
ನವದೆಹಲಿ, ಅಕ್ಟೋಬರ್ 22: ತೈಲ ಸಮೃದ್ಧವಾಗಿರುವ ಕೊಲ್ಲಿ ದೇಶಗಳಲ್ಲಿ ಪೆಟ್ರೋಲ್, ಡೀಸಲ್ಗಳು ಅಗ್ಗ ಇರುತ್ತವೆ ಎನ್ನುವಂತಹ ಕಲ್ಪನೆಗಳಿಗೆ ತದ್ವಿರುದ್ಧವೆಂಬಂತೆ, ಅಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಬಹಳ ಅಧಿಕ ಮಟ್ಟದಲ್ಲಿದೆ. ಯುಎಇ ದೇಶದ ಸರ್ಕಾರ ದುಬೈನಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಹೆಚ್ಚಿಸಿದೆ. ಅಕ್ಟೋಬರ್ 1ರಿಂದಲೇ ಇದು ಜಾರಿಗೆ ಬಂದಿದ್ದು, ಒಂದು ಲೀಟರ್ಗೆ 4.28 ಡಿರ್ಹಾಮ್ ಬೆಲೆ ಇದೆ. ಭಾರತದ ಕರೆನ್ಸಿಯಲ್ಲಿ ಇದು 110 ರೂ ಆಗುತ್ತದೆ.
ಇದಕ್ಕೆ ಹೋಲಿಸಿದರೆ ಭಾರತದಲ್ಲಿ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 110 ರೂಗಿಂತಲೂ ಕಡಿಮೆ ಇದೆ. ಇನ್ನು, ಡೀಸಲ್ ಬೆಲೆ ದುಬೈಗೆ ಹೋಲಿಸಿದರೆ ಭಾರತದಲ್ಲಿ ಒಂದು ಲೀಟರ್ಗೆ 28 ರೂ ಕಡಿಮೆ ಇದೆ. ದುಬೈನಲ್ಲಿ ಡೀಸಲ್ ಬೆಲೆ ಒಂದು ಲೀಟರ್ಗೆ 4.30 ಎಇಡಿಯಿಂದ 4.80 ಎಇಡಿವರೆಗೆ ಬೆಲೆ ಇದೆ.
ಇದನ್ನೂ ಓದಿ: ಈ ವರ್ಷ ಮಧ್ಯಪ್ರಾಚ್ಯ, ಪಾಕಿಸ್ತಾನ, ಉತ್ತರ ಆಫ್ರಿಕನ್ ದೇಶಗಳಲ್ಲಿ ಆರ್ಥಿಕ ಕುಸಿತ: ಐಎಂಎಫ್ ವರದಿ
ಭಾರತದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಮಾರುಕಟ್ಟೆ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಪೆಟ್ರೋಲಿಯಂ ಉತ್ಪನ್ನಗಳ ದರಗಳನ್ನು ಪರಿಷ್ಕರಿಸುತ್ತವೆ. ಕೆಲವೊಮ್ಮೆ ಸರ್ಕಾರದ ಸಲಹೆಗಳು ಮತ್ತು ನಿರ್ದೇಶನಗಳು ಪ್ರಭಾವ ಹೊಂದಿರುತ್ತವೆ.
ಇನ್ನೊಂದೆಡೆ, ಯುಎಇಯಲ್ಲಿ 2015ರವರೆಗೂ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಪೆಟ್ರೋಲ್, ಡೀಸಲ್ ವಿತರಣೆ ಆಗುತ್ತಿತ್ತು. ಆ ಬಳಿಕ ಪೆಟ್ರೋಲ್, ಡೀಸಲ್ ಬೆಲೆಗಳನ್ನು ತಿಂಗಳಿಗೊಮ್ಮೆ ಪರಿಷ್ಕರಿಸಲು ಒಂದು ನಿಗದಿತ ಸಮಿತಿ ಇರುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆ ದರಗಳನ್ನು ಆಧರಿಸಿ, ದರ ಪರಿಷ್ಕರಣೆ ಮಾಡಲಾಗುತ್ತದೆ. ಹೀಗಾಗಿ, ದುಬೈನಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಅಧಿಕ ಮಟ್ಟದಲ್ಲೇ ಇದೆ.
ಇದನ್ನೂ ಓದಿ: ಕರೆನ್ಸಿ ಹರಿವನ್ನು ಮುಕ್ತವಾಗಿ ಬಿಡಿ: ಭಾರತಕ್ಕೆ ಐಎಂಎಫ್ ಸಲಹೆ; ರುಪಾಯಿ ಕುಸಿತ ತಡೆದರೆ ಆರ್ಥಿಕತೆಗೆ ಅಪಾಯ ಸಾಧ್ಯತೆ
ಅಮೆರಿಕ ಕೂಡ ತೈಲ ಉತ್ಪಾದಿಸುವ ದೇಶವಾಗಿದೆ. ಆದರೆ, ಅಲ್ಲಿ ಒಂದು ಲೀಟರ್ ಗ್ಯಾಸೊಲಿನ್ (ಪೆಟ್ರೋಲ್) ಬೆಲೆ 1.22 ಡಾಲರ್ ಇದೆ. ಅಂದರೆ, 115 ರೂ ಬೆಲೆ ಇದೆ.
ಇನ್ನು, ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 380 ರುಪಾಯಿ (ಪಿಕೆಆರ್) ಇದೆ. ಭಾರತೀಯ ಕರೆನ್ಸಿಯಲ್ಲಿ ಇದು 130 ರೂ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ