Richest Americans Houses: ಅಮೆರಿಕದ ಈ ಅತ್ಯಂತ ಶ್ರೀಮಂತರ ಮನೆಗಳ ಮೌಲ್ಯ ಎಷ್ಟು ಗೊತ್ತಾ?

ಅಮೆರಿಕದ ಅತ್ಯಂತ ಶ್ರೀಮಂತರು ಎಂಥ ಮನೆಗಳಲ್ಲಿ ವಾಸವಿದ್ದಾರೆ. ಅವರು ಹೂಡಿಕೆ ಮಾಡಿರುವ ರಿಯಲ್ ಎಸ್ಟೇಟ್ ಪೋರ್ಟ್​ಫೋಲಿಯೋ ಪ್ರಮಾಣ ಎಷ್ಟು ಇತ್ಯಾದಿ ಆಸಕ್ತಿಕರವಾದ ಮಾಹಿತಿಗಳು ಇಲ್ಲಿವೆ.

Richest Americans Houses: ಅಮೆರಿಕದ ಈ ಅತ್ಯಂತ ಶ್ರೀಮಂತರ ಮನೆಗಳ ಮೌಲ್ಯ ಎಷ್ಟು ಗೊತ್ತಾ?
ಬಿಲ್ ಗೇಟ್ಸ್​ ಮತ್ತು ಅವರ ಮನೆ
Edited By:

Updated on: Jun 19, 2021 | 1:21 PM

ವಿಶ್ವದ ಟಾಪ್ ಟೆನ್ ಅತಿ ಶ್ರೀಮಂತರ ಪಟ್ಟಿಯಲ್ಲಿ ಅಮೆರಿಕನ್ನರದೇ ಪಾರಮ್ಯ. ಫೋರ್ಬ್ಸ್​ 400 ಪೂರ್ತಿ ಪಟ್ಟಿಯಲ್ಲಿ ಅಮೆರಿಕದ ಅತಿ ಶ್ರೀಮಂತರ ಹೆಸರು ಸಿಗುತ್ತವೆ. ಆ ಪಟ್ಟಿಯಲ್ಲಿ ಸತತ 23ನೇ ವರ್ಷ ಮೊದಲ ಸ್ಥಾನದಲ್ಲಿ ಇದ್ದಾರೆ ಬಿಲ್​ ಗೇಟ್ಸ್. ಅವರ ನಿವ್ವಳ ಆಸ್ತಿ ಮೌಲ್ಯ 8100 ಕೋಟಿ ಅಮೆರಿಕನ್ ಡಾಲರ್. ಕಳೆದ ಹದಿನೈದು ವರ್ಷದಲ್ಲೇ ಇದೇ ಮೊದಲ ಬಾರಿಗೆ ವಾರೆನ್​ ಬಫೆಟ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ನಿವ್ವಳ ಆಸ್ತಿ ಮೌಲ್ಯ 6550 ಕೋಟಿ ಅಮೆರಿಕನ್ ಡಾಲರ್. ಟೆಕ್ನಾಲಜಿ ಕಂಪೆನಿಗಳ ಷೇರು ಬೆಲೆಯಲ್ಲಿ ಭಾರೀ ಏರಿಕೆ ಆಗಿರುವುದರಿಂದ ಆ ಕಂಪೆನಿಗಳ ಸಿಇಒಗಳಾಗಿ ಇರುವವರ ಸಂಪತ್ತಿನಲ್ಲಿ ಇತರರಿಗಿಂತ ಬಹಳ ವೇಗವಾಗಿ ಹೆಚ್ಚಳವಾಗಿದೆ.

ಅಮೆಜಾನ್​.ಕಾಮ್​ ಸಿಇಒ ಜೆಫ್​ ಬೆಜೋಸ್ 20 ಬಿಲಿಯನ್ ಅಮೆರಿಕನ್ ಡಾಲರ್ ಗಳಿಸಿ, ನಿವ್ವಳ ಆಸ್ತಿ ಮೌಲ್ಯವನ್ನು 6700 ಕೋಟಿ ಡಾಲರ್​ಗೆ ಹೆಚ್ಚಿಸಿಕೊಂಡಿದ್ದಾರೆ. ಆ ಮೂಲಕ ಅಮೆರಿಕದ ಎರಡನೇ ಸಿರಿವಂತ ಅನಿಸಿಕೊಂಡಿದ್ದಾರೆ. ಫೇಸ್​ಬುಕ್ ಸಿಇಒ ಮಾರ್ಕ್ ಝುಕರ್​ಬರ್ಗ್​ ನಾಲ್ಕನೇ ಸ್ಥಾನದಲ್ಲಿದ್ದು ನಿವ್ವಳ ಆಸ್ತಿ ಮೌಲ್ಯ 5550 ಕೋಟಿ ಅಮೆರಿಕನ್ ಡಾಲರ್ ಇದೆ. ಒರಾಕಲ್ ಕಂಪೆನಿ ಸ್ಥಾಪಕ ಲ್ಯಾರಿ ಎಲಿಸನ್ 2007ರ ನಂತರ ಇದೇ ಮೊದಲ ಬಾರಿಗೆ ಐದನೇ ಸ್ಥಾನದಲ್ಲಿದ್ದು, ನಿವ್ವಳ ಆಸ್ತಿ ಮೌಲ್ಯ 4930 ಕೋಟಿ ಅಮೆರಿಕನ್ ಡಾಲರ್ ಇದೆ. ನ್ಯೂಯಾರ್ಕ್ ನಗರದ ಮಾಜಿ ಮೇಯರ್ ಮೈಕೇಲ್ ಬ್ಲೂಮ್​ಬರ್ಗ್ ಆರನೇ ಸ್ಥಾನದಲ್ಲಿ ಇದ್ದಾರೆ. ಅವರ ಆಸ್ತಿ ಮೌಲ್ಯ 4500 ಕೋಟಿ ಅಮೆರಿಕನ್ ಡಾಲರ್ ಇದೆ.

ಈ ಆರು ಶತಕೋಟ್ಯಧಿಪತಿಗಳಿಂದ ಒಟ್ಟು ಸೇರಿ 36,330 ಕೋಟಿ ಅಮೆರಿಕನ್ ಡಾಲರ್​ ಸಂಪತ್ತು ಒಗ್ಗೂಡುತ್ತದೆ. ಇನ್ನು ಈ ಆಸ್ತಿಯ ಪೈಕಿ ಬಹಳಷ್ಟು ಪ್ರಮಾಣ ಅವರ ಬಳಿ ಇರುವುದು ತಾವು ಸ್ಥಾಪಿಸಿದ ಕಂಪೆನಿಗಳ ಷೇರುಗಳ ರೂಪದಲ್ಲೇ. ಆದರೆ ಅವರ ಸಂಪತ್ತು ಪ್ರಮಾಣದಲ್ಲಿ ರಿಯಲ್ ಎಸ್ಟೇಟ್ ಪಾಲು ಸಹ ಇದೆ. ಬಿಲ್​ ಗೇಟ್ಸ್​ಗೆ ವಾಷಿಂಗ್ಟನ್​ನಲ್ಲಿ ಇರುವ ಅದ್ಭುತ ಬಂಗಲೆಯ ಮೌಲ್ಯವೇ 1.70 ಕೋಟಿ ಅಮೆರಿಕನ್ ಡಾಲರ್ ಆಗುತ್ತದೆ. ಅಮೆರಿಕದಾದ್ಯಂತ ಹಾರ್ಸ್ ರಾಂಚ್​ಗಳಿವೆ ಮತ್ತು ಲಕ್ಷುರಿ ಹೋಟೆಲ್ ಜಾಲಗಳಲ್ಲಿ ತಮ್ಮ ಖಾಸಗಿ ಹೂಡಿಕೆ ಸಂಸ್ಥೆ ಕ್ಯಾಸ್ಕೇಡ್ ಮೂಲಕ ಷೇರುಗಳ ರೂಪದಲ್ಲಿ ಹೂಡಿದ್ದಾರೆ.

ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವುದು ಈ ಆರು ಶ್ರೀಮಂತರ ಮನೆಗಳ ಬಗ್ಗೆ. ಅದಕ್ಕೂ ಮುನ್ನ ಭಾರತದಲ್ಲೂ ಶ್ರೀಮಂತರ ಅಥವಾ ದುಬಾರಿ ಮನೆಗಳಿವೆ. ಆ ಪೈಕಿ ಮೊದಲ ಸ್ಥಾನ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಮನೆ, ಅಲ್ಲಲ್ಲ ಅರಮನೆ “ಆಂಟಿಲಾ”ಗೆ ಬರುತ್ತದೆ. ಆ ನಂತರ ಜೆ.ಕೆ. ಹೌಸ್, ಅನಿಲ್ ಅಂಬಾನಿಯ ಅಬೋಡ್, ಕೆ.ಎಂ. ಬಿರ್ಲಾಗೆ ಸೇರಿದ ಜಟಿಯಾ ಹೌಸ್, ಶಾರೂಕ್ ಖಾನ್ ಮನ್ನತ್, ನವೀನ್​ ಜಿಂದಾಲ್​ಗೆ ಸೇರಿದ ದೆಹಲಿಯ ಲ್ಯೂಟೆನ್ಸ್​ ಬಂಗಲೆ ವಲಯದಲ್ಲಿ ಇರುವ ಜಿಂದಾಲ್​ ಹೌಸ್, ಮುಂಬೈನ ಕೊಲಾಬಾದಲ್ಲಿ ಇರುವ ರತನ್ ಟಾಟಾ ಅವರ ರಿಟೈರ್​ಮೆಂಟ್ ಹೋಮ್, ನಟ ಅಮಿತಾಬ್ ಬಚ್ಚನ್​ರ ಮನೆ ಜಲ್ಸಾ ಹೀಗೆ ಪಟ್ಟಿ ದೊಡ್ಡದಿದೆ. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್ ಹೀಗೆ ಭಾರತದಲ್ಲಿನ ಉದ್ಯಮಿಗಳ ಮನೆ ನಾನಾ ಪ್ರಮುಖ ನಗರಗಳಲ್ಲಿವೆ. ಅವೆಲ್ಲ ಕೋಟಿಕೋಟಿ ಬೆಲೆ ಬಾಳುತ್ತವೆ. ಆದರೆ ಈ ಲೇಖನದಲ್ಲಿ ತಿಳಿಸಲು ಹೊರಟಿರುವುದು ಅಮೆರಿಕದಲ್ಲಿನ ಆರು ಶ್ರೀಮಂತರ ಮನೆಗಳ ಬಗ್ಗೆ. ಆ ಕಡೆಗೆ ನೋಡೋಣ.

1. ಬಿಲ್​ಗೇಟ್ಸ್​
60 ವರ್ಷದ ಬಿಲ್ ಗೇಟ್ಸ್ ನಿವ್ವಳ ಆಸ್ತಿ ಮೌಲ್ಯ 8100 ಕೋಟಿ ಅಮೆರಿಕನ್ ಡಾಲರ್. ಭಾರತದಲ್ಲಿ 1 ಡಾಲರ್ ಮೌಲ್ಯ ಇವತ್ತಿಗೆ 74.27 ರೂಪಾಯಿ ಇದೆ. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಅವರ ಆಸ್ತಿ ಮೌಲ್ಯ 6,01,587 ಕೋಟಿ. ವಾಷಿಂಗ್ಟನ್​ನಲ್ಲಿ ಇರುವ 66,000 ಚದರಡಿ ವಿಸ್ತೀರ್ಣದ ಮೆಡಿನಾದಲ್ಲೇ ಬಹಳ ಸಮಯವನ್ನು ಗೇಟ್ಸ್ ಕಳೆಯುತ್ತಾರೆ. ವಾಷಿಂಗ್ಟನ್ ಲೇಕ್ ಎದುರಿಗೇ ಈ ಭವ್ಯ ಬಂಗಲೆ ಇದೆ. ಇದನ್ನು Xanadu 2.0 ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಈ ಮನೆ ಕಟ್ಟುವುದಕ್ಕೆ ಬಿಲ್ ಗೇಟ್ಸ್​ಗೆ 7 ವರ್ಷ ಸಮಯ ಹಿಡಿಸಿದೆ. 6.32 ಕೋಟಿ ಅಮೆರಿಕನ್ ಡಾಲರ್ ಖರ್ಚಾಗಿದೆ. ಈ ಮನೆಯಲ್ಲಿ ಸಾಕಷ್ಟು ಹೈಟೆಕ್ ಫೀಚರ್​ಗಳಿವೆ. 1988ರಲ್ಲಿ ಲಾಟ್​ನಲ್ಲಿ 20 ಲಕ್ಷ ಅಮೆರಿಕನ್ ಡಾಲರ್​ಗೆ ಖರೀದಿಸಿದ್ದು, ಇವತ್ತಿಗೆ 1.7 ಕೋಟಿ ಡಾಲರ್ ಇದೆ ಎಂದು ಸಾರ್ವಜನಿಕ ದಾಖಲೆಗಳು ಹೇಳುತ್ತವೆ.

2. ಜೆಫ್ ಬೆಜೋಸ್
52 ವರ್ಷದ ಬೆಜೋಸ್ ಅಮೆಜಾನ್ ಕಂಪೆನಿಯ ಸ್ಥಾಪಕರು, ಸಿಇಒ. ಕಳೆದ ಕೆಲವು ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಭೂಮಿ ಖರೀದಿಸುತ್ತಾ ಬಂದಿದ್ದು, ಕಳೆದ ವರ್ಷ ಅಮೆರಿಕದಲ್ಲಿ ಅತಿ ಹೆಚ್ಚು ಭೂಮಿ ಹೊಂದಿದವರ ಪಟ್ಟಿಯಲ್ಲಿ 26ನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಪಶ್ಚಿಮ ಟೆಕ್ಸಾಸ್​ನಲ್ಲಿ 1,65,000 ಎಕರೆ ರಾಂಚ್​ ಅನ್ನು ಅವರು ಹೊಂದಿದ್ದಾರೆ. ನೀವು ಸರಿಯಾಗಿಯೇ ಓದುತ್ತಿದ್ದೀರಿ, 1,65,000 ಎಕರೆ ರಾಂಚ್. ವಾಷಿಂಗ್ಟನ್​ನಲ್ಲಿ ನೀರಿನ ಎದುರಿಗೆ ಇರುವ ಸ್ಥಳ ಇದು. ಮ್ಯಾನಹಟನ್​ನ ಸೆಂಚುರಿ ಟವರ್​ನಲ್ಲಿ ಮೂರು ಲಿಂಕ್ಡ್​ ಅಪಾರ್ಟ್​ಮೆಂಟ್​ಗಳು, 12,000 ಚದರಡಿಯ ಬೆವರ್ಲಿ ಹಿಲ್ಸ್ ಎಸ್ಟೇಟ್​ನಲ್ಲಿದೆ. ಅಲ್ಲಿ ಹಾಲಿವುಡ್​ ನಟ ಟಾಮ್ ಕ್ರೂಸ್​ಗೆ ನೆರೆಹೊರೆಯವರು. ಇನ್ನು ಮನೆ ವಾಷಿಂಗ್ಟನ್​ನ ಮೆಡಿನಾದಲ್ಲಿದೆ. ಅಮೆಜಾನ್​ನ ಮುಖ್ಯಕಚೇರಿಗೆ ಹತ್ತಿರದಲ್ಲಿದೆ. 5.35 ಎಕರೆ ಸ್ಥಳದ ಪೈಕಿ 29,000 ಚದರಡಿಯಲ್ಲಿ ವಾಸಕ್ಕೆ ಅನುಕೂಲ ಮಾಡಿಕೊಳ್ಳಲಾಗಿದೆ. ಮುಖ್ಯವಾದ ಮನೆಯನ್ನು ಹೊರತುಪಡಿಸಿ, ಕೇರ್​ಟೇಕರ್​ಗಳ ಕಾಟೇಜ್ ಮತ್ತು ವಾಷಿಂಗ್ಟನ್​ ಲೇಕ್​ನಲ್ಲಿ 4500 ಚದರಡಿಯ ಬೋಟ್​ಹೌಸ್ ಇದೆ.

3. ವಾರೆನ್ ಬಫೆಟ್
86 ವರ್ಷದ ವಾರೆನ್​ ಬಫೆಟ್ ಹಲವು ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಮಾಡಿದ್ದಾರೆ. ನೆಬ್ರಸ್ಕಾದ ಒಮಾಹದಲ್ಲಿ ವಾರೆನ್ ಬಫೆಟ್ ಮನೆ ಇದೆ. ಅದು 1958ರಲ್ಲಿ ಖರೀದಿ ಮಾಡಿದ್ದು, 31,500 ಯುಎಸ್​ಡಿಗೆ. ಆಗಿನಿಂದ ಅಲ್ಲೇ ವಾಸವಿದ್ದಾರೆ. ಈ ಮನೆಯನ್ನು ಮೂಲತಃ 1921ರಲ್ಲಿ ನಿರ್ಮಾಣ ಮಾಡಿದ್ದು. ಹಲವು ಬಾರಿ ಈ ಮನೆ ವಿಸ್ತರಣೆ ಆಗಿದೆ. 6550 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚು ಮೌಲ್ಯದ ಶ್ರೀಮಂತ ವ್ಯಕ್ತಿ 6500 ಚದರಡಿಯ ಮನೆಯಲ್ಲಿ ಇದ್ದಾರೆ.

4. ಮಾರ್ಕ್ ಝುಕರ್​ಬರ್ಗ್
ಅತ್ಯಂತ ಕಿರಿಯ ವಯಸ್ಸಿನ ಉದ್ಯಮಿ ಮಾರ್ಕ್ ಝುಕರ್​ಬರ್ಗ್ ಅವರ ಆಸ್ತಿಯ ಬಹುಪಾಲು ಶಾಲೆ, ಆರೋಗ್ಯ ಹಾಗೂ ಇತರ ದತ್ತಿ ಕಾರ್ಯಕ್ರಮಗಳಲ್ಲಿ ಇವೆ. ಇವರ ರಿಯಲ್ ಎಸ್ಟೇಟ್ ಪೋರ್ಟ್​ಫೋಲಿಯೋದಲ್ಲಿ ಅವರ ಮನೆ ಪಾಲೋ ಆಲ್ಟೋ ಮತ್ತು 9.9 ಮಿಲಿಯನ್​ನ ವಿಶ್ರಾಂತಿ ಗೃಹ ಸ್ಯಾನ್​ಫ್ರಾನ್ಸಿಸ್ಕೋದ ಡೋಲೋರ್ಸ್ ಪಾರ್ಕ್ ಸಮೀಪ ಇದೆ. 32 ವರ್ಷದ ಝುಕರ್​ಬರ್ಗ್ ತಮ್ಮ ಮೊದಲ 5000 ಚದರಡಿಯ ಮನೆಯನ್ನು ಪಾಲೋ ಆಲ್ಟೋದಲ್ಲಿ ಖರೀದಿ ಮಾಡಿದ್ದು 2011ರಲ್ಲಿ 70 ಲಕ್ಷ ಡಾಲರ್​ಗೆ. ತಮ್ಮ ಖಾಸಗಿತನಕ್ಕಾಗಿ ಸುತ್ತಲೂ ಇದ್ದ ನಾಲ್ಕು ಮನೆಗಳನ್ನು 4.38 ಕೋಟಿ ಅಮೆರಿಕನ್ ಡಾಲರ್​ಗೆ ಖರೀದಿ ಮಾಡಿದರು. ಆದರೆ ಈ ನಾಲ್ಕು ಮನೆಗಳನ್ನು ಕೆಡವಬೇಕು ಎಂಬ ನಿರ್ಧಾರವನ್ನು ಆಮೇಲೆ ನಿಲ್ಲಿಸಲಾಯಿತು.

5. ಲ್ಯಾರಿ ಎಲಿಸನ್
72 ವರ್ಷದ ಲ್ಯಾರಿ ಎಲಿಸನ್ ಒರಾಕಲ್ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷ. ತುಂಬ ವಿಶಾಲವಾದ ರಿಯಲ್​ ಎಸ್ಟೇಟ್ ಪೋರ್ಟ್​ಫೋಲಿಯೋ ಅವರದಿದೆ. ಮಲಿಬು ಸುತ್ತ ಮುತ್ತ ದೊಡ್ಡ ಪ್ರಮಾಣದಲ್ಲಿ ಹಾಗೂ ಲೇಕ್ ಟಾಹೋ ಸುತ್ತ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿದ್ದಾರೆ. 7 ಕೋಟಿ ಅಮೆರಿಕನ್ ಡಾಲರ್ ಮೌಲ್ಯದಲ್ಲಿ ನ್ಯೂಪೋರ್ಟ್​, ರೋಡ್​ ಐಲ್ಯಾಂಡ್​ನಲ್ಲಿ ಬೀಚ್​ವುಡ್ ಮ್ಯಾನ್ಷನ್ ಹೊಂದಿದ್ದಾರೆ. ಜಪಾನ್​ನ ಕ್ಯೂಟೋದಲ್ಲಿ ಗಾರ್ಡನ್ ವಿಲ್ಲಾ ಮತ್ತು ಹವಾಯಿಯ ಆರನೇ ಅತಿ ದೊಡ್ಡ ಲಾನೈನಲ್ಲಿ ಶೇ 98ರಷ್ಟು ಭೂಮಿ ಇದೆ. 2012ರಲ್ಲಿ ಇದನ್ನು 50 ಕೋಟಿ ಅಮೆರಿಕನ್ ಡಾಲರ್​ಗೆ ಖರೀದಿಸಿದ್ದರು. ಕ್ಯಾಲಿಫೋರ್ನಿಯಾದ ವುಡ್​ಸೈಡ್​ನಲ್ಲಿ ಎಸ್ಟೇಟ್​ ಇದೆ. ಅದರ ಅಂದಾಜು ಮೌಲ್ಯ 11 ಕೋಟಿ ಅಮೆರಿಕನ್ ಡಾಲರ್. 16ನೇ ಶತಮಾನದ ಜಪಾನೀ ವಾಸ್ತುಶಿಲ್ಪವನ್ನು ಹೊಂದಿದ್ದು, ಮಾನವ ನಿರ್ಮಿತವಾದ 2.3 ಎಕರೆ ವಿಸ್ತೀರ್ಣದ ಕೆರೆ ಇದೆ.

6.ಮೈಕೇಲ್​ ಬ್ಲೂಮ್​ಬರ್ಗ್
74 ವರ್ಷದ, ನ್ಯೂಯಾರ್ಕ್ ನಗರದ ಮಾಜಿ ಮೇಯರ್ ಮೈಕೇಲ್ ಬ್ಲೂಮ್​ಬರ್ಗ್ ವಿಶ್ವದಾದ್ಯಂತ ಹತ್ತಕ್ಕೂ ಹೆಚ್ಚು ಆಸ್ತಿಗಳನ್ನು ಹೊಂದಿದ್ದಾರೆ. ಆದರೆ ತಮ್ಮ ಬಹುತೇಕ ಸಮಯವನ್ನು ಅಪ್ಪರ್​ ಎಸ್ಟೇಟ್ ಸೈಡ್ ಟೌನ್​ಹೌಸ್​​ನಲ್ಲಿ ಕಳೆಯುತ್ತಾರೆ. ನ್ಯೂಯಾರ್ಕ್​ನ ಹ್ಯಾಂಪ್ಟನ್ಸ್​ನಲ್ಲಿ ಎಸ್ಟೇಟ್​ಗಳಿವೆ. ಅಷ್ಟೇ ಅಲ್ಲ, ಲಂಡನ್, ಬರ್ಮುಡಾ, ಕೊಲೊರಾಡೋ ಮತ್ತು ಫ್ಲೋರಿಡಾದಲ್ಲು ಇದೆ. ಬ್ಲೂಮ್​ಬರ್ಗ್​ ಮನೆ ಐದು ಅಂತಸ್ತಿನದಾಗಿದ್ದು, ಸುಣ್ಣದ ಕಲ್ಲಿನ ಒಳಾಂಗಣ ಹೊಂದಿದೆ. ಮೂರು ಅವಧಿಗೆ ಮೇಯರ್​ ಆಗಿದ್ದ ಬ್ಲೂಮ್​ಬರ್ಗ್, ಗ್ರೇಸಿ ಮ್ಯಾನ್ಷನ್ ಬದಲಿಗೆ ಟೌನ್​ಹೌಸ್​ನಲ್ಲೇ ಇರುತ್ತಿದ್ದರು.

ಇದನ್ನೂ ಓದಿ: Forbes Richest Billionaires List: ಸತತ ನಾಲ್ಕನೇ ವರ್ಷ ಫೋರ್ಬ್ಸ್ ವಾರ್ಷಿಕ ಪಟ್ಟಿಯಲ್ಲಿ ಬೆಜೋಸ್ ನಂಬರ್ 1 ಶ್ರೀಮಂತ

(America’s richest people houses and their real estate portfolio details explained here)

Published On - 1:07 pm, Sat, 19 June 21

Follow Us