ಟಿ-ಸಿರೀಸ್ – ರಿಲಯನ್ಸ್ ಎಂಟರ್ಟೇನ್ಮೆಂಟ್ ಸಹಯೋಗ; 1000 ಕೋಟಿ ರೂ. ಹೂಡಿಕೆ, 10 ಸಿನಿಮಾ ನಿರ್ಮಾಣ
Reliance Entertainment- T- Series Collaboration: ರಿಲಯನ್ಸ್ ಎಂಟರ್ಟೇನ್ಮೆಂಟ್ ಹಾಗೂ ಟಿ- ಸಿರೀಸ್ ಸಹಯೋಗದಲ್ಲಿ 1000 ಕೋಟಿ ಹೂಡಿಕೆಯೊಂದಿಗೆ 10 ಸಿನಿಮಾ ನಿರ್ಮಾಣದ ಬಗ್ಗೆ ಘೋಷಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಹಿಂದಿ ಚಿತ್ರ ನಿರ್ಮಾಣ ಸಂಸ್ಥೆ ರಿಲಯನ್ಸ್ ಎಂಟರ್ಟೇನ್ಮೆಂಟ್ ಮತ್ತು ಟಿ- ಸಿರೀಸ್ ಸಹಯೋಗದ ಬಗ್ಗೆ ತಿಳಿಸಿದ್ದು, 10ಕ್ಕೂ ಹೆಚ್ಚು ಯೋಜನೆಗಳಿಗೆ (ಸಿನಿಮಾಗಳು) ಅಂದಾಜು 1000 ಕೋಟಿ ರೂಪಾಯಿಯ ಘೋಷಣೆ ಮಾಡಲಾಗಿದೆ. ವಿವಿಧ ಬಗೆಯ ಮತ್ತು ದೊಡ್ಡ ಹಾಗೂ ಸಣ್ಣ ಬಜೆಟ್ನ ಕಂಟೆಂಟ್ಗೆ (ವಿಚಾರ- ವಿಷಯಕ್ಕೆ) ಪ್ರಾಮುಖ್ಯ ಇರುವ ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಎರಡೂ ಕಂಪೆನಿಗಳು ಹೇಳಿಕೆಯಲ್ಲಿ ತಿಳಿಸಿವೆ. ಭೂಷಣ್ ಕುಮಾರ್ ಅವರ ಟಿ-ಸಿರೀಸ್ 1984ರಲ್ಲಿ ಸಂಗೀತಕ್ಕೆ ಸಂಬಂಧಿಸಿದ ನಿರ್ಮಾಣಗಳಿಗಾಗಿ ಆರಂಭವಾದದ್ದು. ಕಳೆದ ಕೆಲವು ವರ್ಷದಿಂದ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಅನಿಲ್ ಅಂಬಾನಿ ಅವರ ರಿಲಯನ್ಸ್ ಎಂಟರ್ಟೇನ್ಮೆಂಟ್ನ 100ಕ್ಕೂ ಹೆಚ್ಚು ಸಿನಿಮಾದ ಮ್ಯೂಸಿಕ್ ಮಾರ್ಕೆಟಿಂಗ್ಗೆ ಕೆಲಸ ಮಾಡಿದೆ.
ಮುಂಬರುವ ಯೋಜನೆಗಳಲ್ಲಿ ಮೂರು ದೊಡ್ಡ ಬಜೆಟ್ ಮತ್ತು ಒಂದಷ್ಟು ಉತ್ತಮ ವಿಚಾರಗಳನ್ನು ಒಳಗೊಂಡ ಸಿನಿಮಾಗಳಿವೆ. ತಮಿಳಿನ ಕೆಲವು ಸಿನಿಮಾಗಳನ್ನು ಹಿಂದಿಗೆ ತರುವ ಆಲೋಚನೆ ಇದೆ. ಅದರಲ್ಲಿ ಡ್ರಾಮಾಗಳು, ಆ್ಯಕ್ಷನ್ ಥ್ರಿಲ್ಲರ್ಗಳು, ಐತಿಹಾಸಿಕ ಬಯೋಪಿಕ್, ಗೂಢಚರ್ಯ ಥ್ರಿಲ್ಲರ್, ಕೋರ್ಟ್ ರೂಮ್ ಡ್ರಾಮಾ, ವಿಡಂಬನಾತ್ಮಕ ಹಾನ್ಯ, ರೊಮ್ಯಾನ್ಸ್ ಡ್ರಾಮ್, ನಿಜವಾದ ಜೀವನ ಆಧಾರಿತ ಸಿನಿಮಾಗಳು ಇವುಗಳಲ್ಲಿ ಒಳಗೊಂಡಿವೆ. ಕಳೆದ ಕೆಲ ವರ್ಷಗಳಲ್ಲಿ ರಿಲಯನ್ಸ್ ಎಂಟರ್ಟೇನ್ಮೆಂಟ್ನಿಂದ ಸಿಂಬಾ (Simmba) ಮತ್ತು ಸೂಪರ್ 30ಯಂಥ ಚಿತ್ರಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಅಕ್ಷಯ್ಕುಮಾರ್ ದೊಡ್ಡ ಬಜೆಟ್ ಚಿತ್ರ ಸೂರ್ಯವಂಶಿ, ಕ್ರೀಡೆಗೆ ಸಂಬಂಧಿಸಿದ “83” ಬಿಡುಗಡೆಗೆ ಸಿದ್ಧವಾಗಿದೆ. ಕೊರೊನಾದ ಆರಂಭದಲ್ಲಿ ಅದು ಸಿದ್ಧವಾಗಿತ್ತು.
ಟಿ- ಸಿರೀಸ್ನಿಂದ 2019ವೊಂದರಲ್ಲೇ ತಾನಾಜೀ- ದ ಅನ್ಸಂಗ್ ವಾರಿಯರ್, ಕಬೀರ್ ಸಿಂಗ್ ಮತ್ತು ಇತರ ಚಿತ್ರಗಳನ್ನು ಬಿಡುಗಡೆ ಮಾಡಿ, ಹಿಟ್ ಆಗಿದ್ದವು. ಮುಂದಿನ 24ರಿಂದ 36 ತಿಂಗಳಲ್ಲಿ ಸಿನಿಮಾ ಮೇಕರ್ಗಳಾದ ಪುಷ್ಕರ್ ಮತ್ತು ಗಾಯತ್ರಿ, ವಿಕ್ರಮ್ಜಿತ್ ಸಿಂಗ್, ಮಂಗೇಶ್ ಹಡವಲೆ, ಶ್ರೀಜಿತ್ ಮುಖರ್ಜಿ ಹಾಗೂ ಸಂಕಲ್ಪ್ ರೆಡ್ಡಿ ಜತೆ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇವುಗಳಲ್ಲಿ ನಾಲ್ಕರಿಂದ ಐದು ಜನಪ್ರಿಯ ತಾರೆಗಳು ನಟಿಸಲಿದ್ದಾರೆ. 2022ರಿಂದ ಆರಂಭಗೊಂಡಂತೆ ದೊಡ್ಡ ತೆರೆ ಮೇಲೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.
“ಸಂಗೀತ ಮಾರ್ಕೆಟಿಂಗ್ನಲ್ಲಿ ಒಟ್ಟಿಗೆ ಕೆಲಸ ಮಾಡಿದ ಮೇಲೆ, ಈ ಸಹಯೋಗವು ಸರಿಯಾದ ಸಮಯದಲ್ಲಿ ಆಗುತ್ತಿದೆ. ಮತ್ತು ಇದರಿಂದ ನಮ್ಮ ಬಾಂಧವ್ಯ (ರಿಲಯನ್ಸ್ ಜತೆಗೆ) ಬಲಗೊಳ್ಳುತ್ತದೆ,” ಟಿ- ಸಿರೀಸ್ನ ಅಧ್ಯಕ್ಷ ಮತ್ತು ಕಾರ್ಯನಿರ್ವಹಣಾಧಿಕಾರಿ ಭೂಷಣ್ ಕುಮಾರ್ ಹೇಳಿಕೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Reliance Infrastructure: ಅನಿಲ್ ಅಂಬಾನಿ ರಿಲಯನ್ಸ್ ಇನ್ಫ್ರಾಗೆ 4660 ಕೋಟಿ ರೂ. ಮಧ್ಯಸ್ಥಿಕೆ ಪ್ರಕರಣ ಗೆಲುವು
(Reliance Entertainment And T- Series Jointly Announced 10 Movies With Rs 1000 Crore Investment)
Published On - 11:30 am, Mon, 13 September 21