ಬೆಂಗಳೂರು: ಮ್ಯೂಚುವಲ್ ಫಂಡ್ಗಳನ್ನು (Mutual Funds) ನಿರ್ವಹಿಸುವ ಎಎಂಸಿಗಳು (Asset Management Company – AMC) ಹೂಡಿಕೆದಾರರನ್ನು ಆಕರ್ಷಿಸಲು ಹಲವು ಹೊಸ ಫಂಡ್ಗಳನ್ನು ಘೋಷಿಸಿವೆ. ಈ ಪೈಕಿ ಕೋಟಕ್ ಸಿಲ್ವರ್ ಫಂಡ್, ಎಚ್ಡಿಎಫ್ಸಿ ಬ್ಯುಸಿನೆಸ್ ಸೈಕಲ್ ಫಂಡ್, ಈಡೆಲ್ವೈಸ್ ಕಂಪನಿಯ ಪ್ಯಾಸಿವ್ ಫಂಡ್ಗಳು ಹೂಡಿಕೆದಾರರ ಗಮನ ಸೆಳೆದಿವೆ. ಬಹುತೇಕ ಹೂಡಿಕೆದಾರರು ತಮ್ಮ ಪೋರ್ಟ್ಫೋಲಿಯೊಗಳಲ್ಲಿ ಸ್ಮಾಲ್, ಮಿಡ್ ಮತ್ತು ಲಾರ್ಜ್ ಕ್ಯಾಪ್ ಫಂಡ್ಗಳನ್ನು ಹೊಂದಲು ಬಯಸುತ್ತಾರೆ. ಈ ಮೂರೂ ವಿಭಾಗಗಳಿಗೆ ಸೂಕ್ತವಾಗುವಂತೆ ಮಹಿಂದ್ರ ಮನುಲೈಫ್ ಸ್ಮಾಲ್ ಕ್ಯಾಪ್ ಫಂಡ್, ಕೆನರಾ ರೊಬೆಕೊ ಮಿಡ್ಕ್ಯಾಪ್ ಫಂಡ್ ಮತ್ತು ವೈಟ್ ಓಕ್ ಕ್ಯಾಪಿಟಲ್ ಲಾರ್ಜ್ ಕ್ಯಾಪ್ ಫಂಡ್ಗಳಿಗೆ ಎನ್ಎಫ್ಒ ಘೋಷಿಸಲಾಗಿದೆ. ಅಮೆರಿಕ, ಬ್ರಿಟನ್ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಆವರಿಸಿಕೊಂಡಿದ್ದು ಷೇರುಪೇಟೆ ಕುಸಿಯುತ್ತಿದೆ. ಆದರೆ ಭಾರತದ ಆರ್ಥಿಕತೆಯು ಸ್ಥಿರತೆ ಪ್ರದರ್ಶಿಸುತ್ತಿದ್ದು ಹೂಡಿಕೆದಾರರು ಉತ್ಸಾಹ ಕಳೆದುಕೊಂಡಿಲ್ಲ. ದಿನದಿಂದ ದಿನಕ್ಕೆ ಘೋಷಣೆಯಾಗುತ್ತಿರುವ ಹೊಸ ಎನ್ಎಫ್ಒಗಳು ಹೂಡಿಕೆದಾರರ ಈ ಮನಸ್ಥಿತಿಯ ಪ್ರತೀಕವಾಗಿದೆ.
ಇನ್ನೆರೆಡು ದಿನಗಳಿಗೆ (ನ 25) ಎನ್ಎಫ್ಒ ಅವಧಿಯು ಅಂತ್ಯಗೊಳ್ಳಲಿರುವ ಎಚ್ಡಿಎಫ್ಸಿ ಬ್ಯುಸಿನೆಸ್ ಸೈಕಲ್ ಫಂಡ್ ಬಗ್ಗೆ ಮ್ಯೂಚುವಲ್ ಫಂಡ್ ವಿತರಕರ ವಲಯದಲ್ಲಿ ಆಸಕ್ತಿ ಮೂಡಿದೆ. ಹಲವರು ತಮ್ಮ ಗ್ರಾಹಕರಿಗೆ ಈ ಫಂಡ್ ಶಿಫಾರಸು ಮಾಡುತ್ತಿದ್ದಾರೆ. ಎಚ್ಡಿಎಫ್ಸಿಯ ಜನಪ್ರಿಯ ಫಂಡ್ ಆಗಿರುವ ‘ಎಚ್ಡಿಎಫ್ಸಿ ಟಾಪ್ 100 ಫಂಡ್’ ನಿರ್ವಹಿಸುತ್ತಿರುವ ಫಂಡ್ ಮ್ಯಾನೇಜರ್ ರಾಹುಲ್ ಬೈಜಲ್ ಅವರೇ ಮುಂದಿನ ದಿನಗಳಲ್ಲಿ ಬ್ಯುಸಿನೆಸ್ ಸೈಕಲ್ ಫಂಡ್ ಮ್ಯಾನೇಜರ್ ಅಗಿ ಕಾರ್ಯನಿರ್ವಹಸಲಿದ್ದಾರೆ.
ಸಾಂಪ್ರದಾಯಿಕ ಲಾರ್ಜ್, ಮಿಡ್, ಸ್ಮಾಲ್ ಕ್ಯಾಪ್ಗಳಲ್ಲಿ ಫಂಡ್ ಮ್ಯಾನೇಜರ್ಗಳಿಗೆ ಸಿಗದ ಹಲವು ಸ್ವಾತಂತ್ರ್ಯ ಬ್ಯುಸಿನೆಸ್ ಸೈಕಲ್ ಫಂಡ್ಗಳಲ್ಲಿ ಸಿಗುತ್ತದೆ. ಸಾಮಾನ್ಯವಾಗಿ ಇಂಥ ಫಂಡ್ಗಳು ಕುಸಿಯುತ್ತಿರುವ ಮತ್ತು ಮೇಲೇರುತ್ತಿರುವ ವಾಣಿಜ್ಯ ಕ್ಷೇತ್ರಗಳನ್ನೇ ದೃಷ್ಟಿಯಲ್ಲಿರಿಸಿಕೊಂಡು ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಹೀಗಾಗಿ ಇತರ ಫಂಡ್ಗಳಿಗಿಂತಲೂ ಇಂಥ ಫಂಡ್ಗಳಲ್ಲಿ ಲಾಭ ಗಳಿಕೆಯ ಸಾಧ್ಯತೆ ಹೆಚ್ಚು. ಆದರೆ ಫಂಡ್ ಮ್ಯಾನೇಜರ್ ಮತ್ತು ಅವರ ತಂಡದ ಲೆಕ್ಕಾಚಾರ ಫಲಿಸದಿದ್ದರೆ ಲಾಭ ಇಳಿದು, ನಷ್ಟವೂ ಆಗಬಹುದು.
ಟಾಟಾ, ಎಬಿಎಸ್ಎಲ್, ಐಸಿಐಸಿಐ ಎಎಂಸಿಗಳು ಈಗಾಗಲೇ ಬ್ಯುಸಿನೆಸ್ ಸೈಕಲ್ ಫಂಡ್ಗಳನ್ನು ಪರಿಚಯಿಸಿವೆ. ‘ಮುಂದಿನ ದಿನಗಳಲ್ಲಿ ಉತ್ತಮ ಲಾಭ ಗಳಿಕೆಯ ಸಾಧ್ಯತೆಯಿರುವ ಕಂಪನಿಗಳನ್ನೇ ಗುರುತಿಸಿ ಹೂಡಿಕೆ ಮಾಡುವುದು ಬ್ಯುಸಿನೆಸ್ ಸೈಕಲ್ ಫಂಡ್ಗಳ ವೈಶಿಷ್ಟ್ಯ. ಷೇರುಪೇಟೆಯನ್ನು ನಿಯಮಿತವಾಗಿ ಗಮನಿಸಬಲ್ಲ, ಹೂಡಿಕೆ ಮತ್ತು ನಿರ್ಗಮನಕ್ಕೆ ಸಂಬಂಧಿಸಿದಂತೆ ಕಾಲಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರುವವರು ಸ್ವಲ್ಪಮಟ್ಟಿಗೆ ಇಂಥ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು’ ಎಂದು ಮೈ ವೆಲ್ತ್ ಗ್ರೋತ್ನ ಹರ್ಷದ್ ಚೆತನ್ವಾಲಾ ಹೇಳುತ್ತಾರೆ.
ಚಿನ್ನದ ಜೊತೆಗೆ ಬೆಳ್ಳಿಯೂ ಇರಲಿ
ರಷ್ಯಾ-ಉಕ್ರೇನ್ ಯುದ್ಧವು ಆರಂಭವಾದ ನಂತರ ಹೂಡಿಕೆದಾರರನ್ನು ಆರ್ಥಿಕ ಅಸ್ಥಿರತೆಯ ಭೀತಿ ಕಾಡುತ್ತಿದೆ. ಆರ್ಥಿಕ ಅಸ್ಥಿರತೆ, ಹಿಂಜರಿಕೆಯ ಭೀತಿ ವ್ಯಕ್ತವಾದಾಗಲೆಲ್ಲಾ ಸುರಕ್ಷಿತ ಹೂಡಿಕೆ ಆಯ್ಕೆಗಳನ್ನು ಜನರು ಹುಡುಕುತ್ತಾರೆ. ಸಹಜವಾಗಿಯೇ ಚಿನ್ನ ಮತ್ತು ಬೆಳ್ಳಿ ಇಂಥವರ ಆಯ್ಕೆಯಾಗುತ್ತವೆ. ಭಾರತದಲ್ಲಿ ಬಹುಕಾಲದಿಂದ ಚಿನ್ನದ ಫಂಡ್ಗಳು ವಹಿವಾಟು ನಡೆಸುತ್ತಿವೆ. ಆದರೆ ಬೆಳ್ಳಿ ಈ ಸಾಲಿಗೆ ಹೊಸದು. ಹೂಡಿಕೆದಾರರಲ್ಲಿ ವ್ಯಕ್ತವಾಗುತ್ತಿರುವ ಈ ಆಸಕ್ತಿಯನ್ನು ಆಧರಿಸಿ ಕೋಟಕ್ ಫಂಡ್ ಹೌಸ್ ಸಹ ಸಿಲ್ವರ್ ಫಂಡ್ನ ಎನ್ಎಫ್ಒ ಘೋಷಿಸಿದೆ.
‘ಭಾರತದಲ್ಲಿ ಈಗಾಗಲಲೇ ಆಕ್ಸಿಸ್, ಎಚ್ಡಿಎಫ್ಸಿ, ಆದಿತ್ಯ ಬಿರ್ಲಾ, ನಿಪ್ಪಾನ್ ಇಂಡಿಯಾ ಸೇರಿದಂತೆ ಹಲವು ಫಂಡ್ ಹೌಸ್ಗಳು ಸಿಲ್ವರ್ ಫಂಡ್ಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಿದೆ. ಹೂಡಿಕೆದಾರರ ಪೋರ್ಟ್ಫೋಲಿಯೊದಲ್ಲಿ ಚಿನ್ನ ಮತ್ತು ಬೆಳ್ಳಿ ಫಂಡ್ಗಳು ಗರಿಷ್ಠ ಶೇ 10ರಷ್ಟು ಇದ್ದರೆ ಸಾಕು. ಕೆಲ ಫಂಡ್ಹೌಸ್ಗಳು ಒಂದೇ ಫಂಡ್ನಲ್ಲಿ ಎರಡೂ ಲೋಹಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸುತ್ತಿವೆ. ಇಂಥ ಫಂಡ್ಗಳನ್ನೂ ಹೂಡಿಕೆದಾರರು ಪರಿಗಣಿಸಬಹುದು’ ಎಂದು ಬೆಂಗಳೂರಿನ ಆರ್ಎಸ್ಪಿ ಸರ್ವಿಸಸ್ನ ಹಣಕಾಸು ಸಲಹೆಗಾರರಾದ ರಾಘವೇಂದ್ರ ಭಟ್ ಅಭಿಪ್ರಾಯಪಡುತ್ತಾರೆ.
ಇದನ್ನೂ ಓದಿ: Penny Stock: 1 ಲಕ್ಷ ರೂ. ಹೂಡಿಕೆಗೆ 67 ಲಕ್ಷ ರೂ. ಗಳಿಸಿಕೊಟ್ಟಿದೆ ಈ ಪೆನ್ನಿ ಸ್ಟಾಕ್!
Published On - 4:22 pm, Wed, 23 November 22