2023 ಏಪ್ರಿಲ್ 14, ಇವತ್ತು ಅಂಬೇಡ್ಕರ್ ಜಯಂತಿಯಾದ್ದರಿಂದ (Ambedkar Jayanti) ಷೇರು ಮಾರುಕಟ್ಟೆಗಳಿಗೆ ರಜಾ ದಿನ. ಈಗ ನೀವು ನಿಮ್ಮ ಉಳಿತಾಯದ ಹಣವನ್ನು ಯಾವ ಷೇರಿಗೆ ಹೂಡಿಕೆ ಮಾಡಬೇಕೆಂದು ಆರಾಮವಾಗಿ ಕೂತು ಯೋಚಿಸುವ ಸಮಯ. ನೀವು ಷೇರುಪೇಟೆಯಲ್ಲಿ (Share Market) ಆಗುವ ಷೇರುಗಳ ಏರಿಳಿತವನ್ನು ಗಮನಿಸುತ್ತಾ ಬಂದರೆ ಕೆಲ ಕಂಪನಿಗಳ ಷೇರುಗಳು ಅದ್ಭುತವಾಗಿ ಬೆಳವಣಿಗೆ ಹೊಂದಿರುವುದನ್ನು ಕಾಣಬಹುದು. ಇನ್ನೂ ಕೆಲ ಕಂಪನಿಗಳ ಷೇರುಬೆಲೆ ಈಗ ಕುಸಿದು ಮುಂದೆ ಕ್ಷಿಪ್ರವಾಗಿ ರಬ್ಬರ್ ಬ್ಯಾಂಡಿನಂತೆ ಹಿಗ್ಗುವ ಸಾಧ್ಯತೆಯನ್ನು ಗುರುತಿಸಬಹುದು. ಇಂಥವನ್ನೆಲ್ಲಾ ಪರಿಣಿತ ಹಾಗೂ ಅನುಭವಿ ಸ್ಟಾಕ್ ಬ್ರೋಕರ್ಗಳು ಗುರುತಿಸಬಲ್ಲರು. ಅಂತೆಯೇ, ಇಂಥ ಬ್ರೋಕರ್ಗಳಿಗೆ (Brokerage Companies) ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಕೆಲ ಬ್ರೋಕರ್ಗಳು ಮಾಡುವ ಶಿಫಾರಸನ್ನು ಬಹಳ ಹೂಡಿಕೆದಾರರು ವೇದ ವಾಕ್ಯ ಎಂಬಂತೆ ಚಾಚೂ ತಪ್ಪದೇ ಮಾಡುತ್ತಾರೆ. ಹಾಗಂತ, ಇವರು ಮುಟ್ಟಿದ್ದೆಲ್ಲಾ ಚಿನ್ನ ಆಗಿರುತ್ತೆ ಎಂದಲ್ಲ. ಹೆಚ್ಚಿನ ಸಂದರ್ಭದಲ್ಲಿ ಇವರ ಅಂದಾಜುಗಳು ಸರಿ ಇರುತ್ತವೆ. ಇವರ ಶಿಫಾರಸುಗಳು ಪರಿಣಾಮಕಾರಿ ಆಗಿರುತ್ತವೆ.
ಷೇರುಪೇಟೆಯಲ್ಲಿ ಬ್ರೋಕರೇಜ್ ಕಂಪನಿಗಳು ಕೆಲ ಷೇರುಗಳು ನಿರ್ದಿಷ್ಟ ಅವಧಿಯಲ್ಲಿ ಎಷ್ಟರವರೆಗೆ ಬೆಲೆ ವೃದ್ಧಿಸಿಕೊಳ್ಳಬಹುದು ಎಂದು ಅಂದಾಜು ಮಾಡುವುದಿದೆ. ಒಂದು ಕಂಪನಿಯ ಷೇರನ್ನು ಖರೀದಿಸಬೇಕೋ, ಅಥವಾ ಮಾರಬೇಕೋ, ಅಥವಾ ಹಾಗೇ ಕಾದುನೋಡಬೇಕೋ ಎಂಬುದನ್ನು ಈ ಬ್ರೋಕರೇಜ್ ಕಂಪನಿಗಳು ಶಿಫಾರಸು ಮಾಡುತ್ತವೆ. ಈ ರೀತಿ ಶಿಫಾರಸು ಪಡೆದ ಕೆಲ ಷೇರುಗಳು ಈ ಕೆಳಕಂಡಂತಿವೆ. ಇದರಲ್ಲಿ ಒಂದು ಕಂಪನಿಯ ಷೇರು ಶೇ. 65ರಷ್ಟು ಹೆಚ್ಚಾಗುತ್ತದೆಂದೂ ಬ್ರೋಕರ್ಗಳು ಭವಿಷ್ಯ ನುಡಿದಿದ್ದಾರೆ. ಅದರ ಹೆಚ್ಚಿನ ವಿವರ ಓದಿ.
ಟೆಕ್ ಮಹೀಂದ್ರ: ಈ ಕಂಪನಿಯ ಷೇರು ಬೆಲೆ ಸದ್ಯ 1,086 ರೂ ಇದೆ. ಮುಂದಿನ ದಿನಗಳಲ್ಲಿ ಇದರ ಷೇರು ಬೆಲೆ 1,300 ರೂ ತಲುಪಬಹುದು ಎಂದು ಬ್ರೋಕರೇಜ್ ಕಂಪನಿಗಳು ಅಂದಾಜು ಮಾಡಿವೆ. ಅಂದರೆ ಈಗಿನ ಬೆಲೆಗಿಂತ ಶೇ. 20ರಷ್ಟು ಹೆಚ್ಚಾಗುತ್ತದೆ.
ಮಾರುತಿ ಸುಜುಕಿ: ಭಾರತದ ನಂಬರ್ ಒನ್ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಯಾವತ್ತಿದ್ದರೂ ಹಾಟ್ ಫೇವರಿಟ್. ಇದರ ಷೇರು ಬೆಲೆ ಸದ್ಯ 8,660 ರೂ ಹೊಂದಿದೆ. ಬ್ರೋಕರೇಜ್ ಮಾಡಿರುವ ಅಂದಾಜು ಪ್ರಕಾರ ಇದರ ಬೆಲೆ 9,760 ರೂವರೆಗೂ ಏರಬಹುದು. ಹೂಡಿಕೆದಾರರಿಗೆ ಶೇ. 13ರಷ್ಟು ಲಾಭ ಸಿಗುತ್ತದೆ.
ಎಸ್ಬಿಐ: ಸದ್ಯ ಪ್ರತೀ ಷೇರಿಗೆ 533 ರೂ ಬೆಲೆ ಇರುವ ಸ್ಟೇಟ್ ಬ್ಯಾಂಕ್ ಇಂಡಿಯಾಗೆ ಪ್ರೈಸ್ ಟಾರ್ಗೆಟ್ ಆಗಿ 740 ರೂ ಕೊಡಲಾಗಿದೆ. ಅಂದರೆ ಇದರ ಷೇರು ಬೆಲೆ ಶೇ. 39 ರಷ್ಟು ಹೆಚ್ಚಾಗಬಹುದು ಎಂಬುದು ಬ್ರೋಕರೇಜ್ ಅನಿಸಿಕೆ.
ಬಜಾಜ್ ಫೈನಾನ್ಸ್: ಈ ಖಾಸಗಿ ಹಣಕಾಸು ಸಂಸ್ಥೆಯ ಷೇರು ಬೆಲೆ ಸದ್ಯ 5,901 ರೂ ಇದೆ. ಬ್ರೋಕರೇಜ್ ಅಂದಾಜು ಪ್ರಕಾರ ಇದರ ಷೇರು ಬೆಲೆ 7,400 ರೂಗೆ ಹೆಚ್ಚಾಗಬಹುದು. ಅಂದರೆ ಹೂಡಿಕೆದಾರರಿಗೆ ಶೇ. 25ರಷ್ಟು ಹೆಚ್ಚು ಲಾಭ ತಂದುಕೊಡುವ ಷೇರಿದು.
ಇದನ್ನೂ ಓದಿ: Hardwyn India: 3 ವರ್ಷದಲ್ಲಿ 43ಪಟ್ಟು ಹೆಚ್ಚು ಲಾಭ; ಹಾರ್ಡ್ವಿನ್ ಷೇರಿಗೆ ಹಣ ಹಾಕಿದವರು ಇವತ್ತು ಕೋಟ್ಯಾಧೀಶ್ವರರು
ಅಪೋಲೋ ಪೈಪ್ಸ್: ಇದರ ಈಗಿನ ಷೇರು ಬೆಲೆ 590 ರೂ. ಬ್ರೋಕರೇಜ್ ಕಂಪನಿಗಳು ಅಪೋಲೋ ಪೈಪ್ಸ್ಗೆ ಟಾರ್ಗೆಟ್ ಪ್ರೈಸ್ ಆಗಿ 650 ರೂ ಎಂದು ಅಂದಾಜು ಮಾಡಿವೆ. ಇದು ನಿಜವಾದಲ್ಲಿ ಹೂಡಿಕೆದಾರರಿಗೆ ಬಹಳ ಶೀಘ್ರದಲ್ಲಿ ಶೇ. 10ರಷ್ಟು ಲಾಭ ಬರಬಹುದು.
ಗ್ರೀನ್ ಪ್ಯಾನಲ್ ಇಂಡಸ್ಟ್ರೀಸ್: ಬ್ರೋಕರೇಜ್ ಕಂಪನಿಗಳ ಶಿಫಾರಸು ಪ್ರಕಾರ ಗ್ರೀನ್ಪ್ಯಾನಲ್ ಇಂಡಸ್ಟ್ರೀಸ್ (Greenpanel Industries) ಬಹಳ ಭರ್ಜರಿ ಆದಾಯ ತರಬಲ್ಲ ಷೇರು. ಇದರ ಈಗಿನ ಬೆಲೆ 275 ರೂ ಇದೆ. ಇದರ ಟಾರ್ಗೆಟ್ ಬೆಲೆ 455 ರೂ ಎನ್ನಲಾಗಿದೆ. ಈಗೇನಾದರೂ ಈ ಷೇರಿನ ಮೇಲೆ ಹೂಡಿಕೆ ಮಾಡಿದವರಿಗೆ ಕೆಲವೇ ತಿಂಗಳಲ್ಲಿ ಶೇ. 65ರಷ್ಟು ಲಾಭ ಮಾಡಿಕೊಳ್ಳುವ ಅವಕಾಶ ಇರುತ್ತದೆ.
(ಗಮನಿಸಿ: ಈ ಮೇಲೆ ಮಾಡಲಾಗಿರುವ ವಿವಿಧ ಷೇರುಗಳ ಶಿಫಾರಸು ಮತ್ತು ಅಂದಾಜು ನಿಜವೇ ಆಗುತ್ತದೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಷೇರುಪೇಟೆಯ ಚಲನವನ್ನು ನಿಖರವಾಗಿ ಯಾರೂ ಅಂದಾಜು ಮಾಡಲು ಆಗಲ್ಲ. ನೀವು ಷೇರುಗಳ ಮೇಲೆ ಹೂಡಿಕೆ ಮಾಡುವುದಿದ್ದರೆ ತಪ್ಪದೇ ಅಧಿಕೃತ ಮತ್ತು ವೃತ್ತಿಪರ ಹೂಡಿಕೆ ಸಲಹೆಗಾರರಿಂದ ಸಲಹೆ ಪಡೆಯುವುದು ಉತ್ತಮ ನಿರ್ಧಾರವಾಗಬಹುದು.)
Published On - 3:48 pm, Fri, 14 April 23