ ಬಗ್ಗೆ ಲೇಖನದಲ್ಲಿ ಮಾಹಿತಿ ಇದೆ.

ಆಧಾರ್ (aadhaar), ಪ್ಯಾನ್ ದಾಖಲೆಗಳನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಪ್ಯಾನ್, ಆಧಾರ್ನಲ್ಲಿರುವ ನಿಮ್ಮ ಹೆಸರಲ್ಲೇ ಬ್ಯಾಂಕ್ ಖಾತೆ ತೆರೆದು ಸಾಲ ತೆಗೆದುಕೊಳ್ಳುವುದು ಸೇರಿದಂತೆ ನಾನಾ ರೀತಿಯ ವಂಚನೆಗಳನ್ನು ಮಾಡಬಹುದು. ಇದರಿಂದ ನೀವು ಸಿಕ್ಕಿಕೊಳ್ಳಬಹುದು, ಅಥವಾ ನಿಮ್ಮ ಕ್ರೆಡಿಟ್ ರೇಟಿಂಗ್ಗೆ ಧಕ್ಕೆಯಾಗಬಹುದು. ನಿಮಗೆ ಸಾಲದ ಅಗತ್ಯ ಇದ್ದಾಗ ಸಿಕ್ಕದೇ ಹೋಗಬಹುದು. ಹೀಗಾಗಿ, ಪ್ಯಾನ್, ಆಧಾರ್ ದಾಖಲೆ ದುರ್ಬಳಕೆ ಆಗದಂತೆ ಎಚ್ಚರ ವಹಿಸುವುದು ಬಹಳ ಅಗತ್ಯ. ನಿಮ್ಮ ಪ್ಯಾನ್ ಅನ್ನು ಅನುಮತಿ ಇಲ್ಲದೇ ಯಾರಾದರೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರಾ ಎನ್ನುವುದನ್ನು ಪತ್ತೆ ಮಾಡುವುದು ಹೇಗೆ? ಇದು ಸುಲಭ.
ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುತ್ತಿರಿ…
ನಿಮ್ಮ ಕ್ರೆಡಿಟ್ ರಿಪೋರ್ಟ್ (Credit Report) ಅನ್ನು ಪರಿಶೀಲಿಸಿದರೆ ಪ್ಯಾನ್ ಅಡಿಯಲ್ಲಿ ದಾಖಲಾದ ಎಲ್ಲಾ ಹಣಕಾಸು ಚಟುವಟಿಕೆಗಳು ಬೆಳಕಿಗೆ ಬರುತ್ತವೆ. ನಿಮ್ಮ ಪ್ಯಾನ್ ಮತ್ತು ನಿಮ್ಮ ಹೆಸರಲ್ಲಿ ತೆರೆಯಲಾಗಿರುವ ಬ್ಯಾಂಕ್ ಖಾತೆಗಳು, ಸಾಲ, ಕ್ರೆಡಿಟ್ ಕಾರ್ಡ್ ಇತ್ಯಾದಿ ಎಲ್ಲಾ ಮಾಹಿತಿ ಸಿಗುತ್ತದೆ. ಹೀಗಾಗಿ, ಕ್ರೆಡಿಟ್ ರಿಪೋರ್ಟ್ ಅನ್ನು ತಪ್ಪದೇ ಗಮನಿಸಿ.
ಕ್ರೆಡಿಟ್ ರಿಪೋರ್ಟ್ ಎಲ್ಲಿ ನೋಡುವುದು?
ಭಾರತದಲ್ಲಿ ನಾಲ್ಕು ಪ್ರಮುಖ ಕ್ರೆಡಿಟ್ ಏಜೆನ್ಸಿಗಳಿವೆ. ಸಿಬಿಲ್, ಎಕ್ಸ್ಪೀರಿಯನ್, ಈಕ್ವಿಫ್ಯಾಕ್ಸ್, ಸಿಆರ್ಐಎಫ್ ಹೈಮಾರ್ಕ್ ಸಂಸ್ಥೆಗಳು ಮಾನ್ಯತೆ ಪಡೆದ ಕ್ರೆಡಿಟ್ ಬ್ಯೂರೋಗಳಾಗಿವೆ. ಭಾರತದಲ್ಲಿ ಸಿಬಿಲ್ ಅತಿಹೆಚ್ಚು ಬಳಕೆಯಲ್ಲಿದೆಯಾದರೂ ಮೇಲಿನ ನಾಲ್ಕರಲ್ಲಿ ಯಾವುದರಲ್ಲಿ ಬೇಕಾದರೂ ಕ್ರೆಡಿಟ್ ರಿಪೋರ್ಟ್ ಪಡೆಯಬಹುದು.
ಇದನ್ನೂ ಓದಿ: ಇಪಿಎಫ್ ಅಕೌಂಟ್ನಲ್ಲಿ ಎಷ್ಟೇ ಹಣ ಇದ್ದರೂ ಖಾತೆದಾರ ಸತ್ತರೆ ಕುಟುಂಬಕ್ಕೆ ಪರಿಹಾರ: ಹೊಸ ನಿಯಮ ಜಾರಿಗೆ
ನೀವು ಆ ಕ್ರೆಡಿಟ್ ಬ್ಯೂರೋಗಳ ಅಧಿಕೃತ ವೆಬ್ಸೈಟ್ಗೆ ಹೋಗಿ ರಿಪೋರ್ಟ್ ಪಡೆಯಬಹುದು. ಅಥವಾ ಫೋನ್ ಪೆ, ಪೇಟಿಎಂ, ಗೂಗಲ್ ಪೇ, ಬ್ಯಾಂಕ್ ಆ್ಯಪ್ಗಳು ಹೀಗೆ ನಾನಾ ರೀತಿಯ ಪ್ಲಾಟ್ಫಾರ್ಮ್ಗಳಲ್ಲಿ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವ ಲಿಂಕ್ ಇರುತ್ತದೆ.
ನಿಮ್ಮ ಪ್ಯಾನ್ ಮತ್ತು ಮೊಬೈಲ್ ನಂಬರ್ ಅನ್ನು ನೀಡಿ ಕ್ರೆಡಿಟ್ ರಿಪೋರ್ಟ್ ಪಡೆಯಬಹುದು. ಒಂದು ಏಜೆನ್ಸಿಯಲ್ಲಿ ನೀವು ವರ್ಷಕ್ಕೆ ಒಂದು ಬಾರಿ ಉಚಿತವಾಗಿ ರಿಪೋರ್ಟ್ ಪಡೆಯಬಹುದು.
ಗಮನಿಸಿ, ಇಲ್ಲಿ ಕ್ರೆಡಿಟ್ ಸ್ಕೋರ್ ಬೇರೆ, ಕ್ರೆಡಿಟ್ ರಿಪೋರ್ಟ್ ಬೇರೆ. ಕ್ರೆಡಿಟ್ ಸ್ಕೋರ್ನಲ್ಲಿ 300-900ರವರೆಗಿನ ಸ್ಕೋರ್ ಮಾತ್ರವೇ ಇರುತ್ತದೆ. ಕ್ರೆಡಿಟ್ ರಿಪೋರ್ಟ್ನಲ್ಲಿ ಎಲ್ಲಾ ವಹಿವಾಟು ವಿವರ ಇರುತ್ತದೆ.
ಕ್ರೆಡಿಟ್ ರಿಪೋರ್ಟ್ನಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಬೇಕಾದ್ದು?
ನೀವು ಯಾವ್ಯಾವ ಸಾಲ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಪಡೆದಿದ್ದೀರಿ ಎಂಬುದು ನಿಮಗೆ ಗೊತ್ತಿದ್ದೇ ಇರುತ್ತದೆ. ಇವು ಬಿಟ್ಟು ಬೇರೆ ಯಾವುದೇ ಸಾಲ ಹಾಗೂ ಕ್ರೆಡಿಟ್ ಕಾರ್ಡ್ಗಳು ದಾಖಲಾಗಿವೆಯಾ ಎಂಬುದನ್ನು ಗಮನಿಸಿ. ನಿಮ್ಮದಲ್ಲದ ಬ್ಯಾಂಕ್ ಖಾತೆಗಳಿವೆಯಾ ನೋಡಿ. ಹಾಗೆಯೇ, ನಿಮ್ಮ ಅನುಮತಿ ಇಲ್ಲದೇ ಕ್ರೆಡಿಟ್ ಬ್ಯೂರೋಗಳಿಗೆ ಇನ್ಕ್ವೈರಿಗಳು ಹೋಗಿವೆಯಾ ಎಂಬುದನ್ನೂ ಗಮನಿಸಿ. ಇವೇನಾದರೂ ದಾಖಲಾಗಿತ್ತೆಂದರೆ ನಿಮ್ಮ ಪ್ಯಾನ್ ನಂಬರ್ ಅನ್ನು ಬೇರೆ ಯಾರೋ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಅಪ್ಪನಿಂದ ಜಮೀನು ವರ್ಗಾವಣೆಯಾದರೆ ಪಿಎಂ ಕಿಸಾನ್ ಹಣ ನಿಂತುಹೋಗುತ್ತಾ? ಇಲ್ಲಿದೆ ಡೀಟೇಲ್ಸ್
ನಿಮ್ಮ ಹೆಸರಲ್ಲಿ ವಂಚಕರು ಸಾಲ ಪಡೆದಿದ್ದರೆ ಏನು ಮಾಡುವುದು?
ನಿಮ್ಮ ಹೆಸರಲ್ಲಿ ಅನುಮತಿ ಇಲ್ಲದೆ ಯಾರಾದರೂ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆದುಕೊಂಡಿದ್ದು ಗೊತ್ತಾದರೆ ಕೂಡಲೇ ಕೆಲ ಕ್ರಮಗಳನ್ನು ನೀವು ತೆಗೆದುಕೊಳ್ಳಬೇಕು. ಸಾಲ ಕೊಟ್ಟ ಹಣಕಾಸು ಸಂಸ್ಥೆಗಳ ಗಮನಕ್ಕೆ ಇದನ್ನು ತರಬೇಕು. ಕ್ರೆಡಿಟ್ ಬ್ಯೂರೋದ ಗಮನಕ್ಕೂ ಇದನ್ನು ತರಬೇಕು. ಸೈಬರ್ ಕ್ರೈಮ್ ಪೊಲೀಸ್ ಬಳಿ ಒಂದು ದೂರನ್ನು ದಾಖಲು ಮಾಡಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




