ಭಾರತದ ಜತೆಗೆ 10,200 ಕೋಟಿ ರೂಪಾಯಿಗೂ ಹೆಚ್ಚಿನ ವ್ಯಾಪಾರ- ಹೂಡಿಕೆ ಒಪ್ಪಂದ ಘೋಷಿಸಿದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್

ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ 1 ಬಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಅಥವಾ 10,2000 ಕೋಟಿ ರೂಪಾಯಿ ಹೂಡಿಕೆ ಒಪ್ಪಂದವನ್ನು ಭಾರತದ ಜತೆಗೆ ಘೋಷಣೆ ಮಾಡಿದ್ದಾರೆ.

  • TV9 Web Team
  • Published On - 17:28 PM, 4 May 2021
ಭಾರತದ ಜತೆಗೆ 10,200 ಕೋಟಿ ರೂಪಾಯಿಗೂ ಹೆಚ್ಚಿನ ವ್ಯಾಪಾರ- ಹೂಡಿಕೆ ಒಪ್ಪಂದ ಘೋಷಿಸಿದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್
ಬ್ರಿಟನ್​​ ಪ್ರಧಾನಿ ಬೋರಿಸ್​ ಜಾನ್ಸನ್​

ಭಾರತದೊಂದಿಗೆ 100 ಕೋಟಿ ಗ್ರೇಟ್ ಬ್ರಿಟನ್ ಪೌಂಡ್ ಮೌಲ್ಯದ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದವನ್ನು ಬ್ರಿಟಿಷ್ ಸರ್ಕಾರ ಅಂತಿಮಗೊಳಿಸಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 10,200 ಕೋಟಿಗೂ ಹೆಚ್ಚಾಗುತ್ತದೆ. ಬ್ರಿಟನ್​ನಲ್ಲಿ 6500 ಉದ್ಯೋಗ ಸೃಷ್ಟಿ ಆಗುತ್ತದೆ. ಯು.ಕೆ. ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯೆ ವರ್ಚುವಲ್ ಸಮಾವೇಶ ಇದ್ದು, ಅದಕ್ಕೆ ಪೂರಕವಾಗಿ ಈ ಒಪ್ಪಂದ ಆಗಿದೆ. ಸೋಮವಾರ ಸಂಜೆ ಈ ಹೂಡಿಕೆಯನ್ನು ಖಾತ್ರಿಗೊಳಿಸಿದೆ. Enhanced Trade Partnership (ETP) ಒಪ್ಪಂದಕ್ಕೆ ಇಬ್ಬರೂ ನಾಯಕರು ಸಹಿ ಹಾಕಲಿದ್ದಾರೆ. ಯು.ಕೆ.- ಭಾರತದ ಮಧ್ಯೆ ವ್ಯಾಪಾರ ಒಪ್ಪಂದಗಳನ್ನು 2030ರ ಹೊತ್ತಿಗೆ ದುಪ್ಪಟ್ಟು ಮಾಡುವ ಗುರಿಯನ್ನು ETP ಹೊಂದಿದೆ. ಮತ್ತು ಸಮಗ್ರ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಕೆಲಸ ಆರಂಭಿಸುವ ಉದ್ದೇಶ ತಿಳಿಸಿವೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಾತನಾಡಿ, 6500ಕ್ಕೂ ಹೆಚ್ಚು ಉದ್ಯೋಗಗಳನ್ನು ಇಂದು ಘೋಷಣೆ ಮಾಡಿದ್ದೇವೆ. ಇದರಿಂದ ಕುಟುಂಬಗಳು ಮತ್ತು ಸಮಾಜ ಗಟ್ಟಿಯಾಗಿ, ಬ್ರಿಟಿಷ್ ಮತ್ತು ಭಾರತದ ಆರ್ಥಿಕತೆ ಕೊರೊನಾ ವೈರಸ್​ನಿಂದ ಸುಧಾರಿಸಲು ಸಹಾಯ ಆಗುತ್ತದೆ. ಇಂದು ಸಹಿ ಮಾಡಿರುವ ಒಪ್ಪಂದ ಮತ್ತು ಸಮಗ್ರ ಮುಕ್ತ ಒಪ್ಪಂದದಿಂದ ಮುಂದಿನ ದಶಕದಲ್ಲಿ ನಮ್ಮ ವ್ಯಾಪಾರ ಸಹಭಾಗಿತ್ವವನ್ನು ದುಪ್ಪಟ್ಟು ಮಾಡಲಿದ್ದೇವೆ. ನಮ್ಮ ಎರಡೂ ದೇಶಗಳ ಮಧ್ಯೆ ಇರುವ ಸಂಬಂಧವನ್ನು ಹೊಸ ಎತ್ತರಕ್ಕೆ ಒಯ್ಯಲಿದ್ದೇವೆ ಎಂದು ಅವರು ಹೇಳಿದ್ದಾರೆ.

ವ್ಯಾಪಾರ ಮತ್ತು ಹೂಡಿಕೆ ಪ್ಯಾಕೇಜ್ ಎಂದು ಬ್ರಿಟಿಷ್ ಸರ್ಕಾರ ಬಹಿರಂಗ ಮಾಡಿರುವ ಪ್ಯಾಕೇಜ್​ನಲ್ಲಿ 53.3 ಕೋಟಿ ಪೌಂಡ್​ಗೂ ಹೆಚ್ಚು ಮೊತ್ತವನ್ನು ಭಾರತವು ಹೊಸದಾಗಿ ಯು.ಕೆ.ದಲ್ಲಿ ಮಾಡಲಿದೆ. ಅದರಲ್ಲಿ ಹೆಲ್ತ್​ಕೇರ್ ಮತ್ತು ತಂತ್ರಜ್ಞಾನದಂಥ ಕ್ಷೇತ್ರಗಳು ಒಳಗೊಂಡಿವೆ. ಇದರಲ್ಲಿ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಯು.ಕೆ.ನಲ್ಲಿ ಅದರ ಲಸಿಕೆ ಉದ್ಯಮಕ್ಕೆ ಮತ್ತು ದೇಶದಲ್ಲಿ ಹೊಸ ಮಾರಾಟ ಕಚೇರಿಗೆ 24 ಕೋಟಿ ಹೂಡಿಕೆ ಮಾಡಲಿದೆ. ಹೊಸ ಉದ್ಯಮದಿಂದ 100 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚು ಮೊತ್ತ ಆದಾಯ ಬರುವ ನಿರೀಕ್ಷೆ ಇದೆ.

ಭಾರತದಲ್ಲಿ 140 ಕೋಟಿ ಜನಸಂಖ್ಯೆ ಇದೆ. ಯುರೋಪಿಯನ್ ಒಕ್ಕೂಟ, ಅಮೆರಿಕ ಎರಡನ್ನೂ ಸೇರಿದರೆ ಅದಕ್ಕಿಂತ ದೊಡ್ಡದು. ಈವರೆಗೆ ಯುನೈಟೆಡ್ ಕಿಂಗ್​ಡಮ್ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವ ಅತಿ ದೊಡ್ಡ ಮಾರ್ಕೆಟ್ ಇದು ಎಂದು ಹೇಳಲಾಗಿದೆ. ಅಧಿಕೃತ ಲೆಕ್ಕಾಚಾರದ ಪ್ರಕಾರ, ಯುಕೆ ಮತ್ತು ಭಾರತದ ನಡುವೆ ಈಗಾಗಲೇ ವರ್ಷಕ್ಕೆ 2300 ಕೋಟಿ ಪೌಂಡ್ಸ್​ನಷ್ಟು ವ್ಯಾಪಾರ ನಡೆಯುತ್ತಿದೆ. 5 ಲಕ್ಷಕ್ಕೂ ಹೆಚ್ಚು ಉದ್ಯೋಗಕ್ಕೆ ಇದರಿಂದ ನೆರವಾಗುತ್ತಿದೆ.

ಕಳೆದ ವಾರ ಬ್ರಿಟನ್ ಪ್ರಧಾನಿ ಜಾನ್ಸನ್ ಅವರು ಭಾರತದ ಉದ್ಯಮಪತಿಗಳ ಜತೆ ಮಾತನಾಡಿದ್ದಾರೆ. ಇನ್ಫೋಸಿಸ್, ಎಚ್​ಸಿಎಲ್ ಟೆಕ್ನಾಲಜಿಯಂಥ ಕಂಪೆನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಾಫ್ಟ್​ವೇರ್ ಉದ್ಯಮಗಳಿಂದ ಬ್ರಿಟನ್​ನಲ್ಲಿ 1000 ಉದ್ಯೋಗ ಸೃಷ್ಟಿ ಆಗುತ್ತಿದೆ. ಇನ್ನು ಬಯೋಟೆಕ್ ಸಂಸ್ಥೆಯಾದ ಗ್ಲೋಬಲ್ ಜೀನ್ ಕಾರ್ಪ್, ಟಿವಿಎಸ್ ಮೋಟಾರ್ಸ್, ಗೊಯಿಲಾ ಬಟರ್ ಚಿಕನ್ ಇಂಥ ಸಂಸ್ಥೆಗಳೂ ಹೂಡಿಕೆ ಪಟ್ಟಿಯಲ್ಲಿವೆ. ಯುಕೆ ಕಂಪೆನಿಗಳು ಸಹ ಭಾರತಕ್ಕೆ ರಫ್ತು ಮಾಡುತ್ತಿವೆ. ಅದರಲ್ಲಿ ಮಾರ್ನಿಂಗ್​ಸೈಡ್ ಫಾರ್ಮಾಸ್ಯುಟಿಕಲ್ಸ್ ಜತೆಗೆ R&D ಒಪ್ಪಂದ, ಕ್ಲೌಡ್​ಪ್ಯಾಡ್ ಜತೆಗೆ ಡೇಟಾ ಸೆಂಟರ್ ವ್ಯವಹಾರ, ಇನ್ಫೋಸಿಸ್ ಸಹಭಾಗಿತ್ವದಲ್ಲಿ ಬಿ.ಪಿ ಮತ್ತು ಗೋಜೀರೋ ಮೊಬಿಲಿಟಿ ಜತೆಗೆ ಡಿ-ಬೈಸಿಕಲ್ ಒಪ್ಪಂದ ಆಗಿದೆ.

ಇದನ್ನೂ ಓದಿ: ಆಕ್ಸಿಜನ್​ ಸಂಕಷ್ಟದಲ್ಲಿರುವ ಭಾರತದ ನೆರವಿಗೆ ಹಲವು ದೇಶಗಳು; ಯುಕೆಯಿಂದ ಬಂದವು ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್​ಗಳು..

(1 billion GBP worth of trade and investment deal between UK and India announced by UK PM Boris Johnson. )