ಬ್ರಿಟನ್​ನಿಂದ 100 ಟನ್ ಚಿನ್ನ ಸಾಗಿಸಿ ತಂದ ಭಾರತ; 1991ರ ಬಳಿಕ ಇಷ್ಟೊಂದು ಪ್ರಮಾಣದ ಚಿನ್ನ ಸಾಗಾಣಿಕೆ ಇದೇ ಮೊದಲು

|

Updated on: May 31, 2024 | 12:55 PM

RBI shifts 100 tonnes of gold to India: ಭಾರತದ ಸೆಂಟ್ರಲ್ ಬ್ಯಾಂಕ್ ಆದ ಆರ್​ಬಿಐ ಇತ್ತೀಚೆಗೆ ಬ್ಯಾಂಕ್ ಆಫ್ ಇಂಗ್ಲೆಂಡ್ ಬಳಿ ಇದ್ದ ತನ್ನ ನೂರಕ್ಕೂ ಹೆಚ್ಚು ಟನ್​ಗಳ ಚಿನ್ನವನ್ನು ಭಾರತಕ್ಕೆ ಸಾಗಿಸಿ ತಂದಿರುವುದು ತಿಳಿದುಬಂದಿದೆ. ಫಾರೆಕ್ಸ್ ನಿಧಿಯಲ್ಲಿನ ಚಿನ್ನ ಸಂಗ್ರಹದಲ್ಲಿ ಹೆಚ್ಚಿನ ಪಾಲನ್ನು ಭಾರತದಲ್ಲೇ ಸಂಗ್ರಹಿಸಿ ಇಟ್ಟುಕೊಳ್ಳುವುದು ಈಗ ಆರ್​ಬಿಐನ ಉದ್ದೇಶವಾಗಿದೆ. 1991ರಲ್ಲಿ ಭಾರತ 100 ಟನ್ ಚಿನ್ನವನ್ನು ಹಡಗು ಮೂಲಕ ಸಾಗಿಸಿ ತಂದಿತ್ತು. ಅದಾದ ಬಳಿಕ ಇಷ್ಟು ಚಿನ್ನವನ್ನು ವಿದೇಶದಿಂದ ಸಾಗಿಸಿ ತಂದಿದ್ದು ಇದೇ ಮೊದಲು ಎನ್ನಲಾಗಿದೆ.

ಬ್ರಿಟನ್​ನಿಂದ 100 ಟನ್ ಚಿನ್ನ ಸಾಗಿಸಿ ತಂದ ಭಾರತ; 1991ರ ಬಳಿಕ ಇಷ್ಟೊಂದು ಪ್ರಮಾಣದ ಚಿನ್ನ ಸಾಗಾಣಿಕೆ ಇದೇ ಮೊದಲು
ಆರ್​ಬಿಐ
Follow us on

ನವದೆಹಲಿ, ಮೇ 31: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಫಾರೆಕ್ಸ್ ರಿಸರ್ವ್ಸ್​ನಲ್ಲಿರುವ ಒಂದಷ್ಟು ಚಿನ್ನವನ್ನು (gold reserves) ಬ್ರಿಟನ್​ನಿಂದ ಭಾರತಕ್ಕೆ ಸಾಗಿಸಿ ತಂದಿದೆ. ವರದಿಗಳ ಪ್ರಕಾರ ಬ್ಯಾಂಕ್ ಆಫ್ ಇಂಗ್ಲೆಂಡ್​ನಲ್ಲಿ (Bank of England) ಇಟ್ಟಿರುವ ನೂರು ಟನ್​ಗಳಿಗೂ ಹೆಚ್ಚು ಪ್ರಮಾಣದ ಚಿನ್ನವನ್ನು ಆರ್​ಬಿಐ ಇತ್ತೀಚೆಗೆ ಭಾರತಕ್ಕೆ ವಾಪಸ್ ತಂದಿದೆ. ಇಷ್ಟೊಂದು ಪ್ರಮಾಣದ ಚಿನ್ನವನ್ನು ವಿದೇಶದಿಂದ ಭಾರತಕ್ಕೆ ತಂದಿದ್ದು 1991ರ ಬಳಿಕ ಇದೇ ಮೊದಲು. ಮುಂಬರುವ ದಿನಗಳಲ್ಲಿ ಇನ್ನೂ ಸಾಕಷ್ಟು ಚಿನ್ನಗಳು ಭಾರತಕ್ಕೆ ವಾಪಸ್ ಬಂದು ಸೇರಲಿವೆ.

ವಿದೇಶಗಳಲ್ಲಿ ಎಷ್ಟಿವೆ ಭಾರತದ ಚಿನ್ನ?

ಆರ್​ಬಿಐ ಬಳಿ ಇರುವ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ ಅಥವಾ ಫಾರೆಕ್ಸ್ ಮೀಸಲು ನಿಧಿ ಮಾರ್ಚ್ 17ರಂದು 648.7 ಬಿಲಿಯನ್ ಡಾಲರ್ ಇದೆ. ಇದರಲ್ಲಿ ವಿದೇಶೀ ಕರೆನ್ಸಿ, ಚಿನ್ನ ಇತ್ಯಾದಿ ಇವೆ. ಚಿನ್ನದ ಸಂಗ್ರಹ 827 ಟನ್​ನಷ್ಟು ಇದೆ. ಇದರ ಮೌಲ್ಯ 57.195 ಬಿಲಿಯನ್ ಡಾಲರ್ (4.76 ಲಕ್ಷ ಕೋಟಿ ರೂ) ಆಗಿದೆ.

ಇದನ್ನೂ ಓದಿ: ಭಾರತದ ಗೋಲ್ಡ್ ರಿಸರ್ವ್ಸ್ 4 ತಿಂಗಳಲ್ಲಿ ಸಖತ್ ಹೆಚ್ಚಳ; ಆರ್​ಬಿಐ ಈ ಪರಿ ಚಿನ್ನ ಖರೀದಿ ಯಾಕೆ? ಯಾವ ದೇಶಗಳಲ್ಲಿ ಹೆಚ್ಚು ಚಿನ್ನ ಸಂಗ್ರಹವಿದೆ?

ಈ ಪೈಕಿ 408.31 ಟನ್ ಚಿನ್ನವನ್ನು ಭಾರತದ ಒಳಗೆಯೇ ವಿವಿಧ ಸ್ಥಳಗಳಲ್ಲಿ ಶೇಖರಿಸಿ ಇಡಲಾಗಿದೆ. ಉಳಿದ 400 ಟನ್​ಗೂ ಹೆಚ್ಚು ಚಿನ್ನ ವಿದೇಶಗಳಲ್ಲಿ ಇದೆ. ಮುಂದಿನ ದಿನಗಳಲ್ಲಿ ಗೋಲ್ಡ್ ರಿಸರ್ವ್ಸ್​ನಲ್ಲಿರುವ ಬಹುಪಾಲು ಚಿನ್ನವನ್ನು ಭಾರತದಲ್ಲೇ ಇರಿಸಿಕೊಳ್ಳಲು ಆರ್​ಬಿಐ ತೀರ್ಮಾನಿಸಿದೆ.

ಭಾರತಕ್ಕೆ ಚಿನ್ನ ಸಾಗಿಸಿ ತಂದರೆ ಏನು ಪ್ರಯೋಜನ?

ಬ್ಯಾಂಕ್ ಆಫ್ ಇಂಗ್ಲೆಂಡ್ ಇತ್ಯಾದಿ ಸಂಸ್ಥೆಗಳು ಚಿನ್ನವನ್ನು ಹಿಡಿದಿಟ್ಟುಕೊಳ್ಳಲು ನಿರ್ದಿಷ್ಟ ಶುಲ್ಕ ಪಡೆಯುತ್ತವೆ. ಚಿನ್ನವನ್ನು ಭಾರತದಲ್ಲೇ ಇಟ್ಟುಕೊಂಡರೆ ಈ ಶುಲ್ಕ ಹಣವನ್ನು ಆರ್​ಬಿಐ ಉಳಿಸಬಹುದು.

ಚಿನ್ನ ಸಂಗ್ರಹಿಸಿಟ್ಟ ದೇಶಗಳಲ್ಲಿ ಏನಾದರೂ ಪ್ರಕ್ಷುಬ್ದ ಅಥವಾ ಅನಿಶ್ಚಿತ ವಾತಾರಣ ಎದುರಾದರೆ ತುರ್ತಾಗಿ ಚಿನ್ನ ಸಾಗಿಸಲು ಕಷ್ಟವಾಗಬಹುದು. ಚಿನ್ನಕ್ಕೆ ಅಪಾಯವೂ ಆಗಬಹುದು. 1991ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತ ರಾತ್ರೋರಾತ್ರಿ ಹಡಗು ಮೂಲಕ ಚಿನ್ನವನ್ನು ಸಾಗಿಸಿ ತರಲಾಗಿತ್ತು.

ಇದನ್ನೂ ಓದಿ: ಚಿನ್ನದ ಬೆಲೆ ಹೆಚ್ಚಾದರೂ ಆಭರಣಗಳಿಗೆ ಕಡಿಮೆ ಆಗಿಲ್ಲ ಬೇಡಿಕೆ; 10ರಿಂದ 20 ಗ್ರಾಂ ಚಿನ್ನದ ಒಡವೆಗಳು ಹೆಚ್ಚು ಸೇಲ್; ಐದು ಗ್ರಾಮ್​ವೊಳಗಿನ ಜ್ಯೂವೆಲರಿ ಕೇಳೋರಿಲ್ಲ

ಅಮೆರಿಕದ ಮೊದಲಾದ ದೇಶಗಳು ತಮ್ಮ ಪಾಲಿನ ಚಿನ್ನವನ್ನು ತಮ್ಮಲ್ಲೇ ಸಂಗ್ರಹಿಸಿಕೊಳ್ಳುತ್ತವೆ. ಅಮೆರಿಕದಲ್ಲಿ 16-17 ರಹಸ್ಯ ಸ್ಥಳಗಳಲ್ಲಿ ಚಿನ್ನವನ್ನು ಶೇಖರಿಸಿ ಇಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ