
ಬೆಂಗಳೂರು, ಜೂನ್ 24: ಜಾರಿ ನಿರ್ದೇಶನಾಲಯವು (ED) ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮುಂಬೈನಲ್ಲಿರುವ ರಾಜೇಶ್ ಎಕ್ಸ್‌ಪೋರ್ಟ್ಸ್‌ನ (REL- Rajesh Exports Ltd) ಒಟ್ಟು 9 ಕಚೇರಿಗಳ ಮೇಲೆ ದಾಳಿ ನಡೆಸಿದೆ. ಆಭರಣಗಳನ್ನು ರಫ್ತು ಮಾಡುವ ಸಂಸ್ಥೆಯಾದ ರಾಜೇಶ್ ಎಕ್ಸ್ಪೋರ್ಟ್ಸ್ ಕೆಲ ಅಕ್ರಮಗಳನ್ನು ಎಸಗಿರುವುದು ತನಿಖೆಗಳಿಂದ ಬೆಳಕಿಗೆ ಬಂದಿದೆ. ವಿದೇಶದ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಕಂಪನಿ ವಿಫಲವಾಗಿದೆ.
ಇದನ್ನೂ ಓದಿ: ಷೇರುಬಜಾರು ಕಂಬ್ಯಾಕ್; ನಿನ್ನೆ ಕುಸಿದಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಳ್ಳಲು ಏನು ಕಾರಣ?
ಕಂಪನಿಯ ವಾರ್ಷಿಕ ವಹಿವಾಟು ಸುಮಾರು 7.7 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದರೂ, ಉನ್ನತ ಸ್ತರದ ಮ್ಯಾನೇಜ್ಮೆಂಟ್ ಟೀಮ್ಗೆ ನೀಡುವ ವೇತನವು ಅಸಹಜವಾಗಿ ಕಡಿಮೆ ಇದೆ. ಮುಖ್ಯ ಹಣಕಾಸು ಅಧಿಕಾರಿ (CFO- Chief Financial Office) ಅವರು 2020ರಿಂದ ಯಾವುದೇ ವೇತನವನ್ನೇ ಪಡೆದಿಲ್ಲ. ಎಂಡಿಯವರಿಗಂತೂ ಮಾಸಿಕ 17,000 ರೂ ಮಾತ್ರವೇ ವೇತನ ಹೋಗುತ್ತಿರುವುದು. ಈ ವೈರುದ್ಧ್ಯಗಳನ್ನು ಇಡಿ ತನಿಖೆಯಲ್ಲಿ ಪತ್ತೆ ಹಚ್ಚಲಾಗಿದೆ.
NRI ಬೆನಾಮಿದಾರರನ್ನು ಬಳಸಿಕೊಂಡು ಷೇರು ಮರುಪಾವತಿಯ ಮೂಲಕ ಭಾರತದಿಂದ ಸುಮಾರು 600 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಅಕ್ರಮವಾಗಿ ಸಾಗಿಸಲಾಗಿದೆ (Siphoning of money) ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಸೂರ್ಯಾಸ್ತ ನಿಯಮ ತರಲು ಭಾರತದ ಯತ್ನ; ಏನಿದು ಸನ್ಸೆಟ್ ಕ್ಲಾಸ್?
ಅಲ್ಲದೆ, ಇಂಟರ್‌ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ (ICIJ) ಲೀಕ್ ಮಾಡಿದ ಪಟ್ಟಿಯಲ್ಲಿರುವ ವ್ಯಕ್ತಿಗಳೊಂದಿಗೆ ಕಂಪನಿಯು ಸಂಪರ್ಕ ಹೊಂದಿರುವ ಅನುಮಾನಗಳಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.
ಪ್ರಸ್ತುತ, ಈ ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Wed, 24 June 26