Investment Options: ಭೂಮಿ ಮತ್ತು ಚಿನ್ನ; ಯಾವುದರ ಮೇಲೆ ಹೂಡಿಕೆ ಉತ್ತಮ? ಸಾಧಕ, ಬಾಧಕ ತಿಳಿದಿರಿ

Real Estate vs Gold- Right Investment Option: ಬಹಳ ಮಂದಿಗೆ ಭೂಮಿ ಮತ್ತು ಚಿನ್ನವು ಹೂಡಿಕೆಗೆ ಆದ್ಯತೆಗಳಾಗಿವೆ. ಇವೆರಡು ಆಸ್ತಿಗಳನ್ನು ಹೊಸದಾಗಿ ಉತ್ಪಾದಿಸಲು ಆಗುವುದಿಲ್ಲ. ಇವುಗಳಿಗೆ ಬೇಡಿಕೆ ಯಾವತ್ತೂ ಕಡಿಮೆ ಆಗುವುದಿಲ್ಲ. ಹೀಗಾಗಿ, ಇವುಗಳ ಮೇಲಿನ ನಿಮ್ಮ ಹೂಡಿಕೆಗೆ ಯಾವತ್ತೂ ಮೋಸವಾಗದು.

Investment Options: ಭೂಮಿ ಮತ್ತು ಚಿನ್ನ; ಯಾವುದರ ಮೇಲೆ ಹೂಡಿಕೆ ಉತ್ತಮ? ಸಾಧಕ, ಬಾಧಕ ತಿಳಿದಿರಿ
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 06, 2023 | 5:47 PM

ಹಣ ಹೂಡಿಕೆಗೆ ಇಂದು ಬಹಳ ಆಯ್ಕೆಗಳಿವೆ. ಎಫ್​ಡಿಗಳಿಂದ ಹಿಡಿದು ಷೇರುಖರೀದಿ, ಸರ್ಕಾರಿ ಸಾಲಪತ್ರ (Debt Bond), ಖಾಸಗಿ ಸಂಸ್ಥೆಗಳ ಸಾಲಪತ್ರ ಇತ್ಯಾದಿ ಅನೇಕ ಹೂಡಿಕೆ ಆಯ್ಕೆಗಳು ನಮಗೆ ಸಿಗುತ್ತವೆ. ಆದರೆ, ಜನರ ಭಾವನೆಗಳೊಂದಿಗೆ, ಅದರಲ್ಲೂ ಭಾರತೀಯರ ಭಾವನೆಯೊಂದಿಗೆ ಮಿಳಿತವಾಗಿರುವ ಸಂಪತ್ತೆಂದರೆ ಅದು ಭೂಮಿ (Real Estate) ಮತ್ತು ಚಿನ್ನ. ಇವು ಸೆಂಟಿಮೆಂಟ್​ಗೆ ಸಂಬಂಧಿಸಿದ್ದು ಮಾತ್ರವಲ್ಲ, ಇತರ ಹೂಡಿಕೆಗಳಿಗಿಂತ ಹೆಚ್ಚು ರಿಟರ್ನ್ ತಂದುಕೊಡಬಲ್ಲಂಥವು. ಹೀಗಾಗಿ, ಬಹಳ ಮಂದಿಗೆ ಭೂಮಿ ಮತ್ತು ಚಿನ್ನವು ಹೂಡಿಕೆಗೆ ಆದ್ಯತೆಗಳಾಗಿವೆ. ಇವೆರಡು ಆಸ್ತಿಗಳನ್ನು ಹೊಸದಾಗಿ ಉತ್ಪಾದಿಸಲು ಆಗುವುದಿಲ್ಲ. ಇವುಗಳಿಗೆ ಬೇಡಿಕೆ ಯಾವತ್ತೂ ಕಡಿಮೆ ಆಗುವುದಿಲ್ಲ. ಹೀಗಾಗಿ, ಇವುಗಳ ಮೇಲಿನ ನಿಮ್ಮ ಹೂಡಿಕೆಗೆ ಯಾವತ್ತೂ ಮೋಸವಾಗದು. ಇವೆರಡು ಹೂಡಿಕೆಗಳಲ್ಲಿ ಯಾವುದು ಉತ್ತಮ ಎಂದು ನೀವು ಕೇಳುವುದಾದರೆ ಇದಕ್ಕೆ ಈ ವರದಿ ಸಮಾಧಾನ ತರಬಹುದು.

ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ; ಸಾಧಕ, ಬಾಧಕಗಳು

ರಿಯಲ್ ಎಸ್ಟೇಟ್ ಎಂದರೆ ಅದು ನಿವೇಶನ ಆಗಿರಬಹುದು, ಮನೆ ಆಗಿರಬಹುದು, ಅಥವಾ ವಾಣಿಜ್ಯ ಸಂಕೀರ್ಣವಾಗಿರಬಹುದು. ಒಂದು ಕೃಷಿಭೂಮಿ ಖರೀದಿಸಿದರೂ ಅದೂ ಕೂಡ ರಿಯಲ್ ಎಸ್ಟೇಟ್ ಮಾರುಕಟ್ಟೆಯಂತೆಯೇ ಪರಿಗಣಿಸಲಾಗುತ್ತದೆ. ಜನಸಂಖ್ಯೆ ಹೆಚ್ಚುತ್ತಾ ಹೆಚ್ಚುತ್ತಾ ಭೂಮಿ ಹಂಚಿಕೆ ಕಡಿಮೆ ಆಗುತ್ತಾ ಹೋಗುತ್ತದೆ. ಹೀಗಾಗಿ, ರಿಯಲ್ ಎಸ್ಟೇಟ್ ಮೌಲ್ಯ ದೀರ್ಘಕಾಲದಲ್ಲಿ ಬಹಳ ದೊಡ್ಡ ಮಟ್ಟಕ್ಕೆ ಹೆಚ್ಚುವ ಸಾಧ್ಯತೆ ದಟ್ಟವಾಗಿರುತ್ತದೆ.

ನೀವು ಭೂಮಿ ಖರೀದಿಸಿ ಅದರಲ್ಲಿ ಕಟ್ಟಡಗಳನ್ನು ಕಟ್ಟಿ ಅದರ ಮೂಲಕ ನಿಯಮಿತವಾಗಿ ಆದಾಯ ಗಳಿಸಬಹುದು. ಒಂದೆಡೆ ಭೂಮಿ ಬೆಲೆ ತನ್ನಪಾಡಿಗೆ ತಾನು ವೇಗವಾಗಿ ಹೆಚ್ಚುತ್ತಿರುತ್ತದೆ. ನಿಯಮಿತವಾಗಿ ಬಾಡಿಗೆ ವರಮಾನವೂ ಬರುತ್ತದೆ. ನಿಮಗೆ ಸ್ವಂತ ಸೂರೂ ಇದ್ದಂತಾಗುತ್ತದೆ.

ಇದನ್ನೂ ಓದಿWhat If: ಒಂದು ಕಂಪನಿ ದಿಢೀರನೇ ಮುಚ್ಚಿದಾಗ ಅದರ ಷೇರುದಾರರ ಗತಿ ಏನು? ಹೂಡಿಕೆ ಮಾಡಿದ ಹಣ ಮರಳುತ್ತದಾ?

ಇನ್ನು ಬಾಧಕದ ಬಗ್ಗೆ ಹೇಳುವುದಾದರೆ ಭೂಮಿ ಮೇಲಿನ ಹೂಡಿಕೆಯಿಂದ ಸಿಗುವ ರಿಟರ್ನ್ ಎಷ್ಟೆಂಬುದು ನಿಶ್ಚಿತವಾಗಿ ಹೇಳಲಾಗದು. ಒಂದೊಂದು ಪ್ರದೇಶದ ರಿಯಲ್ ಎಸ್ಟೇಟ್ ದರ ವ್ಯತ್ಯಾಸ ಇರುತ್ತದೆ. ಕೆಲ ಏರಿಯಾಗಳಲ್ಲಿ ಸೈಟ್ ಬೆಲೆ ವಿಪರೀತ ಬೆಳೆಯಬಹುದು. ಕೆಲವೆಡೆ ಹೆಚ್ಚು ಬೆಳೆಯದೇ ಇರಬಹುದು.

ಹಾಗೆಯೇ, ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಬೇಕೆಂದರೆ ಸಾಕಷ್ಟು ಬಂಡವಾಳದ ಅಗತ್ಯ ಇರುತ್ತದೆ. ಇವತ್ತು ಬೆಂಗಳೂರಿನ ಹೊರವಲಯದಲ್ಲಿ 30X40 ಅಳತೆಯ ನಿವೇಶನ ಪಡೆಯಬೇಕಾದರೆ ಕನಿಷ್ಠ 10 ಲಕ್ಷವಾದರೂ ಬೇಕು. ಬಾಡಿಗೆ ಬರುವಂತೆ ಕಟ್ಟಡ ಕಟ್ಟಲು ಕನಿಷ್ಠ 50 ಲಕ್ಷವಾದರೂ ಬೇಕಾಗುತ್ತದೆ. ನಿಮಗೆ ತಿಂಗಳಿಗೆ 50,000 ರೂ ಆದಾಯ ಬರಲು 1 ಕೋಟಿ ರೂಗಿಂತಲೂ ಹೆಚ್ಚು ಹಣದ ಹೂಡಿಕೆ ಮಾಡಬೇಕಾಗಬಹುದು. ನೀವು ಇಷ್ಟು ಹಣವನ್ನು ಎಫ್​ಡಿ ಇಟ್ಟರೆ ತಿಂಗಳಿಗೆ ಬರುವ ಬಡ್ಡಿ 50,000 ರೂ ಅಸುಪಾಸು ಇರುತ್ತದೆ. ಆದರೆ, ದೀರ್ಘಕಾಲದಲ್ಲಿ ಭೂಮಿಯ ಬೆಲೆ ವರ್ಷಕ್ಕೆ ಕನಿಷ್ಠ ಶೇ. 10ಕ್ಕಿಂತಲೂ ಹೆಚ್ಚು ದರದಲ್ಲಿ ಬೆಳೆಯುತ್ತಾ ಹೋಗುತ್ತದೆ. 50 ಲಕ್ಷ ರೂ ಬೆಲೆಯ ನಿಮ್ಮ ನಿವೇಶನ ಮುಂದಿನ 10 ವರ್ಷದಲ್ಲಿ ಕನಿಷ್ಠ 2 ಕೋಟಿ ರೂ ಆದರೂ ಆಗಬಹುದು.

ಮತ್ತೊಂದು ಸಂಗತಿ ಎಂದರೆ ನೀವು ರಿಯಲ್ ಎಸ್ಟೇಟ್ ಮೇಲೆ ಮಾಡಿರುವ ಹೂಡಿಕೆಯನ್ನು ಹಿಂಪಡೆದು ತತ್​ಕ್ಷಣಕ್ಕೆ ಹಣ ಬೇಕು ಎಂದರೆ ಪಡೆಯಲು ಆಗುವುದಿಲ್ಲ. ನಿವೇಶನ ಮಾರುವ ಪ್ರಕ್ರಿಯೆಗೆ ಬಹಳ ಕಾಲ ಹಿಡಿಯುತ್ತದೆ. ಹಾಗೆಯೇ ಸಾಲ ಮಾಡಿ ನಿವೇಶನ ಪಡೆಯುತ್ತೇನೆಂದು ಹೋದರೆ ಅಂತಿಮವಾಗಿ ನಿಮಗೆ ಸಿಗುವ ಲಾಭ ಅಷ್ಟು ದೊಡ್ಡದಾಗಿರುವುದಿಲ್ಲ.

ಇದನ್ನೂ ಓದಿFD: ಫಿಕ್ಸೆಡ್ ಡೆಪಾಸಿಟ್​ನಿಂದ ಬರೋ ಬಡ್ಡಿಗೆ ಎಷ್ಟು ಟ್ಯಾಕ್ಸ್ ಕಟ್ ಆಗುತ್ತೆ? ಟಿಡಿಎಸ್ ಕಡಿತಗೊಳ್ಳದಿರಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

ಚಿನ್ನದ ಮೇಲಿನ ಹೂಡಿಕೆ; ಸಾಧಕ ಬಾಧಕಗಳೇನು?

ಚಿನ್ನ ಕೂಡ ಯಾವತ್ತೂ ಬೆಲೆಯಲ್ಲಿ ಸವಕಳಿಯಾಗದ ಲೋಹ. ಅದರಲ್ಲೂ ಭಾರತದಲ್ಲಿ ಚಿನ್ನಕ್ಕೆ ಸದಾ ಪ್ರಾಶಸ್ತ್ಯ ಇದ್ದೇ ಇರುತ್ತದೆ. ಶೇ. 10ಕ್ಕಿಂತಲೂ ಹೆಚ್ಚಿನ ದರದಲ್ಲಿ ಇದರ ಮೌಲ್ಯ ವೃದ್ಧಿಸುವುದರಲ್ಲಿ ಅನುಮಾನ ಇಲ್ಲ. ನೀವು ದೀರ್ಘಕಾಲ ದೃಷ್ಟಿಯಲ್ಲಿಟ್ಟುಕೊಂಡು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ರಿಟರ್ನ್ ಪಡೆಯಬಹುದು. ಯಾಕೆಂದರೆ ಕಿರುಅವಧಿಗೆ ಹೂಡಿಕೆ ಮಾಡಿದಾಗ ಚಿನ್ನದ ಬೆಲೆ ತಾತ್ಕಾಲಿಕವಾಗಿ ಇಳಿಯಬಹುದು. ಆಗ ನಿಮಗೆ ನಷ್ಟ ಆಗುತ್ತದೆ. ದೀರ್ಘ ಕಾಲದಲ್ಲಿ ಚಿನ್ನದ ಬೆಲೆ ಬಹಳ ವೇಗದಲ್ಲಿ ಏರುತ್ತದೆ.

ನಿಮಗೆ ಬೇಕೆಂದಾಗ ಹೂಡಿಕೆ ಹಿಂಪಡೆಯಬಹುದು. ಒಡವೆ ಮಾಡಿಸಿಕೊಂಡು ಇಟ್ಟುಕೊಳ್ಳಬಹುದು. ನಿಮ್ಮ ಚಿನ್ನದ ಹೂಡಿಕೆಯಲ್ಲಿ ಸ್ವಲ್ಪ ಭಾಗ ಆಭರಣಕ್ಕೆ, ಇನ್ನುಳಿದ ಭಾಗವನ್ನು ಅಪರಂಜಿ ಚಿನ್ನದ ಖರೀದಿಗೆ ಮೀಸಲಿರಿಸಬೇಕು. ಆಗ ನೀವು ಗೋಲ್ಡ್ ಕಾಯಿನ್, ಗೋಲ್ಡ್ ಗಟ್ಟಿ ಇತ್ಯಾದಿಯನ್ನು ಯಾವಾಗ ಬೇಕಾದರೂ ಮಾರಿ ಅದರಿಂದ ಹಣ ಹಿಂಪಡೆಯುವುದು ಸುಲಭವಾಗುತ್ತದೆ.

ಇದನ್ನೂ ಓದಿStock Market Advice: ಈಗ ಷೇರುಪೇಟೆ ಚಿಂತೆ ಬೇಡ; ನಿಯಮಿತ ಹೂಡಿಕೆಯತ್ತ ಗಮನ ಕೊಡಿ: ದೇವೇನ್ ಚೋಕ್ಸಿ ಸಲಹೆಗಳಿವು

ಉಳಿತಾಯ ಹಣದಿಂದ ಖರೀದಿಸಿ….

ನೀವು ರಿಯಲ್ ಎಸ್ಟೇಟ್ ಮೇಲಾಗಲೀ ಅಥವಾ ಚಿನ್ನದ ಮೇಲಾಗಲೀ ಹೂಡಿಕೆ ಮಾಡಬೇಕೆಂದರೆ ಸಾಲದ ಮಾರ್ಗ ಮಾತ್ರ ಹಿಡಿಯದಿರಿ. ಸಣ್ಣ ವಯಸ್ಸಿನಿಂದಲೇ ವಿವಿಧ ಸೇವಿಂಗ್ ಸ್ಕೀಮ್ ಮೂಲಕ ಹಣ ಉಳಿಸುತ್ತಾ ಹೋಗಿ ಅದರಿಂದ ಸಾಕಷ್ಟು ಹಣದಿಂದ ನಿವೇಶನ ಅಥವಾ ಮನೆ ಖರೀದಿಸಿ. ಚಿನ್ನದ ಮೇಲೆ ಹೂಡಿಕೆಗೆ ಸಾವರೀನ್ ಗೋಲ್ಡ್ ಬಾಂಡ್​ನಂಥ ಸ್ಕೀಮ್​ಗಳಿವೆ. ಮ್ಯೂಚುವಲ್ ಫಂಡ್ ಎಸ್​ಐಪಿಗಳ ಮೂಲಕ ನಿಯಮಿತವಾಗಿ ಹಣ ಹೂಡಿಕೆ ಮಾಡುತ್ತಾ ಹೋಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ