ಪಿಎಂ ಸೂರ್ಯಘರ್ ಯೋಜನೆಗೆ 75,000 ಕೋಟಿ ರೂ ಅನುದಾನ; ಕೇಂದ್ರ ಸಂಪುಟ ಒಪ್ಪಿಗೆ; ಒಂದು ಕೋಟಿ ಮನೆಗಳಿಗೆ ಸೋಲಾರ್ ಗುರಿ
PM Surya Ghar Rooftop Solar Scheme: ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ವಿಷಯವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ 75,000 ಕೋಟಿ ರೂ ಅನುದಾನ ಬಿಡುಗಡೆ ಮಾಡುತ್ತದೆ.
ನವದೆಹಲಿ, ಫೆಬ್ರುವರಿ 29: ಮನೆಯ ಮೇಲ್ಛಾವಣಿ ಮೇಲೆ ಸೌರ ವ್ಯವಸ್ಥೆ ಅಳವಡಿಸುವ ಪಿಎಂ ಸೂರ್ಯಘರ್ ಯೋಜನೆಗೆ (PM Surya Ghar Rooftop solar scheme) ಸರ್ಕಾರದಿಂದ 75,000 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದೆ. ಇದರೊಂದಿಗೆ, ಯೋಜನೆ ಅತಿಶೀಘ್ರದಲ್ಲೇ ಚಾಲನೆಗೆ ಬರುವುದು ಸನ್ನಿಹಿತವಾಗಿದೆ. ಪಿಎಂ ಸೂರ್ಯಘರ್ ಯೋಜನೆಯಲ್ಲಿ ಒಂದು ಮನೆಗೆ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತದೆ. ಒಂದು ಕೋಟಿ ಮನೆಗಳಿಗೆ ಸೋಲಾರ್ ಅಳವಡಿಸಲು ಈ ಯೋಜನೆಯಲ್ಲಿ ಗುರಿ ಹಾಕಲಾಗಿದೆ.
‘ಪಿಎಂ ಮೋದಿ ನೇತೃತ್ವದಲ್ಲಿ ಇವತ್ತು ಸಂಪುಟ ಸಭೆ ನಡೆಯಿತು. ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಸಂಪುಟದ ಅನುಮೋದನೆ ಸಿಕ್ಕಿದೆ. ಈ ಯೋಜನೆ ಅಡಿಯಲ್ಲಿ ಒಂದು ಕೋಟಿ ಕುಟುಂಬಗಳು 300 ಯೂನಿಟ್ಗಳಷ್ಟು ಉಚಿತ ವಿದ್ಯುತ್ ಪಡೆಯಲಿದ್ದಾರೆ,’ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಿಎಂ ಕಿಸಾನ್ ಹಣ ಈ ಬಾರಿ ಬಂದಿಲ್ಲವಾ? ಇಲ್ಲಿ ವಿಚಾರಿಸಿ
ಪ್ರಧಾನಿ ನರೇಂದ್ರ ಮೋದಿ 2024ರ ಫೆಬ್ರುವರಿ 13ರಂದು ಈ ಯೋಜನೆ ಘೋಷಿಸಿದ್ದರು. ಮನೆಯ ಮೇಲ್ಛಾವಣಿ ಮೇಲೆ ಸೋಲಾರ್ ಸಿಸ್ಟಂ ಅಳವಡಿಕೆ ಮಾಡುವ ಮನೆಗೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ಒಂದು ಕಿವ್ಯಾ ಸೋಲಾರ್ ಸಿಸ್ಟಂಗೆ 30,000 ರೂ ಸಬ್ಸಿಡಿ ಸಿಗುತ್ತದೆ. 2 ಕಿ.ವ್ಯಾ. ಸೋಲಾರ್ಗೆ 60,000 ರೂ, ಹಾಗೂ 3 ಕಿ.ವ್ಯಾ. ಮತ್ತದಕ್ಕಿಂತ ಹೆಚ್ಚಿನ ಶಕ್ತಿಯ ಸೋಲಾರ್ಗೆ 78,000 ರೂ ಸಬ್ಸಿಡಿ ಸರ್ಕಾರದಿಂದ ಸಿಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್
Robust 8.4% GDP growth in Q3 2023-24 shows the strength of Indian economy and its potential. Our efforts will continue to bring fast economic growth which shall help 140 crore Indians lead a better life and create a Viksit Bharat!
— Narendra Modi (@narendramodi) February 29, 2024
ಪಿಎಂ ಸೂರ್ಯಘರ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ಪಿಎಂ ಸೂರ್ಯ ಘರ್ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿ: pmsuryaghar.gov.in
- ಅಪ್ಲೈ ಫಾರ್ ರೂಫ್ಟಾಪ್ ಸೋಲಾರ್ ಅನ್ನು ಕ್ಲಿಕ್ ಮಾಡಿ
- ಬಳಿಕ ರಾಜ್ಯದ ಹೆಸರು, ಡಿಸ್ಕಾಂ ಹೆಸರು, ನಿಮ್ಮ ಮನೆಯ ವಿದ್ಯುತ್ ಕನ್ಸೂಮರ್ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ಅನ್ನು ನಮೂದಿಸಿ ನೊಂದಾಯಿಸಿಕೊಳ್ಳಬೇಕು.
- ನೊಂದಾವಣಿ ಆದ ಬಳಿಕ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬೇಕು.
- ಈಗ ರೂಫ್ಟಾಪ್ ಸ್ಕೀಮ್ಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಖಾತೆಯ ವಿವರವನ್ನು ನೀಡಬೇಕಾಗುತ್ತದೆ.
- ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗಿ, ಅನುಮೋದನೆ ಆಗುವವರೆಗೂ ಕಾಯಬೇಕಾಗುತ್ತದೆ. ಅನುಮೋದನೆ ಸಿಕ್ಕ ಬಳಿಕ ನಿಮ್ಮ ಡಿಸ್ಕಾಮ್ಗೆ ನೊಂದಾಯಿತವಾದ ಯಾವುದಾದರೂ ಸೋಲಾರ್ ಕಂಪನಿಯವರು ಬಂದು ಮನೆಗೆ ಸೋಲಾರ್ ಅಳವಡಿಸುತ್ತಾರೆ.
ಇದನ್ನೂ ಓದಿ: ಮೋದಿ 3.0 ಸರ್ಕಾರದ ಅವಧಿಯಲ್ಲಿ ಮುಂದುವರಿದ ದೇಶವನ್ನಾಗಿ ಮಾಡುವಂತಹ ಸುಧಾರಣೆಗಳನ್ನು ನಿರೀಕ್ಷಿಸಿ: ನಿರ್ಮಲಾ ಸೀತಾರಾಮನ್
- ಈ ಸೋಲಾರ್ಗೆ ನಿಮ್ಮ ಕೈಯಿಂದಲೆ ಹಣ ಕೊಡಬೇಕಾಗುತ್ತದೆ. ಸೋಲಾರ್ ಸ್ಥಾಪನೆಯಾದ ಬಳಿಕ ಅದರ ವಿವರವನ್ನು ಪಿಎಂ ಸೂರ್ಯ ಘರ್ ವೆಬ್ಸೈಟ್ಗೆ ಹೋಗಿ ಸಲ್ಲಿಸಬೇಕು, ಬಳಿಕ ನೆಟ್ ಮೀಟರ್ಗೆ ಅರ್ಜಿ ಸಲ್ಲಿಸಬೇಕು.
- ನೆಟ್ ಮೀಟರ್ ಇನ್ಸ್ಟಾಲ್ ಆಗಿ ಡಿಸ್ಕಾಮ್ನಿಂದ ಪರಿಶೀಲನೆ ಆದ ಬಳಿಕ ಕಮಿಷನಿಂಗ್ ಸರ್ಟಿಫಿಕೇಟ್ ಜನರೇಟ್ ಆಗುತ್ತದೆ.
- ಕಮಿಷನಿಂಗ್ ರಿಪೋರ್ಟ್ ಸಿಕ್ಕ ಬಳಿಕ ಬ್ಯಾಂಕ್ ಅಕೌಂಟ್ ವಿವರ ಸಲ್ಲಿಸಬೇಕು. ಕ್ಯಾನ್ಸಲ್ ಚೆಕ್ ಅನ್ನೂ ಒದಗಿಸಬೇಕು.
- ಇದಾಗಿ 30 ದಿನದೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Thu, 29 February 24