Smart Investments: ಶೇ. 18ರಿಂದ 33ರವರೆಗೂ ರಿಟರ್ನ್ ಕೊಡಬಲ್ಲ 5 ಷೇರುಗಳು; ಈಗಲೇ ಖರೀದಿಸಿ ಎಂದು ಅನಾಲಿಸ್ಟ್ಗಳ ಶಿಫಾರಸು
Brokerage Companies Recommended Shares: ಇನ್ಫೋಸಿಸ್, ಎಚ್ಡಿಎಫ್ಸಿ ಬ್ಯಾಂಕ್ ಸೇರಿದಂತೆ 5 ಷೇರುಗಳ ಮೇಲೆ ಹೂಡಿಕೆ ಮಾಡಬಹುದು. ಶೇ. 18ರಿಂದ 33ರವರೆಗೂ ಲಾಭ ಸಿಗುತ್ತೆ ಎಂದು ವಿವಿಧ ಬ್ರೋಕರೇಜ್ ಕಂಪನಿಗಳು ಶಿಫಾರಸು ಮಾಡಿವೆ.
ನವದೆಹಲಿ: ಷೇರುಮಾರುಕಟ್ಟೆ (Stock Market) ಎಂಬುದು ಒಂದು ರೀತಿಯಲ್ಲಿ ಮಾಯಾ ಬಜಾರು ಹೌದು, ಚದುರಂಗ ಆಟದಂತಹ ಜಾಣ್ಮೆಯ ನಡೆ ಬೇಡುವ ಪೇಟೆಯೂ ಹೌದು. ದಿಢೀರ್ ಶ್ರೀಮಂತಿಕೆ ತರಬಲ್ಲುದು, ಹಾಗೆಯೇ ದಿಢೀರ್ ಸಂಪತ್ತು ಕರಗಿಸಬಲ್ಲುದು. ಷೇರುಪೇಟೆಯಲ್ಲಿರುವ ಲೆಕ್ಕವಿಲ್ಲದಷ್ಟು ಷೇರುಗಳಲ್ಲಿ ಯಾವುದನ್ನು ಆಯ್ಕೆ ಮಾಡಿ ಹಣ ಹಾಕುವುದು ಎಂಬ ಗೊಂದಲ ಬಹಳ ಮಂದಿಗೆ ಇದ್ದೇ ಇರುತ್ತದೆ. ಆದ್ದರಿಂದ ಹೆಚ್ಚಿನ ಜನರು ಷೇರು ಬ್ರೋಕರ್, ಏಜೆಂಟ್ ಅಥವಾ ಬ್ರೋಕರೇಜ್ ಕಂಪನಿಗಳ ಶಿಫಾರಸು ಗಮನಿಸಿ ಆ ಬಳಿಕ ಹೂಡಿಕೆ ಮಾಡುತ್ತಾರೆ. ಐಸಿಐಸಿಐ ಸೆಕ್ಯೂರಿಟೀಸ್, ಬಿಎನ್ಬಿ ಪರಿಬಾಸ್, ಶೇರ್ಖಾನ್, ಮೋತಿಲಾಲ್ ಓಸ್ವಾಲ್ ಮೊದಲಾದ ಬ್ರೋಕರೇಜ್ ಕಂಪನಿಗಳು (Brokerage Companies) ಶಿಫಾರಸು ಮಾಡಿರುವ ಷೇರುಗಳ ಪೈಕಿ ಹೈ ರಿಟರ್ನ್ ಕೊಡಬಲ್ಲ 5 ಷೇರುಗಳ ವಿವರ ಇಲ್ಲಿದೆ. ಈ ಐದು ಷೇರುಗಳು ನಿಮ್ಮಲ್ಲಿದ್ದರೆ ಉಳಿಸಿಕೊಳ್ಳಿ, ಮಾರಲು ಹೋಗದಿರಿ. ಈ ಷೇರು ನಿಮ್ಮಲ್ಲಿ ಇಲ್ಲದಿದ್ದರೆ ತಡ ಮಾಡದೇ ಈಗಲೇ ಖರೀದಿಸಿ. ಯಾಕೆಂದರೆ ಇವು ಮಿಂಚಿನಂತೆ ಮೇಲೇರುವ ಶಕ್ತಿ ಇರುವ ಷೇರುಗಳಾಗಿವೆ. ಯಾವ್ಯಾವ ಷೇರುಗಳು ಎಷ್ಟರ ಮಟ್ಟದವರೆಗೂ ಹೋಗಬಲ್ಲುವು ಎಂಬ ಮಾಹಿತಿ ತಿಳಿದಿರಿ.
ಖರೀದಿಸುವಂತೆ ಬ್ರೋಕರೇಜ್ ಕಂಪನಿಗಳು ಶಿಫಾರಸು ಮಾಡಿರುವ 5 ಷೇರುಗಳು
- ಇನ್ಫೋಸಿಸ್
- ಎಚ್ಡಿಎಫ್ಸಿ ಬ್ಯಾಂಕ್
- ಜೊಮಾಟೋ
- ಭಾರ್ತಿ ಏರ್ಟೆಲ್
- ಎನ್ಟಿಪಿಸಿ
ಇನ್ಫೋಸಿಸ್ ಷೇರು: ಬಿಎನ್ಪಿ ಪರಿಬಾಸ್ ಸಂಸ್ಥೆ ಇನ್ಫೋಸಿಸ್ ಷೇರು ಖರೀದಿಸಬಹುದು ಎಂದು ಬಯ್ ರೇಟಿಂಗ್ (Buy Rating) ಕೊಟ್ಟಿದೆ. ನಿರೀಕ್ಷಿತ ಲಾಭ ಗಳಿಸಲಿಲ್ಲ ಮತ್ತು ಮುಂದೆಯೂ ಅದರ ಬ್ಯುಸಿನೆಸ್ ಕಳೆಗುಂದಬಹುದು ಎಂದು ಹೇಳಲಾದ ಪರಿಣಾಮ ಅದರ ಷೇರುಬೆಲೆ ಶೇ. 15ರಷ್ಟು ಕುಸಿದಿತ್ತು. ಈಗ ಅದರ ಬೆಲೆ 1,259 ರೂ ಇದೆ. ಇದು ಮುಂದಿನ ಕೆಲ ತಿಂಗಳಲ್ಲಿ 1,675 ರುಪಾಯಿಗೆ ಏರುತ್ತದೆ ಎಂದು ಬಿಎನ್ಪಿ ಪರಿಬಾಸ್ ಅಭಿಪ್ರಾಯಪಟ್ಟಿದೆ. ಈಗ ಖರೀದಿಸಿದರೆ ಶೇ. 30ಕ್ಕಿಂತಲೂ ಹೆಚ್ಚು ಲಾಭ ನಿರೀಕ್ಷಿಸಬಹುದು.
ಎಚ್ಡಿಎಫ್ಸಿ ಬ್ಯಾಂಕ್: 1,660 ರೂ ಇರುವ ಎಚ್ಡಿಎಫ್ಸಿ ಬ್ಯಾಂಕ್ನ ಷೇರು ಬೆಲೆ 2,180 ರುಪಾಯಿಗೆ ಏರಬಹುದು ಎಂದು ಬಿಎನ್ಪಿ ಪರಿಬಾಸ್ ಕಂಪನಿ ಹೇಳುತ್ತಾ ಬಯ್ ರೇಟಿಂಗ್ ಕೊಟ್ಟಿದೆ.
ಜೊಮಾಟೋ: ಈ ಆನ್ಲೈನ್ ಫುಡ್ ಡೆಲಿವರಿ ಕಂಪನಿಯ ಷೇರು ಸದ್ಯ 53.20 ರೂ ಇದೆ. ಮುಂದಿನ ದಿನಗಳಲ್ಲಿ ಜೊಮಾಟೋ ಷೇರು ಶೇ. 29ರಷ್ಟು ಬೆಳೆದು ಪ್ರತೀ ಷೇರಿಗೆ 70 ರೂ ಬೆಲೆ ಪಡೆಯಲಿದೆ. ಇದು ಮೋತಿಲಾಲ್ ಓಸ್ವಾಲ್ ಕಂಪನಿ ಮಾಡಿರುವ ಅಭಿಪ್ರಾಯ.
ಭಾರ್ತಿ ಏರ್ಟೆಲ್: ಐಸಿಐಸಿಐ ಸೆಕ್ಯೂರಿಟೀಸ್ ಪ್ರಕಾರ ಭಾರ್ತಿ ಏರ್ಟೆಲ್ನ ಷೇರು ಬೆಲೆ 960 ರುಪಾಯಿಗೆ ಏರಬಹುದು ಎನ್ನಲಾಗಿದೆ. ಸದ್ಯ ಇದರ ಷೇರು ಬೆಲೆ 759.15 ರೂ ಇದೆ. ಶೇ. 25ಕ್ಕಿಂತ ಹೆಚ್ಚು ಇದರ ಬೆಲೆ ಹೆಚ್ಚಬಹುದು.
ಎನ್ಟಿಪಿಸಿ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಸಂಸ್ಥೆಯ ಷೇರು ಶೇ. 18ರಷ್ಟು ಬೆಳೆಯುತ್ತದೆ ಎಂದು ಬ್ರೋಕರೇಜ್ ಕಂಪನಿ ಶೇರ್ಖಾನ್ ಅಭಿಪ್ರಾಯಪಟ್ಟಿದೆ. 170 ರೂ ಇರುವ ಇದರ ಷೇರು ಬೆಲೆ 200 ರೂ ತಲುಪುವ ನಿರೀಕ್ಷೆ ಇದೆ.
ಗಮನಿಸಿ: ಈ ಮೇಲೆ ವ್ಯಕ್ತಪಡಿಸಲಾಗಿರುವ ಬ್ರೋಕರೇಜ್ ಕಂಪನಿಗಳ ಶಿಫಾರಸುಗಳು ವಾಸ್ತವದಲ್ಲಿ ನಿಖರವಾಗಿರುತ್ತವೆ ಎಂದೇನಿಲ್ಲ. ಎಂಥ ತಜ್ಞರೇ ಆದರೂ ಕೆಲವೊಮ್ಮೆ ಮಾಡುವ ಲೆಕ್ಕಾಚಾರ ತಲೆಕೆಳಗು ಅಗಬಹುದು. ಆದ್ದರಿಂದ ನೀವು ಷೇರು ಹೂಡಿಕೆಗೆ ಮುನ್ನ ಇನ್ನಷ್ಟು ವಿಸ್ತೃತವಾಗಿ ಮಾರುಕಟ್ಟೆ ಅಧ್ಯಯನ ಮಾಡಬಹುದು. ಅಥವಾ ಇನ್ನಷ್ಟು ಬ್ರೋಕರೇಜ್ ಕಂಪನಿಗಳ ಅಭಿಪ್ರಾಯಗಳನ್ನು ಪಡೆಯಬಹುದು.