EPF: ಕೆಲಸ ಬಿಡೋವರೆಗೂ ಕಾಯಬೇಕಿಲ್ಲ… 10 ವರ್ಷಕ್ಕೊಮ್ಮೆ ಪೂರ್ಣ ಇಪಿಎಫ್ ಹಣ ಹಿಂಪಡೆಯಲು ಅವಕಾಶ

EPFO 10 year rule: ಇಪಿಎಫ್ ಅಕೌಂಟ್​ನಿಂದ ಪೂರ್ಣ ಹಣ ಹಿಂಪಡೆಯಲು ನಿವೃತ್ತರಾಗುವವರೆಗೂ ಕಾಯಬೇಕಾಗುವುದಿಲ್ಲ. ಸರ್ಕಾರವು 10 ವರ್ಷದ ನಿಯಮ ರೂಪಿಸಲು ಆಲೋಚಿಸಿದೆ. ಪ್ರತೀ 10 ವರ್ಷಕ್ಕೊಮ್ಮೆ ಪೂರ್ಣ ಪಿಎಫ್ ಹಣ ವಿತ್​ಡ್ರಾ ಮಾಡಿಕೊಳ್ಳಲು ಅವಕಾಶ ನೀಡಲಿದೆ. ನೂರಕ್ಕೆ ನೂರು ಹಣ ಅಲ್ಲದಿದ್ದರೂ 10 ವರ್ಷಕ್ಕೊಮ್ಮೆ ಶೇ. 60ರಷ್ಟಾದರೂ ಹಣ ಹಿಂಪಡೆಯಲಾಗುವಂತೆ ನಿಯಮ ರೂಪಿಸಬಹುದು ಎನ್ನಲಾಗಿದೆ.

EPF: ಕೆಲಸ ಬಿಡೋವರೆಗೂ ಕಾಯಬೇಕಿಲ್ಲ... 10 ವರ್ಷಕ್ಕೊಮ್ಮೆ ಪೂರ್ಣ ಇಪಿಎಫ್ ಹಣ ಹಿಂಪಡೆಯಲು ಅವಕಾಶ
ಹಣ

Updated on: Jul 17, 2025 | 3:01 PM

ನವದೆಹಲಿ, ಜುಲೈ 17: ಇಪಿಎಫ್ ಅಕೌಂಟ್​​ನಿಂದ (EPF) ಪೂರ್ಣ ಹಣ ಹಿಂಪಡೆಯಬೇಕೆಂದರೆ ನಿವೃತ್ತರಾಗುವವರೆಗೂ ಕಾಯಬೇಕು. ಇಲ್ಲವೇ ಕೆಲಸ ಕಳೆದುಕೊಂಡು ಮೂರು ತಿಂಗಳು ನಿರುದ್ಯೋಗಿಯಾಗಿರಬೇಕು. ಸರ್ಕಾರ ಈ ಸಂಬಂಧ ಕೆಲ ನಿರ್ಬಂಧಗಳನ್ನು ಸಡಿಲಿಸಿ ನಿಯಮ ರೂಪಿಸಿದೆ. ಪ್ರತೀ 10 ವರ್ಷಕ್ಕೊಮ್ಮೆ ಇಪಿಎಫ್ ಹಣವನ್ನು ಪೂರ್ಣವಾಗಿ ಹಿಂಪಡೆಯುವ ಅವಕಾಶವನ್ನು ನೀಡಿದೆ ಎಂದು ಮನಿಕಂಟ್ರೋಲ್ ವೆಬ್​ಸೈಟ್ ತನ್ನ ಎಕ್ಸ್​ಕ್ಲೂಸಿವ್ ವರದಿಯಲ್ಲಿ ತಿಳಿಸಿದೆ.

‘ಸಬ್​ಸ್ಕ್ರೈಬರ್​ಗಳು ತಮ್ಮ ಹಣದ ನಿರ್ವಹಣೆ ಮತ್ತು ರಿಟೈರ್ಮೆಂಟ್ ಪ್ಲಾನಿಂಗ್ ಅನ್ನು ಹೇಗೆ ಬೇಕಾದರೂ ಮಾಡಲು ಅವಕಾಶ ಇರಬೇಕು. ಹತ್ತು ವರ್ಷಕ್ಕೊಮ್ಮೆ ಇಪಿಎಫ್ ಹಣ ವಿತ್​ಡ್ರಾ ಮಾಡಲಾದರೂ, ಮತ್ತೂ 10 ವರ್ಷದಲ್ಲಿ ಒಂದಷ್ಟು ಹಣ ಜಮೆ ಆಗಿರುತ್ತದೆ. ಈ ಹಣವನ್ನು ಏನು ಮಾಡಬೇಕು ಎಂಬುದನ್ನು ಅವರು ನಿರ್ಧರಿಸುವಂತಾಗಬೇಕು’ ಎಂದು ಇಪಿಎಫ್​ಒನ ಇಬ್ಬರು ಅಧಿಕಾರಿಗಳು ತಮಗೆ ತಿಳಿಸಿದ್ದಾಗಿ ಈ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಇಪಿಎಫ್ ಅಕೌಂಟ್​​ಗಳಿಗೆ ವಾರ್ಷಿಕ ಬಡ್ಡಿ ಈ ವಾರವೇ ಜಮೆ? ಹಣ ಬಂದಿದೆಯಾ ಪರಿಶೀಲಿಸುವ ವಿಧಾನಗಳು

ಇದನ್ನೂ ಓದಿ
ಇಪಿಎಫ್ ಬ್ಯಾಲನ್ಸ್ ಪರಿಶೀಲಿಸುವುದು ಹೇಗೆ?
ಇಪಿಎಫ್ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕಾ?
ಇಪಿಎಫ್ ಅಡ್ವಾನ್ಸ್ ಹಣ: 5 ಲಕ್ಷ ರೂಗೆ ಮಿತಿ ಏರಿಕೆ
ಇಎಲ್​​ಐ ಸ್ಕೀಮ್​ಗೆ ಯುಎಎನ್ ಆ್ಯಕ್ಟಿವೇಟ್ ಮಾಡುವ ಕ್ರಮ

ಒಂದೊಮ್ಮೆ 10 ವರ್ಷಕ್ಕೆ ಪೂರ್ಣ ಬ್ಯಾಲನ್ಸ್ ಮೊತ್ತ ಹಿಂಪಡೆಯಲು ಅನುಮತಿಸುವ ನಿರ್ಧಾರ ತೆಗೆದುಕೊಳ್ಳದೇ ಹೋದರೂ, ಶೇ. 60ರಷ್ಟನ್ನಾದರೂ ವಿತ್​ಡ್ರಾ ಮಾಡಲು ಅನುಮತಿಸಬಹುದು. ಈ ವಿಚಾರವನ್ನೂ ಸರಕಾರ ಅವಲೋಕಿಸುತ್ತಿದೆ ಎಂದು ಹೇಳಲಾಗಿದೆ.

ಸದ್ಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 7.4 ಇಪಿಎಫ್ ಸದಸ್ಯರನ್ನು ಹೊಂದಿದ್ದು, ಅವರೆಲ್ಲರ ಇಪಿಎಫ್ ಅಕೌಂಟ್​​ಗಳಲ್ಲಿ ಇರುವ ಹಣ ಬರೋಬ್ಬರಿ 25 ಲಕ್ಷ ಕೋಟಿ ರೂ. ಇಪಿಎಫ್ ಹಣ ಹಿಂಪಡೆಯಲು ಈಗಲೂ ಕೂಡ 10 ವರ್ಷ ಕಾಯಬೇಕಿಲ್ಲ. ಮನೆ ನಿರ್ಮಾಣ, ವೈದ್ಯಕೀಯ ತುರ್ತು ಚಿಕಿತ್ಸೆ, ಶಿಕ್ಷಣ, ಮದುವೆ ಕಾರಣಗಳಿಗೆ ಇಪಿಎಫ್ ಅಕೌಂಟ್​ನಿಂದ ಅಡ್ವಾನ್ಸ್ ಹಣ ಹಿಂಪಡೆಯಲು ಅವಕಾಶ ಇದೆ.

ನಿವೇಶನ ಖರೀದಿಸಲು ಅಥವಾ ಮನೆ ನಿರ್ಮಾಣ ಮಾಡಲು ಶೇ. 90ರವರೆಗೆ ಇಪಿಎಫ್ ಹಣ ಹಿಂಪಡೆಯಬಹುದು. ಈ ಮೊದಲು ಐದು ವರ್ಷ ಪಿಎಫ್ ಅಕೌಂಟ್​ನಿಂದ ಯಾವುದೇ ಹಣ ಹಿಂಪಡೆಯದೇ ಇದ್ದಾಗ ಮನೆ ನಿರ್ಮಾಣಕ್ಕೆ ಹಣ ಹಿಂಪಡೆಯಬಹುದಿತ್ತು. ಅದನ್ನು ಈಗ ಮೂರು ವರ್ಷಕ್ಕೆ ಇಳಿಸಲಾಗಿದೆ. ತುರ್ತು ಸಂದರ್ಭಗಳಿಗೆ ಹಣದ ಅವಶ್ಯಕತೆ ಪೂರೈಸಲು ಈ ಅವಕಾಶ ಕೊಡಲಾಗುತ್ತಿದೆ.

ಇದನ್ನೂ ಓದಿ: ಇಪಿಎಫ್ ಠೇವಣಿ ಮತ್ತು ಬಡ್ಡಿಗೆ ಟ್ಯಾಕ್ಸ್ ಇರುತ್ತಾ? ಎಷ್ಟು ಟಿಡಿಎಸ್ ಕಡಿತವಾಗುತ್ತೆ? ಇಲ್ಲಿದೆ ಡೀಟೇಲ್ಸ್

ಈಗ 10 ವರ್ಷದ ವಿತ್​​ಡ್ರಾ ನಿಯಮದ ಪ್ರಕಾರ, ಹಣ ಹಿಂಪಡೆಯಲು ಯಾವುದೇ ಕಾರಣ ನೀಡುವ ಅಗತ್ಯ ಇರುವುದಿಲ್ಲ. ಇಪಿಎಫ್ ಸದಸ್ಯರು ತಮ್ಮ ಹಣವನ್ನು ಬೇರೆಲ್ಲಿಯಾದರೂ ಹೂಡಕೆ ಮಾಡಬಹುದು. ಸದ್ಯ ಇಪಿಎಫ್​​ನಲ್ಲಿ ಶೇ. 8.25ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಅದರ ಬದಲು ಜನರು ಶೇ. 10-16 ವಾರ್ಷಿಕ ಲಾಭ ತರುವ ಮ್ಯುಚುವಲ್ ಫಂಡ್​ಗಳಲ್ಲಿಯೋ, ಷೇರುಗಳಲ್ಲಿಯೋ ಹೂಡಿಕೆ ಮಾಡಬಹುದು. ಈ ಕಾರಣಕ್ಕೆ ಸರ್ಕಾರವು 10 ವರ್ಷದ ನಿಯಮ ರೂಪಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ