PM SVANidhi Scheme: ಸ್ವಂತ ಉದ್ಯೋಗಿಗಳಿಗೆ ನೆರವಾಗುವ ಪಿಎಂ ಸ್ವನಿಧಿ ಸ್ಕೀಮ್ ಬಗ್ಗೆ ಮಾಹಿತಿ
PM SVANidhi Scheme full details: ಬೀದಿಬದಿ ವ್ಯಾಪಾರಿ ಸೇರಿದಂತೆ ಸಣ್ಣ ಬ್ಯುಸಿನೆಸ್ಗಳಿಗೆ ಕಿರುಸಾಲ ಕೊಡುವ ಯೋಜನೆಯೇ ಪಿಎಂ ಸ್ವನಿಧಿ ಸ್ಕೀಮ್. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನಡೆಸಲಾಗುವ ಈ ಯೋಜನೆಯಲ್ಲಿ 10,000 ರೂನಿಂದ 50,000 ರೂವರೆಗೆ ಕಿರುಸಾಲ ನೀಡುತ್ತದೆ. ಮೊದಲಿಗೆ 10,000 ರೂ ಸಿಗುತ್ತದೆ. ಸರಿಯಾಗಿ ಮರುಪಾವತಿಸಿದರೆ ಹೆಚ್ಚಿನ ಸಾಲ ಸಿಗುತ್ತದೆ.

ಉದ್ದಿಮೆದಾರರನ್ನು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ನಡೆಸಲಾಗುತ್ತಿರುವ ಹಲವು ಸ್ಕೀಮ್ಗಳಲ್ಲಿ ಪಿಎಂ ಸ್ವನಿಧಿ ಯೋಜನೆಯೂ (PM SVANidhi Scheme) ಒಂದು. ಇದು ಬೀದಿಬದಿ ವ್ಯಾಪಾರಿಗಳನ್ನು (street vendors) ಗಮನದಲ್ಲಿಟ್ಟುಕೊಂಡು ಸರ್ಕಾರದಿಂದ ಅಡಮಾನರಹಿತವಾಗಿ ನೀಡುವ ಕಿರುಸಾಲ (micro finance) ಯೋಜನೆ. 2020ರಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ಸ್ಕೀಮ್ ಆರಂಭಿಸಿದೆ. ಬಹಳ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಇದು.
2030ರವರೆಗೂ ಪಿಎಂ ಸ್ವನಿಧಿ ಯೋಜನೆ ವಿಸ್ತರಣೆ
2020ರಲ್ಲಿ ಆರಂಭವಾದ ಪಿಎಂ ಸ್ವನಿಧಿ ಯೋಜನೆ ಮೊದಲಿಗೆ 2024ರ ಡಿಸೆಂಬರ್ 31ರವರೆಗೂ ಎಂದು ನಿಗದಿ ಮಾಡಲಾಗಿತ್ತು. ಆದರೆ, ಈ ಯೋಜನೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ಸಾಕಷ್ಟು ಲಾಭವಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆರು ವರ್ಷ ವಿಸ್ತರಣೆ ಮಾಡಲಾಗಿದೆ. 2030ರ ಡಿಸೆಂಬರ್ 31ರವರೆಗೂ ಪಿಎಂ ಸ್ವನಿಧಿ ಸ್ಕೀಮ್ ಇರಲಿದೆ.
ಪಿಎಂ ಸ್ವನಿಧಿ ಯೋಜನೆ: ಎಷ್ಟು ಸಿಗುತ್ತೆ ಸಾಲ?
ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಸ್ಕೀಮ್ ಅಡಿಯಲ್ಲಿ ಮೊದಲ ಬಾರಿಗೆ ಸಾಲ ಪಡೆಯುವಾಗ 10,000 ರೂ ಸಿಗುತ್ತದೆ. ಇದನ್ನು ತೀರಿಸಿದರೆ, ನಂತರ 20,000 ರೂ ಹಾಗೂ 50,000 ರೂವರೆಗೂ ಸಾಲ ಪಡೆಯಬಹುದು. ಈ ಕಿರುಸಾಲಗಳಿಗೆ ಶೇ. 7ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ. ದೇಶಾದ್ಯಂತ ಒಟ್ಟು ಒಂದು ಕೋಟಿಗೂ ಅಧಿಕ ಮಂದಿ ಹಾಗೂ ಅವರ ಬ್ಯುಸಿನೆಸ್ಗಳಿಗೆ ಈ ಸಾಲದಿಂದ ಉಪಯೋಗವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಮಾಸಿದ ನೋಟುಗಳನ್ನು ಎಷ್ಟು ವಿನಿಯಮ ಮಾಡಬಹುದು? ಎಂಥ ನೋಟುಗಳು ಅಮಾನ್ಯ? ಇಲ್ಲಿದೆ ಆರ್ಬಿಐ ಮಾರ್ಗಸೂಚಿ
ಪಿಎಂ ಸ್ವನಿಧಿ ಯೋಜನೆಗೆ ಯಾರು ಅರ್ಹರು?
ಬಿಬಿಎಂಪಿ ಇತ್ಯಾದಿ ಸ್ಥಳೀಯ ನಗರ ಸಂಸ್ಥೆಗಳಿಂದ ಬೀದಿಬದಿ ವ್ಯಾಪಾರಿಗಳು ಪ್ರಮಾಣಪತ್ರ ಹೊಂದಿರಬೇಕು. ನಗರ ಸಂಸ್ಥೆಗಳ ಪಟ್ಟಿಯಲ್ಲಿ ಗುರುತಾಗಿರಬೇಕು.
ನಗರ ಸಂಸ್ಥೆಗಳು ನಡೆಸುವ ಸರ್ವೇಕ್ಷಣೆ ವೇಳೆ ಸೇರದ ಅಥವಾ ಸರ್ವೇಕ್ಷಣೆ ನಂತರ ಬ್ಯುಸಿನೆಸ್ ಆರಂಭಿಸಿದವರು, ಶಿಫಾರಸು ಪತ್ರ ಹೊಂದಿದ್ದರೆ ಸಾಕು.
ಈ ಮೇಲಿನ ಒಂದು ದಾಖಲೆ ಹೊಂದಿದ್ದರೆ ಸಾಕಾಗಬಹುದು. ಇದರ ಜೊತೆಗೆ ಕೆವೈಸಿ ದಾಖಲೆಗಳು ಬೇಕಾಗುತ್ತದೆ. ಇವುಗಳು ಈ ಕೆಳಕಂಡಂತಿವೆ:
- ಆಧಾರ್ ಕಾರ್ಡ್
- ವೋಟರ್ ಐಡಿ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ಮನ್ರೇಗಾ ಕಾರ್ಡ್
- ಪ್ಯಾನ್ ಕಾರ್ಡ್
ನಗರ ಸಂಸ್ಥೆಯಿಂದ ಶಿಫಾರಸು ಪತ್ರಕ್ಕೆ ಬೇಕಾಗುವ ದಾಖಲೆ
- ಬ್ಯಾಂಕ್ ಪಾಸ್ಬುಕ್ ಅಥವಾ ಅಕೌಂಟ್ ಸ್ಟೇಟ್ಮೆಂಟ್
- ಸದಸ್ಯತ್ವದ ಕಾರ್ಡ್ ಅಥವಾ ಸದಸ್ಯತ್ವ ಋಜುವಾತು ಮಾಡುವ ಸಾಕ್ಷ್ಯ
- ವ್ಯಾಪಾರಿ ಎಂಬುದಕ್ಕೆ ಸಾಕ್ಷ್ಯವಾಗಿರುವ ಯಾವುದೇ ದಾಖಲೆ
- ನಗರ ಸಂಸ್ಥೆಗಳಿಗೆ ಸಲ್ಲಿಸಿದ ಮನವಿ ಪತ್ರ
ಇದನ್ನೂ ಓದಿ: ಭಾರತದ ಮುಂದಿನ ಸ್ಟಾರ್ಟಪ್ ಕೇಂದ್ರ ಕರ್ನಾಟಕದ ಈ ಬಂದರುನಗರಿ: ಸುನೀಲ್ ಶೆಟ್ಟಿ, ಮೋಹನದಾಸ್ ಪೈ ಅನಿಸಿಕೆ
ಪಿಎಂ ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ಪಿಎಂ ಸ್ವನಿಧಿ ಯೋಜನೆಯ ವೆಬ್ಸೈಟ್ಗೆ ಹೋಗಿ: pmsvanidhi.mohua.gov.in
- ಮುಖ್ಯಪುಟದಲ್ಲಿ ಲಾಗಿನ್ ಬಟನ್ ಕ್ಲಿಕ್ ಮಾಡಿ, ‘ಅಪ್ಲಿಕೆಂಟ್’ ಆಯ್ಕೆ ಮಾಡಿ.
- ಲಾಗಿನ್ ಪೋರ್ಟಲ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಒಟಿಪಿ ಪಡೆದು ಲಾಗಿನ್ ಆಗಿ.
- ವ್ಯಾಪಾರಿ ಅಥವಾ ವೆಂಡರ್ ಕೆಟಗರಿಯನ್ನು ಆಯ್ಕೆ ಮಾಡಿ. ನಂತರ ಸರ್ವೆ ರೆಫರೆನ್ಸ್ ನಂಬರ್ ಹಾಕಿ.
- ಆ ನಂತರ ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿ ಭರ್ತಿ ಮಾಡಿ.
ಬೀದಿಬದಿ ವ್ಯಾಪಾರಿಗಳಿಗೆ ಹೇಗೆ ಲಾಭ?
ಬೀದಿಬದಿ ವ್ಯಾಪಾರಿಗಳಿಗೆ ಬಂಡವಾಳದ ಅವಶ್ಯಕತೆ ಬಹಳ ಇರುತ್ತದೆ. ಆದರೆ ಇವರಿಗೆ ಸಾಲ ಸಿಗುವುದು ಬಹಳ ಕಷ್ಟ. ಈ ಕಾರಣಕ್ಕೆ ಮೀಟರ್ ಬಡ್ಡಿಯ ಸಾಲಕ್ಕೆ ಇವರು ಸಿಲುಕಿಬಿಡುವುದುಂಟು. ಇಂಥವರಿಗೆ ಸರ್ಕಾರವು ಈ ಸ್ಕೀಮ್ ಮೂಲಕ ಅಡಮಾನರಹಿತ ಸಾಲ ನೀಡುತ್ತದೆ. ಆ ಸಾಲವನ್ನು ಸರಿಯಾಗಿ ಮರುಪಾವತಿಸಿದರೆ ಹೆಚ್ಚಿನ ಮೊತ್ತದ ಸಾಲ ಪಡೆಯುವ ಅವಕಾಶ ಇರುತ್ತದೆ. ಬಡ್ಡಿದರವೂ ಬಹಳ ಕಡಿಮೆ. ಮೀಟರ್ ಸಾಲದಲ್ಲಿ ವಾರ್ಷಿಕ ಬಡ್ಡಿ ಬರೋಬ್ಬರಿ ಶೇ. 100 ಮುಟ್ಟಬಹುದು. ಆದರೆ, ಇಲ್ಲಿ ಕೇವಲ ಶೇ. 7 ಮಾತ್ರವೇ ಬಡ್ಡಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




