
ಅಹ್ಮದಾಬಾದ್, ಏಪ್ರಿಲ್ 21: ಗುಜರಾತ್‌ನ ರಾಜ್‌ಕೋಟ್ ಗ್ರಾಮಾಂತರ ಪೊಲೀಸರು ದೇಶವನ್ನೇ ಬೆಚ್ಚಿಬೀಳಿಸುವಂತಹ ಬೃಹತ್ ಸೈಬರ್ ವಂಚನೆಯ (cyber crime) ಜಾಲವನ್ನು ಪತ್ತೆಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 20 ಜನರನ್ನು ಬಂಧಿಸಲಾಗಿದ್ದು, ಇದರಲ್ಲಿ ಹೆಸರಾಂತ ಖಾಸಗಿ ಬ್ಯಾಂಕ್‌ಗಳ ಅಧಿಕಾರಿಗಳೂ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ. 2,500 ಕೋಟಿ ರೂಗಳ ಈ ಮೆಗಾ ಸೈಬರ್ ವಂಚನೆಯಲ್ಲಿ ಇದುವರೆಗಿನ ಅತ್ಯಂತ ಆಘಾತಕಾರಿ ಕ್ರಮವಾಗಿದೆ. ಪೊಲೀಸರು ಮೂರು ಪ್ರಮುಖ ಖಾಸಗಿ ಬ್ಯಾಂಕ್‌ಗಳಾದ ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು HDFC ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ವಂಚಕರಿಗೆ ಅನುಕೂಲ ಮಾಡಿಕೊಡಲು ಮತ್ತು ಕೋಟ್ಯಂತರ ರೂಪಾಯಿಗಳ ದುರುಪಯೋಗಕ್ಕೆ ಅನುಕೂಲ ಮಾಡಿಕೊಡಲು ಅವರು ತಮ್ಮ ಸ್ಥಾನಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರು ಈ ಹಗರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿತರಾಗಿರುವ ಮೂವರು ಬ್ಯಾಂಕ್ ಅಧಿಕಾರಿಗಳು ಮೌಲಿಕ್ ಕಾಮಾಣಿ, ಕಲ್ಪೇಶ್ ದಂಗಾರಿಯಾ ಮತ್ತು ಅನುರಾಗ್ ಬಾಲ್ಡಾ. ಇದರಲ್ಲಿ ಮೌಲಿಕ್ ಅವರು ಪಡಧರಿಯ ಯೆಸ್ ಬ್ಯಾಂಕ್‌ನ ಪರ್ಸನಲ್ ಮ್ಯಾನೇಜರ್. ಕಲ್ಪೇಶ್ ದಂಗಾರಿಯಾ ಅವರು ಜಾಮ್‌ನಗರದ ಆಕ್ಸಿಸ್ ಬ್ಯಾಂಕ್‌ನ ಮ್ಯಾನೇಜರ್. ಅನುರಾಗ್ ಬಾಲ್ದಾ ಅವರು ರಾಜ್‌ಕೋಟ್‌ನ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಪರ್ಸನಲ್ ಬ್ಯಾಂಕರ್ ಆಗಿದ್ದಾರೆ.
ಇದನ್ನೂ ಓದಿ: ಆಪಲ್ ಸಾಮ್ರಾಜ್ಯದಲ್ಲಿ ಹೊಸ ಯುಗ: ಟಿಮ್ ಕುಕ್ ನಿರ್ಗಮನ, ಜಾನ್ ಟೆರ್ನಸ್ ನೂತನ ಸಾರಥಿ
ಖದೀಮರ ಕಾರ್ಯವೈಖರಿ ಹೀಗಿದೆ
ಈ ಬ್ಯಾಂಕ್ ಅಧಿಕಾರಿಗಳು ಸೈಬರ್ ಅಪರಾಧಿಗಳೊಂದಿಗೆ ಕೈಜೋಡಿಸಿ, ನಕಲಿ ದಾಖಲೆಗಳನ್ನು ಬಳಸಿ ಅಥವಾ ಅಮಾಯಕ ವ್ಯಕ್ತಿಗಳ ಹೆಸರಿನಲ್ಲಿ ಅವರ ಅರಿವಿಲ್ಲದೆಯೇ ಸುಮಾರು 85ಕ್ಕೂ ಹೆಚ್ಚು ‘ಮ್ಯೂಲ್ ಅಕೌಂಟ್’ಗಳನ್ನು (ಹಣ ವರ್ಗಾವಣೆಗೆ ಬಳಸುವ ನಕಲಿ ಖಾತೆಗಳು) ತೆರೆದಿದ್ದರು.
ಇವರು ಆರ್‌ಬಿಐ (RBI) ನಿಯಮಗಳನ್ನು ಗಾಳಿಗೆ ತೂರಿ, ಹೆಚ್ಚಿನ ಮೊತ್ತದ ವ್ಯವಹಾರಗಳು ನಡೆದಾಗ ಬರುವ ಆಂತರಿಕ ಎಚ್ಚರಿಕೆಗಳನ್ನು (Alerts) ನಿರ್ಲಕ್ಷಿಸಿ, ನಕಲಿ ದಾಖಲೆಗಳನ್ನು ಸಲ್ಲಿಸಿ ಆ ಖಾತೆಗಳು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು.
ಈ ಅಕ್ರಮ ಕೆಲಸಕ್ಕಾಗಿ ಇವರು ಅಪರಾಧಿಗಳಿಂದ ಭಾರಿ ಪ್ರಮಾಣದ ಕಮಿಷನ್ ಪಡೆಯುತ್ತಿದ್ದರು. ಆರೋಪಿ ಮೌಲಿಕ್ ಕಾಮಾಣಿಗೆ ಉಡುಗೊರೆಯಾಗಿ ಐಷಾರಾಮಿ ಫೋನ್ ನೀಡಲಾಗಿತ್ತು ಎಂಬ ವಿಷಯವೂ ತನಿಖೆಯಲ್ಲಿ ತಿಳಿದುಬಂದಿದೆ.
ಅಕ್ರಮವಾಗಿ ಬಂದ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ವಿತ್‌ಡ್ರಾ ಮಾಡಿ, ನಂತರ ಅದನ್ನು ಹವಾಲಾ ಮಾರ್ಗಗಳ ಮೂಲಕ ಬೇರೆಡೆಗೆ ವರ್ಗಾಯಿಸಲಾಗುತ್ತಿತ್ತು.
ರಾಜ್‌ಕೋಟ್ ಪೊಲೀಸರು ಬ್ಯಾಂಕಿಂಗ್ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಗೊಂಡಲ್ ಮಾರ್ಕೆಟಿಂಗ್ ಯಾರ್ಡ್‌ನ ‘ಜ್ಯೋತ್ ಟ್ರೇಡಿಂಗ್ ಕಂಪನಿ’ ಹೆಸರಿನ ಖಾತೆಯಲ್ಲಿ ಸುಮಾರು 200 ಕೋಟಿ ರೂಪಾಯಿಗಳ ಸಂಶಯಾಸ್ಪದ ವ್ಯವಹಾರ ನಡೆದಿರುವುದು ಕಂಡುಬಂದಿತು. ಇದನ್ನು ಬೆನ್ನಟ್ಟಿದಾಗ ಈ ಬೃಹತ್ ಜಾಲ ಪತ್ತೆಯಾಗಿದೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಚೀನಾಕ್ಕೆ ಟಕ್ಕರ್ ಕೊಡಲು ಭಾರತದ ಮಾಸ್ಟರ್ ಪ್ಲಾನ್: ಬರಲಿದೆ ಬೃಹತ್ ತೈಲ ಪೈಪ್‌ಲೈನ್
ಒಟ್ಟು ವಂಚನೆ ಮೊತ್ತ ಸುಮಾರು 2,500 ಕೋಟಿ ರೂಪಾಯಿಗಳಾಗಿವೆ. ಈ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ದೇಶಾದ್ಯಂತ 535 ದೂರುಗಳು ದಾಖಲಾಗಿವೆ. ಹಗರಣಕ್ಕೆ ಸಂಬಂಧಿಸಿದ 85 ಬ್ಯಾಂಕ್ ಖಾತೆಗಳು ಮತ್ತು 35 ನಕಲಿ ಸಂಸ್ಥೆಗಳನ್ನು ಪೊಲೀಸರು ಗುರುತಿಸಿದ್ದಾರೆ.
ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನೂ ಅನೇಕರು ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆ ಮತ್ತು ದಾಖಲೆಗಳ ಬಗ್ಗೆ ಎಚ್ಚರದಿಂದಿರಲು ಪೊಲೀಸರು ಸೂಚಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ