PAN Or Aadhaar: 20 ಲಕ್ಷ ರೂ. ಮೊತ್ತದ ಜಮೆ, ಹಿಂತೆಗೆತಕ್ಕೆ ಮೇ 26ರಿಂದ ಪ್ಯಾನ್ ಅಥವಾ ಆಧಾರ್ ಕಡ್ಡಾಯ
ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ಜಮೆ ಅಥವಾ ಹಿಂತೆಗೆತಕ್ಕೆ ಪ್ಯಾನ್ ಅಥವಾ ಆಧಾರ್ ಕಡ್ಡಾಯ ಮಾಡಿದ್ದು, ಈ ನಿಯಮ ಮೇ 26, 2022ರಿಂದ ಜಾರಿಗೆ ಬಂದಿದೆ.
ಮೇ 26ನೇ ತಾರೀಕಿನ ಗುರುವಾರದಿಂದ, ಅಂದರೆ ಇಂದಿನಿಂದ ಅನ್ವಯ ಆಗುವಂತೆ ನಗದು ವಿಥ್ಡ್ರಾ ಮತ್ತು ಠೇವಣಿ ವಿಚಾರವಾಗಿ ಪ್ರಮುಖ ಬದಲಾವಣೆ ಆಗಲಿದೆ. ನಗದು ಜಮೆ ಅಥವಾ ಹಿಂತೆಗೆತ ಒಂದು ಹಣಕಾಸಿನ ವರ್ಷದಲ್ಲಿ 20 ಲಕ್ಷ ರೂಪಾಯಿಗಿಂತ ಹೆಚ್ಚಿದ್ದಲ್ಲಿ ಪ್ಯಾನ್ ಕಾರ್ಡ್ (PAN Card) ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಮಾಡಲಾಗಿದೆ. ಈ ಹೊಸ ನಿಯಮವು ಚಾಲ್ತಿ ಖಾತೆಯನ್ನು ಅಥವಾ ಕ್ಯಾಶ್ ಕ್ರೆಡಿಟ್ ಖಾತೆಯನ್ನು ತೆರೆಯುವುದಕ್ಕೆ ಹೊಸ ಮಾರ್ಗದರ್ಶಿ ಸೂತ್ರ ಅನ್ವಯಿಸುತ್ತದೆ. ಬ್ಯಾಂಕಿಂಗ್ ಕಂಪೆನಿ ಅಥವಾ ಕೋ-ಆಪರೇಟಿವ್ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ಈ ಖಾತೆ ತೆರೆಯುವುದಕ್ಕೆ ಅಗತ್ಯ. ಇದರ ಜತೆಗೆ, ಈ ಮೇಲ್ಕಂಡ ಯಾವುದೇ ವಹಿವಾಟುಗಳಿಗೆ ಕನಿಷ್ಠ 7 ದಿನಗಳಿಗೆ ಮುಂಚೆ ಪ್ಯಾನ್ಗೆ ಅಪ್ಲೈ ಮಾಡಬೇಕಾಗುತ್ತದೆ. ಹೊಸ ನಿಯಮಾವಳಿಯನ್ನು ಮೇ 10ನೇ ತಾರೀಕಿನಂದು ಕೇಂದ್ರ ನೇರ ತೆರಿಗೆ ಮಂಡಳಿಯು (CBDT) ಘೋಷಣೆ ಮಾಡಿದೆ.
ವಹಿವಾಟು ಅಂದರೆ, ಅದರಲ್ಲಿ ಒಂದು ಹಣಕಾಸು ವರ್ಷಕ್ಕೆ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಜಮೆ/ವಿಥ್ಡ್ರಾ ಬ್ಯಾಂಕ್ ಖಾತೆಗಳ ಮೂಲಕ ಮಾಡಿದಲ್ಲಿ ಅನ್ವಯಿಸುತ್ತದೆ. ಬ್ಯಾಂಕ್ ಖಾತೆಗಳು ಅಂದರೆ, ವಾಣಿಜ್ಯ ಬ್ಯಾಂಕ್ಗಳು, ಕೋ-ಆಪರೇಟಿವ್ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗಳು ಇವೆಲ್ಲಕ್ಕೂ ಲಾಗೂ ಆಗುತ್ತದೆ, ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ವರದಿಗಳ ಪ್ರಕಾರ, ಲೆಕ್ಕಕ್ಕೆ ನೀಡದ ನಗದು ವ್ಯವಹಾರಗಳನ್ನು ಕಂಡುಹಿಡಿಯುವ ಉದ್ದೇಶವನ್ನು ಈ ನಡೆ ಹೊಂದಿದೆ.
ಪ್ಯಾನ್ ಕಾರ್ಡ್ ಸಹ ಹಲವು ವಹಿವಾಟುಗಳಿಗೆ ಕಡ್ಡಾಯ
– ಆದಾಯ ತೆರಿಗೆ ರಿಟರ್ನ್ಸ್ಗೆ ಅಥವಾ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಜತೆಗಿನ ಸಂವಹನಕ್ಕೆ ಪ್ಯಾನ್ ನಮೂದಿಸುವುದು ಕಡ್ಡಾಯ/
– ಇತರ ಹಣಕಾಸು ವಹಿವಾಟುಗಳಿಗೆ ಪ್ಯಾನ್ ಕಡ್ಡಾಯವಾಗಿದೆ. ಉದಾಹರಣೆಗೆ, ಬ್ಯಾಂಕ್ ಅಥವಾ ಡಿಮ್ಯಾಟ್ ಖಾತೆ ತೆರೆಯಲು ಅಥವಾ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆಯುವುದಕ್ಕೆ ಪ್ಯಾನ್ ಕಾರ್ಡ್ ಅಗತ್ಯ.
– ಮ್ಯೂಚುವಲ್ ಫಂಡ್ಸ್, ಡಿಬೆಂಚರ್ಸ್ ಅಥವಾ ಬಾಂಡ್ಗಳ ಮೇಲೆ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಹೂಡಿಕೆ ಮಾಡುವಾಗ ಪ್ಯಾನ್ ಮಾಹಿತಿ ಕಡ್ಡಾಯ.
– ಹಣಕಾಸು ವರ್ಷದಲ್ಲಿ ಸರಾಸರಿ 50 ಸಾವಿರ ರೂಪಾಯಿಗಿಂತ ಹೆಚ್ಚು ಇನ್ಷೂರೆನ್ಸ್ ಪ್ರೀಮಿಯಂ ಅನ್ನು ಇನ್ಷೂರೆನ್ಸ್ ಕಂಪೆನಿಗೆ ಪಾವತಿಸಿದರೆ ಪ್ಯಾನ್ ಅಗತ್ಯ.
– ಒಂದು ದಿನದಲ್ಲಿ 50 ಸಾವಿರ ರೂಪಾಯಿಗಿಂತ ಹೆಚ್ಚು ನಗದು ಠೇವಣಿ ಅಥವಾ ಟೈಮ್ ಡೆಪಾಸಿಟ್ ಮೊತ್ತ 50 ಸಾವಿರ ರೂ. ದಾಟಿದಲ್ಲಿ ಅಥವಾ ಸರಾಸರಿ ಒಂದು ಹಣಕಾಸು ವರ್ಷಕ್ಕೆ 5 ಲಕ್ಷಕ್ಕೂ ಹೆಚ್ಚಿದ್ದಲ್ಲಿ, ಬ್ಯಾಂಕಿಂಗ್ ಕಂಪೆನಿ, ಕೋ-ಆಪರೇಟಿವ್ ಬ್ಯಾಂಕ್, ಪೋಸ್ಟ್ ಆಫೀಸ್ ಅಥವಾ ಎನ್ಬಿಎಫ್ಸಿ ಹೀಗೆ ಹಣ ಜಮೆ ಅಥವಾ ಹಿಂತೆಗೆದಾಗ ಪ್ಯಾನ್ ನಮೂದಿಸಬೇಕು.
– ಮೋಟಾರು ವಾಹನ ಅಥವಾ ದ್ವಿಚಕ್ರ ವಾಹನ ಹೊರತುಪಡಿಸಿದ ವಾಹನಗಳನ್ನು ಖರೀದಿ ಅಥವಾ ಮಾರಾಟ ಮಾಡುವಾಗ ಪ್ಯಾನ್ ನಮೂದಿಸಬೇಕಾಗುತ್ತದೆ.
– ಹೋಟೆಲ್, ರೆಸ್ಟೋರೆಂಟ್ ಅಥವಾ ವಿದೇಶ ಪ್ರಯಾಣ ಅಥವಾ ವಿದೇಶ ಕರೆನ್ಸಿಗಳ ಖರೀದಿಗಾಗಿ ಒಂದೇ ಸಲಕ್ಕೆ ನಗದು ಮೊತ್ತ ಪಾವತಿ 50 ಸಾವಿರ ರೂಪಾಯಿ ದಾಟಿದಲ್ಲಿ ಆಗ ಪ್ಯಾನ್ ನಮೂದಿಸಬೇಕಾಗುತ್ತದೆ.
– ಪ್ಯಾನ್ ಲಭ್ಯ ಇಲ್ಲದಿದ್ದಲ್ಲಿ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಬಹುದು. ಎಲ್ಲಿ ಕಡ್ಡಾಯ ಇರುತ್ತದೋ ಅಲ್ಲಿ ಪ್ಯಾನ್ ಅಥವಾ ಆಧಾರ್ ನಮೂದಿಸದಿದ್ದಲ್ಲಿ ನೋಟಿಸ್ ಮತ್ತು ದಂಡಕ್ಕೆ ಕಾರಣ ಆಗಬಹುದು.
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Aadhaar Card Update: ನಿಮ್ಮ ಮೊಬೈಲ್ ಫೋನ್ ಸಂಖ್ಯೆ ಆಧಾರ್ಗೆ ಜೋಡಣೆ ಆಗಿದೆಯಾ? ಅನುಕೂಲಗಳನ್ನು ತಿಳಿಯಿರಿ