
ಮೆಕ್ಡೊನಾಲ್ಡ್ ಇಂಡಿಯಾ (ಪಶ್ಚಿಮ ಮತ್ತು ದಕ್ಷಿಣ) ಶುಕ್ರವಾರ ಹೇಳಿರುವ ಪ್ರಕಾರ, ನಟಿ ರಶ್ಮಿಕಾ ಮಂದಣ್ಣ ಅವರನ್ನು ತನ್ನ ಬ್ರ್ಯಾಂಡ್ ಅಂಬಾಸಡರ್ ಆಗಿ ನೇಮಕ ಮಾಡಿದೆ. ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಮೆಕ್ಡೊನಾಲ್ಡ್ ರೆಸ್ಟುರಾಂಟ್ಗಳನ್ನು ಪೂರ್ಣ ಪ್ರಮಾಣದಲ್ಲಿ ಮಾಲೀಕತ್ವ ಇರುವ ವೆಸ್ಟ್ಲೈಫ್ ಡೆವ್ಲಪ್ಮೆಂಟ್ ಲಿಮಿಟೆಡ್ ಮೂಲಕ ಅದು ನಿರ್ವಹಣೆ ಮಾಡುತ್ತದೆ. ರಶ್ಮಿಕಾ ಮಂದಣ್ಣ ಅವರು ಈ ಬ್ರ್ಯಾಂಡ್ನ ಪ್ರಮುಖ ಅಭಿಯಾನಗಳಲ್ಲಿ ಭಾಗಿ ಆಗಲಿದ್ದಾರೆ. ಪ್ರಮುಖ ಮಾರುಕಟ್ಟೆಯಲ್ಲಿ ಮತ್ತೆ ಬ್ರ್ಯಾಂಡ್ ನಾಯಕತ್ವಕ್ಕೆ ಪ್ರಯತ್ನಿಸುತ್ತಿರುವ ಮೆಕ್ಡೊನಾಲ್ಡ್ಗೆ ಇದು ಪ್ರಮುಖವಾದ ಒಪ್ಪಂದ ಆಗಲಿದೆ ಎಂದು ತಿಳಿಸಲಾಗಿದೆ.
“ಈ ಒಪ್ಪಂದದೊಂದಿಗೆ ನಮ್ಮ ಪ್ರಮುಖ ಮಾರುಕಟ್ಟೆಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುವಜನರೊಂದಿಗಿನ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಲು ಗುರಿ ಇರಿಸಿಕೊಂಡಿದ್ದೇವೆ,” ಎಂದು ಮೆಕ್ಡೊನಾಲ್ಡ್ ಇಂಡಿಯಾದ (ಪಶ್ಚಿಮ ಮತ್ತು ದಕ್ಷಿಣ) ಮಾರುಕಟ್ಟೆ ಮತ್ತು ಸಂವಹನದ ನಿರ್ದೇಶಕ ಆರ್.ಪಿ. ಅರವಿಂದ್ ತಿಳಿಸಿದ್ದಾರೆ.
25 ವರ್ಷ ವಯಸ್ಸಿನ ರಶ್ಮಿಕಾ ಮಂದಣ್ಣ ಅವರ ಮೊದಲ ಸಿನಿಮಾ ಕನ್ನಡದ ಕಿರಿಕ್ ಪಾರ್ಟಿ. ಆ ನಂತರ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಅಭಿನಯಿಸಿದ್ದಾರೆ. ಚಲೋ, ಸರಿಲೇರು ನೀಕೆವ್ವರು, ಗೀತಗೋವಿಂದಂ ಮತ್ತು ಡಿಯರ್ ಕಾಮ್ರೆಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಶ್ಮಿಕಾ ಅಭಿನಯಿಸಿದ್ದು, ದಕ್ಷಿಣ ಭಾರತದಲ್ಲಿ ಮನೆ ಮಾತಾಗಿದ್ದಾರೆ.
ಇನ್ನೇನು ಅಲ್ಲು ಅರ್ಜುನ್ ಜತೆಗೆ ಅಭಿನಯಿಸಿರುವ ಪುಷ್ಪ ಸಿನಿಮಾ ಬಿಡುಗಡೆ ಕಾಣಬೇಕಿದೆ. ಅದೇ ರೀತಿ ಒಂದರ ಹಿಂದೆ ಒಂದರಂತೆ ಎರಡು ಹಿಂದಿ ಚಿತ್ರಗಳಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಇನ್ನು ರಶ್ಮಿಕಾಗೆ ಇನ್ಸ್ಟಾಗ್ರಾಮ್ನಲ್ಲಿ 1.5 ಕೋಟಿಗೂ ಹೆಚ್ಚು ಫಾಲೋವರ್ಸ್ ಮತ್ತು ಟ್ವಿಟ್ಟರ್ನಲ್ಲಿ 26 ಲಕ್ಷ ಫಾಲೋವರ್ಸ್ ಇದ್ದಾರೆ.
ಇದನ್ನೂ ಓದಿ: ನಟಿ ರಶ್ಮಿಕಾ ಬಹಳಷ್ಟು ಜಾಹೀರಾತು ಬ್ರಾಂಡ್ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ