Auto Sweep Account: ಉಳಿತಾಯ ಖಾತೆಯಲ್ಲಿಯೂ ಶೇಕಡಾ 8ರ ಬಡ್ಡಿ ಪಡೆಯಲು ಈ ವಿಧಾನ ಅನುಸರಿಸಿ
Auto Sweep Account; ಉಳಿತಾಯ ಖಾತೆಯಲ್ಲಿಯೂ ಶೇಕಡಾ 8ರ ವರೆಗೆ ಬಡ್ಡಿ ಪಡೆಯಬಹುದು. ಅದಕ್ಕಾಗಿ ನಾವು ಉಳಿತಾಯ ಖಾತೆಯನ್ನು ಆಟೋ ಸ್ವೀಪ್ ಖಾತೆ ಜತೆ ಲಿಂಕ್ ಮಾಡಿ ಅದರ ಪ್ರಯೋಜನ ಪಡೆಯಬೇಕು. ಹೇಗೆಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ಕಠಿಣ ಪರಿಶ್ರಮದಿಂದ ದುಡಿದು ಸಂಪಾದಿಸಿದ ದುಡ್ಡನ್ನು ಹೆಚ್ಚು ಬಡ್ಡಿಗಾಗಿ ಮ್ಯೂಚುವಲ್ ಫಂಡ್ಗಳಲ್ಲಿ (Mutual Fund) ಹೂಡಿಕೆ (Invsetment) ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಹಣಕಾಸು ಸಂಸ್ಥೆಗಳು ನಡೆಸಿದ ಇತ್ತೀಚಿನ ಸಮೀಕ್ಷೆಗಳಿಂದ ತಿಳಿದುಬಂದಿದೆ. ಬ್ಯಾಂಕ್ಗಳಲ್ಲಿ ಮಾಡುವ ಉಳಿತಾಯಕ್ಕೆ ಸಿಗುವ ಕಡಿಮೆ ಬಡ್ಡಿ ದರವೇ (Savings Account Interest Rate) ಇದಕ್ಕೆ ಪ್ರಮುಖ ಕಾರಣವಾಗಿದೆ. ಮ್ಯೂಚುವಲ್ ಫಂಡ್ ಹೂಡಿಕೆದಾರರಲ್ಲಿ ಎಸ್ಐಪಿ (Systematic investment plan) ಬಹಳ ಜನಪ್ರಿಯವಾಗಿದೆ. ಬ್ಯಾಂಕ್ಗಳಲ್ಲಿ ಸ್ಥಿರ ಠೇವಣಿ (FD) ಇಟ್ಟರೂ ಶೇಕಡಾ 7-8ರ ವರೆಗೆ ಬಡ್ಡಿ ದೊರೆಯುತ್ತದಷ್ಟೆ. ಹೀಗಿರುವಾಗ ಉಳಿತಾಯ ಖಾತೆಯಲ್ಲಿಯೂ ಶೇಕಡಾ 8ರ ವರೆಗೆ ಬಡ್ಡಿ ಪಡೆಯಬಹುದು. ಅದಕ್ಕಾಗಿ ನಾವು ಉಳಿತಾಯ ಖಾತೆಯನ್ನು ಆಟೋ ಸ್ವೀಪ್ ಖಾತೆ ಜತೆ ಲಿಂಕ್ ಮಾಡಿ ಅದರ ಪ್ರಯೋಜನ ಪಡೆಯಬೇಕು.
ಆಟೋ ಸ್ವೀಪ್ ಖಾತೆ ಎಂದರೇನು?
- ಆಟೋ ಸ್ವೀಪ್ ಖಾತೆಯು ಅತಿಹೆಚ್ಚು ಬಡ್ಡಿ ದರ ನೀಡುವ ಬ್ಯಾಂಕಿಂಗ್ ಸೌಲಭ್ಯವಾಗಿದೆ.
- ಈ ಮಾದರಿಯ ಖಾತೆಯು ಉಳಿತಾಯ ಖಾತೆ (savings account) ಮತ್ತು ಸ್ಥಿರ ಠೇವಣಿ (fixed deposit) ಸಂಯೋಜನೆಗೊಂಡು ತೆರೆಯುವ ಖಾತೆಯಾಗಿದೆ.
- ನಿಗದಿಪಡಿಸಲಾಗಿರುವ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ನಾವು ಉಳಿತಾಯ ಖಾತೆಯಲ್ಲಿ ಜಮೆ ಮಾಡಿದಾಗ ಅದು ಸ್ವಯಂಚಾಲಿತವಾಗಿ ಎಫ್ಡಿ ಖಾತೆಗೆ ಜಮೆಯಾಗುತ್ತದೆ.
- ವೈಯಕ್ತಿಕವಾಗಿಯೂ ಸಂಸ್ಥೆಗಳಿಗೆಯೂ ಈ ರೀತಿಯ (ಆಟೋ ಸ್ವೀಪ್) ಖಾತೆ ತೆರೆಯಲು ಬ್ಯಾಂಕ್ಗಳು ಅವಕಾಶ ನೀಡುತ್ತವೆ.
ಎಸ್ಬಿಐ ಆಟೋ ಸ್ವೀಪ್ ಅಕೌಂಟ್ (ಸೇವಿಂಗ್ಸ್ ಪ್ಲಸ್ ಅಕೌಂಟ್)
- ಸೇವಿಂಗ್ಸ್ ಪ್ಲಸ್ ಅಕೌಂಟ್ ಮಾದರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಟೋ ಸ್ವೀಪ್ ಖಾತೆ ತೆರೆಯಲು ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಿದೆ. ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಅಥವಾ ಆನ್ಲೈನ್ನಲ್ಲಿಯೂ ಆಟೋ ಸ್ವೀಪ್ ಸೇವಿಂಗ್ಸ್ ಪ್ಲಸ್ ಅಕೌಂಟ್ ತೆರೆಯಬಹುದು.
- ಎಸ್ಬಿಐನಲ್ಲಿ ಠೇವಣಿಗಳ ಅವಧಿ 1ರಿಂದ 5 ವರ್ಷ ಆಗಿದೆ. ಆಟೋ ಸ್ವೀಪ್ ಸೌಲಭ್ಯಕ್ಕಾಗಿ ಕನಿಷ್ಠ ತ್ರೆಶ್ಹೋಲ್ಡ್ (ಇದಕ್ಕಿಂತ ಮೇಲಿರುವ ಮೊತ್ತ ಆಟೋ ಸ್ವೀಪ್ ಆಗಿ ಪರಿವರ್ತನೆಗೊಳ್ಳುತ್ತದೆ) ಮಿತಿ 35,000 ರೂ. ಹಾಗೂ ಕನಿಷ್ಠ ರಿಸಲ್ಟೇಂಟ್ (ಉಳಿತಾಯ ಖಾತೆಯಲ್ಲಿ ಇರಬೇಕಾದ ಕನಿಷ್ಠ ಮೊತ್ತ) ಬ್ಯಾಲೆನ್ಸ್ 25,000 ರೂ. ಆಗಿದೆ. ರಿಸಲ್ಟೇಂಟ್ಗಿಂತ ಕಡಿಮೆ ಮೊತ್ತ ಇದ್ದರೆ ಆಗ ಎಫ್ಡಿಯಿಂದ ಉಳಿತಾಯ ಖಾತೆಗೆ ಹಣ ರಿವರ್ಸ್ ಆಗುತ್ತದೆ.
ಉದಾಹರಣೆಗಾಗಿ ಎಸ್ಬಿಐ ಆಟೋ ಸ್ವೀಪ್ ಖಾತೆ ಲೆಕ್ಕಾಚಾರ ಇಲ್ಲಿ ನೀಡಲಾಗಿದೆ;
ವ್ಯಕ್ತಿಯೊಬ್ಬರು ತಮ್ಮ ಸೇವಿಂಗ್ಸ್ ಪ್ಲಸ್ ಖಾತೆಯಲ್ಲಿ 50,000 ರೂ. ಹೊಂದಿದ್ದು, 25,000 ರೂ. ಅನ್ನು ತ್ರೆಶ್ಹೋಲ್ಡ್ ಮಿತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದಿಟ್ಟುಕೊಳ್ಳೋಣ. ಉಳಿದ 25,000 ರೂ. ಸ್ವಯಂಚಾಲಿತವಾಗಿ ಎಫ್ಡಿ ಆಗಿ ಪರಿವರ್ತನೆ ಹೊಂದುತ್ತದೆ. ಇದಕ್ಕೆ ಸುಮಾರು ಶೇಕಡಾ 7ರ ವರೆಗೆ ಬಡ್ಡಿ ದೊರೆಯುತ್ತದೆ. ಇನ್ನು ಅವರ ಖಾತೆಯಲ್ಲಿ ಉಳಿದಿರುವ 25,000 ರೂ.ಗೆ ಉಳಿತಾಯದ ಬಡ್ಡಿಯಾಗಿ ಶೇಕಡಾ 3ರಿಂದ 4ರ ವರೆಗೆ ಸಿಗಲಿದೆ.
ಆಟೋ ಸ್ವೀಪ್ ಹಣವನ್ನು ಯಾವಾಗ ಬೇಕಾದರೂ ವಿತ್ಡ್ರಾ ಮಾಡಬಹುದಾಗಿದೆ. ಇದಕ್ಕೆ ಮಾಮೂಲಿ ಎಫ್ಡಿಗಳಂತೆ ಲಾಕ್ಇನ್ ಅವಧಿ ಇಲ್ಲ.
ಆಟೋ ಸ್ವೀಪ್ ಅಕೌಂಟ್ ಯಾಕೆ ಉತ್ತಮ?
- ಈ ಸೌಲಭ್ಯದ ಮೂಲಕ ಉಳಿತಾಯ ಖಾತೆಯಲ್ಲಿ ಪಡೆಯುವುದಕ್ಕಿಂತಲೂ ಹೆಚ್ಚಿನ ಬಡ್ಡಿ ಪಡೆಯಬಹುದು.
- ಲಾಕ್ ಇನ್ ಅವಧಿ ಇಲ್ಲದಿರುವುದರಿಂದ ಯಾವಾಗ ಬೇಕಿದ್ದರೂ ವಿತ್ಡ್ರಾ ಅಥವಾ ಹಣ ವರ್ಗಾವಣೆ ಮಾಡಬಹುದು.
- ಉಳಿತಾಯ ಖಾತೆಯಲ್ಲಿ ಮೊತ್ತ ಕಡಿಮೆಯಾದರೆ ಆಟೋ ಸ್ವೀಪ್ ಖಾತೆಯಿಂದ ಉಳಿತಾಯ ಖಾತೆಗೆ ಹಣ ರಿವರ್ಸ್ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Sat, 19 November 22