PM Kisan: ತಡವಾದರೂ ಈ ತಿಂಗಳು ಬಿಡುಗಡೆಯಾಗುತ್ತಿದೆ ಪಿಎಂ ಕಿಸಾನ್ 13ನೇ ಕಂತಿನ ಹಣ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಪರಿಶೀಲಿಸುವ ಮಾರ್ಗ ಇಲ್ಲಿದೆ
PM Kisan 13th Installment; ತಿಂಗಳ ಹಿಂದೆಯೇ ಬಿಡುಗಡೆ ಆಗಬೇಕಿದ್ದ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಫೆಬ್ರುವರಿ ಕೊನೆಯ ವಾರದಲ್ಲಿ ಬಿಡುಗಡೆ ಆಗಲಿದೆ. ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನು ಪರಿಶೀಲಿಸುವುದು ಹೇಗೆ ಎಂಬಿತ್ಯಾದಿ ವಿವರ ಇಲ್ಲಿದೆ.
ನವದೆಹಲಿ: ಸಣ್ಣ ರೈತರ ಆರ್ಥಿಕ ಕೃಷಿಗಾರಿಕೆಗೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಡೆಸುತ್ತಿರುವ ಪಿಎಂ ಕಿಸಾನ್ ಯೋಜನೆಯ (PM-KISAN) 13ನೇ ಕಂತಿನ ಹಣ ತುಸು ವಿಳಂಬವಾಗಿ ಬಿಡುಗಡೆ ಆಗುತ್ತಿದೆ. ಕಳೆದ ತಿಂಗಳೇ ಕಂತು ಬಿಡುಗಡೆ ಆಗಬೇಕಿತ್ತು. ವಿವಿಧ ಕಾರಣಗಳಿಂದ ತಡವಾಗಿ ಹಣವು ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಫೆಬ್ರುವರಿ 24ರಂದು ಹೊಸ ಕಂತಿನ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ.
2019ರಲ್ಲಿ ಆರಂಭಗೊಂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಈವರೆಗೆ 2 ಸಾವಿರ ರೂಗಳ 12 ಕಂತು ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. 2022ರ ಅಕ್ಟೋಬರ್ 17ರಂದು 12ನೇ ಕಂತಿನ 2 ಸಾವಿರ ರೂ ಹಣವನ್ನು 8 ಕೋಟಿ ರೈತರ ಬ್ಯಾಂಕ್ ಖಾತೆಗೆ ಹಾಕಲಾಗಿತ್ತು. ಅಷ್ಟೂ ಸೇರಿ ಒಟ್ಟು ಮೊತ್ತವಾದ 16 ಸಾವಿರ ಕೋಟಿ ರೂ ಅನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಕೆವೈಸಿ ಭರ್ತಿ ಮಾಡಲು ಕೋರಲಾಗಿದ್ದು, ಅದಕ್ಕೆ ಕೊನೆಯ ದಿನಾಂಕ ಫೆ. 10ರಂದು ಇತ್ತು. ಕೆವೈಸಿ ಯಶಸ್ವಿಯಾಗಿದ್ದವರಿಗೆ ಈ 13ನೇ ಕಂತಿನ ಹಣ ಸಿಗುತ್ತದೆ.
ಪಿಎಂ ಕಿಸಾನ್ 13ನೇ ಕಂತಿನ ಹಣ ಜಮೆ ಆಗಿದೆಯೇ, ಚೆಕ್ ಮಾಡುವುದು ಹೇಗೆ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಹಣ ಬಿಡುಗಡೆ ಆಗಿದೆಯೇ? ಅದು ಖಾತೆಗೆ ವರ್ಗಾವಣೆಯಾಗಿದೆಯೇ ಎಂದು ಆನ್ಲೈನ್ ಮೂಲಕ ಪರಿಶೀಲಿಸುವ ಹಂತ ಹಂತದ ವಿವರ ಇಲ್ಲಿ ನೀಡಲಾಗಿದೆ.
- ಪಿಎಂ ಕಿಸಾನ್ (www.kisan.gov.in) ಭೇಟಿ ನೀಡಿ.
- ವೆಬ್ ಪುಟದ ಬಲಭಾಗದ ಅಂಚಿನಲ್ಲಿರುವ ‘ಫಾರ್ಮರ್ಸ್ ಕಾರ್ನರ್’ಗೆ ಸ್ಕ್ರಾಲ್ ಮಾಡಿ.
- ‘ಬೆನಿಫೀಷಿಯರಿ ಸ್ಟೇಟಸ್’ ಎಂಬ ಸೆಕ್ಷನ್ ಅನ್ನು ಕ್ಲಿಕ್ ಮಾಡಿ.
- ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕಾಣಿಸುವ ಅರ್ಜಿಯಲ್ಲಿ ಫಲಾನುಭವಿಯ ಹೆಸರು ಭರ್ತಿ ಮಾಡಬೇಕು.
- ಹೊಸ ಪುಟದಲ್ಲಿ ಯಾವುದನ್ನು ಹುಡುಕಲು ಬಯಸುತ್ತೀರಿ ಎಂಬ ಎರಡು ಆಯ್ಕೆಗಳಿರುತ್ತವೆ.
- ದೂರವಾಣಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
- ಮೊಬೈಲ್ ಫೋನ್ ಸಂಖ್ಯೆಯನ್ನೂ ಆಯ್ಕೆ ಮಾಡಬಹುದು.
- ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸಿದಾಗ ಒಟಿಪಿ ಸಂದೇಶ ಬರುತ್ತದೆ. ಅದನ್ನು ನಮೂದಿಸಬೇಕು.
- ‘ಗೆಟ್ ಡಾಟಾ’ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಪಾವತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಕಾಣಿಸುತ್ತದೆ.
- ನಂತರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬ ಸಂದೇಶ ಕಾಣಿಸುತ್ತದೆ.
- ನೋಂದಣಿ ಸಂಖ್ಯೆಯ ಆಧಾರದಲ್ಲಿ ಸ್ಥಿತಿಗತಿ ಪರಿಶೀಲಿಸಲು ಬಯಸುತ್ತೀರಾದರೆ, ಅದನ್ನು ನಮೂದಿಸಿ. ನಂತರ ‘ಗೆಟ್ ಡಾಟಾ’ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮಗೆ ಸ್ಥಿತಿಗತಿ ಏನಿದೆ ಎಂಬುದು ಕಾಣಿಸುತ್ತದೆ.
- 13ನೇ ಕಂತಿನ ಹಣ ಬಿಡುಗಡೆ ಆಗಿದೆಯೋ ಇಲ್ಲವೋ ಎಂಬುದು ಸ್ಕ್ರೀನ್ ಮೇಲೆ ಕಾಣಿಸುತ್ತದೆ.
ಇದನ್ನೂ ಓದಿ: Bank Holidays: ಮಾರ್ಚ್ ತಿಂಗಳು ಬ್ಯಾಂಕುಗಳಿಗೆ 12 ದಿನ ರಜೆ; ಯಾವ್ಯಾವ ದಿನ, ಇಲ್ಲಿದೆ ಪಟ್ಟಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎಂದರೇನು?
ಪಿಎಂ ಕಿಸಾನ್ ಸಮ್ಮಾನ್ ನಿಧಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ 6,000 ರೂ. ನೀಡಲಾಗುತ್ತದೆ. 2,000 ರೂ.ಗಳ ಮೂರು ಕಂತಿನಲ್ಲಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಅರ್ಹ ರೈತರ ಕುಟುಂಬದವರು, ಅಂದರೆ ರೈತನ ಪತ್ನಿ, ಸಣ್ಣ ಮಕ್ಕಳೂ ಕಂತಿನ ಹಣ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ರೈತರು ಯಾರು ಎಂಬುದನ್ನು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಗುರುತಿಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ