
ಬೆಂಗಳೂರು, ಮಾರ್ಚ್ 7: ಕನ್ನಡ ನಟಿ ರನ್ಯಾ ರಾವ್ (Ranya Rao) ದುಬೈನಿಂದ ಚಿನ್ನ ಕಳ್ಳಸಾಗಾಣಿಕೆ (gold smuggling) ಮಾಡುವ ವೇಳೆ ಸಿಕ್ಕಿಬಿದ್ದ ಪ್ರಸಂಗ ಕಳೆದ ಕೆಲ ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ಸಾಕಷ್ಟು ಕುತೂಹಲ ಮತ್ತು ಆಸಕ್ತಿ ಹುಟ್ಟುಹಾಕಿದೆ. ಈ ನಟಿಗೆ ದುಬೈನಲ್ಲಿ ಯಾರು ಚಿನ್ನ ಸರಬರಾಜು ಮಾಡುತ್ತಿದ್ದರು, ಇಲ್ಲಿ ಯಾರಿಗೆ ಆ ಚಿನ್ನವನ್ನು ಈಕೆ ಕೊಡುತ್ತಿದ್ದಳು ಎಂಬಿತ್ಯಾದಿ ಪ್ರಶ್ನೆಗಳಿಗೆ ತನಿಖೆ ಮತ್ತು ವಿಚಾರಣೆಯಿಂದ ತಿಳಿಯಬಹುದು. ಈಕೆ ಪೊಲೀಸ್ ಅಧಿಕಾರಿಯ ಮಗಳಾದ್ದರಿಂದ ಆ ಪ್ರಭಾವ ಬಳಸಿ ಕಳ್ಳಸಾಗಾಣಿಕೆ ಮಾಡಲು ಸಾಧ್ಯವಾಯಿತು. ಆದರೆ, ಸಾಮಾನ್ಯ ವ್ಯಕ್ತಿ ಯಾವುದೇ ಕಳ್ಳತನ ಇಲ್ಲದೇ ದುಬೈನಿಂದ ಚಿನ್ನವನ್ನು ತಂದರೆ ಎಷ್ಟು ಲಾಭ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಈ ಲೇಖನ.
ದುಬೈ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಸುಮಾರು ಶೇ. 5ರಿಂದ 7ರಷ್ಟು ವ್ಯತ್ಯಾಸ ಬರುತ್ತದೆ. ಇವತ್ತಿನ ಚಿನ್ನದ ಬೆಲೆ ಪರಿಗಣಿಸುವುದಾದರೆ, 22 ಕ್ಯಾರಟ್ನ ಒಂದು ಗ್ರಾಮ್ ಆಭರಣ ಚಿನ್ನದ ಬೆಲೆ ಭಾರತದಲ್ಲಿ ಇವತ್ತು 7,990 ರೂ ಇದೆ. ಆದರೆ, ದುಬೈನಲ್ಲಿ 327.75 ಅರಬ್ ದಿನಾರ್ ದರ ಇದೆ. ರುಪಾಯಿಗೆ ಪರಿವರ್ತಿಸಿದರೆ ಅದು ಸುಮಾರು 7,759 ರೂ ಆಗುತ್ತದೆ. ಗ್ರಾಮ್ಗೆ ಸುಮಾರು 230 ರೂನಷ್ಟು ವ್ಯತ್ಯಾಸ ಬರುತ್ತದೆ.
ಆದರೆ, ಭಾರತದಲ್ಲಿ ನೀವು ಚಿನ್ನ ಖರೀದಿಸಿದರೆ ಶೇ. 3ರಷ್ಟು ಜಿಎಸ್ಟಿ ಕಟ್ಟಬೇಕು. 7,990 ರೂಗೆ ಶೇ. 3 ಎಂದರೆ 240 ರೂ ಜಿಎಸ್ಟಿ ಆಗುತ್ತದೆ. ಅಂದರೆ, ಸುಮಾರು ಶೇ. 6ರಷ್ಟು ವ್ಯತ್ಯಾಸ ಬರುತ್ತದೆ. ರನ್ಯಾ ರಾವ್ರಂತೆ ಒಬ್ಬ ವ್ಯಕ್ತಿ ಇವತ್ತು 10 ಕಿಲೋ ಚಿನ್ನವನ್ನು ದುಬೈನಿಂದ ಭಾರತಕ್ಕೆ ಕಳ್ಳತನದಲ್ಲಿ ಸಾಗಿಸುತ್ತಾರೆ ಎಂದಿಟ್ಟುಕೊಂಡರೆ ಆ ವ್ಯಕ್ತಿಗೆ ಆಗುವ ಲಾಭ 40-50 ಲಕ್ಷ ರೂ. ಆದರೆ, ಕಳ್ಳಸಾಗಾಣಿಕೆ ವೇಳೆ ಸಿಕ್ಕಿಬಿದ್ದರೆ ಏಳೆಂಟು ಕೋಟಿ ರೂ ಮಾಲು ಕೈತಪ್ಪುವ ರಿಸ್ಕ್ ಇರುತ್ತದೆ.
ಇದನ್ನೂ ಓದಿ: ಚಿನ್ನ ಒತ್ತೆ ಇಟ್ಟು ಸಾಲ ಪಡೆಯುವುದು ಕಷ್ಟವಾಗುತ್ತಾ? ನಿಯಮ ಬಿಗಿಗೊಳಿಸಲು ಬ್ಯಾಂಕುಗಳಿಗೆ ಆರ್ಬಿಐ ಸೂಚಿಸುವ ಸಾಧ್ಯತೆ
ನೀವು ವಿದೇಶಗಳಿಂದ ಎಷ್ಟು ಬೇಕಾದರೂ ಚಿನ್ನ ತರಬಹುದು. ಆದರೆ, ಆಮದು ಸುಂಕ ತೆರಬೇಕು. ನೀವು ಪದೇ ಪದೇ ಹೋಗಿ ತಂದರೆ ಆಮದು ಸುಂಕ ತೀರಾ ಹೆಚ್ಚಿರುತ್ತದೆ. ಆಮದು ಸುಂಕ ಇಲ್ಲದೇ ತರಬೇಕೆಂದರೆ ನಿರ್ಬಂಧಗಳಿವೆ. ಒಬ್ಬ ಪುರುಷ ಗರಿಷ್ಠ 20 ಗ್ರಾಮ್ ಚಿನ್ನ ತರಬಹುದು. ಆದರೆ, ಇದರ ಮೌಲ್ಯ 50,000 ರೂ ಮೀರಬಾರದು.
ಮಹಿಳೆಯಾದರೆ ಒಂದು ಲಕ್ಷ ರೂ ಮಿತಿಯೊಳಗೆ 40 ಗ್ರಾಮ್ವರೆಗೂ ಚಿನ್ನಾಭರಣವನ್ನು ದುಬೈನಿಂದ ಭಾರತಕ್ಕೆ ತರಲು ಸಾಧ್ಯ. ಗಂಡ ಹೆಂಡತಿ ಜೋಡಿ ದುಬೈಗೆ ಹೋಗಿ ಒಂದೂವರೆ ಲಕ್ಷ ರೂವರೆಗೆ ಚಿನ್ನವನ್ನು ಖರೀದಿಸಿ ಭಾರತಕ್ಕೆ ತಂದರೆ ಏಳೆಂಟು ಸಾವಿರ ರೂ ಮಾತ್ರವೆ ಉಳಿಸಲು ಸಾಧ್ಯ.
ಶುದ್ಧ ಚಿನ್ನ ಹಾಗೂ ಆಭರಣ ಚಿನ್ನಗಳ ಮೇಲೆ ಆಮದು ಸುಂಕದಲ್ಲಿ ವ್ಯತ್ಯಾಸ ಇರುತ್ತದೆ. ಶುದ್ಧ ಚಿನ್ನವಾದ ಗೋಲ್ಡ್ ಬಾರ್, ಕಾಯಿನ್ಗಳಾದರೆ 10 ಗ್ರಾಮ್ಗೆ 300 ರೂ ಆಮದು ಸುಂಕ ಹಾಕಲಾಗುತ್ತದೆ. ಶೇ. 3ರಷ್ಟು ಎಜುಕೇಶನ್ ಸೆಸ್ ಕೂಡ ಅನ್ವಯ ಆಗುತ್ತದೆ.
ಆಭರಣವಾದರೆ 10 ಗ್ರಾಮ್ಗೆ 750 ರೂ ಕಸ್ಟಂ ಡ್ಯೂಟಿ ಅನ್ವಯ ಆಗುತ್ತದೆ. ಜೊತೆಗೆ ಶೇ. 3ರಷ್ಟು ಎಜುಕೇಶನ್ ಸೆಸ್ ವಿಧಿಸಲಾಗುತ್ತದೆ.
ಇದನ್ನೂ ಓದಿ: ಹೂಡಿಕೆದಾರರಿಗೆ ‘ಚಿನ್ನ’ದ ಮೊಟ್ಟೆಯ ಗುಟ್ಟು ಬಿಚ್ಚಿಟ್ಟ ಮುಖ್ಯ ಆರ್ಥಿಕ ಸಲಹೆಗಾರ ಅನಂತನಾಗೇಶ್ವರನ್
ನೀವು ಇವತ್ತು ದುಬೈನಲ್ಲಿ ಮಿತಿಗಿಂತ ಹೆಚ್ಚುವರಿಯಾಗಿ 10 ಗ್ರಾಮ್ ಆಭರಣವನ್ನು ಖರೀದಿಸಿದರೆ 77,590 ರೂ ಆಗುತ್ತದೆ. ಅದಕ್ಕೆ ಶೇ. 3ರಷ್ಟು ಎಜುಕೇಶನ್ ಸೆಸ್ ಎಂದರೆ 2,327 ರೂ ಆಗುತ್ತದೆ. 750 ರೂ ಆಮದು ಸುಂಕ ಸೇರಿಸಿದರೆ 3,078 ರೂ ಆಗುತ್ತದೆ. ಇದರಿಂದ ಭಾರತ ಮತ್ತು ದುಬೈ ಮಧ್ಯೆ ಚಿನ್ನದ ಬೆಲೆಯಲ್ಲಿ ಹೆಚ್ಚೇನೂ ವ್ಯತ್ಯಾಸ ಬರದು.
ನೀವು ದುಬೈನಿಂದ ಚಿನ್ನ ತಂದು ಮತ್ತೆ ಆರು ತಿಂಗಳೊಳಗೆ ಹೋಗಿ ಚಿನ್ನ ತಂದರೆ ಆಗ ಬರೋಬ್ಬರಿ ಶೇ. 36.05ರಷ್ಟು ಆಮದು ಸುಂಕ ಹಾಕಲಾಗುತ್ತದೆ. ಹೀಗಾಗಿ, ನೀವು ದುಬೈಗೆ ಹೋಗುತ್ತಿರುವಿರಾದರೆ ಮಿತಿಯೊಳಗೆ ಚಿನ್ನ ಖರೀದಿಸಿ ತಂದರೆ ಮಾತ್ರವೇ ಲಾಭ. ಚಿನ್ನ ತರಲೆಂದೇ ದುಬೈಗೆ ಹೋಗುತ್ತೀರೆಂದರೆ ಅದು ನಷ್ಟದ ಸಂಗತಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ