ನವದೆಹಲಿ, ಮಾರ್ಚ್ 20: ಅಮೆರಿಕದ ಎನ್ವಿಡಿಯಾ (Nvidia) ಬಗ್ಗೆ ಭಾರತೀಯರು ಈಗೀಗ ಹೆಚ್ಚು ಕೇಳಲು ಆರಂಭಿಸಿದ್ದಾರೆ. ಹಲವು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹಳೆಯ ಕಂಪನಿ. ಸೆಮಿಕಂಡಕ್ಟರ್ ಕ್ಷೇತ್ರದ ಈ ಕಂಪನಿ 1999ರಲ್ಲೇ ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿದೆ. ಈಕ್ವಿಟಿ ಲೋಕದಲ್ಲಿ ಅಚ್ಚರಿಗಳ ಮೇಲೆ ಅಚ್ಚರಿ ಹುಟ್ಟಿಸಿದ ಕಂಪನಿ ಇದು. ಇದರ ಮಾರುಕಟ್ಟೆ ಬಂಡವಾಳ (market capitalization) 2.25 ಟ್ರಿಲಿಯನ್ ಡಾಲರ್ ಇದೆ. ಅತಿಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿರುವ ಕಂಪನಿಗಳ ಸಾಲಿನಲ್ಲಿದೆ. ಭಾರತದ ಸೆಮಿಕಂಡಕ್ಟರ್ ಬೆಳವಣಿಗೆಯಲ್ಲಿ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸಲಿರುವ ಕಂಪನಿಯೂ ಇದು. ಅತಿಶಕ್ತಿಶಾಲಿ ಚಿಪ್ಗಳನ್ನು ತಯಾರಿಸುವ ಎನ್ವಿಡಿಯಾ ಎಚ್100 ಚಿಪ್ಗಳನ್ನು ಮುಂಬೈನ ಯೋಟ್ಟಾ ಡಾಟಾ ಸರ್ವಿಸಸ್ ಸಂಸ್ಥೆಗೆ ಕಳುಹಿಸಿದೆ. ಎಐ ಟೆಕ್ನಾಲಜಿ ಅಭಿವೃದ್ಧಿಗೆ ಈ ಚಿಪ್ಗಳು ಬಹಳ ಅಗತ್ಯ.
ಎನ್ವಿಡಿಯಾ ಭಾರತದಲ್ಲಿ ಹೂಡಿಕೆ ಮಾಡಲು ಆಲೋಚನೆ ಮಾಡಿದೆ. ಸೆಮಿಕಂಡಕ್ಟರ್ ಮತ್ತು ಎಐ ಕಂಪನಿಗಳಿಗೆ ಭಾರತ ಹುಲುಸಾದ ಮಾರುಕಟ್ಟೆ ಅವಕಾಶ ಒದಗಿಸುತ್ತದೆ. ಅಂತೆಯೇ, ಎನ್ವಿಡಿಯಾ ಕೂಡ ಹೂಡಿಕೆದಾರರ ಸ್ವರ್ಗವಾಗಿ ಪರಿಣಮಿಸಿದೆ. ಅಮೆರಿಕದ ಎಸ್ ಅಂಡ್ ಪಿಯಲ್ಲಿ ಲಿಸ್ಟ್ ಆಗಿರುವ ಎನ್ವಿಡಿಯಾದ ಷೇರು ಊಹೆಗೂ ನಿಲುಕದಷ್ಟು ಅಗಾಧವಾಗಿ ಬೆಳೆದಿದೆ.
1999ರಲ್ಲಿ ಇದರ ಐಪಿಒ ಬೆಲೆ ಒಂದು ಷೇರಿಗೆ 12 ಡಾಲರ್ ಇತ್ತು. ಇವತ್ತು ಅದರ ಬೆಲೆ 893 ಡಾಲರ್ ಆಗಿದೆ. ಐದು ಬಾರಿ ಇದರ ವಿವಿಧ ಮಟ್ಟದಲ್ಲಿ ವಿಭಜನೆಗಳಾಗಿವೆ. ಅವೆಲ್ಲವನ್ನೂ ಪರಿಗಣಿಸಿದರೆ ಒಂದು ಷೇರುಬೆಲೆ 25 ಸೆಂಟ್ ಆಗಿದ್ದು ಈಗ 893 ಡಾಲರ್ ಆಗಿ ಬೆಳೆದಿದೆ. ಅಂದರೆ, 3,500 ಪಟ್ಟು ಬೆಳೆದಿದೆ. ಆಗ ಇದರ ಮೇಲೆ 1,000 ಡಾಲರ್ನಷ್ಟು ಹೂಡಿಕೆ ಮಾಡಿದ್ದರೆ ಇವತ್ತು ಅವರ ಹಣ 34,61,616 ಡಾಲರ್ ಆಗಿರುತ್ತಿತ್ತು.
ರುಪಾಯಿ ಲೆಕ್ಕದಲ್ಲಿ ನೋಡುವುದಾದರೆ 1999ರಲ್ಲಿ ಒಂದು ಲಕ್ಷ ರೂ ಹಣವನ್ನು ಎನ್ವಿಡಿಯಾ ಷೇರಿನ ಮೇಲೆ ಹೂಡಿಕೆ ಮಾಡಿದ್ದರೆ, ಈ 25 ವರ್ಷದ ಬಳಿಕ ಹಣ 38 ಕೋಟಿ ರೂಗೂ ಹೆಚ್ಚಾಗಿರುತ್ತಿತ್ತು.
ಎನ್ವಿಡಿಯಾ ಮೂಲ ಐಪಿಒ ಬೆಲೆ 1999ರಲ್ಲಿ: 12 ಡಾಲರ್
ಐದು ಬಾರಿ ಈ ಷೇರು ವಿಭಜನೆ ಆಗಿದೆ. 2000ರಲ್ಲಿ ಒಂದು ಷೇರು ಎರಡಾಗಿದೆ. 2001 ಮತ್ತು 2006ರಲ್ಲೂ ಒಂದು ಷೇರು ಎರಡಾಗಿ ವಿಭಜನೆಯಾಗಿದೆ. 2007ರಲ್ಲಿ ಎರಡು ಷೇರು ಮೂರಾಗಿ ವಿಭಜನೆ; 2021ರಲ್ಲಿ ಒಂದು ಷೇರು ನಾಲ್ಕಾಗಿ ವಿಭಜನೆ ಆಗಿದೆ.
ಮೂಲದಲ್ಲಿ 10 ಷೇರುಗಳನ್ನು ನೀವು ಖರೀದಿಸಿದ್ದರೆ ಐದು ಬಾರಿ ವಿಭಜನೆ ಬಳಿಕ ಎಷ್ಟು ಹೆಚ್ಚಾಗುತ್ತದೆ ನೋಡಿ…
ಇದನ್ನೂ ಓದಿ: ಟಾಟಾ ಸನ್ಸ್ನಿಂದ ಷೇರು ಮಾರಾಟ; ಟಿಸಿಎಸ್ ಷೇರುಕುಸಿತ; ಇದು ಖರೀದಿಸುವ ಸಮಯವಾ?
ಅಂದರೆ 10 ಷೇರುಗಳನ್ನು ಖರೀದಿಸಿದ್ದರೆ ಇವತ್ತು ಅವರ ಷೇರು ಸಂಖ್ಯೆ 480ಕ್ಕೆ ಏರುತ್ತಿತ್ತು. ಒಂದು ಷೇರಿನ ಮೂಲ ಬೆಲೆ 12 ಡಾಲರ್ನಿಂದ 0.25 ಡಾಲರ್ ಎಂದು ಪರಿಗಣಿಸಬಹುದು. ಅದರಂತೆ ಇವತ್ತು ಎನ್ವಿಡಿಯಾದ ನಿಷ್ಠಾವಂತ ಹೂಡಿಕೆದಾರರು ಸಿಕ್ಕಾಪಟ್ಟೆ ಲಾಭ ಮಾಡಿದ್ದಾರೆ.
ಭಾರತದ ಕೆಲ ಮ್ಯೂಚುವಲ್ ಫಂಡ್ಗಳು ಅಮೆರಿಕದ ಮಾರುಕಟ್ಟೆಯಲ್ಲಿ ಎನ್ವಿಡಿಯಾ ಷೇರುಗಳ ಮೇಲೆ ಹೂಡಿಕೆ ಮಾಡಿವೆ. ಒಂದು ವರದಿ ಪ್ರಕಾರ 1,699 ಕೋಟಿ ರೂ ಮೊತ್ತದ ಭಾರತೀಯರ ಹೂಡಿಕೆಗಳು ಮ್ಯೂಚುವಲ್ ಫಂಡ್ ಮೂಲಕ ಎನ್ವಿಡಿಯಾ ಷೇರುಗಳ ಮೇಲಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ