ಪಿಪಿಎಫ್​ನಲ್ಲಿ ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ ಮೆಚ್ಯೂರಿಟಿಗೆ ಎಷ್ಟು ಸಿಗುತ್ತದೆ? ಕೋಟಿ ರೂ ಕಾರ್ಪಸ್ ನಿರ್ಮಿಸಲು ಎಷ್ಟು ವರ್ಷ ಬೇಕು?

PPF investment details: ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ಸಿಗುವ ಮತ್ತು ಸರ್ಕಾರದಿಂದ ನಿರ್ವಹಿಸಲಾಗುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ದೀರ್ಘಾವಧಿ ಹೂಡಿಕೆ ಯೋಜನೆ. ವರ್ಷಕ್ಕೆ 500 ರೂನಿಂದ 1.5 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. 15 ವರ್ಷಕ್ಕೆ ಮೆಚ್ಯೂರ್ ಆಗುತ್ತದಾದರೂ ಬೇಕಾದರೆ ಐದೈದು ವರ್ಷ ಅವಧಿ ವಿಸ್ತರಿಸಬಹುದು.

ಪಿಪಿಎಫ್​ನಲ್ಲಿ ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ ಮೆಚ್ಯೂರಿಟಿಗೆ ಎಷ್ಟು ಸಿಗುತ್ತದೆ? ಕೋಟಿ ರೂ ಕಾರ್ಪಸ್ ನಿರ್ಮಿಸಲು ಎಷ್ಟು ವರ್ಷ ಬೇಕು?
ಹಣ
Image Credit source: Getty Images

Updated on: Aug 11, 2026 | 5:17 PM

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ (PPF- Public Provident Fund) ದೀರ್ಘಾವಧಿ ಹೂಡಿಕೆ ಯೋಜನೆಗಳಲ್ಲಿ ಒಂದು. ಒಂದು ವರ್ಷಕ್ಕೆ ₹500 ನಿಂದ ಹಿಡಿದು ಗರಿಷ್ಠ ₹1.5 ಲಕ್ಷದಂತೆ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ವರ್ಷದಲ್ಲಿ 12 ಕಂತುಗಳಲ್ಲಿ ಈ ಹಣ ಕಟ್ಟುವ ಅವಕಾಶ ಇರುತ್ತದೆ. ಬೇಕಾದರೆ ಒಂದೇ ಕಂತಿನಲ್ಲಿ ವರ್ಷದ ಹೂಡಿಕೆ ಮಾಡಬಹುದು. ಈ ಪಿಪಿಎಫ್​ನಲ್ಲಿ ತಿಂಗಳಿಗೆ ₹5,000 ಹೂಡಿಕೆ ಮಾಡುತ್ತಾ ಹೋದರೆ ಮೆಚ್ಯೂರಿಟಿಗೆ ಎಷ್ಟು ಹಣ ಸಿಗಬಹುದು? ಸದ್ಯ ಈ ಸ್ಕೀಮ್​ನಲ್ಲಿ ಶೇ. 7.1 ವಾರ್ಷಿಕ ಬಡ್ಡಿದರ ನಿಗದಿ ಮಾಡಲಾಗಿದೆ. ಇದೇ ಬಡ್ಡಿದರ ಮುಂದುವರಿಯಬಹುದು ಎಂಬ ಲೆಕ್ಕಾಚಾರ ಹಾಕಿ, ₹5,000 ಮಾಸಿಕ ಹೂಡಿಕೆಯಿಂದ ಪಿಪಿಎಫ್ ನೀಡುವ ರಿಟರ್ನ್ಸ್ ಈ ರೀತಿ ಇರಬಹುದು:

ತಿಂಗಳಿಗೆ ₹5,000 ಹೂಡಿಕೆ: 15 ವರ್ಷಗಳ ಮೆಚ್ಯೂರಿಟಿ ಮೊತ್ತ ಎಷ್ಟು?

  • ಪ್ರತಿ ತಿಂಗಳ ಹೂಡಿಕೆ: ₹5,000 (ವರ್ಷಕ್ಕೆ ₹60,000)
  • ಹೂಡಿಕೆ ಅವಧಿ (ಮೆಚ್ಯೂರಿಟಿ ಅವಧಿ): 15 ವರ್ಷಗಳು
  • ನಿಮ್ಮ ಒಟ್ಟು ಹೂಡಿಕೆ: ₹9,00,000
  • ಗಳಿಸಿದ ಅಂದಾಜು ಬಡ್ಡಿ: ₹7,27,284
  • 15 ವರ್ಷಗಳ ನಂತರ ಸಿಗುವ ಮೆಚ್ಯೂರಿಟಿ ಮೊತ್ತ: ₹16,27,284 (ಸುಮಾರು ₹16.27 ಲಕ್ಷ)

ಇದನ್ನೂ ಓದಿ: ಗೂಗಲ್ ಎಐ ಮೋಡ್… ನೀನೇ ಸಾಕಿದ ಗಿಳಿ ಹದ್ದಾಗಿ ಕುಕ್ಕಿತಲ್ಲೋ ಎನ್ನುವಂತಾಗಿದೆ… ಯಾಕೆ?

PPF ನಲ್ಲಿ ₹1 ಕೋಟಿ ತಲುಪಲು ಎಷ್ಟು ವರ್ಷ ಬೇಕು?

ಪಿಪಿಎಫ್ ಮೂಲ ಹೂಡಿಕೆ ಅವಧಿ 15 ವರ್ಷಗಳಾಗಿದ್ದರೂ, ಮೆಚ್ಯೂರಿಟಿಯ ನಂತರ ಪ್ರತಿ 5 ವರ್ಷಗಳ ಬ್ಲಾಕ್‌ಗಳಲ್ಲಿ (5-Year Extensions) ಈ ಖಾತೆಯನ್ನು ವಿಸ್ತರಿಸಲು ಅವಕಾಶವಿದೆ.

ತಿಂಗಳಿಗೆ ₹5,000 (ವರ್ಷಕ್ಕೆ ₹60,000) ಹೂಡಿಕೆ ಮುಂದುವರಿಸುತ್ತಾ ಹೋದರೆ ₹1 ಕೋಟಿ ತಲುಪಲು ಸುಮಾರು 32 ರಿಂದ 33 ವರ್ಷಗಳು ಬೇಕಾಗುತ್ತದೆ.

ಗರಿಷ್ಠ ಹೂಡಿಕೆ ಮಾಡಿದರೆ ಎಷ್ಟು ವರ್ಷ ಬೇಕು?

ಪಿಪಿಎಫ್​ನಲ್ಲಿ ವರ್ಷಕ್ಕೆ ₹1.5 ಲಕ್ಷ ರೂ ಹೂಡಿಕೆಗೆ ಅವಕಾಶ ಇರುತ್ತದೆ. ಆ ರೀತಿ 15 ವರ್ಷ ಹೂಡಿಕೆ ಮಾಡಿದರೆ 15 ವರ್ಷಕ್ಕೆ ಮೆಚ್ಯೂರಿಟಿ ಆದಾಗ ₹40 ಲಕ್ಷ ರಿಟರ್ನ್ಸ್ ಸಿಗುತ್ತದೆ. ಹಾಗೆಯೇ ಹೂಡಿಕೆ ಮುಂದುವರಿಸಿದರೆ 25 ವರ್ಷಕ್ಕೆ ನಿಮ್ಮ ಹೂಡಿಕೆ ₹1 ಕೋಟಿ ದಾಟಿರುತ್ತದೆ. ಮತ್ತೂ ಹತ್ತು ವರ್ಷ ನೀವು ಅದೇ ರೀತಿ ವರ್ಷಕ್ಕೆ ₹1.5 ಲಕ್ಷ ರೂನಂತೆ ಹೂಡಿಕೆ ಮುಂದುವರಿಸಿದರೆ ನಿಮ್ಮ ಪಿಪಿಎಫ್ ಕಾರ್ಪಸ್ ₹2.25 ಕೋಟಿ ದಾಟಿರುತ್ತದೆ.

ಇದನ್ನೂ ಓದಿ: ‘ಈ ದಿನ ಬರುತ್ತೆಂದು ಭಾವಿಸಿರಲಿಲ್ಲ’- ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಹವಾ ಕಂಡು ಬೆಚ್ಚಿಬಿದ್ದ ಚೀನೀಯರು

ಪಿಪಿಎಫ್​ನ ಇತರ ಅನುಕೂಲತೆಗಳು

EEE ತೆರಿಗೆ ವಿನಾಯಿತಿ (Tax Free): ಹಳೆಯ ಟ್ಯಾಕ್ಸ್ ಸಿಸ್ಟಂನಲ್ಲಿ (Old Tax Regime) ಪಿಪಿಎಫ್ ಹೂಡಿಕೆಯು EEE (Exempt-Exempt-Exempt) ವರ್ಗಕ್ಕೆ ಸೇರುತ್ತದೆ. ಅಂದರೆ ಹೂಡಿಕೆ ಮಾಡುವ ಹಣ (Section 80C ಅಡಿಯಲ್ಲಿ), ಗಳಿಸುವ ಬಡ್ಡಿ ಮತ್ತು ಕೊನೆಯಲ್ಲಿ ಸಿಗುವ ಮೆಚ್ಯೂರಿಟಿ ಮೊತ್ತ – ಮೂರೂ ಹಂತಗಳಲ್ಲೂ ಸಂಪೂರ್ಣವಾಗಿ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ.

ತಿಂಗಳ 5 ನೇ ತಾರೀಖಿನ ನಿಯಮ: ನೀವು ತಿಂಗಳಿಗೊಮ್ಮೆ ಹೂಡಿಕೆ ಮಾಡುವವರಿದ್ದರೆ, ಗರಿಷ್ಠ ಬಡ್ಡಿ ಗಳಿಸಲು ಪ್ರತಿ ತಿಂಗಳ 5 ನೇ ತಾರೀಖಿಗಿಂತ ಮೊದಲು ಹಣವನ್ನು ಪಿಪಿಎಫ್ ಖಾತೆಗೆ ಜಮಾ ಮಾಡಬೇಕು. 5ನೇ ತಾರೀಖಿನ ನಂತರ ಪಾವತಿಸುವ ಹಣವನ್ನು ಮುಂದಿನ ತಿಂಗಳ ಲೆಕ್ಕಕ್ಕೆ ಪರಿಗಣಿಸಲಾಗುತ್ತದೆ. ಅಂದರೆ, ಒಂದು ತಿಂಗಳ ಬಡ್ಡಿಯಿಂದ ವಂಚಿತರಾಗಬೇಕಾಗುತ್ತದೆ.

ಬಡ್ಡಿದರ ಬದಲಾವಣೆ: ಕೇಂದ್ರ ಸರ್ಕಾರವು ಪ್ರತಿ ತ್ರೈಮಾಸಿಕಕ್ಕೊಮ್ಮೆ (Quarterly) ಪಿಪಿಎಫ್ ಬಡ್ಡಿದರಗಳನ್ನು ಪರಿಶೀಲಿಸುತ್ತದೆ. ಬಡ್ಡಿದರಗಳಲ್ಲಿ ವ್ಯತ್ಯಾಸವಾದರೆ ಅಂತಿಮ ಮೊತ್ತದಲ್ಲಿ ಸಣ್ಣ ಪ್ರಮಾಣದ ಬದಲಾವಣೆಯಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us