ನವದೆಹಲಿ, ಜನವರಿ 8: ನಿರೀಕ್ಷೆಯಂತೆ ರೆಪೋ ದರ ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸಲು ಆರ್ಬಿಐ ನಿರ್ಧರಿಸಿದೆ. ಮಾನಿಟರಿ ಪಾಲಿಸಿ ಕಮಿಟಿ ಸಭೆಯ (RBI MPC Meet) ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ವಿಚಾರವನ್ನು ತಿಳಿಸಿದ್ದಾರೆ. ಎಂಪಿಸಿ ಸಭೆ ಆರಂಭವಾಗುವ ಮುನ್ನ ಬಹಳಷ್ಟು ಆರ್ಥಿಕ ತಜ್ಞರು ಆರ್ಬಿಐನಿಂದ ಬಡ್ಡಿದರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದರು. ರಾಯ್ಟರ್ಸ್ ಪೋಲ್ನಲ್ಲಿ ಪಾಲ್ಗೊಂಡಿದ್ದ 41 ಆರ್ಥಿಕ ತಜ್ಞರ ಒಮ್ಮತದ ಅನಿಸಿಕೆ ಇದೇ ಆಗಿತ್ತು. ಎಸ್ಬಿಐ ರಿಸರ್ಚ್ನ ಆರ್ಥಿಕ ತಜ್ಞರು ಕೂಡ ಇದನ್ನೇ ಹೇಳಿದ್ದರು.
ರೆಪೋ ದರ ಎಂಬುದು ವಾಣಿಜ್ಯ ಬ್ಯಾಂಕುಗಳಿಗೆ ಆರ್ಬಿಐ ನೀಡುವ ಸಾಲಕ್ಕೆ ವಿಧಿಸಲಾಗುವ ಬಡ್ಡಿದರವಾಗಿದೆ. ಈ ದರದಲ್ಲಿ ವ್ಯತ್ಯಯವಾದರೆ ಬ್ಯಾಂಕುಗಳೂ ಕೂಡ ತಮ್ಮ ಗ್ರಾಹಕರ ಸಾಲ ಅಥವಾ ಠೇವಣಿಗೆ ಬಡ್ಡಿದರ ಪರಿಷ್ಕರಿಸಬಹುದು. ಹೀಗಾಗಿ, ಆರ್ಬಿಐನ ರೆಪೋ ದರ ದೇಶದ ಹಣಕಾಸು ಕ್ಷೇತ್ರದ ಮೇಲೆ ಹಾಗೂ ಆ ಮೂಲಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ-ಪ್ಯೂಮಾ 8 ವರ್ಷದ ಒಡನಾಟ ಅಂತ್ಯ; ಎಜಿಲಿಟಾಸ್ಗೆ ಇನ್ನು ವಿರಾಟ್ ಬಲ
ಹಣದುಬ್ಬರ ಇಳಿಕೆಯಾಗಿರಬಹುದು ಎಂದು ಆರ್ಬಿಐ ಇದೇ ವೇಳೆ ಸಿಹಿ ಸುದ್ದಿ ನೀಡಿದೆ. 2022-23ರ ಹಣಕಾಸು ವರ್ಷದಲ್ಲಿ ಶೇ. 6.7ರಷ್ಟಿದ್ದ ಹಣದುಬ್ಬರವು 2023-24ರಲ್ಲಿ ಏಪ್ರಿಲ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ಶೇ. 5.5ಕ್ಕೆ ಇಳಿಕೆ ಆಗಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. 2023-24ರ ಇಡೀ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 5.4ರಷ್ಟಿರಬಹುದು ಎಂದು ಆರ್ಬಿಐ ಅಂದಾಜು ಮಾಡಿದೆ.
#WATCH | RBI Governor Shaktikanta Das says, “Global growth is expected to remain steady in 2024, with heterogeneity across regions. Though global trade momentum remains weak, it is exhibiting signs of recovery and is likely to grow faster in 2024. Inflation has softened… pic.twitter.com/gxbg1P11Pn
— ANI (@ANI) February 8, 2024
ಇನ್ನು, 2024-25ರ ಹಣಕಾಸು ವರ್ಷದಲ್ಲಿ ಹಣದುಬ್ಬ ಶೇ. 4.5ಕ್ಕೆ ಇಳಿಯಬಹುದು ಎನ್ನುವ ಶುಭ ವಾರ್ತೆಯನ್ನು ಆರ್ಬಿಐ ಗವರ್ನರ್ ತಿಳಿಸಿದ್ದಾರೆ. ಮುಂದಿನ ಹಣಕಾಸು ವರ್ಷದ ಮೊದಲ ನಾಲ್ಕು ಕ್ವಾರ್ಟರ್ಗಳಲ್ಲಿ ಕ್ರಮವಾಗಿ ಶೇ. 5, 4, 4.6 ಮತ್ತು 4.7ರಷ್ಟು ಹಣದುಬ್ಬರ ಇರಬಹುದು ಎಂದಿದ್ದಾರೆ ಅವರು.
ಇದೇ ವೇಳೆ 2024-24ರ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 7ರಷ್ಟು ಬೆಳೆಯಬಹುದು ಎನ್ನುವ ಅಂದಾಜಿಗೆ ಆರ್ಬಿಐ ಬಂದಿದೆ. ಈ ವರ್ಷ ನಾಲ್ಕು ಕ್ವಾರ್ಟರ್ಗಳಲ್ಲಿ ಕ್ರಮವಾಗಿ ಶೇ. 7.2, ಶೇ. 6.8, ಶೇ. 7 ಮತ್ತು ಶೇ. 6.9ರಷ್ಟು ಜಿಡಿಪಿ ಬೆಳೆಯಬಹುದು ಎಂದು ಎಂಪಿಸಿ ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.
ಇದನ್ನೂ ಓದಿ: ಎಲ್ಐಸಿಯಿಂದ ಇಂಡೆಕ್ಸ್ ಪ್ಲಸ್ ಹೊಸ ಪಾಲಿಸಿ; ಷೇರುಪೇಟೆ ಬೆಳವಣಿಗೆಯ ಲಾಭ ಪಡೆಯಿರಿ
ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಆರ್ಬಿಐ ಗವರ್ನರ್ ಸೇರಿದಂತೆ ಆರು ಮಂದಿ ಸದಸ್ಯರಿದ್ದಾರೆ. ಗವರ್ನರ್ ಶಕ್ತಿಕಾಂತ್ ದಾಸ್ ಅಲ್ಲದೇ, ರಾಜೀವ್ ರಂಜನ್, ಮೈಕೇಲ್ ದೇಬಬ್ರತಾ ಪಾತ್ರ, ಶಶಾಂಕ್ ಭಿಡೆ, ಆಶಿಮಾ ಗೋಯಲ್ ಮತ್ತು ಜಯಂತ್ ಆರ್ ವರ್ಮಾ ಅವರು ಈ ಸಮಿತಿ ಸದಸ್ಯರಾಗಿದ್ದಾರೆ. ಇವರಲ್ಲಿ ದಾಸ್, ರಂಜನ್ ಮತ್ತು ಮೈಕೇಲ್ ಅವರು ಆರ್ಬಿಐ ಅಧಿಕಾರಿಗಳಾಗಿದ್ದರೆ, ಇನ್ನುಳಿದ ಮೂವರು ಸ್ವತಂತ್ರ ಸದಸ್ಯರು. ಈ ಸಮಿತಿ ಪ್ರತೀ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಆರ್ಥಿಕ ಮತ್ತು ಹಣಕಾಸು ಪರಿಸ್ಥಿತಿಯನ್ನು ಅವಲೋಕಿಸಿ, ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:14 am, Thu, 8 February 24