
ಬೆಂಗಳೂರು, ಫೆಬ್ರುವರಿ 5: ಸ್ವಂತವಾಗಿ ಐದನೇ ತಲೆಮಾರಿನ ಫೈಟರ್ ಜೆಟ್ ತಯಾರಿಸುವ ಅತ್ಯಂತ ಮಹತ್ವಾಕಾಂಕ್ಷೆಯ ಎಎಂಸಿಎ ಯೋಜನೆಯ (AMCA project) ರೇಸ್ನಿಂದ ಎಚ್ಎಎಲ್ ಹೊರಬಿದ್ದಿದೆ. ಟಾಟಾ ಗ್ರೂಪ್, ಕಲ್ಯಾಣಿ ಗ್ರೂಪ್ ಮತ್ತು ಎಲ್ ಅಂಡ್ ಟಿ ನೇತೃತ್ವದ ಗುಂಪುಗಳು (Consortium) ಈಗ ಈ ರೇಸ್ನಲ್ಲಿ ಉಳಿದಿವೆ. ಮುಂದಿನ ದಿನಗಳಲ್ಲಿ ಒಂದು ಸಂಸ್ಥೆಗೆ ಎಎಂಸಿಎ ಅಭಿವೃದ್ಧಿಪಡಿಸುವ ಮಹತ್ವದ ಪ್ರಾಜೆಕ್ಟ್ ಸಿಗಲಿದೆ. ಬಿಇಎಂಎಲ್, ಬಿಇಎಲ್, ಡಾಟಾ ಪ್ಯಾಟರ್ನ್ಸ್ ಇತ್ಯಾದಿ ಕಂಪನಿಗಳು ಕಲ್ಯಾಣಿ ಗ್ರೂಪ್ ಮತ್ತು ಎಲ್ ಅಂಡ್ ಟಿ ನೇತೃತ್ವದ ಕನ್ಸಾರ್ಟಿಯಂಗಳಲ್ಲಿ ಇವೆ.
ಎಎಂಸಿಎ ಪ್ರಾಜೆಕ್ಟ್ಗೆ ಆಯ್ಕೆಯಾದ ಸಂಸ್ಥೆಯು ಪ್ರೋಟೊಟೈಪ್ಗಳನ್ನು ಮೊದಲು ನಿರ್ಮಿಸಬೇಕಾಗುತ್ತದೆ. ಈ ಪ್ರೋಟೋಟೈಪ್ ನಿರ್ಮಾಣ ಯೋಜನೆಯೇ 16,000 ಕೋಟಿ ರೂ ಆಗಿರುತ್ತದೆ. ಇವುಗಳ ಪ್ರಯೋಗಗಳು ಯಶಸ್ವಿಯಾದ ಬಳಿಕ ಫೈಟರ್ ಜೆಟ್ಗಳ ಉತ್ಪಾದನೆ ಶುರುವಾಗುತ್ತದೆ. ಇದಕ್ಕೆ ಸುಮಾರು 10 ವರ್ಷಗಳಾಗುವ ನಿರೀಕ್ಷೆ ಇದೆ. ಪ್ರೋಟೋಟೈಪ್ನ ಮೊದಲ ಫ್ಲೈಟ್ 2028 ಅಥವಾ 2029ರಲ್ಲಿ ನಡೆಯಬಹುದು. ಇದಕ್ಕೆ ಹಸಿರು ನಿಶಾನೆ ಸಿಕ್ಕರೆ ಜೆಟ್ಗಳ ಪ್ರೊಡಕ್ಷನ್ 2035ರಲ್ಲಿ ಆರಂಭವಾಗಬಹುದು.
ಸದ್ಯ ಎಎಂಸಿಎ ಪ್ರಾಜೆಕ್ಟ್ ರೇಸ್ನಲ್ಲಿ ಕಣಕ್ಕಿಳಿದಿರುವುವೆಲ್ಲಾ ಖಾಸಗಿ ಸಂಸ್ಥೆಗಳೇ ಎನ್ನುವುದು ವಿಶೇಷ. ಭಾರತೀಯ ವಾಯುಪಡೆಗೆ ನೂರಕ್ಕೂ ಅಧಿಕ ಫೈಟರ್ಗಳ ಅಗತ್ಯ ಇದೆ. ಹೀಗಾಗಿ, ಈ ಎಎಂಸಿಎ ಪ್ರಾಜೆಕ್ಟ್ನ ಮೌಲ್ಯ ಹಲವು ಲಕ್ಷ ಕೋಟಿ ರೂಗಳಿಗೂ ಅಧಿಕ ಇರಬಹುದು.
ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ಜಂಟಿ ಹೇಳಿಕೆ: ಪೀಯೂಶ್ ಗೋಯಲ್
ಫೈಟರ್ ಜೆಟ್ ತಯಾರಿಕೆ ಎಂದರೆ ಡೀಫಾಲ್ಟ್ ಆಗಿ ಎಲ್ಲರ ಕಣ್ಣು ಎಚ್ಎಎಲ್ನತ್ತಲ್ಲೇ ನೆಟ್ಟಿರುತ್ತದೆ. ಆದರೆ, ಎಎಂಸಿಎ ಪ್ರೋಗ್ರಾಮ್ಗೆ ಸರ್ಕಾರ ಖಾಸಗಿಯವರಿಗೂ ಅವಕಾಶ ಕೊಡಲು ನಿರ್ಧರಿಸಿತು. ಪ್ರಾಜೆಕ್ಟ್ಗೆ ಇಒಐ ಸಲ್ಲಿಸಲು ಕೆಲ ಮಾನದಂಡಗಳನ್ನು ಸರ್ಕಾರ ನಿಗದಿ ಮಾಡಿತು. ಅಂಥ ಒಂದು ಮಾನದಂಡದಲ್ಲಿ ಎಚ್ಎಎಲ್ ವಿಫಲವಾಯತು ಎನ್ನಲಾಗಿದೆ.
ಒಂದು ಕಂಪನಿಯ ಟರ್ನೋವರ್ಗಿಂತ ಅದರ ಆರ್ಡರ್ ಬುಕ್ ಮೂರು ಪಟ್ಟು ಹೆಚ್ಚಾಗಿದ್ದರೆ ಪ್ರಾಜೆಕ್ಟ್ ಪರಿಗಣನೆಗೆ ಆದ್ಯತೆ ಕೊಡಲಾಗುವುದಿಲ್ಲ ಎನ್ನುವುದು ಒಂದು ನಿಯಮ. ಈ ವಿಚಾರವು ಎಚ್ಎಎಲ್ಗೆ ಮುಳುವಾಯಿತು. ಎಚ್ಎಎಲ್ನ ಟರ್ವೋವರ್ಗಿಂತ ಅದರ ಆರ್ಡರ್ ಬುಕ್ ಎಂಟು ಪಟ್ಟು ಹೆಚ್ಚಿದೆ.
ಇದನ್ನೂ ಓದಿ: ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ
ಎಎಂಸಿಎ ಪ್ರಾಜೆಕ್ಟ್ ಭಾರತಕ್ಕೆ ಬಹಳ ಮಹತ್ವದ್ದಾಗಿದೆ. ದೇಶೀಯವಾಗಿ ಐದನೇ ತಲೆಮಾರಿನ ಸ್ಟೀಲ್ತ್ ಜೆಟ್ ತಯಾರಿಸುವ ಯೋಜನೆ ಇದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರವೇ ಐದನೇ ತಲೆಮಾರಿನ ಜೆಟ್ ತಯಾರಿಸಿವೆ. ಫ್ರಾನ್ಸ್ನ ರಫೇಲ್ ಜೆಟ್ 4.5 ತಲೆಮಾರಿನ ಜೆಟ್ ಎನಿಸಿದೆ. ಸ್ವಂತವಾಗಿ ಐದನೇ ತಲೆಮಾರಿನ ಜೆಟ್ ತಯಾರಿಕೆ ಎಂದರೆ ಅದರ ಎಂಜಿನ್ ಸೇರಿದಂತೆ ಪ್ರತಿಯೊಂದನ್ನೂ ದೆಶೀಯವಾಗಿ ಅಭಿವೃದ್ಧಿಪಡಿಸಿ ತಯಾರಿಸಬೇಕು. ಸ್ವಾವಲಂಬಿ ಭಾರತಕ್ಕೆ ಇದು ತಾಜಾ ನಿದರ್ಶನವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ