ರುಪಾಯಿ ಮೌಲ್ಯ ಕುಸಿತ; ಆತಂಕ ಪಡಬೇಕಿಲ್ಲ; ದೀರ್ಘಾವಧಿ ಹೂಡಿಕೆಗೆ ಒಳ್ಳೆಯ ಅವಕಾಶ: ಸಿಇಎ ಅನಂತನಾಗೇಶ್ವರನ್
CEA Says India's Economy Solid, Great Time to Invest: ಭಾರತದ ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಆತಂಕ ಬೇಡ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ತಿಳಿಸಿದ್ದಾರೆ. ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಸದೃಢವಾಗಿದ್ದು, ರೂಪಾಯಿ ಪ್ರಸ್ತುತ ತನ್ನ ನೈಜ ಸಾಮರ್ಥ್ಯಕ್ಕಿಂತ ಕಡಿಮೆ ಮೌಲ್ಯದಲ್ಲಿದೆ (Undervalued). ಇದು ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಸುವರ್ಣಾವಕಾಶ ಎಂದು ಅವರು ಹೇಳಿದ್ದಾರೆ. ಜಾಗತಿಕ ಅಂಶಗಳು ರೂಪಾಯಿ ಕುಸಿತಕ್ಕೆ ಕಾರಣವಾಗಿದ್ದರೂ, ರಫ್ತು ಹೆಚ್ಚಳ ಮತ್ತು ಬಲಿಷ್ಠ ವಿದೇಶಿ ವಿನಿಮಯ ನಿಧಿ ಸಕಾರಾತ್ಮಕವಾಗಿವೆ.

ನವದೆಹಲಿ, ಏಪ್ರಿಲ್ 24: ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿರುವ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ (CEA Anantha Nageswaran) ಅವರು ತಿಳಿಸಿದ್ದಾರೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 94ರ ಗಡಿ ದಾಟಿದ್ದರೂ, ಈ ಬಗ್ಗೆ ನಾವು ನಿದ್ದೆಗೆಡಬೇಕಿಲ್ಲ ಎಂದು ನಾಗೇಶ್ವರನ್ ಹೇಳಿದ್ದಾರೆ. ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು (Fundamentals) ಸದೃಢವಾಗಿದ್ದು, ಪ್ರಸ್ತುತ ಮೌಲ್ಯವು ರೂಪಾಯಿಯ ನೈಜ ಶಕ್ತಿಯನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೂಪಾಯಿಯು ಪ್ರಸ್ತುತ ತನ್ನ ನಿಜವಾದ ಸಾಮರ್ಥ್ಯಕ್ಕಿಂತ ಕಡಿಮೆ ಮೌಲ್ಯವನ್ನು ಹೊಂದಿದೆ (Fundamentally Undervalued). ಇದು ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಒಂದು ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದ್ದಾರೆ. ಹೂಡಿಕೆದಾರರು ಈಗ ಭಾರತದ ಮಾರುಕಟ್ಟೆ ಪ್ರವೇಶಿಸಲು ಇದು ಸರಿಯಾದ ಸಮಯ ಎಂಬುದು ಅವರ ವಾದ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?
ರುಪಾಯಿ ಕುಸಿತಕ್ಕೆ ಪ್ರಮುಖ ಕಾರಣಗಳನ್ನು ಗುರುತಿಸುವುದಾದರೆ ಈ ಕೆಳಗಿನವು ಮೊದಲು ಕಣ್ಮುಂದೆ ಬರುತ್ತವೆ:
1. ಜಾಗತಿಕ ಭೌಗೋಳಿಕ ರಾಜಕೀಯ (Geopolitics)
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಅನಿಶ್ಚಿತತೆ ಮೂಡಿದೆ.
2. ತೈಲ ಬೆಲೆ ಏರಿಕೆ
ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದಾಟುತ್ತಿರುವುದು ಭಾರತದಂತಹ ಆಮದು ಅವಲಂಬಿತ ದೇಶದ ಮೇಲೆ ಒತ್ತಡ ಹೇರುತ್ತಿದೆ.
3. ವಿದೇಶಿ ಹೂಡಿಕೆ ಹಿಂತೆಗೆತ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FPI) ಭಾರತೀಯ ಷೇರು ಮಾರುಕಟ್ಟೆಯಿಂದ ಹಣವನ್ನು ಹಿಂತೆಗೆದುಕೊಳ್ಳುತ್ತಿರುವುದು ರೂಪಾಯಿ ಕುಸಿತಕ್ಕೆ ಕಾರಣವಾಗಿದೆ.
ರುಪಾಯಿ ಕುಸಿತದ ನಡುವೆಯೂ ಸಕಾರಾತ್ಮಕವಾಗಿರುವ ಅಂಶಗಳು
ರೂಪಾಯಿ ಮೌಲ್ಯ ಕಡಿಮೆಯಿರುವುದರಿಂದ ಭಾರತದ ರಫ್ತುದಾರರಿಗೆ (Exporters) ಲಾಭವಾಗಲಿದೆ. ಏಕೆಂದರೆ ಅವರ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಅಗ್ಗವಾಗುತ್ತವೆ. ಭಾರತವು ಬಲಿಷ್ಠ ವಿದೇಶಿ ವಿನಿಮಯ ಮೀಸಲು ನಿಧಿ (Forex Reserves) ಹೊಂದಿದ್ದು, ಯಾವುದೇ ಆರ್ಥಿಕ ಸಂಕಷ್ಟ ಎದುರಿಸಲು ಸನ್ನದ್ಧವಾಗಿದೆ. ಮುಂದಿನ ವರ್ಷದ ವೇಳೆಗೆ ರೂಪಾಯಿ ಮೌಲ್ಯವು ಮತ್ತೆ ಸ್ಥಿರವಾಗುವ ನಿರೀಕ್ಷೆಯನ್ನು ವಿ ಅನಂತ ನಾಗೇಶ್ವರನ್ ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್
ತೈಲ ಮತ್ತು ರಸಗೊಬ್ಬರಗಳ ಆಮದು ತುಟ್ಟಿಯಾಗಬಹುದಾದರೂ, ಚಿನ್ನದಂತಹ ಅನಗತ್ಯ ಆಮದುಗಳನ್ನು ಇದು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ, ಜಾಗತಿಕವಾಗಿ ಡಾಲರ್ ಬಲಗೊಳ್ಳುತ್ತಿರುವುದರಿಂದ ಏಷ್ಯಾದ ಇತರ ಕರೆನ್ಸಿಗಳಂತೆ ರೂಪಾಯಿ ಕೂಡ ಕುಸಿತ ಕಂಡಿದೆ, ಇದು ಕೇವಲ ಭಾರತಕ್ಕೆ ಸೀಮಿತವಾದ ಸಮಸ್ಯೆಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




