FD Rates: ಈ ಬ್ಯಾಂಕ್ನಲ್ಲಿ ಎಫ್ಡಿ ಇಟ್ಟರೆ ಹಿರಿಯ ನಾಗರಿಕರಿಗೆ ಸಿಗಲಿದೆ ಶೇ 9ರಷ್ಟು ಬಡ್ಡಿ
ಪರಿಷ್ಕೃತ ಬಡ್ಡಿ ದರ ಫೆಬ್ರವರಿ 13ರಿಂದಲೇ ಅನ್ವಯವಾಗಲಿದೆ. ಇದೀಗ ಸ್ಥಿರ ಠೇವಣಿ (FD) ಇಡುವ ಗ್ರಾಹಕರಿಗೆ ಶೇ 8.11ರ ವರೆಗೆ ಹಾಗೂ ಹಿರಿಯ ನಾಗರಿಕರಿಗೆ ಶೇ 8.71ರ ವರೆಗೆ ಬಡ್ಡಿ ದೊರೆಯಲಿದೆ.
ಆರ್ಬಿಐ ರೆಪೊ ದರ ಹೆಚ್ಚಿಸಿರುವ ಬೆನ್ನಲ್ಲೇ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ಹಾಗೂ ಠೇವಣಿಗಳ (Deposits) ಮೇಲಿನ ಬಡ್ಡಿ ದರ ಹೆಚ್ಚಿಸಲು ಆರಂಭಿಸಿವೆ. ಆ್ಯಕ್ಸಿಸ್ ಬ್ಯಾಂಕ್ ಹಾಗೂ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ಗಳು ಈಗಾಗಲೇ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದ್ದು ಇದೀಗ ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Fincare Small Finance Bank) ಸರದಿ. ಪರಿಷ್ಕೃತ ಬಡ್ಡಿ ದರ ಫೆಬ್ರವರಿ 13ರಿಂದಲೇ ಅನ್ವಯವಾಗಲಿದೆ. ಇದೀಗ ಸ್ಥಿರ ಠೇವಣಿ (FD) ಇಡುವ ಗ್ರಾಹಕರಿಗೆ ಶೇ 8.11ರ ವರೆಗೆ ಹಾಗೂ ಹಿರಿಯ ನಾಗರಿಕರಿಗೆ ಶೇ 8.71ರ ವರೆಗೆ ಬಡ್ಡಿ ದೊರೆಯಲಿದೆ. ಆದರೆ, ಕನಿಷ್ಠ 5,000 ರೂ. ಠೇವಣಿ ಇಡಬೇಕು.
ದೀರ್ಘಾವಧಿಯ ಗುರಿ ಸಾಧಿಸುವುದಕ್ಕಾಗಿ ಗ್ರಾಹಕರಿಗೆ ನಾವು ಉನ್ನತ ಹಣಕಾಸು ಸೇವೆ ನೀಡುತ್ತಿದ್ದೇವೆ. ಹೆಚ್ಚಿನ ಬಡ್ಡಿ ನೀಡುತ್ತಿದ್ದೇವೆ. ಎಫ್ಡಿ ದರ ಹೆಚ್ಚಳ ಮಾಡಿರುವುದೂ ಈ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಶಿಶ್ ಮಿಶ್ರಾ ತಿಳಿಸಿದ್ದಾರೆ.
ಎಫ್ಡಿ ಖಾತೆ ತೆರೆಯುವುದು ಹೇಗೆ?
ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶಾಖೆಗೆ ತೆರಳಿ ಅಥವಾ ಆನ್ಲೈನ್ ಮೂಲಕ ಎಫ್ಡಿ ಖಾತೆ ತೆರೆಯಬಹುದಾಗಿದೆ. ಮೊಬೈಲ್ ಬ್ಯಾಂಕಿಂಗ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೂ ಎಫ್ಡಿ ಆರಂಭಿಸಬಹುದಾಗಿದೆ. ಬಡ್ಡಿ ದರ ಹೆಚ್ಚಳದ ಮೂಲಕ ನಾವು ಗ್ರಾಹಕ ಕೇಂದ್ರಿತ ಸೇವೆ ಮುಂದುವರಿಸುತ್ತಿದ್ದೇವೆ ಎಂದು ಆಶಿಶ್ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: Ujjivan Small Finance Bank: 560 ದಿನಗಳ ಠೇವಣಿಗೆ ಶೇ 8.20ರ ವರೆಗೆ ಬಡ್ಡಿ ನೀಡುತ್ತಿದೆ ಈ ಬ್ಯಾಂಕ್
ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕರೆಂಟ್ & ಸೇವಿಂಗ್ಸ್ ಅಕೌಂಟ್, ಚಿನ್ನದ ಅಡಮಾನ ಸಾಲ, ಆಸ್ತಿ ಅಡಮಾನ ಸಾಲ, ಆರ್ಡಿ, ಎಫ್ಡಿ ಸೇರಿ ಅನೇಕ ಸೇವೆಗಳನ್ನು ಒದಗಿಸುತ್ತಿದೆ.
2022ರ ಮಾರ್ಚ್ 31ರಂದು ಬ್ಯಾಂಕ್ ನೀಡಿದ್ದ ದಾಖಲೆ ಪ್ರಕಾರ, ಬ್ಯಾಂಕ್ಗೆ 19 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ 32 ಲಕ್ಷಕ್ಕೂ ಹೆಚ್ಚು ಗ್ರಾಹಕರು ಇದ್ದಾರೆ.