ನವೆಂಬರ್ನಲ್ಲಿ 0.7 ಪ್ರತಿಶತ ಇದ್ದ ಹಣದುಬ್ಬರ ಡಿಸೆಂಬರ್ನಲ್ಲಿ ಶೇ. 1.3ಕ್ಕೆ ಏರಿಕೆ
Retail Inflation in India rises to 1.33pc in 2025 December: ಡಿಸೆಂಬರ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 1.33ಕ್ಕೆ ಏರಿದೆ. ನವೆಂಬರ್ನಲ್ಲಿ ಇದು ಶೇ. 0.71 ಇತ್ತು. ಅದಕ್ಕೆ ಹೋಲಿಸಿದರೆ ಡಿಸೆಂಬರ್ನಲ್ಲಿ ಹಣದುಬ್ಬರ ಬಹುತೇಕ ದ್ವಿಗುಣಗೊಂಡಿದೆ. ಸತತ 11ನೇ ತಿಂಗಳು ಭಾರತದಲ್ಲಿ ಹಣದುಬ್ಬರವು ಸರ್ಕಾರದ ಶೇ. 4ರ ಗುರಿಗಿಂತ ಕೆಳಗೇ ಇರುವುದು ವಿಶೇಷ.

ನವದೆಹಲಿ, ಜನವರಿ 12: ಭಾರತದ ರೀಟೇಲ್ ಹಣದುಬ್ಬರ (Inflation) ಡಿಸೆಂಬರ್ ತಿಂಗಳಲ್ಲಿ ಬಹುತೇಕ ಎರಡು ಪಟ್ಟು ಹೆಚ್ಚಿದೆ. ನವೆಂಬರ್ನಲ್ಲಿ ಶೇ. 0.71 ಇದ್ದ ಬೆಲೆ ಏರಿಕೆ ಮಟ್ಟ ಡಿಸೆಂಬರ್ನಲ್ಲಿ 1.33 ಪ್ರತಿಶತ ಆಗಿದೆ. ಕಳೆದ ಮೂರು ತಿಂಗಳಲ್ಲೇ ಡಿಸೆಂಬರ್ನ ಹಣದುಬ್ಬರ ಗರಿಷ್ಠ ಮಟ್ಟ ಎನಿಸಿದೆ. ಆದರೂ ಕೂಡ ಈ ದರವು ಆರ್ಬಿಐ ತಾಳಿಕೆ ಮಿತಿಗಿಂತ ಕಡಿಮೆ ಇದೆ. ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರವು ಮತ್ತಷ್ಟು ಮೇಲೇರುವ ಸಾಧ್ಯತೆ ಇದೆ.
ಡಿಸೆಂಬರ್ ತಿಂಗಳಲ್ಲಿ ಅಧಿಕ ಹಣದುಬ್ಬರಕ್ಕೆ ಕಾರಣವಾಗಿದ್ದು ತರಕಾರಿ, ಮಾಂಸ, ಮಸಾಲೆ, ಬೇಳೆ ಕಾಳುಗಳು ಇತ್ಯಾದಿ ಆಹಾರಪದಾರ್ಥಗಳ ಬೆಲೆಗಳು ಅಧಿಕಗೊಂಡಿದ್ದು. ತರಕಾರಗಳ ಬೆಲೆ ಕಳೆದ ಎರಡು ತಿಂಗಳಲ್ಲಿ ಗಣನೀಯವಾಗಿ ಕಡಿಮೆ ಆಗಿದ್ದರಿಂದ ಆ ಎರಡೂ ತಿಂಗಳು ಹಣದುಬ್ಬರ ದರ ತೀರಾ ಕೆಳಗೆ ಇತ್ತು. ಈಗ ಬೆಲೆ ಚೇತರಿಕೆ ಪಡೆದಿರುವುದರಿಂದ ಹಣದುಬ್ಬರವು ಮೇಲ್ಮಟ್ಟಕ್ಕೆ ಹೋಗಲು ಸಾಧ್ಯವಾಗದೆ.
ಇದನ್ನೂ ಓದಿ: ನವೆಂಬರ್ನಲ್ಲಿ ಹಣದುಬ್ಬರ ಶೇ. 0.71; ಅಕ್ಟೋಬರ್ಗಿಂತ 46 ಮೂಲಾಂಕಗಳಷ್ಟು ಬೆಲೆ ಹೆಚ್ಚಳ
ಹಣದುಬ್ಬರ ಮತ್ತಷ್ಟು ಮೇಲೆ ಹೋಗಲು ಆರ್ಬಿಐ ಬಯಸುತ್ತದಾ?
ಹಣದುಬ್ಬರವನ್ನು ಶೇ. 4ರ ಆಸುಪಾಸಿನಲ್ಲಿ ಇರಿಸಬೇಕು ಎಂದು ಆರ್ಬಿಐಗೆ ಸರ್ಕಾರ ಸೂಚನೆ ಕೊಟ್ಟಿದೆ. ಈ ಮಟ್ಟವನ್ನು ಕಾಯ್ದುಕೊಳ್ಳಲು ಆರ್ಬಿಐ ಹಣದುಬ್ಬರಕ್ಕೆ ತಾಳಿಕೆ ಮಿತಿಯಾಗಿ ಶೇ. 2ರಿಂದ ಶೇ. 6 ಅನ್ನು ನಿಗದಿ ಮಾಡಿದೆ. ಈ ದರವು ಈ ತಾಳಿಕೆ ಶ್ರೇಣಿಯೊಳಗೆಯೇ ಇರುವಂತೆ ಮಾಡುವುದು ಆರ್ಬಿಐನ ಗುರಿಯಾಗಿದೆ.
ಕಡಿಮೆ ಹಣದುಬ್ಬರ ಇದ್ದರೆ ಉದ್ಯಮ ಸಂಸ್ಥೆಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆರ್ಥಿಕತೆ ಒಂದು ಗತಿಯಲ್ಲಿ ಸಾಗಬೇಕಾದರೆ ಹೆಚ್ಚೂ ಅಲ್ಲದ, ಕಡಿಮೆಯೂ ಅಲ್ಲದ ಹಣದುಬ್ಬರ ಸ್ಥಿತಿಯ ವಾತಾವರಣ ಬೇಕು ಎಂಬುದು ಆರ್ಥಿಕ ತಜ್ಞರುಗಳ ಅನಿಸಿಕೆ.
ಇದನ್ನೂ ಓದಿ: ಸತತವಾಗಿ ಕುಸಿಯುತ್ತಿದ್ದ ಷೇರುಪೇಟೆ ದಿಢೀರನೇ ಚೇತರಿಕೆ; ಮಾರುಕಟ್ಟೆ ತಿರುಗಿ ನಿಲ್ಲಲು ಏನು ಕಾರಣ?
ಭಾರತದಲ್ಲಿ ಕಳೆದ 11 ತಿಂಗಳಿಂದಲೂ ಹಣದುಬ್ಬರವು ಶೇ. 4ರ ಮಟ್ಟಕ್ಕಿಂತಲೂ ಕಡಿಮೆ ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಹಣದುಬ್ಬರ ಶೇ. 2ರಷ್ಟಾಗಬಹುದು ಎಂಬುದು ಆರ್ಬಿಐ ಎಂಪಿಸಿ ಸಮಿತಿಯ ಅಂದಾಜು. ಈ ಹಿಂದೆ ಅದು ನಿರೀಕ್ಷೆ ಮಾಡಿದುದಕ್ಕಿಂತಲೂ ಕಡಿಮೆ ಹಣದುಬ್ಬರದ ಸ್ಥಿತಿ ಬರಬಹುದು.
ಭಾರತದ್ದು ಈಗ ಗೋಲ್ಡಿಲಾಕ್ ಅವಧಿ…
ಭಾರತದ ಆರ್ಥಿಕತೆ ವಿಶ್ವದಲ್ಲೇ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಹಾಗೆಯೇ, ಹಣದುಬ್ಬರವೂ ಕೂಡ ನಿಯಂತ್ರಣದಲ್ಲಿದೆ. ಈ ಎರಡನ್ನೂ ಒಮ್ಮೆಗೇ ಹೊಂದಿರುವ ಅಪರೂಪದ ಪರಿಸ್ಥಿತಿ ಭಾರತದ್ದು. ತಜ್ಞರು ಇದನ್ನು ಗೋಲ್ಡಿಲಾಕ್ಸ್ ಪೀರಿಯಡ್ ಎಂದು ಕರೆಯುತ್ತಾರೆ. ಅಧಿಕ ಬೆಳವಣಿಗೆ ಮತ್ತು ಕಡಿಮೆ ಬೆಲೆ ಏರಿಕೆ ಎರಡೂ ಒಟ್ಟಿಗೆ ಬರುವ ಕಾಲವೇ ಇದು. ಇದು ಭಾರತದ ಶುಭಕಾಲವಾ?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




