Rakesh Jhunjhunwala: ‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಜುನ್ವಾಲಾ ಪೋರ್ಟ್ಫೋಲಿಯೋ ಮೇಲೆ ಈಗ ಎಲ್ಲರ ಕಣ್ಣು
Share Market: ರಾಕೇಶ್ ಜುಂಜನ್ವಾಲಾ ಮತ್ತು ಅವರ ಪತ್ನಿ ರೇಖಾ ಜುಂಜುನ್ವಾಲಾರ ಪೋರ್ಟ್ಫೋಲಿಯೊದಲ್ಲಿ ಸಿಂಹಪಾಲು ಟೈಟಾನ್ ಕಂಪನಿಯದ್ದಾಗಿದೆ.
ಮುಂಬೈ: ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್ವಾಲಾ (Rakesh Jhunjhunwala) ಇತ್ತೀಚೆಗಷ್ಟೇ ಹೃದಯ ಸ್ತಂಭನದಿಂದ ನಿಧನರಾದರು. ‘ಮನಿ ಮ್ಯಾಗ್ನೆಟ್’ ಎಂದೇ ಷೇರುಪೇಟೆ ಹೂಡಿಕೆದಾರರ ವಲಯದಲ್ಲಿ ಹೆಸರುವಾಸಿಯಾಗಿದ್ದ 62 ವರ್ಷದ ರಾಕೇಶ್ ಜುಂಜುನ್ವಾಲಾರ ಸಾವಿನ ನಂತರ ಅವರು ಹೊಂದಿದ್ದ ₹ 32,000 ಕೋಟಿ ಮೊತ್ತದ (4 ಶತಕೋಟಿ ಡಾಲರ್) ಪೋರ್ಟ್ಫೋಲಿಯಲ್ಲಿರುವ ಷೇರುಗಳ ಬಗ್ಗೆ ಜನರಲ್ಲಿ ಕುತೂಹಲ ವ್ಯಕ್ತವಾಗಿದೆ. ಈ ಷೇರುಗಳ ವಹಿವಾಟನ್ನು ಹಲವು ಎಎಂಸಿಗಳು (Asset Management Company – AMC) ಮತ್ತು ಚಿಲ್ಲರೆ ಹೂಡಿಕೆದಾರರು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ.
ಸ್ವಂತ ಪರಿಶ್ರಮದಿಂದ ಹೂಡಿಕೆ ಆರಂಭಿಸಿದ್ದ ರಾಕೇಶ್ ಜುಂಜುಲ್ವಾಲಾ ಭಾರತದ ಪ್ರಗತಿಯ ಮೇಲೆ ವಿಶ್ವಾಸವಿಟ್ಟಿದ್ದರು. ಹಲವು ಉದ್ಯಮಗಳು ಮತ್ತು ಸ್ಟಾರ್ಟ್ಅಪ್ಗಳಲ್ಲಿ ಗಣನೀಯ ಪ್ರಮಾಣದ ಹಣ ತೊಡಗಿಸಿದ್ದರು. ಹಲವು ಭಾರತೀಯ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಸ್ಥಾನ ಪಡೆದಿದ್ದರು.
ಏಷ್ಯಾದ 3ನೇ ಅತಿದೊಡ್ಡ ಷೇರುಪೇಟೆಯಾಗಿರುವ ಭಾರತದ ಹೂಡಿಕೆ ಜಗತ್ತಿನಲ್ಲಿ ಜುಂಜುನ್ವಾಲಾರ ಮಾತಿಗೆ ತನ್ನದೇ ಆದ ಪ್ರಾಮುಖ್ಯತೆಯಿತ್ತು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿರುವ ಚಿಲ್ಲರೆ ಹೂಡಿಕೆದಾರರು ಜುಂಜುನ್ವಾಲಾರ ಮಾತನ್ನು ಗೌರವಿಸಿ, ಅನುಸರಿಸುತ್ತಿದ್ದರು. ಮಾರುಕಟ್ಟೆಯ ‘ದೊಡ್ಡ ಗೂಳಿ’ (Big Bull) ಎನಿಸಿಕೊಂಡಿದ್ದ ಜುಂಜುನ್ವಾಲಾ ಅವರ ಹೂಡಿಕೆ ಮತ್ತು ಮಾರಾಟವನ್ನು ಒಂದು ಪಂಥದ ರೀತಿಯಲ್ಲಿ ಅನುಸರಿಸುವ ವರ್ಗವೇ ಹುಟ್ಟಿಕೊಂಡಿತ್ತು. ಅವರ ಪ್ರತಿ ನಡೆಯನ್ನೂ ಹೂಡಿಕೆದಾರರು ಕಣ್ಣಲ್ಲಿಕಣ್ಣಿಟ್ಟು ಗಮನಿಸುತ್ತಿದ್ದರು.
ರಾಕೇಶ್ ಜುಂಜನ್ವಾಲಾ ಮತ್ತು ಅವರ ಪತ್ನಿ ರೇಖಾ ಜುಂಜುನ್ವಾಲಾರ ಪೋರ್ಟ್ಫೋಲಿಯೊದಲ್ಲಿ ಸಿಂಹಪಾಲು ಟೈಟಾನ್ ಕಂಪನಿಯದ್ದಾಗಿದೆ. ದಂಪತಿಯ ಒಟ್ಟಾರೆ ಹೂಡಿಕೆಯ ಶೇ 3ರಷ್ಟು ಪಾಲು ಟೈಟಾನ್ನಲ್ಲಿದೆ ಎಂದು ಹಣಕಾಸು ವಿದ್ಯಮಾನಗಳನ್ನು ವರದಿ ಮಾಡುವ ಬ್ಲೂಮ್ಬರ್ಗ್ ಹೇಳಿದೆ.
Here’s a look at top holdings of late Shri Rakesh Jhunjhunwala#Rakeshjhunjhunwala #StockMarket #Nifty pic.twitter.com/Q4LKp2FgXu
— Mastermind Investor (@mmiresearchin) August 17, 2022
ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಷುರೆನ್ಸ್ ಕಂಪನಿ, ಮೆಟ್ರೊ ಬ್ರಾಂಡ್ಸ್ ಲಿಮಿಟೆಡ್ (ಚಪ್ಪಲಿ ತಯಾರಿಸುವ ಕಂಪನಿ) ಮತ್ತು ಟಾಟಾ ಮೋಟಾರ್ಸ್ನಲ್ಲಿ ಈ ದಂಪತಿ ಗಮನಾರ್ಹ ಪ್ರಮಾಣದಲ್ಲಿ ಹಣ ತೊಡಗಿಸಿದ್ದಾರೆ. ಸ್ಟಾರ್ ಹೆಲ್ತ್, ಆಪ್ಟೆಕ್ (ಐಟಿ) ಮತ್ತು ನಜಾರಾ ಟೆಕ್ನಾಲಜಿಸ್ (ವಿಡಿಯೊಗೇಮ್) ಕಂಪನಿಗಳ ಒಟ್ಟು ಬಂಡವಾಳದಲ್ಲಿ ಶೇ 10ಕ್ಕೂ ಹೆಚ್ಚಿನ ಪಾಲು ಜುಂಜುನ್ವಾಲಾ ಅವರದ್ದಾಗಿದೆ.
Published On - 7:46 am, Wed, 17 August 22