ಕೋವಿಡ್ 19 ನಿಂದ ಮೃತಪಟ್ಟಲ್ಲಿ ಸರ್ಕಾರದ 2 ಲಕ್ಷ ರೂ. ಇನ್ಷೂರೆನ್ಸ್ ಕ್ಲೇಮ್ ಮಾಡುವುದು ಹೇಗೆ?

ಸರ್ಕಾರದಿಂದ ತಂದಿರುವ ಈ ಟರ್ಮ್ ಇನ್ಷೂರೆನ್ಸ್ ಪಾಲಿಸಿಯ ಪ್ರೀಮಿಯಂ ಮೊತ್ತ 330 ರೂಪಾಯಿ. ಆದರೆ 2 ಲಕ್ಷ ರೂಪಾಯಿ ಕವರ್ ಆಗುತ್ತದೆ. ಯಾವುದೀ ಇನ್ಷೂರೆನ್ಸ್ ಸ್ಕೀಮ್ ಎಂದು ಕಡ್ಡಾಯವಾಗಿ ತಿಳಿದುಕೊಳ್ಳಿ.

  • TV9 Web Team
  • Published On - 14:42 PM, 4 May 2021
ಕೋವಿಡ್ 19 ನಿಂದ ಮೃತಪಟ್ಟಲ್ಲಿ ಸರ್ಕಾರದ 2 ಲಕ್ಷ ರೂ. ಇನ್ಷೂರೆನ್ಸ್ ಕ್ಲೇಮ್ ಮಾಡುವುದು ಹೇಗೆ?
ಪ್ರಾತಿನಿಧಿಕ ಚಿತ್ರ

ಕೋವಿಡ್ 19 ತರುತ್ತಿರುವ ಸಂಕಷ್ಟಗಳು ಒಂದೆರಡಲ್ಲ. ನೋಡನೋಡುತ್ತಲೇ ನಮ್ಮ ಪರಿಚಯಸ್ಥರು, ಸ್ನೇಹಿತರು, ಸಂಬಂಧಿಗಳು ಇಗೋ ಈಗಿದ್ದರು ಅನ್ನೋಷ್ಟರಲ್ಲಿ ಇನ್ನೊಂದು ದಿನಕ್ಕೆ ಇಲ್ಲ ಎಂಬಂತಾಗುತ್ತಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಜೀವ ಕಳೆದುಕೊಂಡವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ತಕ್ಷಣಕ್ಕೆ ಹುಲ್ಲು ಕಡ್ಡಿ ಆಸರೆಯಂತೆ 2 ಲಕ್ಷ ರೂಪಾಯಿಯ ಇನ್ಷೂರೆನ್ಸ್ ಹಣ ಬರುವಂತೆ ಮಾಡಿಕೊಳ್ಳಬಹುದು. ಈ ಸರ್ಕಾರಿ ಇನ್ಷೂರೆನ್ಸ್ ಯೋಜನೆಗೆ ಬ್ಯಾಂಕ್ ಖಾತೆ ಇರುವ ಎಲ್ಲರೂ ಅರ್ಹತೆ ಪಡೆಯಬಹುದು. ಈ ಯೋಜನೆಯ ಹೆಸರು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ (PMJJBY). ಆರಂಭವಾದದ್ದು ಮೇ 9, 2015ರಲ್ಲಿ. 18ರಿಂದ 50ರ ವಯೋಮಾನದ ಬ್ಯಾಂಕ್​ ಖಾತೆದಾರರಿಗೆ 2 ಲಕ್ಷದ ಟರ್ಮ್ ಇನ್ಷೂರೆನ್ಸ್ ಕವರ್​ ಆಫರ್ ನೀಡುತ್ತದೆ ಈ ಸ್ಕೀಮ್. ಒಂದು ವೇಳೆ 2020-21ರ ಹಣಕಾಸು ವರ್ಷದಲ್ಲಿ ನಿಮ್ಮ ಪರಿಚಯದವರು ಯಾರಾದರೂ ಈ ಇನ್ಷೂರೆನ್ಸ್ ಖರೀದಿಸಿ, ಸಾವನ್ನಪ್ಪಿದ್ದಲ್ಲಿ ಯಾರ ಹೆಸರಲ್ಲಿ ನಾಮಿನಿ ಇದೆಯೋ ಅವರು ಇದಕ್ಕೆ ಕ್ಲೇಮ್ ಮಾಡಬಹುದು.

ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ ಪ್ರಮುಖ ಅಂಶಗಳು ಇಲ್ಲಿವೆ:
ಆರಂಭವಾದ ವರ್ಷ: ಮೇ 9, 2015

ಟರ್ಮ್ ಇನ್ಷೂರೆನ್ಸ್ ಮೊತ್ತ: 2 ಲಕ್ಷ ರೂಪಾಯಿ

ಒಂದು ವರ್ಷದ ಟರ್ಮ್ ಶುರು ಮತ್ತು ಕೊನೆಯ ದಿನಾಂಕ: ಪ್ರತಿ ವರ್ಷದ ಜೂನ್ 1ರಿಂದ ಮೇ 31

ಪ್ರೀಮಿಯಂ ಮೊತ್ತ: ವರ್ಷಕ್ಕೆ 330 ರೂಪಾಯಿ

ಯಾರ ಬಳಿ ಈ ಸ್ಕೀಂ ಖರೀದಿಸಬೇಕು?: ಜೀವ ವಿಮಾ ನಿಗಮ ಸೇರಿದಂತೆ ಇತರ ಇನ್ಷೂರೆನ್ಸ್ ಕಂಪೆನಿಗಳ ಬಳಿ ಈ ಯೋಜನೆ ದೊರೆಯುತ್ತದೆ.

ಯಾವಾಗ ಕ್ಲೇಮ್ ಮಾಡಬಹುದು: ನೋಂದಣಿ ಆದ 45 ದಿನಗಳ ನಂತರ ಕ್ಲೇಮ್ ಮಾಡಲು ಸಾಧ್ಯ

ಕೆಲವರ ಪ್ರಕಾರ ಸಾವು ಸಂಭವಿಸಿದ 30 ದಿನಗಳ ಒಳಗಾಗಿ ಇನ್ಷೂರೆನ್ಸ್ ಕ್ಲೇಮ್ ಮಾಡಬೇಕು.

ಅರ್ಜಿಯನ್ನು ಭರ್ತಿ ಮಾಡಿ, ಡೆತ್ ಸರ್ಟಿಫಿಕೇಟ್, ಕ್ಯಾನ್ಸಲ್ ಚೆಕ್ ಮತ್ತಿತರ ಅಗತ್ಯ ದಾಖಲಾತಿಗಳನ್ನು ಹಾಕಿ, ಕ್ಲೇಮ್ ಮಾಡಬಹುದು. ಬ್ಯಾಂಕ್​ಗಳು ಅದನ್ನು ಸಂಬಂಧಪಟ್ಟ ಇನ್ಷೂರೆನ್ಸ್ ಕಂಪೆನಿಗಳಿ 30 ದಿನಗಳ ಒಳಗಾಗಿ ಫಾರ್ವರ್ಡ್ ಮಾಡುತ್ತವೆ.

ಈಗ ಪಾಲಿಸಿಯನ್ನು ಖರೀದಿ ಮಾಡಬಹುದಾ?
1) ವರ್ಷದ ಯಾವುದೇ ಸಮಯದಲ್ಲಿ ಈ ಪಾಲಿಸಿಯನ್ನು ಖರೀದಿಸಬಹುದು. ಪ್ರೀಮಿಯಂ ಅನ್ನು ಪ್ರೋರೇಟಾ ಆಧಾರದಲ್ಲಿ ಪಾವತಿಸಲಾಗುತ್ತದೆ. ಈ ಫೀಚರ್ ಅನ್ನು 2018-19ರ ಪಾಲಿಸಿ ವರ್ಷದಿಂದ ತರಲಾಗಿದೆ. ಆದರೆ ನೋಂದಣಿಯನ್ನು ಜೂನ್, ಜುಲೈ ಮತ್ತು ಆಗಸ್ಟ್​ನಲ್ಲಿ ವಾರ್ಷಿಕ ಪ್ರೀಮಿಯಂ 330 ರೂಪಾಯಿ ಪಾವತಿಸಿ, ಆಗಬೇಕು.

2) ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್- 3 ತ್ರೈಮಾಸಿಕದ ಪ್ರೀಮಿಯಂ 86 ರೂಪಾಯಿ;  258 ಪಾವತಿಸಬೇಕು

3) ಡಿಸೆಂಬರ್, ಜನವರಿ ಮತ್ತು ಫೆಬ್ರವರಿ – 2 ತ್ರೈಮಾಸಿಕದ ಪ್ರೀಮಿಯಂ 86 ರೂಪಾಯಿ; ರೂ. 172 ಪಾವತಿಸಬೇಕು

4) ಮಾರ್ಚ್, ಏಪ್ರಿಲ್ ಮತ್ತು ಮೇ – 1 ತ್ರೈಮಾಸಿಕದ ಪ್ರೀಮಿಯಂ 86 ರೂಪಾಯಿ ಪಾವತಿಸಬೇಕು.

330 ರೂಪಾಯಿಯ ವಾರ್ಷಿಕ ಪ್ರೀಮಿಯಂ ಅನ್ನು ನವೀಕರಣ ಮಾಡುವ ಸಂದರ್ಭದಲ್ಲಿ ಪಾವತಿಸಬೇಕು. ಮಾರ್ಚ್ 31, 2021ಕ್ಕೆ 10.27 ಕೋಟಿ ಜನರು ಈ ಇನ್ಷೂರೆನ್ಸ್ ಯೋಜನೆಗೆ ನೋಂದಣಿ ಆಗಿದ್ದಾರೆ. ಸರ್ಕಾರದ ಅಂಕಿ- ಅಂಶದ ಪ್ರಕಾರ, 2,50,351 ಕ್ಲೇಮ್​ಗಳನ್ನು FY21ರಲ್ಲಿ ಸ್ವೀಕರಿಸಿದ್ದು, ಅದರಲ್ಲಿ 2,34,905 ಕ್ಲೇಮ್ಸ್ ವಿತರಣೆ ಆಗಿದೆ.

ಇದನ್ನೂ ಓದಿ: LIC Jeevan Saathi: ಗಂಡ- ಹೆಂಡತಿಗೆ ಇನ್ಷೂರೆನ್ಸ್ ಪಾಲಿಸಿ; ದಿನಕ್ಕೆ 120ರಂತೆ ಪಾವತಿಸಿ, 27 ಲಕ್ಷ ಉಳಿಸಿ

(Pradhan Mantri Jeevan Jyothi Bima Yojana (PMJJBY) term insurance scheme provide Rs 2 lakh for covid death. How to get this policy? Here is the details)