Paytm Payments Bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ 1 ಕೋಟಿ ರೂ. ದಂಡ ವಿಧಿಸಿದ ಆರ್​ಬಿಐ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ 1 ಕೋಟಿ ರೂಪಾಯಿ ದಂಡ ಹಾಕಲಾಗಿದೆ. ಯಾವ ಕಾರಣಕ್ಕಾಗಿ ಎಂಬುದರ ವಿವರ ಈ ಲೇಖನದಲ್ಲಿದೆ.

Paytm Payments Bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ 1 ಕೋಟಿ ರೂ. ದಂಡ ವಿಧಿಸಿದ ಆರ್​ಬಿಐ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 21, 2021 | 11:10 AM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬುಧವಾರದಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ಮೇಲೆ 1 ಕೋಟಿ ರೂಪಾಯಿ ದಂಡ ವಿಧಿಸಿದೆ. ಕೆಲವು ನಿರ್ದಿಷ್ಟ ಉಲ್ಲಂಘನೆಯ ಕಾರಣಕ್ಕೆ ಹೀಗೆ ಮಾಡಲಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಅಂತಿಮ ಪ್ರಮಾಣಪತ್ರ ದೃಢೀಕರಣದ ಪರೀಕ್ಷೆ ಮಾಡಿದಾಗ ಆರ್​ಬಿಐಗೆ ಗೊತ್ತಾಗಿದ್ದು ಏನೆಂದರೆ, ಪಿಪಿಬಿಎಲ್​ನಿಂದ ಸಲ್ಲಿಸಿದ ಮಾಹಿತಿಯು ವಾಸ್ತವದ ಜತೆಗೆ ತಾಳೆ ಆಗುತ್ತಿರಲಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಲಾಗಿದೆ. “ಪಿಎಸ್​ಎಸ್​ ಕಾಯ್ದೆ ಸೆಕ್ಷನ್ 26 (2)ರ ಅಡಿಯಲ್ಲಿ ಇದು ಅಪರಾಧ ಅಂತಾಗುವುದರಿಂದ ಪಿಪಿಬಿಎಲ್​ಗೆ ನೋಟಿಸ್ ನೀಡಲಾಯಿತು. ಲಿಖಿತ ಪ್ರತಿಕ್ರಿಯೆ ಮತ್ತು ವಯಕ್ತಿಕ ವಿಚಾರಣೆ ವೇಳೆ ಮೌಖಿಕ ಹೇಳಿಕೆಯನ್ನು ಪರಿಶೀಲಿಸಿದ ಮೇಲೆ ಮೇಲ್ಕಂಡ ಆರೋಪವು ದೃಢೀಕರಿಸಿದೆ ಮತ್ತು ಹಣಕಾಸು ದಂಡವನ್ನು ವಿಧಿಸಲಾಗಿದೆ,” ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಇನ್ನೂ ಮುಂದುವರಿದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಗಡಿ-ಆಚೆಗೆ ಹಾಗೂ ದೇಶದೊಳಗೆ ಸೇವೆ ಒದಗಿಸುವ ವೆಸ್ಟರ್ನ್ ಯೂನಿಯನ್ ಫೈನಾನ್ಷಿಯಲ್ ಸರ್ವೀಸಸ್ ಇಂಕ್ (WUFSI)ಗೆ 27 ಲಕ್ಷ ರೂಪಾಯಿ ದಂಡ ಹಾಕಿದೆ. ಫೆಬ್ರವರಿ 22, 2017ರ ಹಣ ವರ್ಗಾವಣೆ ಸೇವಾ ಯೋಜನೆ ಮಾಸ್ಟರ್​ ನಿರ್ದೇಶನಗಳಲ್ಲಿ (MTSS) ಕೆಲವು ನಿಯಮಾವಳಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈ ದಂಡ ವಿಧಿಸಲಾಗಿದೆ.

ನಿಯಂತ್ರಕ ನಿಯಮಾವಳಿಗಳಲ್ಲಿನ ಕೊರತೆಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಸಂಸ್ಥೆ ಹಾಗೂ ಗ್ರಾಹಕರ ಜತೆಗಿನ ಯಾವುದೇ ನಿರ್ದಿಷ್ಟವಾದ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವಕ್ಕೆ ಉದ್ದೇಶಿಸಿದ್ದಲ್ಲ ಎಂದು ಆರ್​ಬಿಐ ಹೇಳಿಕೆ ನೀಡಿದೆ. ಒಂದು ವರ್ಷದಲ್ಲಿ 30ಕ್ಕಿಂತ ಹೆಚ್ಚು ಬಾರಿ ಒಬ್ಬ ಫಲಾನುಭವಿ ರೆಮಿಟೆನ್ಸ್​ ಮಾಡಬಾರದು ಎಂಬ ಮಿತಿಯನ್ನು 2019ರ ಮತ್ತು 2020ನೇ ಇಸವಿಯಲ್ಲಿ WUFSI ಉಲ್ಲಂಘಿಸಿರುವ ಬಗ್ಗೆ ವರದಿ ಆಗಿದೆ. ಇದಕ್ಕೆ ಸಂಬಂಧಿಸಿದ ಹಾಗೆ ಅರ್ಜಿಯನ್ನು ಹಾಕಲಾಗಿದೆ. ಅರ್ಜಿಗಳನ್ನು ಸಲ್ಲಿಸಿದ್ದನ್ನು ಪರಿಶೀಲಿಸಿ, ವಯಕ್ತಿಕ ಅಹವಾಲು ಆಲಿಕೆ ಸಂದರ್ಭದಲ್ಲಿ ಮೌಖಿಕ ಸಲ್ಲಿಕೆಯನ್ನು ಗಣನೆಗೆ ತೆಗೆದುಕೊಂಡು, ಮೇಲ್ಕಂಡ ನಿಯಮಾವಳಿಗಳ ಉಲ್ಲಂಘನೆಗಾಗಿ ಹಣಕಾಸು ದಂಡ ವಿಧಿಸುವುದಕ್ಕೆ ಆರ್​ಬಿಐ ನಿರ್ಧಾರ ಮಾಡಿತು ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಇದನ್ನೂ ಓದಿ: State Bank Of India: ಆರ್​ಬಿಐನಿಂದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾಗೆ 1 ಕೋಟಿ ರೂಪಾಯಿ ದಂಡ